'ಡಾನ್'ನ ಎದುರಾಕಿಕೊಂಡ 'ಧುರಂಧರ್'ಗೆ ಬಿಗ್ ಶಾಕ್ ; ಚಿತ್ರರಂಗದಿಂದ ರಣ್ವೀರ್ ಸಿಂಗ್ ಬ್ಯಾನ್
ಚಿತ್ರರಂಗದಲ್ಲಿ ಸ್ನೇಹ ಮತ್ತು ಸಂಬಂಧ ಚಿಗುರೊಡೆದಷ್ಟೇ ವೇಗದಲ್ಲಿ ಅಂತ್ಯವಾಗುತ್ತವೆ. ಇದಕ್ಕೆ ಇತಿಹಾಸದಲ್ಲಿ ಹಲವಾರು ಸಾಕ್ಷಿಗಳಿವೆ. ಕಲೆ ಮತ್ತು ಯಶಸ್ಸಿನ ಜೊತೆ ಜೊತೆಯಲ್ಲಿಯೇ ಇಲ್ಲಿ ಅಹಂಕಾರದ ನೆರಳಿರುತ್ತೆ. ಅದರಲ್ಲಿಯೂ ಇಬ್ಬರು ಪ್ರತಿಭಾವಂತರು ಒಂದ್ಕಡೆ ಇದ್ದರೆ ಅಲ್ಲಿನ ಈಗೋ ಕ್ಲ್ಯಾಶ್ ಸ್ನೇಹದ ಬಳ್ಳಿಯನ್ನೇ ಕಿತ್ತು ಬಿಸಾಕುತ್ತೆ. ಸಣ್ಣ ಹಠ ಮತ್ತು ಪ್ರತಿಷ್ಠೆಯಿಂದ ವರ್ಷಗಳ ಸಂಬಂಧ ಕ್ಷಣಾರ್ಧದಲ್ಲೇ ಮಣ್ಣು ಪಾಲಾಗುತ್ತೆ. ಇದಕ್ಕೆ ಮತ್ತೊಂದು ಕೈಗನ್ನಡಿ ಎಂಬಂತೆ ರಣ್ವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್ ನಡುವೆ ಇದ್ದ ಸ್ನೇಹದ ಸೇತುವೆ ಮುರಿದು ಬಿದ್ದಿದೆ. ರಣವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ.
ಹೌದು, ಈಗಾಗಲೇ ಜಗಜ್ಜಾಹೀರಾಗಿರುವಂತೆ ಫರ್ಹಾನ್ ಅಖ್ತರ್ ಮತ್ತು ರಣ್ವೀರ್ ಸಿಂಗ್ ನಡುವೆ ಡಾನ್ ಕಿಡಿ ಹೊತ್ತಿಕೊಂಡಿತ್ತು. ''ಧುರಂಧರ್'' ಚಿತ್ರದ ಪ್ರಚಂಡ ಗೆಲುವಿನ ನಂತರ ರಣ್ವೀರ್ ಸಿಂಗ್ ವರ್ತನೆಯಲ್ಲಿ ಬದಲಾವಣೆಗಳಾಗಿವೆ. ಏಕಾಏಕಿ ಹೇಳದೇ ಕೇಳದೇ ''ಡಾನ್ 3'' ಚಿತ್ರದಿಂದ ರಣ್ವೀರ್ ಹೊರ ನಡೆದಿದ್ದಾರೆ ಎನ್ನುವ ಆರೋಪವನ್ನು ಫರ್ಹಾನ್ ಅಖ್ತರ್ ಮಾಡಿದ್ದರು.

ಇಷ್ಟೇ ಅಲ್ಲ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಕ್ಕೆ ಈಗಾಗಲೇ ಕೋಟ್ಯಂತರ ರೂಪಾಯಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗಿದ್ದು, 40 ಕೋಟಿ ಪರಿಹಾರ ಕೊಡಬೇಕೆಂದು ವಾದ ಮಂಡಿಸಿದ್ದರು. ಇಂಡಿಯನ್ ಫಿಲ್ಮ್ ಅಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ (IFTDA) ಸದಸ್ಯರಾಗಿರುವ ಫರ್ಹಾನ್ ಅಖ್ತರ್ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ನಲ್ಲಿ ದೂರು ಸಲ್ಲಿಸಿದ್ದರು.
ಸದ್ಯ ಈ ವಿವಾದದ ಕುರಿತು ಇಂದು ವಿಚಾರಣೆ ಮಾಡಲಾಗಿದ್ದು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ರಣ್ವೀರ್ ಸಿಂಗ್ ವಿರುದ್ಧ ಅಸಹಕಾರ ಚಳುವಳಿಯನ್ನು ಘೋಷಿಸಿದೆ. ಅಧಿಕೃತವಾಗಿ ಬ್ಯಾನ್ ಪದ ಉಪಯೋಗಿಸಿದೆ ರಣ್ವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ದೂರ ಇಡಬೇಕೆಂದು (non-cooperation directive) ಆದೇಶ ಹೊರಡಿಸಿದೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ FWICE ಮುಖ್ಯ ಸಲಹೆಗಾರ ಹಾಗೂ ಇಂಡಿಯನ್ ಫಿಲ್ಮ್ ಮತ್ತು ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ (IFTDA) ಅಧ್ಯಕ್ಷ ಅಶೋಕ್ ಪಂಡಿತ್, ರಣ್ವೀರ್ ಸಿಂಗ್ ವಿರುದ್ಧ ತೀವೃ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.
''ಡಾನ್ 3'' ಚಿತ್ರೀಕರಣಕ್ಕೆ ಕೇವಲ ಮೂರು ವಾರ ಬಾಕಿ ಇರುವಾಗ, ರಣ್ವೀರ್ ಸಿಂಗ್ ಚಿತ್ರದಿಂದ ಹೊರ ನಡೆದಿದ್ದು ಸರಿಯಲ್ಲ ಎಂದು ಹೇಳಿರುವ ಅಶೋಕ್ ಪಂಡಿತ್ ಈ ವಿವಾದವನ್ನು ಇತ್ಯರ್ಥ ಮಾಡಲು ಮತ್ತು ರಣ್ವೀರ್ ಸಿಂಗ್ ಅವರ ಪರ ವಾದವನ್ನು ಕೇಳಲು ಮೂರು ಬಾರಿ ನೋಟಿಸ್‌ಗಳನ್ನು ಕಳಿಸಿದರೂ ಕೂಡ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದಿದ್ಧಾರೆ.

ಆದಾಗ್ಯೂ, FWICE ಪತ್ರಿಕಾಗೋಷ್ಠಿಯನ್ನು ಘೋಷಿಸಿದ ನಂತರ, ರಣವೀರ್ ಸಿಂಗ್ ಅವರ ತಂಡದಿಂದ ಅಂತಿಮವಾಗಿ ಇ-ಮೇಲ್ ಬಂದಿತು ಎಂದು ಹೇಳಿರುವ ಅಶೋಕ್ ಪಂಡಿತ್, ಆ ಇ-ಮೇಲ್‌ನಲ್ಲಿ, FWICE ಗೆ ಈ ವಿಷಯದಲ್ಲಿ ಮಧ್ಯಪ್ರವೇಶಿಸುವ ಅಧಿಕಾರವಿಲ್ಲ ಮತ್ತು ವಿವಾದದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ನಮೂದಿಸಲಾಗಿದೆ ಎಂದು ಹೇಳಿದ್ದಾರೆ.
ಆ ನಂತರ ಮಾತನಾಡಿದ FWICE ಅಧ್ಯಕ್ಷ ಬಿ.ಎನ್. ತಿವಾರಿ , ಈ ವಿಷಯ ಕೇವಲ ನಟ ಮತ್ತು ನಿರ್ಮಾಪಕರ ನಡುವಿನ ಭಿನ್ನಾಭಿಪ್ರಾಯ ಮಾತ್ರ ಅಲ್ಲ. ಅದಕ್ಕಿಂತ ದೊಡ್ಡದು ಎಂದು ಹೇಳಿದ್ಧಾರೆ. ಸಾವಿರಾರು ಚಲನಚಿತ್ರ ಕಾರ್ಮಿಕರ ಜೀವನೋಪಾಯದ ಪ್ರಶ್ನೆ ಇದು ಎಂದಿದ್ದಾರೆ.
ಒಂದು ಚಿತ್ರ ನಿರ್ಮಾಣ ಆದರೆ, ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ಆದರೆ ಅದೇ ಒಂದು ಚಿತ್ರ ಇದ್ದಕ್ಕಿದ್ದಂತೆ ನಿಂತು ಹೋದರೆ, ಅವರ ಬದುಕು ಬೀದಿಗೆ ಬರುತ್ತೆ ಎಂದು ಹೇಳಿರುವ ಬಿ.ಎನ್.ತಿವಾರಿ ಫೆಡರೇಶನ್ ಕೇವಲ ತಂತ್ರಜ್ಞರನ್ನು ಮಾತ್ರವಲ್ಲದೆ ಕಲಾವಿದರು ಮತ್ತು ನಿರ್ಮಾಪಕರನ್ನೂ ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ಯಾರು ಎಷ್ಟು ದೊಡ್ಡ ಸ್ಟಾರ್ ಆದರೂ ಕೂಡ ಉದ್ಯಮದ ನಿಯಮಗಳನ್ನು ಮೀರಲು ಸಾಧ್ಯ ಇಲ್ಲ ಎಂದಿದ್ಧಾರೆ.
ಒಂದು ಬಲವಾದ ಸಂದೇಶವನ್ನು ಉದ್ಯಮಕ್ಕೆ ಕಳುಹಿಸಬೇಕು, ಯಾರಾದರೂ ಸೂಪರ್‌ಸ್ಟಾರ್ ಆಗಿದ್ದರೂ, ಅವರು ನಿಯಮಗಳು ಮತ್ತು ನಿಬಂಧನೆಗಳನ್ನು ಮೀರುವಂತೆ ಇಲ್ಲ ಎಂದು ಹೇಳಿರುವ ಬಿಎನ್ ತಿವಾರಿ, ರಣವೀರ್ ಸಿಂಗ್ ವಿರುದ್ಧ ಕೂಡಲೇ ಜಾರಿಗೆ ಬರುವಂತೆ FWICE ಸಹಕಾರ ನಿರಾಕರಣಾ ನಿರ್ದೇಶನವನ್ನು ಹೊರಡಿಸಿದೆ ಎಂದಿದ್ದಾರೆ.
ಔಪಚಾರಿಕವಾಗಿ ವಿವಾದ ಬಗೆಹರಿಯುವವರೆಗೂ ಎಲ್ಲಾ ಅಂಗಸಂಸ್ಥೆಗಳು ಮತ್ತು ನಿರ್ಮಾಣ ಸಂಸ್ಥೆಗಳು ಬೆಂಬಲ ನೀಡಬೇಕೆಂದು ಮನವಿ ಮಾಡಿರುವ ಬಿಎನ್ ತಿವಾರಿ ನಮ್ಮ ಯಾವುದೇ ಸದಸ್ಯರು ಅವರೊಂದಿಗೆ ಕೆಲಸ ಮಾಡುವಂತೆ ಇಲ್ಲ ಎಂದು ಖಡಕ್ ಆಗಿ ಹೇಳಿದ್ಧಾರೆ.
ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಫರ್ಹಾನ್ ಅಖ್ತರ್ ಅವರ ಪಾರ್ಟ್‌ನರ್ ರಿತೇಶ್ ಸಿಧ್ವಾನಿ ಹಾಜರಾಗಿದ್ದರೆ, ಫರ್ಹಾನ್ ಅಖ್ತರ್ ಲಂಡನ್‌ದಿಂದ ವಿಡಿಯೋ ಕಾಲ್ ಮೂಲಕ ಭಾಗವಹಿಸಿದ್ದರು.
ಸದ್ಯ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ ಹೇರಿರುವ ಈ ಬ್ಯಾನ್‌ದಿಂದ ರಣ್ವೀರ್ ಸಿಂಗ್ ವೃತ್ತಿ ಬದುಕಿನ ಮೇಲೆ ದೊಡ್ಡ ಪರಿಣಾಮವನ್ನಂತೂ ಬೀರಲಿದೆ. ಯಾಕೆಂದರೆ FWICE ಅಡಿಯಲ್ಲಿ ಲೈಟ್‌ಬಾಯ್ಸ್, ತಂತ್ರಜ್ಞರು, ಮೇಕಪ್ ಆರ್ಟಿಸ್ಟ್‌ಗಳು, ಸ್ಟಂಟ್ ಮಾಸ್ಟರ್‌ಗಳು ಮತ್ತು ವ್ಯಾನ್ ಸಪ್ಲೈಯರ್ಸ್ ಸೇರಿದಂತೆ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ.ಇವರು ಯಾರು ಈಗ ರಣವೀರ್ ಸಿಂಗ್ ನಟಿಸುವ ಸಿನಿಮಾಗಳ ಸೆಟ್‌ಗಳಲ್ಲಿ ಕೆಲಸ ಮಾಡುವಂತಿಲ್ಲ.
ಇನ್ನು FWICE ಒಕ್ಕೂಟದ ಈ ನಿರ್ಧಾರದಿಂದ ಕೇವಲ ಸಿನಿಮಾಗಳಿಗೆ ಮಾತ್ರವಲ್ಲ, ಜಾಹೀರಾತು ಮತ್ತು ಬ್ರ್ಯಾಂಡ್ ಶೂಟಿಂಗ್ ಮೇಲೆ ಕೂಡ ಪರಿಣಾಮ ಉಂಟಾಗಲಿದೆ. ಸರಳವಾಗಿ ಹೇಳಬೇಕು ಅಂದರೆ ಈ ವಿವಾದ ಬಗೆಹರಿಯುವವರೆಗೂ ಯಾವುದೇ ನಿರ್ಮಾಪಕರು ರಣವೀರ್ ಸಿಂಗ್ ಅವರನ್ನು ಇಟ್ಟುಕೊಂಡು ಶೂಟಿಂಗ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಶೂಟಿಂಗ್ ಆರಂಭಿಸಿದರೆ ಕಾರ್ಮಿಕರು ಕೆಲಸ ಸ್ಥಗಿತಗೊಳಿಸುತ್ತಾರೆ.ತಮ್ಮ ಮೇಲೇ ಹೇರಲಾದ ಈ ನಿಷೇಧದ ಕುರಿತು ರಣ್ವೀರ್ ಸಿಂಗ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications