ಅದೊಂದೇ ಕಾರಣಕ್ಕೆ ಇಷ್ಟು ದಿನ ಸುಮ್ಮನಿದ್ದೆ ; ಬ್ಯಾನ್ ಹೇರಿದ ಚಿತ್ರರಂಗ, ಕೊನೆಗೂ ಮೌನ ಮುರಿದ ರಣವೀರ್ ಸಿಂಗ್
ಬಾಲಿವುಡ್‌ನ ಪ್ರತಿಭಾವಂತ ಸ್ಟಾರ್ ರಣ್ವೀರ್ ಸಿಂಗ್. ಝೀರೋದಿಂದ ಹೀರೋ ಆದ ರಣ್ವೀರ್, ಪಾತ್ರ ಎಂತಹದ್ದೇ ಇರಲಿ, ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಾರೆ. ಕಾಲ ಕಾಲಕ್ಕೆ ತಮ್ಮ ಅಭಿನಯದಿಂದ ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ್ದಾರೆ. ಆದರೂ ಅದ್ಯಾಕೋ ರಣ್ವೀರ್ ಸಿಂಗ್ ಇತ್ತೀಚಿನ ದಿನಗಳಲ್ಲಿ ಮಂಕಾಗಿದ್ದರು. ರಣ್ವೀರ್ ಅಭಿನಯದ ಸಾಲು ಸಾಲು ಸಿನಿಮಾಗಳು ಶುರುವಾದಷ್ಟೇ ಬೇಗ ನಿಂತು ಹೋಗುತ್ತಿದ್ದವು.
ಕರಣ್ ಜೋಹರ್ ನಿರ್ಮಾಣದ ''ತಖ್ತ್ ''.. ಶಂಕರ್ ನಿರ್ದೇಶನದಲ್ಲಿ ಬರಬೇಕಿದ್ದ ''ಅನ್ನಿಯನ್'' ಚಿತ್ರದ ರಿಮೇಕ್, ಹನುಮಾನ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶನದ ''ರಾಕ್ಷಸ್''.. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ''ಬೈಜೂ ಬವರಾ''.. ಹೀಗೆ ಅನೇಕ ಸಿನಿಮಾಗಳು ಇನ್ನೇನು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಒಂದಿಲ್ಲೊಂದು ವಿಘ್ನಗಳಿಂದಾಗಿ ನಿಂತು ಹೋದವು.

ಇದೆಲ್ಲದರಿಂದ ಖುದ್ದು ರಣ್ವೀರ್ ಸಿಂಗ್ ಬೇಸತ್ತು ಹೋಗಿದ್ದರು. ಹಾಗಂಥ ಸೋಲು ಒಪ್ಪಿಕೊಂಡಿರಲಿಲ್ಲ. ಬದಲಿಗೆ ಬಿರಂತರ ಪ್ರಯತ್ನ ಮಾಡುತ್ತಲೇ ಬಂದರು. ಆ ಪ್ರಯತ್ನದ ಫಲವೇ ''ಧುರಂಧರ್''.
ಹಿಂದಿ ಚಿತ್ರರಂಗದ ಇತಿಹಾಸದಲ್ಲಿಯೇ ಹಿಂದ್ಯಾರು ಮಾಡಿರದ ಸಾಧನೆಯನ್ನು ''ಧುರಂಧರ್'' ಮೂಲಕ ರಣ್ವೀರ್ ಮಾಡಿದ್ಧಾರೆ. ಎರಡೆರಡು ಬಾರಿ ಬಾಕ್ಸಾಫೀಸ್‌ನಲ್ಲಿ 1000 ಕೋಟಿಗೂ ಅಧಿಕ ಹಣ ಕೊಳ್ಳೆ ಹೊಡೆದಿದ್ದಾರೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ.
ಸದ್ಯ ರಣ್ವೀರ್ ಸಿಂಗ್ ಅವರ ಪಾಲಿಗಿದು ಸುವರ್ಣ ಯುಗ. ಆದರೆ ಇವರ ದಂಡಯಾತ್ರೆ ಮುಂದುವರೆಯಬೇಕೆನ್ನುವಷ್ಟರಲ್ಲಿ ''ಡಾನ್ 3'' ವಿವಾದ ಭುಗಿಲೆದ್ದಿದೆ. ಏಕಾಏಕಿ ಚಿತ್ರದಿಂದ ಹೊರ ನಡೆದಿದ್ದಕ್ಕೆ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ರಣ್ವೀರ್ ಸಿಂಗ್ ವಿರುದ್ಧ ಅಸಹಕಾರ ಚಳುವಳಿ ಘೋಷಿಸಿದೆ. ರಣ್ವೀರ್ ಜೊತೆ ಯಾರು ಕೆಲಸ ಮಾಡಬಾರದೆಂದು ತಾಕೀತು ಮಾಡಿದೆ. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಣ್ವೀರ್ ಸಿಂಗ್ ಮೌನ ಮುರಿದಿದ್ಧಾರೆ. ತಮ್ಮ ತಂಡದ ಮೂಲಕ ಸಂದೇಶವನ್ನು ರವಾನೆ ಮಾಡಿದ್ದಾರೆ.
''ಡಾನ್ 3'' ವಿವಾದದ ಕುರಿತು ತಮ್ಮ ಮನದ ಮಾತುಗಳನ್ನು, ವಕ್ತಾರರ ಮೂಲಕ ಹಂಚಿಕೊಂಡಿರುವ ರಣ್ವೀರ್ ಸಿಂಗ್ ಕಾಲಕಾಲಕ್ಕೆ ನಮ್ಮ ಸುತ್ತ ಹಲವು ಕಥೆಗಳು ಮತ್ತು ವದಂತಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಆದರೆ, ಸಾರ್ವಜನಿಕವಾಗಿ ಅವುಗಳಿಗೆ ಪ್ರತಿಕ್ರಿಯೆ ನೀಡುವುದು ಅಥವಾ ಅನಗತ್ಯ ಚರ್ಚೆಗಳಿಗೆ ಗ್ರಾಸವಾಗುವುದು ರಣವೀರ್‌ಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ರಣ್ವೀರ್ ಸಿಂಗ್ ವಕ್ತಾರ, ಇಂತಹ ವಿಷಯಗಳು ಘನತೆ, ಪ್ರಬುದ್ಧತೆ ಮತ್ತು ಪರಸ್ಪರ ಗೌರವದಿಂದ ನಿರ್ವಹಿಸಬೇಕು ಎನ್ನುವುದು ರಣ್ವೀರ್ ಸಿಂಗ್ ಅವರ ಉದ್ದೇಶ, ''ಡಾನ್'' ಫ್ರಾಂಚೈಸಿಯ ಜೊತೆ ಗುರುತಿಸಿಕೊಂಡ ಪ್ರತಿಯೊಬ್ಬರ ಮೇಲೂ ರಣ್ವೀರ್ ಸಿಂಗ್‌ಗೆ ಅತ್ಯುನ್ನತ ಗೌರವ ಇದೆ ಎಂದು ಹೇಳಿದ್ಧಾರೆ.
''ಡಾನ್'' ಸರಣಿ ತನ್ನ ಯಶಸ್ಸನ್ನು ಮುಂದುವರೆಸಿಕೊಂಡು ಹೋಗಲಿ ಎನ್ನುವುದು ರಣ್ವೀರ್ ಸಿಂಗ್ ಅವರ ಆಶಯವಾಗಿದ್ದು, ''ಡಾನ್ 3''ಗೆ ಸಂಬಂಧಿಸಿದ ಈ ಬೆಳವಣಿಗೆಗಳಲ್ಲಿ ಮೊದಲಿಂದ ಉದ್ದೇಶಪೂರ್ವಕವಾಗಿ ರಣವೀರ್ ಸಿಂಗ್ ಮೌನಕ್ಕೆ ಶರಣಾಗಿದ್ದರು ಎಂದು ಹೇಳಿದ್ಧಾರೆ.
ವೃತ್ತಿಪರ ಚರ್ಚೆಗಳು, ವೈಯಕ್ತಿಕ ಸಂಬಂಧಗಳು ಗೌರವದಿಂದ ನಿಭಾಯಿಸಬೇಕು ಎನ್ನುವ ನಂಬಿಕೆ ರಣವೀರ್ ಸಿಂಗ್ ಅವರದ್ದು ಎಂದು ಹೇಳಿರುವ ವಕ್ತಾರರು, ಊಹಾಪೋಹಗಳಿಗೆ ಪ್ರತಿಕ್ರಿಯಿಸದೆ, ಅವರು ತಮ್ಮ ಕೆಲಸ ಮತ್ತು ಮುಂದಿರುವ ಬದ್ಧತೆಗಳ ಮೇಲೆ ಗಮನಹರಿಸಿದ್ದಾರೆ ಎಂದಿದ್ದಾರೆ.
ಇಂತಹ ಸಂದರ್ಭಗಳಲ್ಲಿ ಸಂಯಮ ಮತ್ತು ಸೌಜನ್ಯ ಅವರ ಉದ್ದೇಶಪೂರ್ವಕ ನಿಲುವಾಗಿದ್ದು, ಅದನ್ನು ಅವರು ಮುಂದುವರಿಸುತ್ತಾರೆ ಎಂದು ಕೂಡ ರಣ್ವೀರ್ ಸಿಂಗ್ ಪರ ವಕ್ತಾರರು ಹೇಳಿದ್ಧಾರೆ.
ಒಟ್ನಲ್ಲಿ ರಣ್ವೀರ್ ಸಿಂಗ್ ಸದ್ಯ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಬ್ಯಾನ್ ಕುರಿತು ಮಾತನಾಡಿಲ್ಲ. ಮತ್ತೊಂದು ಕಡೆ ಫೆಡರೇಶನ್ ಕೂಡ ಮಾತುಕತೆಯ ಬಾಗಿಲುಗಳನ್ನು ಇನ್ನೂ ಮುಚ್ಚಿಲ್ಲ. ರಣವೀರ್ ಸಿಂಗ್ ಖುದ್ದಾಗಿ ಹೋಗಿ ಈ 45 ಕೋಟಿ ರೂಪಾಯಿ ವಿವಾದ ಬಗೆಹರಿಸಿಕೊಳ್ಳುತ್ತಾರಾ ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications