ರಣವೀರ್ ಸಿಂಗ್‌ಗೆ ಬೆದರಿಕೆ, ವಾಯ್ಸ್ ಮೆಸೇಜ್‌ನಲ್ಲಿ ಕೋಟಿ ಹಣಕ್ಕೆ ಬೇಡಿಕೆ ; ಧುರಂಧರ್ ಸುತ್ತ ಖಾಕಿ ಸರ್ಪಗಾವಲು
ಬಾಲಿವುಡ್ ಮೇಲೆ ಭೂಗತ ಲೋಕದ ನೆರಳು ಮತ್ತೆ ಬಿದ್ದಂತಿದೆ. 90ರ ದಶಕದಲ್ಲಿ ಹಿಂದಿ ಉದ್ಯಮವನ್ನೇ ನಡುಗಿಸಿದ್ದ ಅಂಡರ್ ವರ್ಲ್ಡ್ ಹೊಸ ರೂಪದಲ್ಲಿ ಮತ್ತೆ ಮುಂಬೈನ ಗ್ರಹ ಪ್ರವೇಶ ಮಾಡಿದಂತೆ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಎರಡೂವರೆ ದಶಕದಿಂದ ನೆಮ್ಮದಿಯಿಂದ ಗ್ಲಾಮರ್ ಲೋಕದ ನಿದ್ದೆಗೆ ಈಗ ಕೊಳ್ಳಿ ಬಿದ್ದಿದೆ. ಬೆದರಿಕೆಯ ತಂತ್ರ ಮತ್ತೆ ಮುನ್ನೆಲೆಗೆ ಬಂದಿದೆ.
ಇನ್ನೂ ಮೊದಲಾದರೆ ಕೇವಲ ಗುಸು ಗುಸು.. ಪಿಸು ಪಿಸು ಮಾತಷ್ಟೇ ಮಾಯಾನಗರಿ ಮುಂಬೈನಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ಬಹಿರಂಗವಾಗಿಯೇ ಹಲ್ಲೆ ಮತ್ತು ಸುಲಿಗೆ ಮಾಡಲಾಗುತ್ತಿದೆ. ಈ ಮೂಲಕ ಭಯ ಹುಟ್ಟಿಸಿ ಕೋಟ್ಯಂತರ ರೂಪಾಯಿ ಹಣ ಪೀಕುವ ವ್ಯವಸ್ಥೆಯೊಂದು ಜನ್ಮ ಪಡೆದಿರುವ ಅನುಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಹೌದು,ಅಸಲಿಗೆ ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್‌ನ ಆಕ್ಷನ್ ಡೈರೆಕ್ಟರ್ ರೋಹಿತ್ ಶೆಟ್ಟಿಯ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ರಾತ್ರಿ ನಡೆದ ಐದು ಸುತ್ತಿನ ಈ ದಾಳಿಯಿಂದ ಇಡೀ ಬಾಲಿವುಡ್ ಬೆಚ್ಚಿ ಬಿದ್ದಿತ್ತು. ಈ ದಾಳಿಯ ಹಿಂದೆ ಬಿಷ್ಣೋಯ್ ಗ್ಯಾಂಗ್‌ನ ಕೈವಾಡ ಇರಬಹುದೆನ್ನುವ ಶಂಕೆಯ ಮೇಲೆ ಪೊಲೀಸರು ತನಿಖೆ ಮಾಡುತ್ತಿರುವ ಸಂದರ್ಭದಲ್ಲಿ ಇದೀಗ ಬಾಲಿವುಡ್‌ನ ''ಧುರಂಧರ್'' ರಣವೀರ್ ಸಿಂಗ್ ಅವರನ್ನು ಗುರಿಯಾಗಿಸಲಾಗಿದೆ. ವಾಟ್ಸಾಫ್ ಮೂಲಕ ಬೆದರಿಕೆಯನ್ನು ಹಾಕಲಾಗಿದೆ. ವಾಟ್ಸಾಫ್ ಮೂಲಕ ಬೆದರಿಕೆಯ ಸಂದೇಶವನ್ನು ರಣ್ವೀರ್ ಸಿಂಗ್‌ಗೆ ಕಳುಹಿಸಿರುವ ವ್ಯಕ್ತಿ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ರಣವೀರ್ ಸಿಂಗ್‌ಗೆ ಬೆದರಿಕೆ ಹಾಕಿದ ವ್ಯಕ್ತಿ ಕೂಡ ಬಿಷ್ಣೋಯ್ ಗ್ಯಾಂಗ್‌ನವನೇ ಆಗಿರಬಹುದು ಎನ್ನುವ ಅನುಮಾನ ಖಾಕಿ ಪಡೆಗೆ ಇದೆ. ''ಹಿಂದೂಸ್ತಾನ್ ಟೈಮ್ಸ್'' ವರದಿ ಪ್ರಕಾರ, ರಣವೀರ್‌ಗೆ ಬಂದ ಬೆದರಿಕೆಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧವಿದೆಯೇ ಎಂದು ತನಿಖೆಯನ್ನು ಮಾಡಲಾಗುತ್ತಿದೆ.
ಇನ್ನೂ ಮೊದಲಾದರೆ ಈ ಬಿಷ್ಣೋಯ್ ಗ್ಯಾಂಗ್ ಕೇವಲ ಸಲ್ಮಾನ್ ಖಾನ್ ಮಾತ್ರ ಬಿದ್ದಿತ್ತು. ಸಲ್ಮಾನ್ ಖಾನ್ ಜೀವ ತೆಗೆಯುವ ಶಪಥ ಮಾಡಿತ್ತು. ಅದಕ್ಕೆ ಈ ಗ್ಯಾಂಗ್ ಬಳಿ ಕಾರಣವೂ ಇದೆ. ಆದರೆ..ಈಗ ಬಿಷ್ಣೋಯ್ ಗ್ಯಾಂಗ್ ಇಡೀ ಬಾಲಿವುಡ್‌ನ ಬೆನ್ನು ಹತ್ತಿದೆಯಾ ಎನ್ನುವ ಪ್ರಶ್ನೆ ಕೂಡ ಸದ್ಯ ಹಲವರಲ್ಲಿ ಮನೆ ಮಾಡಿದೆ. ಈ ಹಿಂದೆ ನಾಲ್ಕು ತಿಂಗಳಿನಲ್ಲಿ ಮೂರು ಬಾರಿ ಕಪಿಲ್ ಶರ್ಮಾ ಅವರ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ್ದ ಈ ಗ್ಯಾಂಗ್‌ನ ಕೈವಾಡ ರೋಹಿತ್ ಶೆಟ್ಟಿ ಮನೆ ಮೇಲೆ ನಡೆದ ದಾಳಿ ಹಿಂದೆ ಇದೆಯಾ..? ರಣ್ವೀರ್ ಸಿಂಗ್‌ಗೆ ಬಂದ ಬೆದರಿಕೆಯ ಸಂದೇಶದ ಹಿಂದೆಯೂ ಇದೇ ಗ್ಯಾಂಗ್ ಇದೆಯಾ..? ಎನ್ನುವುದೇ ಈಗ ಹಿಂದಿ ಉದ್ಯಮಕ್ಕೆ ಚಿಂತೆಯಾಗಿದೆ.
ಒಂದು ವೇಳೆ ರಣವೀರ್ ಸಿಂಗ್‌ಗೆ ಬಂದ ಬೆದರಿಕೆ ಸಂದೇಶ ಬಿಷ್ಣೋಯ್ ಗ್ಯಾಂಗ್ ಕಳುಹಿಸಲ್ಲವಾದರೆ, ಅಂಡರ್‌ವರ್ಲ್ಡ್ ಈಗ ತನ್ನ ಹಳೆಯ ಶೈಲಿಯನ್ನು ಬದಲಿಸಿ, ಇಂತಹ ಎನ್‌ಕ್ರಿಪ್ಟೆಡ್ ಆ್ಯಪ್‌ಗಳ ಮೂಲಕ ನಟರನ್ನು ಗುರಿಯಾಗಿಸುತ್ತಿದೆಯಾ ಎನ್ನುವ ಪ್ರಶ್ನೆಗೆ ಕೂಡ ಮುಂಬೈ ಪೊಲೀಸರು ಉತ್ತರ ಹುಡುಕಬೇಕಿದೆ. ಈ ಸವಾಲು ಕೂಡ ಈಗ ಖಾಕಿ ಪಡೆಯ ಮುಂದೆ ಇದೆ.

ಇನ್ನೂ ತಮಗೆ ಬೆದರಿಕೆಯ ಸಂದೇಶ ಬಂದ ಹಿನ್ನೆಲೆ ರಣವೀರ್ ಸಿಂಗ್ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ರಣವೀರ್ ಸಿಂಗ್ ಮನೆಗೆ ಆರು ಮಂದಿ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ರಣವೀರ್ ಸಿಂಗ್ ಅವರ ಈ ಪ್ರಕರಣ ಸದ್ಯ ರಣವೀರ್ ಮತ್ತು ದೀಪಿಕಾ ವಾಸ ಇರುವ ಅಪಾರ್ಟ್‌ಮೆಂಟ್‌ನ ಸೊಸೈಟಿ ಆಡಳಿತ ಮಂಡಳಿಯ ಆತಂಕವನ್ನು ಹೆಚ್ಚಿಸಿದೆ. ಸೊಸೈಟಿ ಆಡಳಿತ ಮಂಡಳಿಯು ದಾದರ್ ಪೊಲೀಸ್ ಠಾಣೆಗೆ ಪತ್ರ ಬರೆದು, ಸಾಮಾನ್ಯ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿ ಇರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.ಲಾಬಿ, ಜಿಮ್, ಮಕ್ಕಳ ಆಟದ ಪ್ರದೇಶದಂತಹ ಸಾಮಾನ್ಯ ಸ್ಥಳಗಳಲ್ಲಿ ಶಸ್ತ್ರಾಸ್ತ್ರ ನೋಡಿದಾಗ ನಿವಾಸಿಗಳಲ್ಲಿ ಆತಂಕ ಹೆಚ್ಚಾಗುತ್ತಿದೆ ಎಂದು ಸಮಿತಿ ತಿಳಿಸಿದೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತೆ..? ರಣವೀರ್ ಸಿಂಗ್‌ಗೆ ಬೆದರಿಕೆ ಹಾಕಿದ್ದು ಯಾರು..? ಎಂಬ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.


Click it and Unblock the Notifications











