ರಣ್ವೀರ್ ಸಿಂಗ್ ಹೊಸ ಸಿನಿಮಾದಲ್ಲಿ ಕರಾವಳಿ ಸುಂದರಿ: ರೋಹಿತ್ ಶೆಟ್ಟಿ ನಿರ್ದೇಶನ
ಬಾಲಿವುಡ್ ಖ್ಯಾತ ನಟ ರಣ್ವೀರ್ ಸಿಂಗ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಕಾಮಿಡಿ ಸಿನಿಮಾ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಲು ಸಿದ್ಧವಾಗಿದೆ. ಅಂದ್ಹಾಗೆ ಸಿನಿಮಾಗೆ ಈಗ ಮತ್ತೋರ್ವ ನಟ ವರುಣ್ ಶರ್ಮಾ ಎಂಟ್ರಿ ಕೊಟ್ಟಿದ್ದಾರೆ.
ರಣ್ವೀರ್ ಮತ್ತು ರೋಹಿತ್ ಕಾಂಬಿನೇಷನ್ ಕಾಮಿಡಿ ಚಿತ್ರಕ್ಕೆ 'ಸರ್ಕಸ್' ಎಂದು ಟೈಟಲ್ ಇಡಲಾಗಿದೆ. ವಿಶೇಷ ಅಂದರೆ ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ರಣ್ವೀರ್ ದ್ವಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ರಣ್ವೀರ್ ಸಿಂಗ್ ಜೊತೆಗೆ ವರುಣ್ ಶರ್ಮಾ ಸಹ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಿನಿಮಾಗೆ ನಾಯಕಿಯಾಗಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡಿಸ್ ಆಯ್ಕೆ ಆಗಿದ್ದಾರೆ. ಇದೀಗ ಸಿನಿಮಾದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಚಿತ್ರಕ್ಕೆ ಮತ್ತೋರ್ವ ನಾಯಕಿಯಾಗಿ ಕರ್ನಾಟಕದ ಕರಾವಳಿ ಸುಂದರಿ ಪೂಜಾ ಹೆಗ್ಡೆ ಎಂಟ್ರಿ ಕೊಟ್ಟಿದ್ದಾರಂತೆ. ಈಗಾಗಲೇ ಪೂಜಾ ಹೌಸ್ ಫುಲ್-4 ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಂದು ಹಾಸ್ಯಭರಿತ ಸಿನಿಮಾದಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಬಾರಿಗೆ ರಣ್ವೀರ್ ಜೊತೆ ನಟಿಸುತ್ತಿದ್ದಾರೆ.

ಇನ್ನೂ 'ಸರ್ಕಸ್' ಬಾಲಿವುಡ್ ನಲ್ಲಿ ಈ ಹಿಂದೆ ರಿಲೀಸ್ ಆಗಿದ್ದ ಅಂಗೂರ್ ಸಿನಿಮಾದ ರಿಮೇಕ್ ಆಗಿದೆ. 1982ರಲ್ಲಿ ಬಂದ ಅಂಗೂರ್ ಸಿನಿಮಾದಲ್ಲಿ ಸಂಜೀವ್ ಕುಮಾರ್, ದೇವನ್ ಶರ್ಮಾ, ಮೌಶ್ಮಿ ಚಟರ್ಜಿ ಅರುಣಾ ಇರಾನಿ ನಟಿಸಿದ್ದರು. ಮತ್ತದೆ ಸಿನಿಮಾವನ್ನು ಸರ್ಕಸ್ ಹೆಸರಿನಲ್ಲಿ ರಿಮೇಕ್ ಮಾಡುತ್ತಿದ್ದಾರೆ ರೋಹಿತ್ ಶೆಟ್ಟಿ.
ಸಿಂಬ ಸಿನಿಮಾದ ಬಳಿಕ ರಣ್ವೀರ್ ಮತ್ತು ರೋಹಿತ್ ಶೆಟ್ಟಿ ಮತ್ತೆ ಒಂದಾಗುತ್ತಿದ್ದಾರೆ. ರೋಹಿತ್ ಶೆಟ್ಟಿ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದ್ದು, ಮುಂದಿನ ವರ್ಷ ಸೆಟ್ಟೇರಲಿದೆ. ಆದಷ್ಟು ಬೇಗ ಸಿನಿಮಾ ಚಿತ್ರೀಕರಣ ಮಾಡಿ ಮುಗಿಸುವ ಪ್ಲಾನ್ ಮಾಡಿದೆ ಚಿತ್ರತಂಡ.


Click it and Unblock the Notifications











