ಭಾರತದಲ್ಲಿ ₹700 ಕೋಟಿ ದೋಚಿದ ಧುರಂಧರ್‌ಗೆ ₹90 ಕೋಟಿಯ ಆಘಾತ
''ಧುರಂಧರ್'' ಮಲಗಿದ್ದ ಬಾಲಿವುಡ್‌ನ ಬಡಿದೆಬ್ಬಿಸಿದೆ. ಹೊಸ ಚೈತನ್ಯ ತುಂಬಿದೆ. ಬೆಳ್ಳಿತೆರೆಯಲ್ಲಿ ಅಕ್ಷರಶಃ ಧಗಧಗಿಸುತ್ತಿದೆ. ''ಧುರಂಧರ್'' ಅಬ್ಬರಕ್ಕೆ ಬಾಲಿವುಡ್‌ನಲ್ಲಿನ ಹತ್ತು ಹಲವು ದಾಖಲೆ ಪುಡಿಪುಡಿಯಾಗಿವೆ. ಕೇವಲ ಭಾರತದಲ್ಲಿಯೇ ₹700 ಕೋಟಿಯನ್ನು ಕೊಳ್ಳೆ ಹೊಡೆದಿರುವ ''ಧುರಂಧರ್'' ಹಿಂದಿ ಚಿತ್ರರಂಗದ ಇತಿಹಾಸದಲ್ಲಿಯೇ ಕೇವಲ ಭಾರತದಲ್ಲಿ ₹700 ಕೋಟಿ ಗಳಿಸಿದ ಮೊದಲ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ನ ಭೂತೋ ನ ಭವಿಷ್ಯತಿ..
ಎಂಬಂತಹ ಸಾಧನೆಯನ್ನು ಮಾಡಿದೆ. ದೀಪಿಕಾ ಪಡುಕೋಣೆಯ ಗಂಡ ರಣ್ವೀರ್ ಸಿಂಗ್ ಅವರಿಗೆ ಬಾಲಿವುಡ್‌ನಲ್ಲಿ ವಜ್ರಖಚಿತ ಸಿಂಹಾಸನವನ್ನು ಕೂಡ ಈ ಸಿನಿಮಾ ದಯಪಾಲಿಸಿದೆ. ಇಂತಹ ''ಧುರಂಧರ್'' ಚಿತ್ರಕ್ಕೆ 90 ಕೋಟಿ ನಷ್ಟ ಆಗಿದೆ ಅಂದರೆ ನೀವು ನಂಬ್ತೀರಾ..? ನಂಬ್ಲೇಬೇಕು. ಯಾಕೆಂದರೆ ಅಚ್ಚರಿ ಆದರೂ ಕೂಡ ಇದು ನಿಜಾ.

ಹೌದು, ವಿಶ್ವದೆಲ್ಲೆಡೆ ತೆರೆಗೆ ಬಂದು ಬಾಕ್ಸಾಫೀಸ್‌ನಲ್ಲಿ ''ಧುರಂಧರ್'' ಅಬ್ಬರಿಸುತ್ತಿದೆ. ಆದರೆ ಪಾಕಿಸ್ತಾನಕ್ಕೆ ಮಾತ್ರ ಈ ಚಿತ್ರದಿಂದ ವಿಲವಿಲ ಒದ್ದಾಡಿತ್ತು. ಕಥೆಯಲ್ಲಿ ಪಾಕಿಸ್ತಾನದ ವಿರೋಧಿ ಅಂಶಗಳಿದೆ ಎಂದು ಒಟ್ಟು 6 ದೇಶಗಳು ಧುರಂಧರ್ ಮೇಲೆ ನಿಷೇಧ ಹೇರಿದ್ದವು. ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ''ಧುರಂಧರ್'' ಸಿನಿಮಾವನ್ನು ಬ್ಯಾನ್ ಮಾಡಿದ್ದವು.
ಈ ಹಿನ್ನೆಲೆ ಚಿತ್ರಕ್ಕೆ ಹಿನ್ನೆಡೆಯಾಗಿತ್ತು. ಯಾಕೆಂದರೆ ಈ ಹಿಂದಿನಿಂದ ಗಲ್ಫ್ ರಾಷ್ಟ್ರಗಳು ಬಾಲಿವುಡ್ ಪಾಲಿಗೆ ಚಿನ್ನದ ಗಣಿ. ಹೀಗಾಗಿ ''ಧುರಂಧರ್'' ಕೂಡ ಇಲ್ಲಿ ಮೋಡಿ ಮಾಡುವ ವಿಶ್ವಾಸ ಇತ್ತು. ಆದರೆ, ಅದಕ್ಕೆ ಅವಕಾಶ ಮಾಡಿ ಕೊಡಲಿಲ್ಲ. ಬ್ಯಾನ್ ಮಾಡಿದವರೇ ಆ ನಂತರ ಕದ್ದು ನೋಡಿದ್ದಾರೆ ಎನ್ನುವುದು ಬೇರೆ ವಿಷಯವಾದರು ಸದ್ಯ ಕೊಲ್ಲಿ ದೇಶಗಳಲ್ಲಿ ''ಧುರಂಧರ್'' ಚಿತ್ರವನ್ನು ನಿಷೇಧಿಸಿದ ಕಾರಣದಿಂದ ಚಿತ್ರತಂಡಕ್ಕೆ ಹತ್ ಹತ್ರ 90 ಕೋಟಿ ನಷ್ಟ ಆಗಿದೆ. ಹೀಗೊಂದು ಲೆಕ್ಕವನ್ನು ''ಧುರಂಧರ್'' ಚಿತ್ರದ ವಿತರಕ ಪ್ರಣಬ್ ಕಪಾಡಿಯಾ ನೀಡಿದ್ದಾರೆ.
''ಸಿಎನ್‌ಎನ್-ನ್ಯೂಸ್18'' ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಓವರ್‌ಸೀಸ್ ವಿತರಕ ಪ್ರಣಬ್ ಕಪಾಡಿಯಾ, ಪ್ರತಿಯೊಂದು ದೇಶಕ್ಕೂ ತನ್ನದೇ ಆದ ನಿಯಮ ಮತ್ತು ನಿಬಂಧನೆಗಳಿರುತ್ತವೆ, ಅವುಗಳನ್ನು ಪಾಲಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.ಹೇಗಾದರೂ ಬಿಡುಗಡೆ ಮಾಡಲೇಬೇಕೆಂದು ನಾವು ಶತಪ್ರಯತ್ನ ಮಾಡಿದೆವು ಆದರೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿರುವ ಪ್ರಣಬ್ ಕಪಾಡಿಯಾ, ಮಧ್ಯಪ್ರಾಚ್ಯದ ಮಾರುಕಟ್ಟೆಯಲ್ಲಿ ಚಿತ್ರ ಬಿಡುಗಡೆಯಾಗದ ಹಿನ್ನೆಲೆ ಕಡಿಮೆ ಅಂದರೂ 90 ಕೋಟಿ ನಷ್ಟವಂತೂ ಆಗಿದೆ ಎಂದು ಹೇಳಿದ್ದಾರೆ.
ಪ್ರಣಬ್ ಕಪಾಡಿಯಾ ಅವರ ಈ ಮಾತಿಗೆ ಪೂರಕವಾಗಿ ಚಿತ್ರದ ಬಿಡುಗಡೆಗೆ ಮುನ್ನ ದುಬೈ ಮತ್ತು ರಿಯಾದ್‌ನಲ್ಲಿ ''ಧುರಂಧರ್'' ದಾಖಲೆಯ ಓಪನಿಂಗ್ ಪಡೆಯುತ್ತೆ ಎಂದು ಟ್ರೇಡ್ ಪಂಡಿತರು ಭವಿಷ್ಯ ಹೇಳಿದ್ದರು. ಆದರೆ..ನಿಷೇಧದಿಂದ ಈ ಲೆಕ್ಕಾಚಾರ ತಲೆ ಕೆಳಗಾಯ್ತು.

ಆದರೂ ಕೂಡ ''ಸ್ಯಾಕ್ನಿಲ್'' ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಸದ್ಯ ''ಧುರಂಧರ್'' ಭಾರತದಲ್ಲಿ 26 ದಿನಗಳಲ್ಲಿ ₹ 712 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಇನ್ನು ವರ್ಲ್ಡ್ ವೈಡ್ ಗಳಿಕೆಯ ಲೆಕ್ಕ ತೆಗೆದುಕೊಂಡರೆ ಈಗಾಗಲೇ ಗಳಿಕೆ ₹1,000 ಕೋಟಿಯ ಗಡಿಯನ್ನು ಪಾರು ಮಾಡಿದೆ.
ಅಂದ್ಹಾಗೇ ಕೊಲ್ಲಿ ದೇಶಗಳಲ್ಲಿ ಬಾಲಿವುಡ್ ಸಿನಿಮಾಗಳು ನಿಷೇಧಕ್ಕೊಳಗಾಗುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ''ಫೈಟರ್''.. ''ಸೈ ಫೋರ್ಸ್''.. ''ದಿ ಡಿಪ್ಲೊಮ್ಯಾಟ್''.. ''ಆರ್ಟಿಕಲ್ 370''.. ''ಟೈಗರ್ 3''.. ''ದಿ ಕಾಶ್ಮೀರ್ ಫೈಲ್'' ಚಿತ್ರಗಳನ್ನು ಕೂಡ ಇಲ್ಲಿ ನಿಷೇಧಿಸಲಾಗಿತ್ತು. ನಿಷೇಧದ ಹೊರತಾಗಿಯೂ ಕೂಡ ಈ ಚಿತ್ರಗಳನ್ನು ಹಲವರು ಪೈರಸಿಯ ಮೂಲಕ ಕದ್ದು ನೋಡಿದ್ದರು. ಈಗ ''ಧುರಂಧರ್'' ಸರದಿ.


Click it and Unblock the Notifications











