ದೀಪಿಕಾ-ರಣ್ವೀರ್ ಸಿಂಗ್ ರ ಬಹುನಿರೀಕ್ಷಿತ ಸಿನಿಮಾ ಬಿಡುಗಡೆ ಮುಂದೂಡಿಕೆ
ನಿಜ ಜೀವನದ ಪತಿ-ಪತ್ನಿ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಒಟ್ಟಿಗೆ ನಟಿಸಿರುವ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಿದೆ.
ಇಬ್ಬರೂ ಒಟ್ಟಿಗೆ ನಟಿಸಿರುವ ಕ್ರಿಕೆಟ್ ಕ್ರೀಡೆ ಆಧಾರಿತ ಸಿನಿಮಾ '83' ಇದೇ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇತ್ತು. ಆದರೆ ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗಿದೆ.
ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಜೀವನವನ್ನು ಆಧರಿಸಿದ ಸಿನಿಮಾ '83' ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ದೀಪಿಕಾ ಪಡುಕೋಣೆ, ಕಪಿಲ್ ದೇವ್ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ.

ಒಟಿಟಿಯಲ್ಲಿ ಬಿಡುಗಡೆ ಎನ್ನಲಾಗಿತ್ತು
ಮೊದಲಿಗೆ 83 ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ಸಿನಿಮಾಕ್ಕೆ ಬಂಡವಾಳ ಹೂಡಿರುವ ರಿಲಯನ್ಸ್ ಎಂಟರ್ಟೈನ್‌ಮೆಂಟ್, ತಾವು ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡುವುದಾಗಿ ಹೇಳಿತ್ತು.

ದೀಪಾವಳಿಗೆ ಬಿಡುಗಡೆ ಎನ್ನಲಾಗಿತ್ತು
ಇದೇ ತಿಂಗಳ ದೀಪಾವಳಿ ವೇಳೆಗೆ 83 ಬಿಡುಗಡೆ ಆಗುತ್ತದೆ ಎನ್ನಾಗಿತ್ತು. ಆದರೆ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ವರ್ಷ ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂದು ಚಿತ್ರತಂಡ ಹೇಳಿದ್ದು, 2021 ರ ಜನವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾಕ್ಕೆ ಸೂಕ್ತ ಪ್ರಚಾರ ಮಾಡಬೇಕಿದೆ: ರಿಲಯನ್ಸ್
ರಿಲಯನ್ಸ್ ಎಂಟರ್ಟೈನ್‌ಮೆಂಟ್ಸ್‌ನ ಸಿಇಒ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದು, 'ಸಿನಿಮಾವನ್ನು, ದೀಪಾವಳಿ, ಕ್ರಿಕಸ್‌ಮಸ್ ವೇಳೆಗೆ ಬಿಡುಗಡೆ ಮಾಡುವುದು ಕಷ್ಟ. ಸಿನಿಮಾಕ್ಕೆ ಸೂಕ್ತ ಪ್ರಚಾರ ಇನ್ನೂ ಆಗಿಲ್ಲ, ಪ್ರಚಾರ ಕಾರ್ಯಗಳಿಗೆ ಸಮಯ ಹಿಡಿಯಲಿದೆ, ಹಾಗಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ' ಎಂದಿದ್ದಾರೆ.

ಕಪಿಲ್ ದೇವ್ ಆರೋಗ್ಯ ಹದಗೆಟ್ಟಿದೆ
83 ಸಿನಿಮಾ ಕಪಿಲ್ ದೇವ್, ಜೀವನ ಆಧರಿಸಿದ ಸಿನಿಮಾ ಆಗಿದೆ. ಆದರೆ ಇತ್ತೀಚೆಗೆ ಕಪಿಲ್ ದೇವ್ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಅವರ ಮರಣದ ಸುಳ್ಳು ಸುದ್ದಿಗಳು ಸಹ ಹರಿದಾಡಿದವು. ಆದರೆ ಪ್ರಸ್ತುತ ಅವರು ಕ್ಷೇಮವಾಗಿದ್ದಾರೆ. ಆದರೆ ಅವರ ಆರೋಗ್ಯದ ಬಗ್ಗೆ ಆತಂಕವಂತೂ ಇದ್ದೇ ಇದೆ.


Click it and Unblock the Notifications











