ಆಸ್ಕರ್ ರೇಸ್ ನಲ್ಲಿದ್ದ ಭಾರತದ 'ಗಲ್ಲಿ ಬಾಯ್'ಗೆ ಭಾರಿ ನಿರಾಸೆ
2020ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಗಲ್ಲಿ ಬಾಯ್ ಚಿತ್ರ ಅಧಿಕೃತವಾಗಿ ಪ್ರವೇಶ ಪಡೆದು ಭಾರತೀಯ ಚಿತ್ರಾಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು. ಆಸ್ಕರ್ ರೇಸ್ ಗೆ ಗಲ್ಲಿ ಬಾಯ್ ಎಂಟ್ರಿ ಕೊಟ್ಟಿದೆ ಎನ್ನುವ ಸಂತಸ ಚಿತ್ರತಂಡದಲ್ಲಿ ಮುಗಿಲು ಮುಟ್ಟಿತ್ತು. ಆದರೀಗ ಗಲ್ಲಿ ಬಾಯ್ ಚಿತ್ರತಂಡಕ್ಕೆ ಮಾತ್ರವಲ್ಲದೆ ಭಾರತೀಯರಿಗೆ ಭಾರಿ ನಿರಾಸೆ ಮೂಡಿಸಿದೆ.
92ನೇ ಆಸ್ಕರ್ ಪ್ರಶಸ್ತಿ ರೇಸ್ ನಿಂದ ನಿರೀಕ್ಷಿತ ಗಲ್ಲಿ ಬಾಯ್ ಸಿನಿಮಾ ಔಟ್ ಆಗಿದೆ. ಬಾಲಿವುಡ್ ನ ಖ್ಯಾತ ನಟ ರಣ್ವೀರ್ ಸಿಂಗ್ ಮತ್ತು ಅಲಿಯಾ ಭಟ್ ಮುಖ್ಯ ಪಾತ್ರದಲ್ಲಿ ಮಿಂಚಿದ್ದ ಗಲ್ಲಿ ಬಾಯ್ ಜೋಯಾ ಅಕ್ತರ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಉತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಗಲ್ಲಿ ಬಾಯ್ ಆಯ್ಕೆಯಾಗಿತ್ತು.
ಆದರೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಅವರನ್ನು ಮೆಚ್ಚಿಸಲು ಗಲ್ಲಿ ಬಾಯ್ ವಿಫಲವಾಗಿದೆ. ಈಗಾಗಲೆ ಶಾರ್ಟ್ ಲಿಸ್ಟ್ ಫೈನಲ್ ಆಗಿದ್ದು ಈ ಲಿಸ್ಟ್ ನಿಂದ ಗಲ್ಲಿ ಬಾಯ್ ಹೊರಬಿದ್ದಿದೆ. ಅತ್ಯುತ್ತಮ Rap ಸಿಂಗರ್ ಆಗಬೇಕು ಕನಸು ಹೊತ್ತ ಯುವಕ ಜೀವನದಲ್ಲಿ ಏನೆಲ್ಲಾ ಕಷ್ಟಗಳನ್ನ ಎದುರಿಸುತ್ತಾನೆ, ಗುರಿಮುಟ್ಟಲು ಎಷ್ಟೆಲ್ಲಾ ಸವಾಲುಗಳನ್ನ ಎದುರಿಸುತ್ತಾನೆ ಎಂಬುದು ಕಥೆ.

ಈ ಚಿತ್ರ ಕೇವಲ ಭಾರತೀಯ ಪ್ರೇಕ್ಷಕರನ್ನ ಮಾತ್ರವಲ್ಲ ವಿದೇಶಿ ಪ್ರೇಕ್ಷಕರ ಮೆಚ್ಚುಗೆಯೂ ಪಡೆದುಕೊಂಡಿತ್ತು. ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ ಗಲ್ಲಿ ಬಾಯ್ ಸಿನಿಮಾ 240 ಕೋಟಿಗೂ ಅಧಿಕ ಹಣ ಗಳಿಸಿತ್ತು. ಕಳೆದ ಬಾರಿ 'ವಿಲೇಜ್ ರಾಕ್ ಸ್ಟಾರ್ಸ್' ಸಿನಿಮಾ ಅತ್ಯುತ್ತಮ ವಿದೇಶಿ ವಿಭಾಗದಲ್ಲಿ ಭಾರತದಿಂದ ನಾಮನಿರ್ದೇಶನವಾಗಿತ್ತು. ಆದರೆ, ಪ್ರಶಸ್ತಿ ಸುತ್ತಿನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಈ ಚಿತ್ರ ಹಿನ್ನಡೆ ಅನುಭವಿಸಿತ್ತು. ಈಗ ಆಸ್ಕರ್ ರೇಸ್ ನಿಂದನೂ ಹೊರಬಿದ್ದಿದೆ.
9 ವಿಭಾಗದ ಶಾರ್ಟ್ ಲಿಸ್ಟ್ ಅಧಿಕೃತವಾಗಿದೆ. ಇದರಲ್ಲಿ ಜೆಕ್ ದಿ ಪೇಂಟೆಡ್ ಬರ್ಡ್, ಲೆಸ್ ಮಿಸರೇಬಲ್ಸ್, ಅಟ್ಲಾಂಟಿಕ್ಸ್ ಸಿನಿಮಾಗಳು ಫೀಚರ್ಸ್ ವಿಭಾಗದಲ್ಲಿ ಜಾಗಪಡೆದಿವೆ. ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮುಂದಿನ ವರ್ಷ 2020ಕ್ಕೆ ಫೆಬ್ರವರಿ 9ರಂದು ಲಾಸ್ ಏಂಜಲೀಸ್ ನಲ್ಲಿ ನಡೆಯಲಿದೆ.


Click it and Unblock the Notifications











