ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುತ್ತೇನೆಂದ ರಣ್ವೀರ್ ಸಿಂಗ್
ಭಾರತ ಚಿತ್ರರಂಗ ಎಂದರೆ ಬಾಲಿವುಡ್ ಎಂದು ಹೇಳುವ ಕಾಲವಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಚಿತ್ರಣವೇ ಬದಲಾಗಿದೆ. ಇದೀಗ ಬಾಲಿವುಡ್ ಚಿತ್ರರಂಗ ದಕ್ಷಿಣದತ್ತ ಬೆರಗಿನಿಂದ ನೋಡುವಂತಾಗಿದೆ. ಬಾಲಿವುಡ್ ಮಾತ್ರವಲ್ಲ ಇಡೀಯ ವಿಶ್ವಚಿತ್ರರಂಗವೇ ದಕ್ಷಿಣ ಭಾರತ ಸಿನಿಮಾರಂಗದತ್ತ ಕುತೂಹಲದ ಕಣ್ಣುಗಳಿಂದ ನೋಡುತ್ತಿದೆ. ಆ ರೀತಿಯ ಗುಣಮಟ್ಟದ ಸಿನಿಮಾಗಳು ದಕ್ಷಿಣ ಭಾರತ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿದೆ.
ಹಿಂದೆ, ದಕ್ಷಿಣದ ನಟ-ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಹಾತೊರೆಯುತ್ತಿದ್ದರು. ಆದರೆ ಈಗ ಬಾಲಿವುಡ್ ನಟ-ನಟಿಯರು ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬಾಲಿವುಡ್‌ನ ಕೆಲವು ನಟಿಯರು ದಕ್ಷಿಣ ಭಾರತ ಸಿನಿಮಾಕ್ಕಾಗಿ ಆಡಿಷನ್ ನೀಡಿದ ಉದಾಹರಣೆಯೂ ಇದೆ!
ಇದೀಗ ಬಾಲಿವುಡ್‌ನಲ್ಲಿ ಈಗಾಗಲೇ ನೆಲೆ ನಿಂತಿರುವ ಸ್ಟಾರ್ ಎನಿಸಿಕೊಂಡಿರುವ ನಟರೊಬ್ಬರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಖ್ಯಾತ ನಟ ರಣ್ವೀರ್ ಸಿಂಗ್ ತಮಗೆ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವ ಆಸೆಯಿದೆ, 'ನನ್ನ ಪಾಲಿಗೆ ಅದೊಂದು ಸವಾಲಾಗಲಿದೆ' ಎಂದಿದ್ದಾರೆ.
''ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವುದು ಅಷ್ಟು ಸುಲಭವಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ನಾನು ಸವಾಲು ಸ್ವೀಕರಿಸುವ ವ್ಯಕ್ತಿ. ಯಾವುದಕ್ಕೂ ಇಲ್ಲ, ಆಗಲ್ಲ ಎನ್ನಲು ಆಗುವುದಿಲ್ಲ ನನಗೆ ಹಾಗಾಗಿ ಆ ಸವಾಲು ಸ್ವೀಕರಿಸುವ ಇಚ್ಛೆಯಿದೆ'' ಎಂದು ತಮಗೆ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳಲ್ಲಿ ನಟಿಸುವ ಅದಮ್ಯ ಆಸೆಯಿದೆ ಎಂಬುದನ್ನು ರಣ್ವೀರ್ ಬಹಿರಂಗಪಡಿಸಿದ್ದಾರೆ.

''ದೀಪಿಕಾ ಪಡುಕೋಣೆ ತನ್ನ ಅನುಭವ ಹೇಳುತ್ತಿರುತ್ತಾರೆ''
''ಇದೀಗ ನನ್ನ ಪತ್ನಿ ದೀಪಿಕಾ ಪಡುಕೋಣೆ ಬಹುಭಾಷಾ ಸಿನಿಮಾ ಮಾಡುತ್ತಿದ್ದಾರೆ. ಅವರು ಮನೆಗೆ ಬಂದು ತಮ್ಮ ಅನುಭವ ನನ್ನೊಡನೆ ಹಂಚಿಕೊಳ್ಳುತ್ತಾರೆ. ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸುವುದು ಹೇಗೆ ಭಿನ್ನ. ಅಲ್ಲಿನ ಸಿನಿಮಾ ಮಾಡುವ ವಿಧಾನ, ಬಹುಭಾಷಾ ಸಿನಿಮಾದಲ್ಲಿ ನಟಿಸುವ ಕಷ್ಟ ಇತರೆ ವಿಷಯಗಳನ್ನು ಚರ್ಚಿಸುತ್ತಾರೆ. ಆ ರೀತಿಯ ಸವಾಲನ್ನು ನಾನೂ ಸ್ವೀಕರಿಸಬೇಕು ಎಂಬ ಮನಸ್ಸಾಗುತ್ತದೆ'' ಎಂದಿದ್ದಾರೆ ರಣ್ವೀರ್ ಸಿಂಗ್. ದೀಪಿಕಾ ಪಡುಕೋಣೆ ಇದೀಗ ನಟ ಪ್ರಭಾಸ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ಇದ್ದಾರೆ.

''ದಕ್ಷಿಣದ ಸಿನಿಮಾಕರ್ಮಿಗಳೊಂದಿಗೆ ಕೆಲಸ ಮಾಡಲು ಇಷ್ಟ''
''ನನಗೆ ಹಿಂದಿ ಮತ್ತು ಇಂಗ್ಲೀಷ್ ಭಾಷೆ ಗೊತ್ತು. ಆದರೆ ಸಂಪೂರ್ಣ ಅಪರಿಚಿತ ಭಾಷೆಯ ಸಿನಿಮಾದಲ್ಲಿ ನಟಿಸುವುದು ಬಹಳ ಕಷ್ಟದ ಕೆಲಸ. ಕೇವಲ ಬಾಯಿ ಆಡಿಸಿದರೆ ಅದು ನಟಿಸಿದಂತೆ ಆಗುವುದಿಲ್ಲ. ಹಾಗಾಗಿ ನಾನು ದಕ್ಷಿಣದ ಸಿನಿಮಾ ಮಾಡಬೇಕೆಂದರೆ ಆ ಭಾಷೆಯನ್ನು ನಾನು ಅರ್ಥ ಮಾಡಿಕೊಳ್ಳಬೇಕು, ಹಿಡಿತ ಸಾಧಿಸಬೇಕು. ಇಂಥಹಾ ಸವಾಲನ್ನು ಸ್ವೀಕರಿಸಲು ನಾನು ತಯಾರಾಗಿದ್ದೇನೆ. ನಾನು ಸಾಕಷ್ಟು ತಮಿಳು, ತೆಲುಗು, ಮಲಯಾಳಂ ಸಿನಿಮಾ ಕರ್ಮಿಗಳನ್ನು ಭೇಟಿ ಆಗಿದ್ದೇನೆ. ಅವರ ಸಿನಿಮಾಗಳು ನನಗೆ ಬಹಳ ಇಷ್ಟವಾಗುತ್ತವೆ. ನನಗೆ ಅವರೊಟ್ಟಿಗೆ ಕೆಲಸ ಮಾಡಲು ಬಹಳ ಇಷ್ಟ. ಹೊಸ ಭಾಷೆಯನ್ನು ಕಲಿಯುವ ಸವಾಲನ್ನು ಸ್ವೀಕರಿಸಲು ನಾನು ತಯಾರಾಗಿದ್ದೇನೆ'' ಎಂದಿದ್ದಾರೆ ರಣ್ವೀರ್ ಸಿಂಗ್.

ಭಾಷೆಯ ಬಗ್ಗೆ ನನಗೆ ಆಸಕ್ತಿ ಹೆಚ್ಚು: ರಣ್ವೀರ್ ಸಿಂಗ್
''ಪ್ರತಿ ಭಾಷೆಯ ರಚನೆ, ಪದಪುಂಜ, ಉಚ್ಛಾರ, ಮಾತುಗಳು, ಮಾತನಾಡುವ ವಿಧಾನ, ಹೊಮ್ಮಿಸುವ ಭಾವಗಳು ಎಲ್ಲವೂ ಭಿನ್ನವಾಗಿರುತ್ತವೆ. ನನಗೆ ಭಾಷೆಯ ರಚನೆ ಬಗ್ಗೆ ಬಹಳ ಆಸಕ್ತಿ, ಹಾಗಾಗಿ ಒಂದೊಮ್ಮೆ ನಾನು ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿದರೆ ನಾನು ಬಹಳ ಉತ್ಸುಕತೆಯಿಂದ ಭಾಷೆಯನ್ನು ಕಲಿಯುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ'' ಎಂದು ರಣ್ವೀರ್ ಸಿಂಗ್ ಹೇಳಿದ್ದಾರೆ.

ದಕ್ಷಿಣದ ಭಾಷೆಗಳಲ್ಲಿ ಬಿಡುಗಡೆ ಆದ '83' ಸಿನಿಮಾ
ರಣ್ವೀರ್ ಸಿಂಗ್ ನಟನೆಯ '83' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಹಿಂದಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಬಿಡುಗಡೆ ಆಗಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಅವರು ದಕ್ಷಿಣ ಭಾರತದ ಎಲ್ಲ ನಗರಗಳಿಗೆ ಭೇಟಿ ನೀಡಿದ್ದಾರೆ ಹಾಗೂ ದಕ್ಷಿಣದ ನಟರೊಟ್ಟಿಗೆ ಸಂಪರ್ಕ ಸಾಧಿಸಿದ್ದಾರೆ. ಈ ನಿಟ್ಟಿನಲ್ಲಿ ತಮಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಲು ಇರುವ ಆಸಕ್ತಿ ಬಗ್ಗೆ ಹೇಳಿಕೊಂಡಿದ್ದಾರೆ. ಕಬೀರ್ ಖಾನ್ ನಿರ್ದೇಶನದ '83' ಸಿನಿಮಾವು 1983ರ ವಿಶ್ವಕಪ್ ವಿಜೇತ ಭಾರತ ತಂಡದ ಬಗೆಗಿನ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ಕ್ರಿಕೆಟ್ ತಂಡದ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ನಟಿಸಿದ್ದಾರೆ. ಸಿನಿಮಾ ಬಗ್ಗೆ ಧನಾತ್ಮಕ ವಿಮರ್ಶೆ ಕೇಳಿ ಬಂದಿದೆ ಆದರೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಲು ವಿಫಲವಾಗಿದೆ.


Click it and Unblock the Notifications











