ಚಿತ್ರರಂಗದಲ್ಲಿ ಕೂಲಿ ನಾಲಿ ಮಾಡಿ ಬದುಕು ಕಟ್ಟಿಕೊಳ್ಳುತ್ತೇನೆ ಎಂದ ಅವಕಾಶ ವಂಚಿತ ಹಿರಿಯ ನಟ..!
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗದ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬೇರೆ ಎಲ್ಲ ಉದ್ಯಮಗಳಿಗೆ ಹೋಲಿಸಿದರೆ ಇಲ್ಲಿ ಅಭದ್ರತೆ ಹೆಚ್ಚೇ ಇದೆ. ಇಲ್ಲಿ ಇವತ್ತು ಇಲ್ಲ ಅಂದರೆ ನಾಳೆ ಗೆದ್ದೇ ಗೆಲ್ಲುತ್ತೇವೆ ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತೆ ಎಂಬ ಭರವಸೆಯಿಂದ ಅನೇಕ ವರ್ಷಗಳಿಂದ ಅನೇಕ ಕಾರ್ಮಿಕರು, ತಂತ್ರಜ್ಞರು, ಕಲಾವಿದರು ಕಾಯುತ್ತಲೇ ಇದ್ದಾರೆ. ಆ ಪೈಕಿ ರಣ್‌ವೀರ್ ಶೋರೆ ಕೂಡ ಒಬ್ಬರು.
ಹೌದು, ಒಂದು ಕಾಲದಲ್ಲಿ ತಮ್ಮ ಅಭಿನಯದಿಂದ ಜನ ಮನ ಗೆದ್ದವರು ರಣ್‌ವೀರ್ ಶೋರೆ. ''ಖೋಸ್ಲಾ ಕಾ ಘೋಸ್ಲಾ''.. ''ಭೇಜಾ ಫ್ರೈ''.. "ಹನಿಮೂನ್ ಎಕ್ಸ್‌ಪ್ರೆಸ್''.. ''ಟ್ರಾಫಿಕ್ ಸಿಗ್ನಲ್''.. ಹೀಗೆ ಒಂದಕ್ಕಿಂತೊಂದು ಚೆಂದದ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾದ ರಣ್‌ವೀರ್ ಶೋರೆ ಕೈಯಲ್ಲಿ ಸದ್ಯಕ್ಕೆ ಹೇಳಿಕೊಳ್ಳುವಂತಹ ಅವಕಾಶ ಇಲ್ಲ. ಚಿತ್ರರಂಗದಲ್ಲಿ ಮೂವತ್ತು ವರ್ಷಗಳಿಂದ ಇದ್ದರೂ ಕೂಡ ಇವತ್ತು ಕೂಡ ರಣ್‌ವೀರ್ ಅವಕಾಶಕ್ಕಾಗಿ ಅಂಗಲಾಚುತ್ತಿದ್ದಾರೆ. ಒಂದೊಂದು ಪೈಸೆಗೆ ಪರದಾಡುತ್ತಿದ್ದಾರೆ. ಖುದ್ದು ರಣ್‌ವೀರ್ ಹಿಂದೆ ಈ ಮಾತನ್ನು ಹೇಳಿದ್ದರು. ಇಪತ್ತೈದು ಲಕ್ಷ ಸಿಗುತ್ತೆ ಎಂದು ಬಿಗ್ ಬಾಸ್ ಮನೆಗೆ ಕೂಡ ಹೋಗಿದ್ದರು. ಆದರೆ ಇಲ್ಲಿಯೂ ಕೂಡ ಏನೂ ಬರಕತ್ತಾಗಲಿಲ್ಲ.

ಇಂಥಾ ರಣ್‌ವೀರ್ ಶೋರೆ ಸಂದರ್ಶನದಲ್ಲಿ ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ. ಆಕ್ಟಿಂಗ್‌ಗೆ ಕರೆದು ಅವಕಾಶ ನೀಡದೇ ಇದ್ದರೆ, ಚಿತ್ರರಂಗದಲ್ಲಿಯೇ ಕೂಲಿ ನಾಲಿ ಮಾಡಿ ಬದುಕುವುದಾಗಿ ಹೇಳಿದ್ದಾರೆ. ಹೌದು, ಅಸಲಿಗೆ ರಣ್‌ವೀರ್ ಬಿಗ್ ಬಾಸ್ ಮನೆಯಲ್ಲಿದ್ದಾಗ, ಅಲ್ಲಿದ್ದ ಮತ್ತೊಬ್ಬ ಸ್ಫರ್ಧಿ ಶಿವಾನಿ ಕುಮಾರಿ, ರಣ್ ವೀರ್ ಶೋರೆಯ ಹಿನ್ನೆಲೆ ಗೊತ್ತಿರದೇ ನೀವ್ಯಾರು ಜೀವನಕ್ಕೆ ಏನು ಮಾಡಿಕೊಂಡಿದ್ದೀರಾ ಎಂಬ ಪ್ರಶ್ನೆ ಕೇಳಿದ್ದರು.
ಸಹಜವಾಗಿ ಚಿತ್ರರಂಗದಲ್ಲಿ ಮೂವತ್ತು ವರ್ಷ ಮಣ್ಣು ಹೊತ್ತ ಮನಸಿಗೆ ಇದರಿಂದ ನೋವಾಗಿರುತ್ತೆ. ಆ ನೋವನ್ನು ಸಿದ್ಧಾರ್ಥ್ ಕಣ್ಣನ್ ಅವರ ಸಂದರ್ಶನದಲ್ಲಿ ಹೊರ ಹಾಕಿರುವ ರಣ್‌ವೀರ್ ಶೋರೆ, ಅವರೆಲ್ಲ ಚಿಕ್ಕವರು ಹೀಗಾಗಿ ನನ್ನ ಬಗ್ಗೆ ಅವರಿಗೆ ಗೊತ್ತಿಲ್ಲ. ನಾನು ಅವರನ್ನು ದೂಷಿಸುವುದಿಲ್ಲ ಎಂದಿದ್ದಾರೆ.

ಮುಂದುವರೆದು ನಾನೇನೂ ದೊಡ್ಡ ಸ್ಟಾರ್ ಅಲ್ಲ, ನಾನು ಒಂದು ವರ್ಗದ ಪ್ರೇಕ್ಷಕರಿಗೆ ಮಾತ್ರ ಪರಿಚಿತ ಉಳಿದ ಜನಗಳಿಗೆ ನಾನು ಇನ್ನೂ ಅಪರಿಚಿತ ಎಂದಿರುವ ರಣ್‌ವೀರ್ ಶೋರೆ ನನಗೆ ಅವಕಾಶಗಳು ನನಗೆ ಸಿಕ್ತಿಲ್ಲ ಎಂದು ಹೇಳಿದಾಗ ಕರುಣೆಯಿಂದ ನನ್ನನ್ನೂ ನೋಡಬೇಡಿ ಯಾಕೆಂದರೆ ಚಿತ್ರರಂಗದಲ್ಲಿ ನನಗೆ ತುಂಬಾ ಅನುಭವ ಇದೆ. ನಾನು ಇಲ್ಲಿ ಕೂಲಿ ಕೆಲಸ ಮಾಡಬಲ್ಲೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಸಿನಿಮಾ ಮತ್ತು ಸಂಗೀತ ನನ್ನ ಬದುಕಿನ ಎರಡು ಪ್ರಮುಖ ಭಾಗ ಎಂದಿರುವ ರಣ್‌ವೀರ್ ಶೋರೆ ನಾನು ಸೆಟ್‌ನಲ್ಲಿ ಸ್ಪಾಟ್ ಬಾಯ್ ಆಗಿ ಕೆಲಸ ಮಾಡಿದರೂ ಸಾಕು ಹಾಗೂ ಹೀಗೂ ಹೇಗೋ ಜೀವನ ನಡೆಯುತ್ತೆ ಅಷ್ಟೇ ಸಾಕು ಎಂದಿದ್ದಾರೆ. ಈ ಕ್ಷೇತ್ರದಲ್ಲಿ ಯಾವ ಕೆಲಸ ಸಿಕ್ಕರೂ ನಾನು ಖುಷಿ ಖುಷಿಯಾಗಿಯೇ ಮಾಡುತ್ತೇನೆ ಎಂದು ಕೂಡ ರಣ್‌ವೀರ್ ಹೇಳಿದ್ಧಾರೆ.


Click it and Unblock the Notifications











