ನಾನು ನನ್ನ ಕನಸು ಮನಸ್ಸಿನಲ್ಲಿಯೂ ಹೀಗಾಗುತ್ತೆ ಎಂದುಕೊಂಡಿರಲಿಲ್ಲ - ರಶ್ಮಿಕಾ ಮಂದಣ್ಣ..!
ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಬೆಳೆದು ನಿಂತ ರೀತಿ ಕಂಡು ಈ ಕ್ಷಣಕ್ಕೂ ಕನ್ನಡದ ಪ್ರೇಕ್ಷಕರಲ್ಲೊಂದು ಅಚ್ಚರಿಯಿದೆ. ಯಾಕೆಂದರೆ ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಮಿಂಚುವುದರ ಜೊತೆ ಕೈ ತುಂಬಾ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಅಲ್ಲ.ಆದರೆ .. ರಶ್ಮಿಕಾ ವಿಚಾರದಲ್ಲಿ ಇದೆಲ್ಲವೂ ಸಲೀಸು ಎಂಬಂತೆ ನಡೆದು ಹೋಗಿದೆ. ಕನ್ನಡದಿಂದ ತೆಲುಗಿಗೆ..
ವಲಸೆ ಹೋಗಿ ಆ ನಂತರ ಅಲ್ಲಿಂದ ಕೂಡ ಕಾಲ್ಕಿತ್ತ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ಅನಿಮಲ್, ಛಾವಾ, ಹೀಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಿದ್ದಾರೆ. ಬ್ಲಾಕ್ ಬಸ್ಟರ್ ಮಹಾರಾಣಿ ಎಂದು ಕರೆಯಲ್ಪಡುತ್ತಿದ್ದಾರೆ. ಶಾಹಿದ್ ಕಪೂರ್ ಜೊತೆ ಕಾಕ್‌ಟೈಲ್ 2 ಚಿತ್ರವನ್ನು ಕೂಡ ರಶ್ಮಿಕಾ ಒಪ್ಪಿಕೊಂಡಿದ್ದಾರೆ.

ಇಂಥಾ ರಶ್ಮಿಕಾ ಮಂದಣ್ಣ ತಮ್ಮ ಸಿಕಂದರ್ ಚಿತ್ರದ ಸೋಲಿನ ಕುರಿತು ಮಾತನಾಡಿದ್ದಾರೆ. ಹೌದು, ಸಿಕಂದರ್.. ಸಲ್ಮಾನ್ ಖಾನ್ ಅಭಿನಯದ ಚಿತ್ರ. ಈ ಚಿತ್ರದಲ್ಲಿ ರಶ್ಮಿಕಾ ಪ್ರಮುಖ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಚಿತ್ರ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹೊಸದೊಂದು ದಾಖಲೆ ಬರೆಯುತ್ತೆ ಅಂದುಕೊಂಡಿದ್ದರು.
ಆದರೆ. ಆಗಿದ್ದು ಉಲ್ಟಾ. ಬಾಕ್ಸಾಫೀಸ್‌ನಲ್ಲಿ ಸಿಕಂದರ್ ಮಕಾಡೆ ಮಲಗಿತು. ಈ ಸೋಲಿನ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ. ನಾನು ಕನಸು ಮನಸಿನಲ್ಲಿಯೂ ಹೀಗಾಗುತ್ತೆ ಎಂದುಕೊಂಡಿರಲಿಲ್ಲ ಎಂದು ಹೇಳಿದ್ಧಾರೆ.
ಈ ಕುರಿತು ETimesಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ ನಾನು ಕೂಡ ಮನುಷ್ಯಳೇ, ಎಲ್ಲರಂತೆ ನನ್ನಲ್ಲಿಯೂ ಭಾವನೆ ಇದೆ, ಸಹಜವಾಗಿ ಚಿತ್ರ ಸೋತಾಗ ನೋವಾಗುತ್ತೆ, ಸಿಕಂದರ್ ಸೋತಾಗ ಕೂಡ ನೋವಾಗಿತ್ತು ಎಂದು ಹೇಳಿದ್ದಾರೆ. ಸೋಲು ನನ್ನ ಮೇಲೆ ಪರಿಣಾಮವನ್ನು ಕೂಡ ಬೀರಿತ್ತು ಎಂದಿದ್ದಾರೆ.
ಮುಂದುವರೆದು ನಾನು ಬಿದ್ದಾಗ ನನ್ನ ಮೇಲಕ್ಕೆತ್ತುವ.. ನಾನು ನಡೆದು ಬಂದ ಹಾದಿಯನ್ನು ನೆನಪಿಸುವ.. ನನ್ನನ್ನು ನಂಬುವ.. ಹಲವಾರು ಜನರಿಗೆ ನಾನು ಸದಾ ಕೃತಜ್ಞಳಾಗಿರುತ್ತೇನೆ ಎಂದಿರುವ ರಶ್ಮಿಕಾ ಮಂದಣ್ಣ ನಾನು ಇಲ್ಲಿಯವರೆಗೆ ತಲುಪುತ್ತೇನೆ, ಇಲ್ಲಿ ಇಷ್ಟೊಂದು ಕೆಲಸ ಮಾಡುತ್ತೇನೆ, ನನಗೆ ಇಷ್ಟವಾದದ್ದನ್ನು ಮಾಡುವ ಅವಕಾಶ ನನಗೆ ಸಿಗುತ್ತೆ, ಎಂದು ಕನಸು ಮನಸಿನಲ್ಲಿಯೂ ಕೂಡ ನಾನು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ನಾನು ಇಲ್ಲಿಯವರೆಗೆ ಬಂದಿದ್ದೇನೆ ಅಂದರೆ ನಾನು ನಡೆಯುತ್ತಿರುವ ದಾರಿ ಸರಿಯಾಗಿರಬಹುದು ಈ ಆಲೋಚನೆ ಮತ್ತು ನನಗೆ ಸಿಗುವ ಬೆಂಬಲ ಮತ್ತು ಪ್ರೀತಿಯಿಂದ ನಾನು ಮುನ್ನುಗ್ಗುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಂದ್ಹಾಗೇ ರಶ್ಮಿಕಾ ಮಂದಣ್ಣ ಕೈಯಲ್ಲಿ ಸದ್ಯ ಹಲವಾರು ಸಿನಿಮಾಗಳಿವೆ. ಆ ಪೈಕಿ ಆಗಸ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಕ್‌ಟೈಲ್ 2 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ಧಾರೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ನಾಯನಾದರೆ ಬಾಲಿವುಡ್‌ನ ಬೆಡಗಿ ಕೃತಿ ಸನೋನ್ ಚಿತ್ರದ ಮತ್ತೊಬ್ಬ ನಾಯಕಿ.
ಈ ಚಿತ್ರವನ್ನು ಹೊರತು ಪಡಿಸಿದರೆ ಧನುಷ್ ಅಭಿನಯದ ಕುಬೇರ ಚಿತ್ರದಲ್ಲಿ ಕೂಡ ರಶ್ಮಿಕಾ ನಾಯಕಿ. ಈ ಜೂನ್ 20ರಂದು ಈ ಚಿತ್ರ ತೆರೆಗೆ ಬರಲಿದೆ. ತೆಲುಗಿನ ದಿ ಗರ್ಲ್‌ಫ್ರೆಂಡ್ ಚಿತ್ರ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ಇದರ ನಡುವೆ ಆಯುಶ್ಮಾನ್ ಖುರಾನ ಜೊತೆ ಥಾಮಾ ಸಿನಿಮಾವನ್ನು ಮಾಡುತ್ತಿರುವ ರಶ್ಮಿಕಾ ಮಂದಣ್ಣ ತೆಲುಗು ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ರೇನ್ ಬೋ ಚಿತ್ರದಲ್ಲಿ ಕೂಡ ರಶ್ಮಿಕಾ ಅಭಿನಯಿಸುತ್ತಿದ್ಧಾರೆ. ಈ ಚಿತ್ರದಲ್ಲಿ ದೇವ್ ಮೋಹನ್ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದರ ನಡುವೆ ವ್ಯೆಯಕ್ತಿಕ ಜೀವನದ ವಿಚಾರದಿಂದ ಕೂಡ ಆಗಾಗ ರಶ್ಮಿಕಾ ಸುದ್ದಿಯಾಗುತ್ತಾರೆ.


Click it and Unblock the Notifications











