ತಮ್ಮದೇ ಡೀಪ್‌ಫೇಕ್ ವಿಡಿಯೋ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ಸಿನಿಮಾ ತಾರೆಯರ ಡೀಪ್‌ಫೇಕ್ ವಿಡಿಯೋಗಳು ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದೀಗ ಪ್ರಧಾನಿ ಮೋದಿ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್ ಹಾಗೂ ಕಾಜೋಲ್ ಡೀಪ್‌ಫೇಕ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಈ ಬಗ್ಗೆ ಮಾತನಾಡಿದ್ದಾರೆ.
ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಪ್ರಸ್ತುತ ನಮ್ಮ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಡೀಪ್‌ಫೇಕ್ ಕೂಡ ಒಂದು ಎಂದಿದ್ದಾರೆ. ಹೊಸ ತಂತ್ರಜ್ಞಾನದಿಂದ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು.

ಡೀಪ್‌ಫೇಕ್‌ಗಾಗಿ ಕೃತಕ ಬುದ್ಧಿಮತ್ತೆಯನ್ನು (AI ತಂತ್ರಜ್ಞಾನ) ದುರುಪಯೋಗದ ಬಗ್ಗೆ ಜಾಗರೂಕರಾಗಿರಲು ನಾಗರಿಕರು ಮತ್ತು ಮಾಧ್ಯಮಗಳು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು. ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಡೀಪ್‌ಫೇಕ್‌ಗಳು ಪ್ರಜಾಪ್ರಭುತ್ವದ ಸಮಗ್ರತೆಗೆ ಸವಾಲು ಹಾಕುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿನ ವೀಡಿಯೊಗಳು ಮತ್ತು ಫೋಟೋಗಳು ನಕಲಿಯೋ ಅಥವಾ ಅಸಲಿಯೋ ಎಂದು ಗುರುತಿಸುವುದು ಕಷ್ಟಕರವಾಗುತ್ತಿದೆ.
ಮುಂದಿನ ದಿನಗಳಲ್ಲಿ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ರಚಿಸಲಾದ ಚಿತ್ರಗಳು, ನಕಲಿ ವಿಡಿಯೋ ತುಣುಕುಗಳು ಮತ್ತು ನಕಲಿ ವಾಯ್ಸ್‌ಓವರ್‌ಗಳಂತಹ ಡೀಪ್‌ಫೇಕ್‌ಗಳ ಬೆದರಿಕೆಯನ್ನು ಸಮಾಜವು ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ಪ್ರಧಾನಿ ತಾವು ಗರ್ಬಾ ಡ್ಯಾನ್ಸ್ ಮಾಡುವಂತೆ ಫೇಕ್ ವಿಡಿಯೋ ಬಂದಿತ್ತು. ನಾನು ಬಾಲ್ಯದಿಂದಲೂ ಗರ್ಬಾ ಆಡಿಲ್ಲ ಎಂದಿದ್ದಾರೆ. ಇಂತಹ ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆದಾಗ ಎಚ್ಚರಿಕೆ ನೀಡುವಂತೆ ಚಾಟ್ ಜಿಪಿಟಿ ತಂಡಕ್ಕೆ ಹೇಳಿರುವುದಾಗಿ ತಿಳಿಸಿದರು.
ಸಿನಿಮಾ ತಾರೆಯರ ಡೀಪ್‌ಫೇಕ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಇವೆ. ಇತ್ತೀಚೆಗೆ ನಟಿ ರಶ್ಮಿಕಾ ಫೇಕ್ ವಿಡಿಯೋ ಬಂದ ಮೇಲೆ ಈ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. ನಿಜಕ್ಕೂ ಇದು ಅಪಾಯಕಾರಿ ವಿದ್ಯಮಾನದ ಮುನ್ಸೂಚನೆ ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಅಕ್ಕ ಪಕ್ಕದಲ್ಲಿರುವವ ಡೀಪ್‌ಫೇಕ್ ವಿಡಿಯೋಗಳು ಬಂದರೂ ಬರಬಹುದು ಎಂದು ನಟ ರಕ್ಷಿತ್ ಶೆಟ್ಟಿ ಆಂತಕ ವ್ಯಕ್ತಪಡಿಸಿದ್ದಾರೆ.

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಸಂಬಂಧ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ದೆಹಲಿ ಪೊಲೀಸರು ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ರಶ್ಮಿಕಾ ವಿಡಿಯೋ ಬಗ್ಗೆ ಐಪಿಸಿಯ ಯು/ಎಸ್ 465 ಮತ್ತು 469, 1860 ಮತ್ತು ಐಟಿ ಆಕ್ಟ್, 2000ರ ಸೆಕ್ಷನ್ 66 ಸಿ ಮತ್ತು 66 ಇ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ.
ನಟಿ ರಶ್ಮಿಕಾ ಡೀಪ್‌ಫೇಕ್ ವಿಡಿಯೋ ಬಗ್ಗೆ ಕ್ರಮ ಕೈಗೊಳ್ಳುವಂತೆ ದೆಹಲಿ ಮಹಿಳಾ ಆಯೋಗ ಕೂಡ ಮನವಿ ಮಾಡಿತ್ತು. ತಮ್ಮ ಡೀಪ್‌ಫೇಕ್ ವಿಡಿಯೋ ಬಗ್ಗೆ ಮೌನ ಮುರಿದಿದ್ದರು. ಅಮಿತಾಬ್ ಬಚ್ಚನ್, ವಿಜಯ್ ದೇವರಕೊಂಡ, ನಾಗಚೈತನ್ಯಾ, ಗಾಯಕಿ ಚಿನ್ಮಯಿ ಸೇರಿದಂತೆ ಹಲವರು ರಶ್ಮಿಕಾಗೆ ಬೆಂಬಲ ನೀಡಿದ್ದರು. ತಮಗೆ ಬೆಂಬಲ ನೀಡಿದ ಎಲ್ಲರಿಗೂ ಆಕೆ ಧನ್ಯವಾದ ತಿಳಿಸಿದ್ದರು.
ಇಂತಹ ಸಾಫ್‌ವೇರ್‌ಗಳು, ಆಪ್‌ಗಳ ದುರುಪಯೋಗ ಆಗದಂತೆ ಸರ್ಕಾರ ಎಚ್ಚರ ವಹಿಸಬೇಕು. ಇದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಒಂದಷ್ಟು ನಿಯಮಗಳನ್ನು ಜಾರಿಗೆ ತರಬೇಕು. ಇಂತಹ ತಪ್ಪು ಮುಂದೆ ಆಗದಂತೆ ತಡೆಯಬೇಕು ಎಂದು ಸಾಕಷ್ಟು ಜನ ಮನವಿ ಮಾಡುತ್ತಿದ್ದಾರೆ.


Click it and Unblock the Notifications











