ಬಾಲಿವುಡ್ ಅವಕಾಶ ಸಿಕ್ಕಿದ್ದು ಹೇಗೆ? ಗುಟ್ಟು ರಟ್ಟು ಮಾಡಿದ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದಿಂದ ನಟನೆ ಆರಂಭಿಸಿ ಇದೀಗ ಬಾಲಿವುಡ್‌ನಲ್ಲೂ ನಟಿಸಿದ್ದಾರೆ ಅದೂ ಸ್ಟಾರ್ ನಟ ಅಮಿತಾಬ್ ಬಚ್ಚನ್ ಜೊತೆಗೆ.
ತೆಲುಗು, ತಮಿಳಿನಲ್ಲಿ ಬೇಡಿಕೆಯ ನಟಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಬಹಳ ವೇಗವಾಗಿ ಬಾಲಿವುಡ್ ಅವಕಾಶ ಗಿಟ್ಟಿಸಿಕೊಂಡರು. ಹಲವು ವರ್ಷಗಳಿಂದ ತೆಲುಗು, ತಮಿಳಿನಲ್ಲಿ ಸ್ಟಾರ್ ನಟಿಯರಾಗಿ ಗುರಿಸಿಕೊಂಡವರಿಗೂ ಇಷ್ಟು ಬೇಗ ಬಾಲಿವುಡ್ ಅವಕಾಶ ದೊರೆತಿರಲಿಲ್ಲ. ಕೆಲವರಿಗೆ ಈಗಲೂ ದೊರೆತಿಲ್ಲ.
ರಶ್ಮಿಕಾ ಮಂದಣ್ಣಗೆ ಒಂದರಹಿಂದೊಂದು ಬಾಲಿವುಡ್ ಅವಕಾಶ ಸಿಕ್ಕ ಬಗ್ಗೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದರು. ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನೆ ಮಾಡಿಕೊಂಡಿದ್ದರು. ಇದೀಗ ನಟಿ ರಶ್ಮಿಕಾ ಮಂದಣ್ಣ ಅವರೇ ತಮಗೆ ಬಾಲಿವುಡ್ ಅವಕಾಶ ದೊರೆತಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ. ಅಲ್ಲದೆ ತಮ್ಮ ಮೊದಲ ಬಾಲಿವುಡ್ ಸಿನಿಮಾ 'ಮಿಷನ್ ಮಜ್ನು' ಬಗ್ಗೆ ಕುರಿತು ಕೆಲವು ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.
'ಮಿಷನ್ ಮಜ್ನು' ಸಿನಿಮಾ ತಂಡ ಹೊಸ ಮುಖಕ್ಕಾಗಿ ಹುಡುಕಾಟ ನಡೆಸುತ್ತಿತ್ತು, ಹೊಸಬರಾಗಿದ್ದರೂ ನಟನೆಯ ಅನುಭವವೂ ಇರಬೇಕು ಎಂಬುದು ಅವರ ಬೇಡಿಕೆ ಆಗಿತ್ತು. ನಾನು ಸಹ ಅದೇ ಸಮಯಕ್ಕೆ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಯೋಚನೆಯಲ್ಲಿದ್ದೆ. ಅದೇ ಸಮಯಕ್ಕೆ ನನ್ನ ಗೆಳೆಯರೊಬ್ಬರು ಕರೆ ಮಾಡಿ 'ಮಿಷನ್ ಮಜ್ನು' ಸಿನಿಮಾದ ಬಗ್ಗೆ ಹೇಳಿ ಚಿತ್ರಕತೆ ಕಳುಹಿಸಿದರು. ನನಗೆ ಇಷ್ಟವಿಲ್ಲದಿದ್ದರೂ ಕುತೂಹಲಕ್ಕಾಗಿ ಚಿತ್ರಕತೆಯನ್ನು ಓದಿದೆ'' ಎಂದಿದ್ದಾರೆ ರಶ್ಮಿಕಾ.

ನನ್ನ ಪಾಲಿಗೆ ಪ್ರಯೋಗಾತ್ಮಕ ಸಿನಿಮಾ: ರಶ್ಮಿಕಾ
''ನನಗೆ ಚಿತ್ರಕತೆ ಬಹಳ ಹಿಡಿಸಿತು. ನಾನು ಈವರೆಗೆ ಮಾಡದೇ ಇರುವ ಪಾತ್ರ ಇದು ಎನಿಸಿತು. ಅಲ್ಲದೆ ನಾನೂ ಸಹ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಯೋಚನೆಯಲ್ಲಿದ್ದ ಕಾರಣ ಆ ಪ್ರಯೋಗ ಹಿಂದಿ ಚಿತ್ರರಂಗದಲ್ಲಿಯೇ ಆಗಲಿ ಎಂಬ ಕಾರಣಕ್ಕೆ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದೆ. ಬೇರೆ ಭಾಷೆಯ ಸಿನಿಮಾ ಆಗಿದ್ದಿದ್ದರೆ ಈ ಕತೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ'' ಎಂದಿದ್ದಾರೆ ರಶ್ಮಿಕಾ. ಒಂದೊಮ್ಮೆ ಪ್ರಯೋಗ ಸಫಲವಾಗಲಿಲ್ಲವಾದರೂ ತೆಲುಗು, ತಮಿಳು, ಕನ್ನಡ ಚಿತ್ರರಂಗಗಳು ಇದ್ದೇ ಇದೆ ಅಲ್ಲಿಯೇ ಮುಂದುವರೆದರಾಯಿತು ಎಂಬ ಯೋಚನೆಯಲ್ಲಿ ಸಿನಿಮಾ ಒಟ್ಟಿಕೊಂಡಿದ್ದರು ರಶ್ಮಿಕಾ.

ಬಚ್ಚನ್ ಜೊತೆ ನಟಿಸಿದ್ದು ನನ್ನ ಪುಣ್ಯ: ರಶ್ಮಿಕಾ ಮಂದಣ್ಣ
''ನಾನು 'ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಾಗ ಆ ಸಿನಿಮಾದ ಇತರ ಪಾತ್ರಗಳ ಬಗ್ಗೆ ಮಾಹಿತಿ ಇರಲಿಲ್ಲ. ಸಿನಿಮಾದ ನಾಯಕ ಸಿದ್ಧಾರ್ಥ್ ಮಲ್ಹೋತ್ರಾ ಎಂಬ ಮಾಹಿತಿಯೂ ಇರಲಿಲ್ಲ'' ಎಂದಿದ್ದಾರೆ ರಶ್ಮಿಕಾ. ಆ ಸಿನಿಮಾದಲ್ಲಿ ನಟಿಸಲು ಪ್ರಾರಂಭ ಮಾಡಿದ ಮೇಲೆ ಅಮಿತಾಬ್ ಬಚ್ಚನ್ ಸಿನಿಮಾದಲ್ಲಿ ನಟಿಸುವ ಅವಕಾಶ ತಾನಾಗಿಯೇ ಒಲಿದು ಬಂದಿತು. ಬಚ್ಚನ್ ಅವರೊಟ್ಟಿಗೆ ನಟಿಸುವ ಅವಕಾಶ ದೊರೆತಿದ್ದು ನನ್ನ ಪುಣ್ಯ'' ಎಂದಿದ್ದಾರೆ ಕೊಡಗಿನ ಬೆಡಗಿ.

'ಮಿಷನ್ ಮಜ್ನು' ಸಿನಿಮಾದ ಕತೆ ಏನು?
'ಮಿಷನ್ ಮಜ್ನು' ಸಿನಿಮಾ 1970ರಲ್ಲಿ ನಡೆಯುವ ಕತೆಯಾಗಿದೆ. ಸಿನಿಮಾವು ಭಾರತ ಹಾಗೂ ಪಾಕಿಸ್ತಾನದ ಕತೆಯನ್ನು ಹೊಂದಿದೆ. ಭಾರತೀಯ ಸೇನೆಯು ಪಾಕಿಸ್ತಾನದ ಹೃದಯ ಭಾಗದಲ್ಲಿ ನಡೆಸುವ ಒಂದು ಆಪರೇಷನ್ ಬಗೆಗಿನ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸೇನೆ ಮಾಡಿದ ಆ ಆಪರೇಷನ್ ನಿಂದಲೇ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಬಿಗಡಾಯಿಸಿತು ಎನ್ನಲಾಗುತ್ತದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ದಿವ್ಯಾ ಸಿಂಗ್ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ರಾ ಏಜೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಶಂತನು ಭಗ್ಚಿ ನಿರ್ದೇಶನ ಮಾಡುತ್ತಿದ್ದಾರೆ.

ರಶ್ಮಿಕಾರ ಮುಂದಿನ ಸಿನಿಮಾಗಳು
ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾ ದೊಡ್ಡ ಹಿಟ್ ಆಗಿದೆ. ಈ ಸಿನಿಮಾದ ಯಶಸ್ಸಿನ ಬಳಿಕ ರಶ್ಮಿಕಾ ತಮ್ಮ ಸಂಭಾವನೆ ಏರಿಸಿಕೊಂಡಿದ್ದಾರೆ. ಇದೀಗ 'ಪುಷ್ಪ 2' ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ 'ಆಡುವಾಳ್ಳು ಮೀಕು ಜೋಹಾರ್ಲು' ಹೆಸರಿನ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ತಮಿಳಿನ ಸ್ಟಾರ್ ನಟರೊಬ್ಬರ ಸಿನಿಮಾದಲ್ಲಿಯೂ ರಶ್ಮಿಕಾಗೆ ಅವಕಾಶ ದೊರೆತಿದೆ ಎನ್ನಲಾಗುತ್ತಿದೆ. ಇವುಗಳ ಜೊತೆಗೆ ಬಾಲಿವುಡ್‌ನಲ್ಲಿ ನಟಿಸಿರುವ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ 'ಗುಡ್ ಬೈ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.


Click it and Unblock the Notifications











