twitter
    For Quick Alerts
    ALLOW NOTIFICATIONS  
    For Daily Alerts

    'ರಾವಣ್‌ ಲೀಲಾ' ಈಗ 'ಭವಾಯಿ': ಸಮಸ್ಯೆ ಪರಿಹಾರವಾಯ್ತೆ? ಪ್ರಶ್ನಿಸಿದ ನಟ

    |

    ನಟಿ ಐಂದ್ರಿತಾ ರೇ, ಪ್ರತೀಕ್ ಗಾಂಧಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ರಾವಣ್ ಲೀಲಾ' ಸಿನಿಮಾದ ಟ್ರೇಲರ್ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಸಿನಿಮಾದ ಟ್ರೇಲರ್‌ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು, ಸಿನಿಮಾದ ಹೆಸರು ಬದಲಾವಣೆಗೂ ಒತ್ತಡ ಬಂದಿತ್ತು.

    ಅಂತೆಯೇ ಚಿತ್ರತಂಡ ಸಿನಿಮಾದ ಹೆಸರನ್ನು ಬದಲಿಸಿ, 'ರಾವಣ್ ಲೀಲಾ' ಬದಲಿಗೆ 'ಭವಾಯಿ' ಎಂದು ಬದಲಾಯಿಸಿದೆ. ಸಿನಿಮಾದ ಹೆಸರು ಬದಲಾವಣೆ ಮಾಡಿದ್ದು ನಟ ಪ್ರತೀಕ್‌ ಗಾಂಧಿಗೆ ಸಮ್ಮತವಾದಂತಿಲ್ಲ.

    ಈ ಬಗ್ಗೆ ಮಾತನಾಡಿರುವ ನಟ ಪ್ರತೀಕ್ ಗಾಂಧಿ, ''ಹೆಸರು ಬದಲಾವಣೆ ಮಾಡಿದ್ದರಿಂದ ಸಮಸ್ಯೆ ಪರಿಹಾರವಾಯ್ತೆ' ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ''ಹೆಸರು ಬದಲಾವಣೆ ನಿಮಿತ್ತವಷ್ಟೆ ಇದರಿಂದ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗವುದಿಲ್ಲ'' ಎಂದಿದ್ದಾರೆ.

    Ravan Leela Movie Changed Its Name As Bhavai

    'ರಾವಣ್ ಲೀಲಾ' ಸಿನಿಮಾದಲ್ಲಿ ರಾವಣನನ್ನು ವೈಭವೀಕರಿಸಲಾಗಿದೆ. ಹಾಗಾಗಿಯೇ ಸಿನಿಮಾಕ್ಕೆ 'ರಾವಣ್‌ ಲೀಲಾ' ಎಂದು ಹೆಸರಿಡಲಾಗಿದೆ ಎಂದು ಹಲವರು ಆಕ್ಷೇಪ ಎತ್ತಿದ್ದರು. 'ರಾಮ್ ಲೀಲಾ' ಎಂಬುದು ಉತ್ತರ ಭಾರತದಲ್ಲಿ ಬಹಳ ಪ್ರಚಲಿತದಲ್ಲಿರುವ ನಾಟಕ. ರಾಮಾಯಣ ನಾಟಕವನ್ನು ಅಥವಾ ಕತೆಯನ್ನು 'ರಾಮ್ ಲೀಲಾ' ಎಂದು ಕರೆಯಲಾಗುತ್ತದೆ.

    ವಿವಾದದ ಬಗ್ಗೆ ಮಾತನಾಡಿರುವ ಪ್ರತೀಕ್ ಗಾಂಧಿ, ''ನಾವು ರಾಮಾಯಣದ ಕತೆಯನ್ನು ತಿರುಚಿಲ್ಲ. ಸಿನಿಮಾವು ರಾಮಾಯಣದ ಬಗೆಗೆ ಅಲ್ಲ. ಒಂದೊಮ್ಮೆ ನಮ್ಮ ಸಿನಿಮಾದ ಹೆಸರಿನಿಂದ ಸಮಾಜದ ಯಾವುದೇ ವರ್ಗಕ್ಕಾದರೂ ನೋವಾದರೆ ಸಿನಿಮಾದ ಹೆಸರು ಬದಲಾಯಿಸುವುದಾಗಿ ನಾವು ಮೊದಲೇ ನಿರ್ಧರಿಸಿದ್ದೆವು. ಆದರೆ ಇದರಿಂದ ಮುಖ್ಯ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ನಾವು ಹೆಸರು ಬದಲಾವಣೆ ಮಾಡಿದ್ದರಿಂದ ಸಮಸ್ಯೆ ಪರಿಹಾರವಾಯ್ತೆ'' ಎಂದು ಪ್ರಶ್ನೆ ಮಾಡಿದ್ದಾರೆ ಪ್ರತೀಕ್ ಗಾಂಧಿ.

    ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಿನಿಮಾದ ಪೋಸ್ಟರ್‌ನ ಚಿತ್ರ ಹಂಚಿಕೊಂಡಿರುವ ಪ್ರತೀಕ್ ಗಾಂಧಿ, ''ನಾನು ಭಾಗವಾಗಿರುವ ಸಿನಿಮಾಗಳ ಮೂಲಕ, ಕತೆಯ ಮೂಲಕ ಜನರ ಹೃದಯಗಳನ್ನು ತಲುಪುವ ಉದ್ದೇಶ ನನ್ನದು. ಯಾರ ಭಾವನೆಗಳಿಗೂ ಧಕ್ಕೆ ತರುವ ಇರಾದೆ ನಮ್ಮದಲ್ಲ. ಹಾಗಾಗಿ ಚಿತ್ರತಂಡವು ಒಟ್ಟಾಗಿ ಸಿನಿಮಾದ ಹೆಸರನ್ನು ಬದಲಾಯಿಸಲು ನಿರ್ಣಯಿಸಿದೆ. ಬೇಗನೇ ಚಿತ್ರಮಂದಿರಗಳಲ್ಲಿ ಭೇಟಿಯಾಗೋಣ, ಸಿನಿಮಾವು ಅಕ್ಟೋಬರ್ 01ರಂದು ಬಿಡುಗಡೆ ಆಗಲಿದೆ'' ಎಂದಿದ್ದಾರೆ.

    'ರಾವಣ್ ಲೀಲಾ' (ಈಗ ಭವಾಯಿ) ಸಿನಿಮಾವು ಸ್ಥಾಪಿತ ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸುವ ಅಂಶವನ್ನು ಹೊಂದಿದೆ. ನಾಟಕದಲ್ಲಿ ರಾವಣನ ಪಾತ್ರ ಮಾಡುವ ವ್ಯಕ್ತಿ, ಸೀತೆ ಪಾತ್ರ ನಿರ್ವಹಿಸುವ ನಟಿಯನ್ನು ಪ್ರೀತಿಸಿದರೆ ಸಮಾಜ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಕತೆಯನ್ನು ಸಿನಿಮಾ ಒಳಗೊಂಡಿದೆ. ಈ ಸಿನಿಮಾದಲ್ಲಿ ರಾವಣನ ಪಾತ್ರಧಾರಿಯೇ ನಾಯಕ. ಇದು ಹಲವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

    'ಭವಾಯಿ' ಎಂದರೆ ಭಾವಾಭಿವ್ಯಕ್ತಿ ಎಂದರ್ಥ. ತಾಯಿ ದುರ್ಗೆಯನ್ನು ಸಹ ಭವಾಯಿ ಎಂದೇ ಕರೆಯಲಾಗುತ್ತದೆ. ಗುಜರಾತ್‌ನಲ್ಲಿ 'ಭವಾಯಿ' ಎಂಬ ನಾಟಕ ಕಲೆ ಪ್ರಚಲಿತದಲ್ಲಿದೆ. ಇದರ ಇತಿಹಾಸವೂ ಬಹಳ ಕುತೂಹಲಭರಿತವಾಗಿದೆ. 14ನೇ ಶತಮಾನದಲ್ಲಿ ದಲಿತ ಯುವತಿಯೊಬ್ಬಾಕೆಯನ್ನು ಮುಸ್ಲಿಂ ಮುಖಂಡ ಅಪಹರಣ ಮಾಡುತ್ತಾನೆ. ಆಕೆಯನ್ನು ಬಿಡಿಸಿಕೊಂಡು ಬರಲು ಬ್ರಾಹ್ಮಣನಾದ ಅಸಾಯಿತ ಹೋಗುತ್ತಾನೆ. ಆಗ ಮುಸ್ಲಿಂ ಸುಬೇದಾರನು, ದಲಿತ ಮಹಿಳೆಯೊಟ್ಟಿಗೆ ಭೋಜನ ಮಾಡಿದರೆ ಆಕೆಯನ್ನು ಬಿಟ್ಟುಕಳಿಸುವುದಾಗಿ ಹೇಳುತ್ತಾನೆ. ಅಂತೆಯೇ ಬ್ರಾಹ್ಮಣನಾದ ಅಸಾಯಿತ ಆಕೆಯೊಂದಿಗೆ ಭೋಜನ ಮಾಡುತ್ತಾನೆ. ಆದರೆ ಮರಳಿ ಬಂದ ಮೇಲೆ ಅಸಾಯಿತನಿಗೆ ಬ್ರಾಹ್ಮಣರು ಬಹಿಷ್ಕಾರ ಹಾಕುತ್ತಾರೆ. ಆಗ ಅಸಾಯಿತನು ಜೀವನ ನಡೆಸಲು ನಾಟಕಗಳನ್ನು ಬರೆದು ನಾಟಕ ಮಾಡಲು ಆರಂಭಿಸುತ್ತಾನೆ. ಅವನ್ನೇ 'ಭವಾಯಿ' ಎಂದು ಕರೆಯಲಾಗುತ್ತದೆ.

    'ಭವಾಯಿ' ಸಿನಿಮಾವನ್ನು ಹಾರ್ದಿಕ್ ಗಜ್ಜರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಾವಣ ಪಾತ್ರದಲ್ಲಿ ನಟಿಸುವ ನಟನಾಗಿ ಪ್ರತೀಕ್ ಗಾಂಧಿ, ಸೀತೆಯ ಪಾತ್ರದಲ್ಲಿ ನಟಿಸುವ ನಟಿಯಾಗಿ ಐಂದ್ರಿತಾ ರೇ ನಟಿಸಿದ್ದಾರೆ. ರಾಜೇಂದ್ರ ಗುಪ್ತಾ, ರಾಜೇಶ್ ಶರ್ಮಾ, ಅಭಿಮನ್ಯು ಸಿಂಗ್, ಅಂಕುರ್ ವಿಕಾಲ್, ಫ್ಲೋರಾ ಸೈನಿ ಇನ್ನೂ ಹಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಸಿನಿಮಾವು ಅಕ್ಟೋಬರ್ 01 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

    English summary
    Ravan Leela movie changed its name as Bhavai. Movie hero Pratik Gandhi asks is it solve anything.
    Wednesday, September 15, 2021, 11:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X