'ಇಂದಲ್ಲ ನಾಳೆ ಹೆಣ್ಣುಮಕ್ಕಳಿಗೆ ಗೊತ್ತಾಗುತ್ತೆ, ಅದಕ್ಕೆ ನಾನೇ ಎಲ್ಲಾ ಹೇಳಿದ್ದೇನೆ': ರವೀನಾ ಟಂಡನ್
ಬಾಲಿವುಡ್ ನಟಿ, ಕನ್ನಡದಲ್ಲೂ ಕಮಾಲ್ ಮಾಡಿರುವ ರವೀನಾ ಟಂಡನ್ ಇತ್ತೀಚೆಗೆ ಹಲವು ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಿ ಸುದ್ದಿಯಲ್ಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಉಪೇಂದ್ರದಲ್ಲಿ ಸೋಂಟ ಬಳುಕಿಸಿ ಕನ್ನಡ ಸಿನಿ ಪ್ರಿಯರ ಮನದಲ್ಲಿ ಸ್ಥಾನ ಪಡೆದಿದ್ದ ಆಕೆ, ಕೆಜಿಎಫ್ ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದರು.
ನಟಿ ರವೀನಾ ಟಂಡನ್ ಇತ್ತೀಚಿನ ಸಂದರ್ಶನವೊಂದರಲ್ಲಿ, ತಾನು ತನ್ನ ಹೆಣ್ಣು ಮಕ್ಕಳಿಂದ ಯಾವ ವಿಷಯವನ್ನೂ ಮುಚ್ಚಿಡುವುದಿಲ್ಲ ಎಂಬ ಬಗ್ಗೆ ಹೇಳಿದ್ದಾರೆ. ತನ್ನ ಹಿಂದಿನ ಸಂಬಂಧಗಳ ಬಗ್ಗೆಯೂ ಎಲ್ಲವನ್ನೂ ತನ್ನ ಹೆಣ್ಣುಮಕ್ಕಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ರವೀನಾ ಟಂಡನ್ ಅವರಿಗೆ ಛಾಯಾ ಮತ್ತು ಪೂಜಾ ಎಂಬ ಇಬ್ಬರು ದತ್ತು ಪುತ್ರಿಯರಿದ್ದಾರೆ. ಜೊತೆಗೆ ರಾಶಾ ಥದಾನಿ ಎಂಬ ಮತ್ತೊಬ್ಬ ಮಗಳಿದ್ದಾರೆ.

ರವೀನಾ ಮತ್ತು ಅವರ ಪತಿ ಅನಿಲ್ ಥದಾನಿ ಅವರೊಂದಿಗೆ ರಾಶಾ ಮತ್ತು ರಣಬೀರ್ವರ್ಧನ್ ಎಂಬ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಲೆಹ್ರೆನ್ ರೆಟ್ರೊಗೆ ನೀಡಿರುವ ಸಂದರ್ಶನದಲ್ಲಿ ನಟಿ ರವೀನಾ ಟಂಡನ್ ತನ್ನ ಜೀವನವು ತನ್ನ ಮಕ್ಕಳಿಗೆ 'ತೆರೆದ ಪುಸ್ತಕ' ಇದ್ದಂತೆ ಎಂದು ಹೇಳಿದ್ದಾರೆ.
ನನ್ನ ಹೆಣ್ಣುಮಕ್ಕಳಿಗೆ ನನ್ನ ಜೀವನವು ತೆರೆದ ಪುಸ್ತಕ
ತನ್ನ ಬಗ್ಗೆ ಬರುತ್ತಿರುವ ಎಲ್ಲಾ ಗಾಸಿಪ್‌ಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ ಎಂದು ನಟಿ ರವೀನಾ ಟಂಡನ್ ಹೇಳಿದ್ದಾರೆ. "ನನ್ನ ಜೀವನ ಅವರಿಗೆ ತೆರೆದ ಪುಸ್ತಕ, ಇವತ್ತಲ್ಲದಿದ್ದರೆ, ನಾಳೆ ಅವರು ಅದರ ಬಗ್ಗೆ ಎಲ್ಲೋ ಓದುತ್ತಾರೆ. ಅವರು ಕೆಟ್ಟದ್ದನ್ನು ಕೂಡ ಓದಬಹುದು. ಏಕೆಂದರೆ 90 ರ ದಶಕದ ಪತ್ರಿಕಾ ಮಾಧ್ಯಮ ಹೇಗಿತ್ತು ಎಂದು ನಿಮಗೆ ತಿಳಿದಿದೆ. ಅಂದು ಹಳದಿ ಪತ್ರಿಕೋದ್ಯಮವು ಉತ್ತುಂಗದಲ್ಲಿತ್ತು. ಅವರಿಗೆ ಯಾವುದೇ ನಿಷ್ಠುರತೆ, ನೈತಿಕತೆ ಇಲ್ಲ, ಸಮಗ್ರತೆ ಇರಲಿಲ್ಲ" ಎಂದು ಕಿಡಿ ಕಾರಿದ್ದಾರೆ.
ಹಿಂದಿನಂತೆ ಸೆಲೆಬ್ರಿಟಿಗಳು ಈಗ ಸಂಪಾದಕರ ಮೇಲೆ ಅವಲಂಬಿತವಾಗಬೇಕಿಲ್ಲ. ಸಾಮಾಜಿಕ ಮಾಧ್ಯಮಗಳಿಂದಾಗಿ ಈಗ ಪರಿಸ್ಥಿತಿ ಬದಲಾಗಿದೆ. ಸತ್ಯ ಏನು ಎಂದು ಅವರೇ ಹೇಳಬಹುದು ಎಂದು ರವೀನಾ ಹೇಳಿದ್ದಾರೆ. " ಪತ್ರಕರ್ತರು ಯಾರ ಬಣದಲ್ಲಿದ್ದಾರೆ, ಯಾರಿಗೆ ಬೆಣ್ಣೆ ಹಚ್ಚುತ್ತಿದ್ದರು ಅಥವಾ ಯಾವ ನಾಯಕ ಅಥವಾ ನಾಯಕಿ ಇವರಿಗೆ ಬೆಣ್ಣೆ ಹಚ್ಚುತ್ತಿದ್ದಾರೆ? ಅವರ ಬಗ್ಗೆ ಮತ್ತು ಅವರ ಕಥೆಯ ಬಗ್ಗೆ ಮಾತ್ರ ಬರೆಯುತ್ತಾರೆ. ಸತ್ಯ ಏನೆಂದು ಕಂಡುಹಿಡಿಯಲು ಸಹ ಕಾಯುವುದಿಲ್ಲ" ಎಂದು ರವೀನಾ ಟಂಡನ್ ತಿಳಿಸಿದ್ದಾರೆ.
90 ರ ದಶಕದ ನಿಯತಕಾಲಿಕೆಗಳು ತನ್ನ ಬಗ್ಗೆ ಕೆಟ್ಟ ಲೇಖನಗಳನ್ನು ಬರೆಯುತ್ತಿದ್ದವು ಎಂದು ಆರೋಪಿಸಿರುವ ಅವರು, ಈ ಹಿಂದೆಯೂ ಇದರ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ಮ್ಯಾಗಜಿನ್ ಮತ್ತು ಟ್ಯಾಬ್ಲಾಯ್ಡ್‌ಗಳ ಮೇಲೆ ಆಕೆಗಿರುವ ಕೋಪವನ್ನು ಹೊರಹಾಕಿದ್ದಾರೆ.

ರವೀನಾ ಅವರ ಹಿಂದಿನ ಸಂಬಂಧಗಳು
ರವೀನಾ ಅವರ ಸಂಬಂಧದ ಬಗ್ಗೆ ಮಾತನಾಡುವುದಾದರೇ, ಅವರು 1995 ರಲ್ಲಿ ಮೊಹ್ರಾ ಸಿನಿಮಾದ ಸಹನಟ ಅಕ್ಷಯ್ ಕುಮಾರ್ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. 90 ರ ದಶಕದ ಅಂತ್ಯದಲ್ಲಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ, ನಂತರ ಇಬ್ಬರು ಬೇರೆಯಾದರು.
ರವೀನಾ ಜೊತೆ ಮದುವೆ ಮುರಿದುಬಿದ್ದ ನಂತರ, ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ ಅವರನ್ನು ಭೇಟಿಯಾದರು. 2001 ರಲ್ಲಿ, ಅಕ್ಷಯ್ ಮತ್ತು ಟ್ವಿಂಕಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಆರವ್ ಮತ್ತು ನಿತಾರಾ ಎಂಬ ಇಬ್ಬರು ಮಕ್ಕಳಳಿದ್ದಾರೆ. ಎವಿನಾ ಟಂಡನ್ ಉದ್ಯಮಿ ಅನಿಲ್ ಥದಾನಿ ಜೊತೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಇನ್ನು, ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಇಬ್ಬರು ವೆಲ್ಕಮ್ ಟು ದಿ ಜಂಗಲ್ ಸಿನಿಮಾದಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಒಂದಾಗಲಿದ್ದಾರೆ. ಸಿನಿಮಾದಲ್ಲಿ ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡೀಸ್, ಲಾರಾ ದತ್ತಾ, ಸುನೀಲ್ ಶೆಟ್ಟಿ, ಸಂಜಯ್ ದತ್, ಪರೇಶ್ ರಾವಲ್, ಅರ್ಷದ್ ವಾರ್ಸಿ, ತುಷಾರ್ ಕಪೂರ್, ಶ್ರೇಯಸ್ ತಲ್ಪಾಡೆ, ರಾಜ್‌ಪಾಲ್ ಯಾದವ್, ಜಾನಿ ಲೀವರ್, ಕಿಕು ಶಾರದಾ, ಕೃಷ್ಣಾ ಅಭಿಷೇಕ್, ರಾಹುಲ್ ದೇವ್ ಮತ್ತು ಮೆಬ್ರೋಂದಿ ಮತ್ತು ಮಿಕಾ ಸಿಂಗ್ ಇದ್ದಾರೆ.


Click it and Unblock the Notifications











