Raveena Tandon: "ಆ ನಟ ತುಟಿಗೆ ತುಟಿ ಒತ್ತುತ್ತಿದ್ದಂತೆ ವಾಂತಿ ಬಂದುಬಿಡ್ತು.. ಪದೇ ಪದೇ ಬಾಯಿ ತೊಳ್ಕೊಂಡೆ": ರವೀನಾ ಟಂಡನ್
ಒಂದ್ಕಾಲದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ರಾಣಿಯಂತೆ ಮೆರೆದಾಕೆ ರವೀನಾ ಟಂಡನ್. 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದರು. ಸಿಕ್ಕಾಪಟ್ಟೆ ಬೋಲ್ಡ್ ಪಾತ್ರಗಳಲ್ಲಿ ಆಕೆ ನಟಿಸಿ ರಂಗೇರಿಸಿದ್ದರು. ಕನ್ನಡದಲ್ಲಿ 'ಉಪೇಂದ್ರ' ಚಿತ್ರದಲ್ಲಿ ಮಸ್ತ್ ಮಸ್ತ್ ಹುಡ್ಗಿಯಾಗಿ ಕಮಾಲ್ ಮಾಡಿದ್ದರು. ಇತ್ತೀಚೆಗೆ 'KGF'-2 ಚಿತ್ರದಲ್ಲಿ ರಮಿಕಾ ಸೇನ್ ಆಗಿ ಅಬ್ಬರಿಸಿದ್ದರು.
ಮದುವೆ ನಂತರ ನಾಯಕಿಯಾಗಿ ರವೀನಾ ನಟಿಸೋದು ಕಮ್ಮಿ ಆಗಿದೆ. ಪೋಷಕ ಪಾತ್ರಗಳಲ್ಲಿ ಹೆಚ್ಚು ಹೆಚ್ಚು ನಟಿಸುತ್ತಿದ್ದಾರೆ. ವಯಸ್ಸು 50ರ ಗಡಿ ಸೇರಿದರೂ ತಮ್ಮ ಸೌಂದರ್ಯದಿಂದ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ. 90ರ ದಶಕದಲ್ಲಿ ರವೀನಾ ಟಂಡನ್ ಬಾಲಿವುಡ್‌ನಲ್ಲಿ ಕ್ರೇಜಿ ಹೀರೋಯಿನ್ ಆಗಿ ಮಿಂಚಿದ್ದರು. ಆದರೆ ರವೀನಾ ಚಿತ್ರರಂಗದಲ್ಲಿ ಹಲವಾರು ಕಷ್ಟಗಳನ್ನು ಮತ್ತು ಅವಮಾನಗಳನ್ನು ಎದುರಿಸಿದ್ದೇನೆ ಎಂದು ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.

ಇದೀಗ ಮತ್ತೆ ರವೀನಾ ಟಂಡನ್ ನಾಯಕಿಯಾಗಿ ಮೆರೆಯುತ್ತಿದ್ದ ಸಮಯದಲ್ಲಿ ತನಗೆ ಎದುರಾದ ಅವಮಾನದ ಬಗ್ಗೆ ತೆರೆದಿಟ್ಟಿದ್ದಾರೆ. ನನಗೆ ಕಸಿವಿಸಿ ಅನಿಸಿದರೆ ಯಾವುದೇ ದೃಶ್ಯದಲ್ಲಿ ನಟಿಸುತ್ತಿರಲ್ಲ. ಅದಕ್ಕೆ ನನಗೆ ದುರಹಂಕಾರ ಎಂದು ಹೇಳಿ ನನಗೆ ಅಹಂಕಾರಿ ಎನ್ನುವ ಹಣೆಪಟ್ಟಿ ಕಟ್ಟಿಬಿಟ್ಟರು. ನನ್ನ ವೃತ್ತಿಜೀವನದ ಆರಂಭದಲ್ಲಿ ಇದನ್ನು ಹೆಚ್ಚಾಗಿ ಅನುಭವಿಸಿದ್ದೇನೆ ಎಂದು ರವೀನಾ ಹೇಳಿದ್ದಾರೆ. ಈಗ ಪ್ರತಿ ಸಿನಿಮಾದಲ್ಲೂ ಚುಂಬನದ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ. ದೊಡ್ಡ ಸಿನಿನಿಮಾ ಚಿಕ್ಕ ಸಿನಿಮಾ ಎನ್ನುವ ಭೇದ ಇಲ್ಲದೇ ರೊಮ್ಯಾಂಟಿಕ್ ಸೀನ್‌ಗಳಿರುತ್ತವೆ. ಕೇವಲ ಅಡಲ್ಟ್ ಸೀನ್‌ಗಳನ್ನು ಪ್ರದರ್ಶಿಸಿ ಈಗ ಸಿನಿಮಾಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆಕೆ ವಿವರಿಸಿದ್ದಾರೆ.
ಚುಂಬನದ ದೃಶ್ಯಗಳ ಬಗ್ಗೆ ಮಾತನಾಡುತ್ತಾ ರವೀನಾ ಟಂಡನ್ ಸೆನ್ಸೇಷನಲ್ ಕಾಮೆಂಟ್ಸ್ ಮಾಡಿದ್ದಾರೆ. ಸಿನಿಮಾಗಳ ವಿಚಾರದಲ್ಲಿ ಮಸ್ತ್ ಮಸ್ತ್ ಹುಡುಗಿ ನೋ ಕಿಸ್ಸಿಂಗ್ ನಿಯಮ ಪಾಲಿಸುತ್ತಿದ್ದರು. ಹಾಗಿದ್ದರೂ ವೃತ್ತಿಜೀವನದಲ್ಲಿ ರವೀನಾ ಟಂಡನ್ ಊಹಿಸದ ರೀತಿಯಲ್ಲಿ ಘಟನೆ ನಡೆದಿತ್ತಂತೆ. ಒಮ್ಮೆ ಅಚಾನಕ್ ಆಗಿ ಸಹ ನಟ ರವೀನಾ ತುಟಿಗೆ ತನ್ನ ತುಟಿ ಒತ್ತಿದ್ದರಂತೆ. ಆ ಸಮಯದಲ್ಲಿ ಆಕೆಗೆ ವಾಂತಿ ಬಂದಂತಾಗಿತ್ತಂತೆ.
"ನಾನು ಚುಂಬನದ ದೃಶ್ಯಗಳಲ್ಲಿ ನಟಿಸಲಿಲ್ಲ. ಆದರೆ ಆತನ ತುಟಿಗಳು ಹಾಗೆ ಸ್ಪರ್ಶಿಸಿದಾಗ ನನಗೆ ಭಯವಾಯಿತು. ತಕ್ಷಣ ನಾನು ರೂಮ್‌ಗೆ ಹೋದೆ. 100 ಬಾರಿ ಬಾಯಿ ತೊಳೆದರೆ ಒಳ್ಳೆಯದು ಎಂದು ಅಂದು ನನಗೆ ಅನ್ನಿಸಿತು" ಎಂದಿದ್ದಾರೆ. ಆದರೆ ಯಾವ ಸಿನಿಮಾ ಶೂಟಿಂಗ್ ವೇಳೆ ಈ ಘಟನೆ ನಡೆಯಿತು ಎಂದು ಆಕೆ ಹೇಳಿಲ್ಲ. ಸದ್ಯ ಆಕೆಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ 'KGF-2' ಚಿತ್ರದಲ್ಲಿ ಪ್ರಧಾನಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಮೋಡಿ ಮಾಡಿದ್ದರು. ಎಲ್ಲರೂ ಚಾಪ್ಟರ್-2ನಲ್ಲಿ ಸಂಜಯ್ ದತ್ ನಟನೆ ನೋಡಲು ಉತ್ಸುಕರಾಗಿದ್ದರು. ಆದರೆ ಸಂಜುಬಾಬು ತೆರೆಮೇಲೆ ಸದ್ದು ಮಾಡಲಿಲ್ಲ. ಸಂಜು ಬದಲು ರವೀನಾ ಸಿನಿರಸಿಕರ ಮನಗೆದ್ದರು. ಪವರ್‌ಫುಲ್ ಪಾತ್ರದಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದರು.
'ಪತ್ತರ್ ಕೆ ಫೂಲ್' ಸಿನಿಮಾ ಮೂಲಕ ರವೀನಾ ಬಾಲಿವುಡ್ ಪ್ರವೇಶಿಸಿದರು. ದಿಲ್‌ವಾಲೆ, ಮೊಹ್ರಾ, ಜಿದ್ದಿ, ವಿಜೇತ, ಆಂಟಿ ನಂ.1 ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಇದೇ ಸಮಯದಲ್ಲಿ ಉಪೇಂದ್ರ ಆಕೆಯನ್ನು ಕನ್ನಡಕ್ಕೆ ಪರಿಚಯಿಸಿದರು. ಬಳಿಕ ತೆಲುಗು ಸಿನಿಮಾಗಳಲ್ಲೂ ರವೀನಾ ಬಣ್ಣ ಹಚ್ಚಿದರು. 2004ರಲ್ಲಿ ಅನಿಲ್ ತದಾನಿ ಜೊತೆ ರವೀನಾ ಹಸೆಮಣೆ ಏರಿದರು. ದಂಪತಿಗೆ 4 ಜನ ಮಕ್ಕಳು ಇದ್ದಾರೆ.
'ಒನ್ ಫ್ರೈಡೆ ನೈಟ್' ಚಿತ್ರದಲ್ಲಿ ರವೀನಾ ಕೊನೆಯದಾಗಿ ನಟಿಸಿದ್ದರು. ಸದ್ಯ 'ಗುಡ್‌ಚಡಿ' ಎನ್ನುವ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂಜಯ್ ದತ್, ಅರುಣ ಇರಾನಿ, ಪಾರ್ಥ್ ಸಮ್‌ತಾನ್ ಚಿತ್ರದ ತಾರಾಗಣದಲ್ಲಿ ಇದ್ದಾರೆ.


Click it and Unblock the Notifications











