ಮಹಾ ಅಪರಾಧ, ಮಹಾಪಾಪ ! ಮಹಾಕಾಲ್ ದರ್ಶನ ಪಡೆದ ಮುಸ್ಲಿಂ ನಟಿ; ಕೆರಳಿದ ಧರ್ಮಗುರು-ಪಶ್ಚಾತಾಪನಾ ? ಫತ್ವಾನಾ?
ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ. ಕುಂತರು, ನಿಂತರು ತಪ್ಪೆನ್ನುವ ಒಂದು ವರ್ಗ ಹುಟ್ಟುಕೊಂಡಿದೆ. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಹೊಂದಿರುವವರನ್ನು ಕೂಡ ಧಾರ್ಮಿಕ ಮತ್ತು ಜಾತಿ ಆಧಾರಿತ ವ್ಯವಸ್ಥೆ....
ಪ್ರಶ್ನೆ ಮಾಡುತ್ತೆ. ಸಮಾನತೆಯ ತತ್ವದಡಿಯಲ್ಲಿ ಸೋಷಿಯಲಿಸ್ಟ್, ಸೆಕ್ಯುಲರ್ ಡೆಮಾಕ್ರೆಟಿಕ್, ರಿಪಬ್ಲಿಕ್ ಎಂದು ಭಾರತ ಹೇಳಿದರು ಕೂಡ ವ್ಯಕ್ತಿಯ ವ್ಯೆಯಕ್ತಿಕ ನಂಬಿಕೆಗಳನ್ನು ಕೂಡ ಪ್ರಶ್ನೆ ಮಾಡಲಾಗುತ್ತೆ. ವ್ಯೆಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಿದ್ಧಾಂತದ ನಡುವೆ ನಡೆಯುವ ಈ ಸಂಘರ್ಷದ ಸುಳಿಯಲ್ಲಿ ಸದ್ಯ ನುಶ್ರತ್ ಭರೂಚಾ ಸಿಲುಕಿಕೊಂಡಿದ್ದಾರೆ.

ಹೌದು, ನುಶ್ರತ್ ಭರೂಚಾ.. ಎರಡು ದಶಕದ ಹಿಂದೆ '''ಜೈ ಸಂತೋಷಿ ಮಾ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ''ಲವ್ ಸೆ*ಕ್ಸ್ ಔರ್ ಧೋಖಾ''.. ''ಪ್ಯಾರ್ ಕಾ ಪಂಚನಾಮಾ''.. ''ಆಕಾಶ್ ವಾಣಿ''.. ''ಪ್ಯಾರ್ ಕಾ ಪಂಚನಾಮಾ 2''.. ''ಸೋನು ಕೆ ಟಿಟು ಕಿ ಸ್ವೀಟಿ''.. ''ಡ್ರೀಮ್ ಗರ್ಲ್''.. ''ಅಖೇಲಿ''.. ಇವರ ಕೆಲ ಜನಪ್ರಿಯ ಚಿತ್ರಗಳು.
ಸದ್ಯ ಬನ್ ಟಿಕ್ಕಿ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ನುಶ್ರತ್ ಮೊದಲಿಂದ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಾ ಬಂದಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಾದವನ್ನು ಕೂಡ ಪಡೆದಿದ್ದಾರೆ.ನಮಾಜ್ ಕೂಡ ಮಾಡುವ ನುಶ್ರತ್ ಸಂತೋಷಿ ಮಾತಾ ಉಪವಾಸವನ್ನು ಕೂಡ ಮಾಡುತ್ತಾರೆ. ತೀರಾ ಇತ್ತೀಚಿನ ಸಂದರ್ಶನದಲ್ಲಿ ನುಶ್ರತ್ ಈ ಮಾತು ಹೇಳಿದ್ದರು ಕೂಡ.
ಇಂಥಾ ನುಶ್ರತ್ ಇತ್ತೀಚೆಗೆ ಹೊಸ ವರ್ಷಕ್ಕೂ ಮುನ್ನ (ಡಿಸೆಂಬರ್ 30 ) ಉಜ್ಜಯಿನಿಯ ಐತಿಹಾಸಿಕ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದಿದ್ದರು. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೊವನ್ನು ಹಂಚಿಕೊಂಡು ''ಜೈ ಶ್ರೀ ಮಹಾಕಾಲ್'' ಬರೆದುಕೊಂಡಿದ್ದರು.
ನುಶ್ರತ್ ಭರೂಚಾ ಅವರ ಈ ಭೇಟಿ ಸದ್ಯ ಮುಸ್ಲಿಂ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಾಜ್ವಿಯವರನ್ನು ಕೆರಳಿಸಿದೆ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ರಾಜ್ವಿ ಈ ಕೂಡಲೇ ನುಶ್ರತ್ ಪ್ರಾಯಶ್ಚಿತ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಫತ್ವಾ ಹೊರಡಿಸುವ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ''ಎಎನ್‌ಐ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೌಲಾನಾ ಶಹಾಬುದ್ದೀನ್ ರಾಜ್ವಿ ಷರಿಯತ್‌ನ ಕಾನೂನು ಅಡಿಯಲ್ಲಿ ನುಶ್ರತ್ ಘೋರ ಪಾಪ (ಗುನಾಹ್ ಎ ಅಜೀಮ್) ಮಾಡಿದ್ದಾರೆ ಎಂದು ಹೇಳಿದ್ದಾರೆ.
ದೇವಸ್ಥಾನಕ್ಕೆ ನುಶ್ರತ್ ತೆರಳಿ ಪೂಜೆ ಸಲ್ಲಿಸಿದ್ದು, ಶಾಲು ಹಾಕಿಕೊಂಡಿದ್ದು, ಹಣೆಗೆ ಕುಂಕುಮ ಹಚ್ಚಿಕೊಂಡಿದ್ದು, ಇವೆಲ್ಲವೂ ಇಸ್ಲಾಮಿಕ್ ತತ್ವಗಳ ಉಲ್ಲಂಘನೆ ಎಂದು ಹೇಳಿರುವ ಮೌಲಾನಾ, ತಮ್ಮ ಈ ತಪ್ಪಿಗೆ ನುಶ್ರತ್ ಪ್ರಾಯಶ್ವಿತ ಪಡಬೇಕು.. ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ''ಕಲ್ಮಾ'' ಪಠಿಸಬೇಕು ಎಂದು ಆದೇಶವನ್ನು ಕೂಡ ಹೊರಡಿಸಿದ್ದಾರೆ.
ಸಹಜವಾಗಿ ಆಲ್ ಇಂಡಿಯಾ ಮುಸ್ಲಿಂ ಜಮಾತ್‌ನ ಮೌಲಾನಾ ಶಹಾಬುದ್ದೀನ್ ರಾಜ್ವಿ ಅವರ ವಿರುದ್ದವೇ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಶಾರುಖ್ ಖಾನ್ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡುತ್ತಾರೆ, ಸಲ್ಮಾನ್ ಖಾನ್ ಗಣೇಶನ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ, ಆಮಿರ್ ಖಾನ್ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುತ್ತಾರೆ, ಆಗ ಕಣ್ಣಿಗೆ ಕಾಣಿಸದ ನೀವು ಮಹಿಳೆ ಮಹಾಕಾಳೇಶ್ವರನ ಪೂಜೆ ಮಾಡಿದ ತಕ್ಷಣ ಪ್ರತ್ಯಕ್ಷರಾಗುತ್ತೀರಾ ಎಂದು ಕಿಡಿ ಕಾರುತ್ತಿದ್ದಾರೆ. ದ್ವೇಷ ಭಾಷಣ ಮಾಡಿದ ಹಿನ್ನೆಲೆ ಮೊದಲು ಇವರ ಮೇಲೆ ಕಾನೂನಿನ ಅಡಿ ಪ್ರಕರಣ ದಾಖಲಿಸಬೇಕು ಎಂದಿದ್ದಾರೆ. ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ತಾನು ಬೇಕಾದ ಕಡೆ ಪ್ರಾರ್ಥಿಸಲು ಸ್ವಾತಂತ್ರ್ಯವಿದೆ. ಇವರು ಮಹಿಳೆಯನ್ನು ಗುಲಾಮಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದು, ಇವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ನುಶ್ರತ್ ಈ ವಿಚಾರ ಮತ್ತು ವಿವಾದದ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications











