ರೀ ರಿಲೀಸ್ ಆಗಲಿದೆ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಈ ಬ್ಲಾಕ್ ಬಸ್ಟರ್ ಚಿತ್ರ
ಕೇವಲ ಕನ್ನಡ ಚಿತ್ರರಂಗ ಮಾತ್ರ ಅಲ್ಲ ಬೇರೆ ಎಲ್ಲಾ ಭಾಷೆಯಲ್ಲಿ ಕೂಡ ಆಯಾ ಚಿತ್ರರಂಗದ ಅಳಿವು-ಉಳಿವು ಅಲ್ಲಿನ ಸೂಪರ್ ಸ್ಟಾರ್ಸ್ ಕೈಯಲ್ಲಿದೆ. ಆದರೆ.. ಸದ್ಯ ಎಲ್ಲಾ ಭಾಷೆಯಲ್ಲಿ ಎಲ್ಲರನ್ನು ಪ್ಯಾನ್ ಇಂಡಿಯಾ ಜ್ವರ ಆವರಿಸಿಕೊಂಡಿದೆ. ವರ್ಷಗಳು ಉರುಳಿದರೂ ಕೂಡ ಇವರ ಒಂದು ಸಿನಿಮಾ ಬಿಡುಗಡೆಯಾಗುವುದಿಲ್ಲ. ಇನ್ನೂ ಹೊಸಬರದ್ದು ಕಥೆ ಅಲ್ಲ ಬದಲಿಗೆ ವ್ಯಥೆ.
ಪ್ರೇಕ್ಷಕರ ಕೊರತೆಯಿಂದ ಹೊಸಬರ ಮುಖದಲ್ಲಿನ ಕಾಂತಿ ಕಡಿಮೆಯಾಗುತ್ತಿದೆ ಹೊರತು ಯಾವುದೇ ಕ್ರಾಂತಿ ಆಗ್ತಿಲ್ಲ. ಅಲ್ಲೊಂದು.. ಇಲ್ಲೊಂದು.. ಸಿನಿಮಾಗಳನ್ನು ಹೊರತು ಪಡಿಸಿದರೆ ಎಷ್ಟೇ ತಿಪ್ಪರಲಾಗ ಹಾಕಿದರೂ ಚಿತ್ರಗಳನ್ನ ನೋಡಲು ಮೊದಲಿನಂತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ.

ಹೀಗಾಗಿಯೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ನಾನಾ ಕಸರತ್ತುಗಳನ್ನು ಎಲ್ಲೆಡೆ ಮಾಡಲಾಗುತ್ತಿದೆ. ಕೇವಲ ಕನ್ನಡ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಮರು ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಡಿಯಲ್ಲಿಯೇ ಇದೀಗ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಬ್ಲಾಕ್‌ಬಸ್ಟರ್ ಚಿತ್ರ ''ಏಕ್ ಥಾ ಟೈಗರ್'' ಚಿತ್ರವನ್ನು ಮರು ಬಿಡುಗಡೆ ಮಾಡಲು ಬಾಲಿವುಡ್ ಮುಂದಾಗಿದೆ.
ಹೌದು, ''ಏಕ್ ಥಾ ಟೈಗರ್'' 2012ರಲ್ಲಿ ತೆರೆಗೆ ಬಂದ ಚಿತ್ರ. ಬಾಲಿವುಡ್‌ನಲ್ಲಿನ ''ಸ್ಪೈ ಯೂನಿವರ್ಸ್''ಗೆ ಅಡಿಪಾಯ ಹಾಕಿದ ಚಿತ್ರ ಇದು. ಈ ಚಿತ್ರದ ಮೂಲಕವೇ YRF (ಯಶ್ ರಾಜ್ ಫಿಲಂಸ್) ತನ್ನ ಮಹತ್ವಾಕಾಂಕ್ಷೆಯ ''ಸ್ಪೈ ಯೂನಿವರ್ಸ್'' ಆರಂಭಿಸಿತ್ತು. ''ಟೈಗರ್ ಜಿಂದಾ ಹೈ''.. ''ವಾರ್''.. ''ಪಠಾಣ್''.. ''ಟೈಗರ್ 3''.. ''ವಾರ್ 2'' ಚಿತ್ರಗಳನ್ನು ನಿರ್ಮಾಣ ಮಾಡಿತು.
ಇನ್ನೂ ಇತ್ತೀಚೆಗಷ್ಟೇ ''ಏಕ್ ಥಾ ಟೈಗರ್'' ಅಂತರಾಷ್ಟ್ರೀಯ ''ಸ್ಪೈ ಮ್ಯೂಸಿಯಂ''ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ''ಜೇಮ್ಸ್ ಬಾಂಡ್'' ಮತ್ತು ''ಮಿಷನ್ ಇಂಪಾಸಿಬಲ್'' ಸರಣಿಯ ಚಿತ್ರಗಳ ಜೊತೆ ''ಏಕ್ ಥಾ ಟೈಗರ್'' ಕೂಡ ಈ ಮ್ಯೂಸಿಯಂನಲ್ಲಿ ಸ್ಥಾನ ಪಡೆದಿರುವುದು ವಿಶೇಷ.
ಇಂತಹ ''ಏಕ್ ಥಾ ಟೈಗರ್'' ಚಿತ್ರವನ್ನು ಅದ್ಧೂಯಾಗಿ ರೀ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದ್ದು, ಚಿತ್ರದ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲಿಯೇ ಘೋಷಿಸಲಾಗುವುದು ಎಂದು ''ಬಾಲಿವುಡ್ ಹಂಗಾಮಾ'' ವರದಿಯನ್ನು ಮಾಡಿದೆ.

ಕಬೀರ್ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಕತ್ರಿನಾ ಕೈಫ್ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ತಮ್ಮ ಸಾಹಸವನ್ನು ಕೂಡ ಪ್ರದರ್ಶಿಸಿ ಎಲ್ಲರ ಹೃದಯವನ್ನು ಗೆದ್ದಿದ್ದರು. ಇನ್ನು ರಣ್ವೀರ್ ಶೋರೆ, ರೋಶನ್ ಸೇಠ್, ಗಿರೀಶ್ ಕಾರ್ನಾಡ್, ಗಾವಿ ಚಾಹಲ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದರು.
ಇನ್ನು ಬಾಕ್ಸಾಫೀಸ್‌ನ ವಿಚಾರಕ್ಕೆ ಬಂದರೆ 2012ರಲ್ಲಿ ಬಿಡುಗಡೆಯಾದ ''ಏಕ್ ಥಾ ಟೈಗರ್'' ಆ ವರ್ಷದ ಅತಿದೊಡ್ಡ ಬ್ಲಾಕ್‌ಬಸ್ಟರ್ ಮತ್ತು ಆಕ್ಷನ್ ಥ್ರಿಲ್ಲರ್ ಚಿತ್ರಗಳಲ್ಲಿ ಒಂದಾಗಿತ್ತು.ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ, ಈ ಚಿತ್ರ ಆ ಕಾಲದಲ್ಲಿ ವಿಶ್ವಾದ್ಯಂತ ₹320 ಕೋಟಿ ಗಳಿಸಿತ್ತು. ಭಾರತದಲ್ಲಿಯೇ ₹263 ಕೋಟಿ ಹಣವನ್ನು ದೋಚಿತ್ತು.
ಸದ್ಯ ''ಏಕ್ ಥಾ ಟೈಗರ್'' ರೀ ರಿಲೀಸ್ ಆಗುತ್ತಿರುವ ವಿಚಾರದಿಂದ ಸಲ್ಮಾನ್ ಖಾನ್ ಅಭಿಮಾನಿಗಳು ಖುಷಿಯಾಗಿದ್ದು, ಚಿತ್ರದ ಮರುಬಿಡುಗಡೆಯ ದಿನ ಅದ್ದೂರಿ ಸಂಭ್ರಮಾಚರಣೆಯ ಪ್ಲಾನ್ ಮಾಡುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಚಿತ್ರ ರೀ ರಿಲೀಸ್ ಆಗುವ ಸಾಧ್ಯತೆ ಇದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ


Click it and Unblock the Notifications











