ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೋತ ಹಿರಿಯ ನಟಿ ; ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಪ್ರವೀಣಾ ದೇಶಪಾಂಡೆ ನಿಧನ
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್‌ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ.
ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ಪ್ರವೀಣಾ ದೇಶಪಾಂಡೆ ಅವರ ಅಕಾಲಿಕ ನಿಧನ ಮತ್ತೊಂದು ಉದಾಹರಣೆ.

ಹೌದು, ಪ್ರವೀಣಾ ದೇಶಪಾಂಡೆ.. ಹಿಂದಿ ಚಿತ್ರರಂಗದ ಹಿರಿಯ ನಟಿ. 1965ರಲ್ಲಿ ಜನಿಸಿದ್ದ ಪ್ರವೀಣಾ ದೇಶಪಾಂಡೆ ಮರಾಠಿ ಮತ್ತು ಹಿಂದಿ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ಅಭಿನಯದಿಂದ ಜನ ಮನ ಗೆದ್ದಿದ್ದರು. ''ಘರ್ ಏಕ್ ಮಂದಿರ''.. ''ಕರಮ್ ಅಪ್ನಾ ಅಪ್ನಾ''..''ಕುಲ್ಫಿ ಕುಮಾರ್ ಬಾಜೆವಾಲಾ''.. ಇವರ ಕೆಲ ಪ್ರಖ್ಯಾತ ಧಾರಾವಾಹಿಗಳು.
ಇನ್ನು ''ಮುಂಬೈ ಮೇರಿ ಜಾನ್''.. ಸಲ್ಮಾನ್ ಖಾನ್ ಅಭಿನಯದ ''ರೆಡಿ''.. ''ಬಾಂಬೆ ಟಾಕೀಸ್''.. ''ಡಿ-ಡೇ''..''ಮಾನ್‌ಸೂನ್ ಶೂಟೌಟ್''.. ''ಏಕ್ ವಿಲನ್''.. ''ಕ್ರೇಜಿ ಕುಕ್ಕಡ್ ಫ್ಯಾಮಿಲಿ''.. ''ಗಬ್ಬರ್ ಈಸ್ ಬ್ಯಾಕ್''..''ಅಲಿಗಢ್''.. ''ಗಾಂವ್''.. ''ಬ್ಲಾಕ್‌ಮೇಲ್'' .. ''ಗೋಲಕ್ ಬುಗ್ನಿ ಬ್ಯಾಂಕ್ ತೆ ಬಟುವಾ''.. ''ಪರಮಾಣು: ದಿ ಸ್ಟೋರಿ ಆಫ್ ಪೋಖ್ರಾನ್''..''ಜಲೇಬಿ''.. ''ಹ್ಯಾಕ್ಡ್'' ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಪ್ರವೀಣಾ ದೇಶಪಾಂಡೆ ತೀರಾ ಇತ್ತೀಚೆಗೆ ಪ್ರಸಾರವಾದ ನೀರಜ್ ಪಾಂಡೆ ನಿರ್ದೇಶನದ, ಇಮ್ರಾನ್ ಹಶ್ಮಿ ಅಭಿನಯದ ವೆಬ್ ಸರಣಿ ''ತಸ್ಕರಿ''ಯಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇದೇ ಇವರ ಕೊನೆಯ ಚಿತ್ರ
ಇಂಥಾ ಪ್ರವೀಣಾ ದೇಶಪಾಂಡೆ ಅವರಿಗೆ 2019ರಲ್ಲಿ ಕ್ಯಾನ್ಸರ್ ರೋಗ ತಗುಲಿದೆ ಎನ್ನುವುದು ಗೊತ್ತಾಗಿತ್ತು. 2024ರಲ್ಲಿ ''E-TIMES''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಪ್ರವೀಣಾ ದೇಶಪಾಂಡೆ, ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗ ನಾನು ಅದೇ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಹೋಗಿದ್ದೇ, ಆಗ ನನಗೆ ಮಲ್ಟಿಪಲ್ ಮೈಲೋಮಾ ಇರುವುದು ಪತ್ತೆಯಾಯಿತು ಎಂದು ಹೇಳಿದ್ದರು.
17 ದಿನ ಐಸೋಲೇಷನ್‌ನಲ್ಲಿದ್ದಾಗ ನನ್ನ ಪತಿ (ಅನಿರುದ್ಧ ದೇಶಪಾಂಡೆ), ಇಬ್ಬರು ಪುತ್ರರು, ಸೊಸೆ, ಸಂಬಂಧಿಕರು ನನ್ನನ್ನೂ ಒಂಟಿಯಾಗಿ ಬಿಡಲಿಲ್ಲ ಎಂದು ಹೇಳಿದ್ದ ಪ್ರವೀಣಾ ದೇಶಪಾಂಡೆ ವಿಡಿಯೋ ಕರೆಗಳ ಮೂಲಕ ನನಗೆ ಎಲ್ಲರೂ ಧೈರ್ಯ ತುಂಬುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದರು.

ಎಲ್ಲರ ಹರಕೆ ಹಾರೈಕೆಯಿಂದ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು ಎಂದು ಹೇಳಿದ್ದ ಪ್ರವೀಣಾ, ಈ ಹಿನ್ನೆಲೆ ನಾನು ಮತ್ತೆ ಚಿತ್ರರಂಗದಲ್ಲಿ ಕೆಲಸ ಮಾಡಲು ಮುಂದಾದೆ ಎಂದಿದ್ದರು.
ಹೀಗೆ ಕ್ಯಾನ್ಸರ್ ವಿರುದ್ಧ 2019ರಿಂದ ಹೋರಾಡುತ್ತಾ ಬಂದ ಪ್ರವೀಣಾ ದೇಶಪಾಂಡೆ ನಿನ್ನೆ (ಫೆಬ್ರವರಿ 17 ) ತಮ್ಮ 60ನೇ ವಯಸ್ಸಿನಲ್ಲಿ ಈ ಹೋರಾಟದಲ್ಲಿ ಸೋತರು. ನಿಧನರಾದರು. ನಿನ್ನೆಯೇ ಮುಂಬೈನ ಅಂಧೇತಿ ಪೂರ್ವದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಕೂಡ ನಡೆದಿದ್ದು ಪ್ರವೀಣಾ ದೇಶಪಾಂಡೆ ತಮ್ಮ ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಹಿರಿಯ ನಟಿ ಪ್ರವೀಣಾ ದೇಶಪಾಂಡೆ ಅವರ ನಿಧನಕ್ಕೆ ಬಾಲಿವುಡ್ ಮತ್ತು ಮರಾಠಿ ಚಿತ್ರರಂಗ ಹಾಗೂ ಕಿರುತೆರೆ ಕಂಬನಿ ಮಿಡಿದಿದ್ದು, ಸಿನೆ ಮತ್ತು ಟಿವಿ ಕಲಾವಿದರ ಸಂಘ (CINTAA) ಪ್ರವೀಣಾ ದೇಶಪಾಂಡೆ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.


Click it and Unblock the Notifications











