'ಆ ನಿರ್ದೇಶಕನ ಜೊತೆ ಫಿಲಂ ಮಾಡಬೇಕಿತ್ತು': ನೆರವೇರದ ಸುಶಾಂತ್ ಆಸೆ
ದಿವಂಗತ ನಟ ಸುಶಾಂತ್ ಸಿಂಗ್ ಓರ್ವ ಅದ್ಭುತ ಡ್ಯಾನ್ಸರ್. ಬಾಲಿವುಡ್ ಎಂಟ್ರಿಯಾಗುವುದಕ್ಕೂ ಮುಂಚೆ ಸುಶಾಂತ್ ಸಿಂಗ್ 'ಜಲಕ್ ದಿಕಲಾ ಜಾ (ಜೆಡಿಜೆ)' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಆಮೇಲೆ 2013ರಲ್ಲಿ 'ಕಾಯ್ ಪೋ ಚೆ' ಸಿನಿಮಾದಲ್ಲಿ ಮೊದಲ ಸಲ ನಟಿಸಿದರು.
ನಂತರ ಪಿಕೆ, ಎಂಎಸ್ ಧೋನಿ, ರಬ್ತಾ, ಚಿಚ್ಚೋರೆ ಅಂತಹ ಒಳ್ಳೆಯ ಚಿತ್ರಗಳಲ್ಲಿ ಕಾಣಿಸಿಕೊಂಡರು. ಬಿಟೌನ್‌ನಲ್ಲಿ ಭರವಸೆಯ ನಟನಾಗಿ ಬೆಳೆಯುತ್ತಿದ್ದ ಸುಶಾಂತ್ ಸಿಂಗ್ ಅನಿರೀಕ್ಷಿತವಾಗಿ ಸಾವನ್ನಪ್ಪಿದರು. ಜೂನ್ 14ಕ್ಕೆ 'ಧೋನಿ' ಖ್ಯಾತಿಯ ನಟ ಕೊನೆಯುಸಿರೆಳೆದು ಒಂದು ವರ್ಷ. ಈ ಸಂದರ್ಭದಲ್ಲಿ ಸುಶಾಂತ್‌ರನ್ನು ನೆನಪು ಮಾಡಿಕೊಂಡಿರುವ ನಿರ್ದೇಶಕ ಆಸಕ್ತಿಕರ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....

ಡ್ಯಾನ್ಸ್ ಸಿನಿಮಾ ಮಾಡಬೇಕೆಂಬ ಆಸೆ
ಸುಶಾಂತ್ ಸಿಂಗ್ ರಜಪೂತ್‌ಗೆ ಡ್ಯಾನ್ಸ್ ಆಧರಿಸಿ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇತ್ತು. ಈ ವಿಚಾರವನ್ನು ಕೊರಿಯೋಗ್ರಫರ್ ಹಾಗೂ ನಿರ್ದೇಶಕ ರೆಮೋ ಡಿಸೋಜಾ ಬಳಿ ಹೇಳಿಕೊಂಡಿದ್ದರು ಎಂಬ ವಿಷಯವನ್ನು ರೆಮೋ ಈಗ ಬಹಿರಂಗಪಡಿಸಿದ್ದಾರೆ.

ಒಳ್ಳೆಯ ಡ್ಯಾನ್ಸರ್ ಆಗಿದ್ದ ಸುಶಾಂತ್
ಜೆಡಿಜೆ ಕಾರ್ಯಕ್ರಮದಲ್ಲಿ ರೆಮೋ ಡಿಸೋಜಾ ಸಹ ಒಬ್ಬ ತೀರ್ಪುಗಾರರಾಗಿದ್ದರು. ''ಈ ಶೋನಲ್ಲಿ ಸುಶಾಂತ್ ವಿನ್ ಆಗಬೇಕಿತ್ತು. ಆದರೆ, ಮೊದಲ ರನ್ನರ್ ಅಪ್ ಆದಾಗ ನಿಜಕ್ಕೂ ಅಚ್ಚರಿಯಾಯಿತು. ಆತ ಒಳ್ಳೆಯ ಡ್ಯಾನ್ಸರ್'' ಎಂದು ರೆಮೋ ಇತ್ತೀಚೆಗಿನ ಶೋವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

ನನ್ನ ಜೊತೆ ಚರ್ಚಿಸಿದ್ದರು
ಸುಶಾಂತ್ ಸಿಂಗ್ ನಾಯಕನಟನಾಗಿ ತಮ್ಮ ಚಿತ್ರದ ಪ್ರಚಾರಕ್ಕಾಗಿ ಟಿವಿ ಶೋವೊಂದಕ್ಕೆ ಬಂದಿದ್ದ ಸಂದರ್ಭದಲ್ಲಿ ನನ್ನ ಜೊತೆ ಸಿನಿಮಾ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರು. ಡ್ಯಾನ್ಸ್ ಆಧರಿಸಿ ನಿಮ್ಮ ಜೊತೆ ಸಿನಿಮಾ ಮಾಡಬೇಕು ಎಂದಿದ್ದರು. ನಾನು ಸಹ ಖಂಡಿತಾ ಸಮಯ ಬಂದಾಗ ಮಾಡೋಣ ಎಂದಿದ್ದೆ ಎಂದು ಹೇಳಿದ್ದಾರೆ.
Recommended Video

ನಟನೆ ಮೇಲೆ ನಂಬಿಕೆ ಇತ್ತು
''ಸುಶಾಂತ್ ಸಿನಿಮಾಗೆ ಬಂದ ಮೇಲೆ ಆತ ಉತ್ತಮ ಸ್ಥಾನ ಪಡೆಯಬಲ್ಲ ಎಂಬ ನನಗೆ ನಂಬಿಕೆ ಇತ್ತು. ಹೆಚ್ಚಿನ ಆತ್ಮವಿಶ್ವಾಸ, ಹಠ ಮತ್ತು ಕಠಿಣ ಪರಿಶ್ರಮ ಹೊಂದಿದ್ದರು. ನಾನು ಬಹಳ ಹತ್ತಿರದಿಂದ ಬಲ್ಲೆ. ಒಬ್ಬ ಪರಿಪೂರ್ಣ ವ್ಯಕ್ತಿ. ಕೆಲಸದ ಮೇಲೆ ಕಾಳಜಿ ಮತ್ತು ಶ್ರದ್ಧೆ ಇತ್ತು'' ಎಂದು ರೆಮೋ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











