ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಟ ಸುದೀಪ್ ಪಾಂಡೆ ವಿಧಿವಶ
ಯಾರಿಗೆ ಯಾವಾಗ ಹೃದಯಾಘಾತವಾಗಿ ಸಾವು ಸಂಭವಿಸುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇತ್ತೀಚೆಗೆ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದೆ. ಭೋಜ್‌ಪುರಿ ನಟ, ನಿರ್ಮಾಪಕ, ರಾಜಕೀಯ ಮುಖಂಡ ಸುದೀಪ್ ಪಾಂಡೆ ಸಿನಿಮಾ ಚಿತ್ರೀಕರಣದ ವೇಳೆಯೇ ನಿಧನರಾಗಿದ್ದಾರೆ.
ಒಂದಷ್ಟು ಭೋಜ್‌ಪುರಿ ಸಿನಿಮಾಗಳಲ್ಲಿ ಸುದೀಪ್ ಪಾಂಡೆ ನಟಿಸಿದ್ದರು. ತಮ್ಮ ಮುಂದಿನ ಸಿನಿಮಾ 'ಪರೊ ಪಟ್ನವಾಲಿ' ಸೀಕ್ವೆಲ್ ಚಿತ್ರೀಕರಣಕ್ಕಾಗಿ ಅವರು ಮುಂಬೈನಲ್ಲಿದ್ದರು. 10 ದಿನಗಳ ಹಿಂದೆ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸುದೀಪ್ ಪಾಂಡೆ ನಿಧನಕ್ಕೆ ಭೋಜ್‌ಪುರಿ ಚಿತ್ರರಂಗ ಶಾಕ್ ಆಗಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶ್ರದ್ದಾಂಜಲಿ ಸಲ್ಲಿಸುತ್ತಿದ್ದಾರೆ.

ವರದಿಗಳ ಪ್ರಕಾರ ಹೃದಯಾಘಾತದಿಂದ ಸುದೀಪ್ ಪಾಂಡೆ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಸುದಿಪ್ ಪಾಂಡೆ ಅಗಲಿಕೆ ಬಗ್ಗೆ ಆಪ್ತ ಸ್ನೇಹಿತರು ಮಾತನಾಡಿದ್ದಾರೆ. ಅಮೆರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸುದೀಪ್ ಕರಿಯರ್ ಆರಂಭಿಸಿದ್ದರು. ಬಳಿಕ ಭೊಜ್‌ಪುರಿ ಚಿತ್ರರಂಗ ಪ್ರವೇಶಿಸಿದ್ದರು.
2007ರಲ್ಲಿ 'ಭೊಜ್‌ಪುರಿ ಬಯ್ಯಾ' ಎಂಬ ಚಿತ್ರದಲ್ಲಿ ಸುದೀಪ್ ಮೊದಲಿಗೆ ನಟಿಸಿದ್ದರು. 'ಬಹಿನಿಯಾ', 'ಪ್ಯಾರ್ ಮೇ', 'ಬಲ್ವಾ', ಹಮಾರ್ ಲಾಲ್‌ಕರ್, 'ಖೂನಿ ದಂಗಲ್', ಮ'ಸಿಹ ಬೇಬಿ', 'ಹಮಾರ್ ಸಂಗಿ ಭಜರಂಬಲಿ' ಮತ್ತು 'ಧರ್ತಿ' ಅವರ ಮತ್ತಷ್ಟು ಸಿನಿಮಾಗಳು. 'ವಿ ಫಾರ್ ವಿಕ್ಟರ್' ಎಂಬ ಹಿಂದಿ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. ಅದು ನೆಲಕಚ್ಚಿತ್ತು. ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದರು.
ಸುದೀಪ್ ಪಾಂಡೆ ಸಿನಿಕರಿಯರ್ ಅಷ್ಟೇನು ಯಶಸ್ವಿಯಾಗಿ ಇರಲಿಲ್ಲ. ನಿರ್ಮಿಸಿದ ಹಿಂದಿ ಸಿನಿಮಾ ಸೋತು ನಷ್ಟ ಅನುಭವಿಸಿದ್ದರು. ಹಾಗಾಗಿ ಸಾಲದ ಸುಳಿಗೆ ಸಿಲುಕಿದ್ದರು. ವೈಯಕ್ತಿಕ ಜೀವನದಲ್ಲಿ ಕೂಡ ನೆಮ್ಮದಿ ಇರಲಿಲ್ಲ ಎಂದು ಸ್ನೇಹಿತರು ಹೇಳಿರುವುದಾಗಿ ವರದಿಯಾಗಿದೆ. ಅಂದಹಾಗೆ ಸುದೀಪ್ ಬಿಹಾರ ಪ್ರವಾಸೋದ್ಯಮದ ರಾಯಭಾರಿ ಸಹ ಆಗಿದ್ದರು.
ಚಿಕ್ಕ ವಯಸ್ಸಿನಲ್ಲೇ ಪಾಂಡೆ ನಿಧನರಾಗಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ. ಸಿನಿಮಾಗಳು ಮಾತ್ರವಲ್ಲದೆ ಕಿರುತೆರೆಯಲ್ಲಿ ಕೂಡ ಪಾಂಡೆ ಗಮನ ಸೆಳೆದಿದ್ದರು. 'ಬಿಹಾರ್ ಕಿ ಖೋಜ್' ಹಾಗೂ ಸಾತ್ 'ವಚನ್ ಸಾತ್ ಫೇರ್' ಎಂಬ ಕಾರ್ಯಕ್ರಮಗಳ ರುವಾರಿ ಆಗಿದ್ದರು. ಸುದೀಪ್ ಫಿಟ್‌ನೆಸ್ ವಿಚಾರಕ್ಕೆ ಬಹಳ ಮಹತ್ವ ಕೊಡುತ್ತಿದ್ದರು. ಸದಾ ದೇಹ ದಂಡಿಸುತ್ತಿದ್ದರು. ಸಿಕ್ಸ್‌ಪ್ಯಾಕ್ ಕೂಡ ಮಾಡಿ ಹುಬ್ಬೇರಿಸಿದ್ದರು. ಅಷ್ಟು ಫಿಟ್ ಆಗಿದ್ದ ಪಾಂಡೆ ಹೃದಯಾಘಾತದಿಂದ ಕೊನೆಯುಸಿರೆಳೆದ ವಿಚಾರ ಆಪ್ತರಿಗೆ ಅಚ್ಚರಿ ಉಂಟು ಮಾಡಿದೆ.


Click it and Unblock the Notifications











