'ಒಮ್ಮೊಮ್ಮೆ ಹೀಗೂ ಆಗುವುದು' ಹಾಡಿನ ಗಾಯಕ ಸ್ಕೂಬಾ ಡೈವಿಂಗ್ ವೇಳೆ ನಿಧನ
ಖ್ಯಾತ ಗಾಯಕ ಜುಬಿನ್ ಗರ್ಗ್ ಸಿಂಗಾಪುರದಲ್ಲಿ ನಿಧನರಾಗಿದ್ದಾರೆ. ಸ್ಕೂಬಾ ಡೈವಿಂಗ್ ಮಾಡುವಾಗ ಸಂಭವಿಸಿದ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. 52 ವರ್ಷ ವಯಸ್ಸಿನ ಅಸ್ಸಾಮಿ ಗಾಯಕ 'ನಾರ್ತ್ ಈಸ್ಟ್ ಇಂಡಿಯಾ ಉತ್ಸವ'ದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ತೆರಳಿದ್ದರು.
ಸೆಪ್ಟೆಂಬರ್ 20 ಮತ್ತು 21 ರಂದು ಜುಬಿನ್ ಗರ್ಗ್ ಪರ್ಫಾರ್ಮನ್ಸ್ ನೀಡಬೇಕಿತ್ತು. ಸ್ಕೂಬಾ ಡೈವಿಂಗ್ ವೇಳೆ ಉಸಿರಾಟದ ಸಮಸ್ಯೆಯಿಂದ ಗರ್ಗ್ ಸಮಸ್ಯೆ ಎದುರಿಸಿದ್ದರು. ಅವರನ್ನು ಸಮುದ್ರದಿಂದ ಹೊರಗೆ ಕರೆತಂದು ರಕ್ಷಿಸಲಾಯಿತು. ತಕ್ಷಣವೇ ಸಿಪಿಆರ್ ನೀಡಿದ್ದರು. ಬಳಿಕ ಸಿಂಗಾಪುರ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಭಾರತೀಯ ಕಾಲಮಾನ ಮಧ್ಯಾಹ್ನ 2:30 ರ ಸುಮಾರಿಗೆ ಗರ್ಗ್ ನಿಧನರಾದರು ಎಂದು ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್ ಪ್ರತಿನಿಧಿ ಅನುಜ್ ಕುಮಾರ್ ಬೊರುವಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಸ್ಸಾಮಿ, ಬೆಂಗಾಲಿ ಮತ್ತು ಹಿಂದಿ ಭಾಷೆಯ ಹಲವು ಸಿನಿಮಾಗಳಿಗೆ ಜುಬಿನ್ ಗರ್ಗ್ ಹಾಡಿದ್ದಾರೆ. 2022ರಲ್ಲಿ, ದಿಬ್ರುಗಢದ ರೆಸಾರ್ಟ್‌ನಲ್ಲಿ ಬಿದ್ದು ಪ್ರಜ್ಞಾಹೀನರಾಗಿದ್ದರಿಂದ ಜುಬಿನ್ ಗರ್ಗ್ ಅವರ ತಲೆಗೆ ಪೆಟ್ಟಾಗಿತ್ತು. ಅವರಿಗೆ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಏರ್ ಆಂಬ್ಯುಲೆನ್ಸ್ ಮೂಲಕ ಗುವಾಹಾಟಿ ಕರೆದೊಯ್ಯಲಾಗಿತ್ತು. 'ಗ್ಯಾಂಗ್‌ಸ್ಟರ್' ಚಿತ್ರದ 'ಯಾ ಅಲಿ' ಹಾಡಿನ ಮೂಲಕ ಗರ್ಗ್ ಪ್ರಸಿದ್ಧಿ ಪಡೆದರು. 'ಕ್ರಿಶ್ 3' ಚಿತ್ರದ 'ದಿಲ್ ತೂ ಹಿ ಬತಾ' ಸೇರಿ ಹಲವು ಹಿಟ್ ಗೀತೆಗಳಿಗೆ ದನಿಯಾಗಿದ್ದರು.
ಜುಬಿನ್ ಗರ್ಗ್ ಅವರ ನಿಧನಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂತಾಪ ಸೂಚಿಸಿದ್ದಾರೆ. "ಗರ್ಗ್ ಅಕಾಲಿಕವಾಗಿ ಅಗಲಿದ್ದಾರೆ, ಇದು ಹೋಗುವ ವಯಸ್ಸಾಗಿರಲಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ. "ನಮ್ಮ ಪ್ರೀತಿಯ ಜುಬಿನ್ ಗರ್ಗ್ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅಸ್ಸಾಂ ಕೇವಲ ಧ್ವನಿಯನ್ನು ಕಳೆದುಕೊಂಡಿಲ್ಲ, ಆದರೆ ಒಂದು ಹೃದಯಬಡಿತವನ್ನು ಕಳೆದುಕೊಂಡಿದೆ" ಎಂದು ಅಸ್ಸಾಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶೋಕ್ ಸಿಂಘಾಲ್ ಟ್ವೀಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸೆಪ್ಟೆಂಬರ್ 16 ರಂದು, ಜುಬಿನ್ ಗರ್ಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಸಿಂಗಾಪುರ್‌ನಲ್ಲಿ ನಡೆಯುವ 4ನೇ ನಾರ್ತ್ ಈಸ್ಟ್ ಇಂಡಿಯಾ ಫೆಸ್ಟಿವಲ್‌ಗೆ ಬರಲಿದ್ದೇನೆ ಎಂದು ಘೋಷಿಸಿದ್ದರು. ಅಸ್ಸಾಮಿ ಹಾಗೂ ಹಿಂದಿ ಗೀತೆಗಳಿಗೆ ಮಾತ್ರವಲ್ಲ ದಕ್ಷಿಣದ ಕೆಲ ಸಿನಿಮಾ ಗೀತೆಗಳಿಗೂ ಗರ್ಗ್ ದನಿಯಾಗಿದ್ದರು. ಕನ್ನಡದ ಕೆಲ ಸಿನಿಮಾ ಹಾಡುಗಳನ್ನು ಹಾಡಿದ್ದರು. ಗಣೇಶ್ ನಟನೆಯ 'ಹುಡುಗಾಟ' ಚಿತ್ರದ 'ಒಮ್ಮೆಮ್ಮೆ ಹೀಗೂ ಆಗುವುದು' ಹಾಡಿಗೆ ಗರ್ಗ್ ದನಿಯಾಗಿದ್ದರು.
ಕೇರಳ ಮೂಲದ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ತಮ್ಮ ಸಿನಿಮಾಗಳಲ್ಲಿ ಜುಬಿನ್ ಗರ್ಗ್ ಅವರಿಗಾ ಹಾಡುವ ಅವಕಾಶ ಕೊಡುತ್ತಿದ್ದರು. ಗಾಯಕರಾಗಿ ಮಾತ್ರವಲ್ಲದೇ ಸಂಗೀತ ನಿರ್ದೇಶಕ ಹಾಗೂ ಗೀತ ಸಾಹಿತಿ ಆಗಿಯೂ ಗರ್ಗ್ ಗುರ್ತಿಸಿಕೊಂಡಿದ್ದರು.


Click it and Unblock the Notifications











