ಮತ್ತೊಮ್ಮೆ ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ ರಿಯಾ ಚಕ್ರವರ್ತಿ ಮತ್ತು ಸಹೋದರ
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಮತ್ತು ಸಹೋದರ ಚಕ್ರವರ್ತಿ ಸೋಮವಾರ ಮುಂಬೈನ ಎನ್‌ಸಿಬಿ ಕಚೇರಿ ಬಳಿ ಕಾಣಿಸಿಕೊಂಡಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ರಿಯಾ ಮತ್ತು ಸಹೋದರ ಬಂಧನವಾಗಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಇದೀಗ, ಮತ್ತೊಮ್ಮೆ ಎನ್‌ಸಿಬಿ ಕಚೇರಿಗೆ ಹೋಗಿರುವುದು ಕುತೂಹಲ ಮೂಡಿಸಿದೆ.
ಸೋಮವಾರ ಬೆಳಗ್ಗೆ ತಂದೆ ಇಂದ್ರಜಿತ್ ಚಕ್ರವರ್ತಿ ಜೊತೆ ರಿಯಾ ಮತ್ತು ಶೌವಿಕ್ ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಕ್ಲಿಕ್ಕಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಿಯಾ ಚಕ್ರವರ್ತಿಗೆ ಜಾಮೀನು ನೀಡುವ ವೇಳೆ ವಿಧಿಸಿದ್ದ ಷರತ್ತಿನ ಅನ್ವಯ ಪ್ರತಿ ತಿಂಗಳು ಮೊದಲ ಸೋಮವಾರ ಎನ್‌ಸಿಬಿ ಕಚೇರಿಗೆ ಆಗಮಿಸಿ ಸಹಿ ಮಾಡಬೇಕು. ಆರು ತಿಂಗಳ ಕಾಲ ಇದು ಮುಂದುವರಿಸಬೇಕು ಎಂದು ಸೂಚಿಸಲಾಗಿತ್ತು.

ಬೈಕುಲ್ಲಾ ಜೈಲಿನಲ್ಲಿ ಒಂದು ತಿಂಗಳು ವಾಸವಿದ್ದ ರಿಯಾ ಚಕ್ರವರ್ತಿಗೆ ಅಕ್ಟೋಬರ್ ತಿಂಗಳಲ್ಲಿ ಜಾಮೀನು ಸಿಕ್ಕಿತ್ತು, ಬಾಂಬೆ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಜೈಲಿನಿಂದ ಹೊರಬಂದ ಬಳಿಕ ರಿಯಾ ಚಕ್ರವರ್ತಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಭಾನುವಾರವಷ್ಟೇ ಸಹೋದರ ಶೌವಿಕ್ ಜೊತೆ ರಿಯಾ ಹೊರಗೆ ಬಂದಿದ್ದರು. ಈ ವೇಳೆ ಫೋಟೋಗಳು ವೈರಲ್ ಆಗಿತ್ತು. ಸೋಮವಾರ ಎನ್‌ಸಿಬಿ ಕಚೇರಿಗೆ ಆಗಮಿಸಿದ್ದಾರೆ. ಜಾಮೀನು ಪಡೆದ ಮೇಲೆ ಎನ್‌ಸಿಬಿ ಕಚೇರಿಯಲ್ಲಿ ಮೊದಲ ಸಲ ಕಾಣಿಸಿಕೊಂಡಿದ್ದಾರೆ.
ಇನ್ನು ಇತ್ತೀಚಿಗಷ್ಟೆ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಚಿತ್ರ ನಿರ್ದೇಶಕ-ನಿರ್ಮಾಪಕ ರೂಮಿ ಜಾಫೇರಿ, ರಿಯಾ ಅವರು 2021ರಲ್ಲಿ ಕಂಬ್ಯಾಕ್ ಮಾಡಲಿದ್ದಾರೆ ಎಂದು ಹೇಳಿದ್ದರು.
ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ರಿಯಾ ಚಕ್ರವರ್ತಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಸುಶಾಂತ್ ಪ್ರೇಯಸಿ ಎಂಬ ಕಾರಣಕ್ಕೆ ಟೀಕೆಗೆ ಸಹ ಗುರಿಯಾಗಿದ್ದರು. ಇದೇ ಪ್ರಕರಣದಲ್ಲಿ ಡ್ರಗ್ಸ್ ಆಯಾಮವೂ ಬೆಳಕಿಗೆ ಬಂದಿತ್ತು. ಡ್ರಗ್ಸ್ ಸಂಬಂಧಿತ ಆರೋಪದಲ್ಲಿ ಬಂಧನ ಸಹ ಆಗಿದ್ದರು.


Click it and Unblock the Notifications











