ಮಿಸ್ ಯೂನಿವರ್ಸ್ ಇಂಡಿಯಾ- 2024 ಪ್ರಶಸ್ತಿ ಗೆದ್ದ ರಿಯಾ ಸಿಂಘಾ; ಈಕೆಯ ಹಿನ್ನಲೆ ಏನು?
ಗುಜರಾತ್ ಮೂಲದ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಆಕೆ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಭಾನುವಾರ ರಾಜಸ್ಥಾನದ ಜೈಪುರದಲ್ಲಿ ನಡೆದ ಮಿಸ್ ಯೂನಿವರ್ಸ್ ಇಂಡಿಯಾ 2024 ರ ಗ್ರ್ಯಾಂಡ್ ಫಿನಾಲೆಯಲ್ಲಿ ರಿಯಾ ಗೆದ್ದು ಬೀಗಿದ್ದಾರೆ.
ಮಿಸ್ ಯೂನಿವರ್ಸ್ ಇಂಡಿಯಾ 2024 ಆಗಿ ಹೊರ ಹೊಮ್ಮಿರುವ ಬಗ್ಗೆ ರಿಯಾ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಥ್ರಿಲ್ ಆಗಿರುವ ಆಕೆ ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದಾರೆ. "ನಾನು ಇವತ್ತು ಮಿಸ್ ಯೂನಿವರ್ಸ್ ಇಂಡಿಯಾ 2024 ಟೈಟಲ್ ಗೆದ್ದಿದ್ದೇನೆ. ನಾನು ಇದಕ್ಕೆ ಕೃತಜ್ಞಳು. ನಾನು ಈ ಹಂತಕ್ಕೆ ಏರಲು ಸಾಕಷ್ಟು ಪರಿಶ್ರಮಪಟ್ಟಿದ್ದೇನೆ. ನಾನು ಈ ಪ್ರಶಸ್ತಿಗೆ ಅರ್ಹರು ಎಂದುಕೊಂಡಿದ್ದೇನೆ. ಈ ಹಿಂದಿನ ವಿತೇತರಿಂದ ನಾನು ಪ್ರೇರಣೆಗೊಂಡು ಇಲ್ಲಿಯವರೆಗೆ ಬಂದಿದ್ದೇನೆ" ಎಂದಿದ್ದಾರೆ.

ಇನ್ನು ಸ್ಪರ್ಧೆಯಲ್ಲಿ ಪ್ರಾಂಜಲ್ ಪ್ರಿಯಾ ಮೊದಲ ರನ್ನರ್ ಅಪ್ ಆಗಿದ್ದರೆ, ಛಾವಿ ವರ್ಗ್ ಮೂರನೇ ಸ್ಥಾನ ಪಡೆದರು. ನಾಲ್ಕನೇ ಸ್ಥಾನವನ್ನು ಸುಶ್ಮಿತಾ ರಾಯ್ ಹಾಗೂ 5ನೇ ಸ್ಥಾನಕ್ಕೆ ರೂಪ್ಫುಝಾನೊ ವಿಸೊ ತೃಪ್ತಿಪಟ್ಟಿದ್ದಾರೆ. ಈ ಬಾರಿ ಸ್ಪರ್ಧೆಯಲ್ಲಿ 51 ಮಂದಿ ಯುವತಿಯರು ಫೈನಲ್ ಹಂತಕ್ಕೆ ಏರಿದ್ದರು. ಅವರನ್ನೆಲ್ಲಾ ಹಿಂದಿಕ್ಕಿ 19 ವರ್ಷದ ಗುಜರಾತ್ ಪೋರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ರಿಯಾಗೆ ಮಾಜಿ ಮಿಸ್ ಯೂನಿವರ್ಸ್ ಊರ್ವಶಿ ರೌಟೇಲಾ ಕಿರೀಟ ತೊಡಿಸಿದರು.
ಗುಜರಾತಿನ ಅಹಮದಾಬಾದ್ ಹುಡುಗಿ ರಿಯಾ ಸಿಂಘಾ ಮಾಡೆಲ್ ಹಾಗೂ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಉದ್ಯಮಿ ರೀಟಾ ಸಿಂಘಾ ಮತ್ತು ಬ್ರಿಜೇಶ್ ಸಿಂಘಾ ದಂಪತಿಯ ಪುತ್ರಿ ಈಕೆ. ರಿಯಾ ಗುಜರಾತ್‌ನ ಜಿಎಲ್‌ಎಸ್ ವಿಶ್ವವಿದ್ಯಾಲಯದ ರಾಯಭಾರಿ ಹಾಗೂ ವಿದ್ಯಾರ್ಥಿ ಆಗಿದ್ದಾರೆ. 4 ವರ್ಷಗಳ ಹಿಂದೆ ಚೆಲುವೆ ಮಾಡೆಲಿಂಗ್ ಆರಂಭಿಸಿದ್ದಳು. ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದ ಮಿಸ್ ಟೀನ್ ಯೂನಿವರ್ಸ್ 2023 ಸ್ಪರ್ಧೆಯಲ್ಲಿ ರಿಯಾ ಭಾರತವನ್ನು ಪ್ರತಿನಿಧಿಸಿದಳು. 25 ಸ್ಪರ್ಧಿಗಳಿಗೆ ಪೈಪೋಟಿ ಕೊಟ್ಟು 6ನೇ ಸ್ಥಾನ ಪಡೆದಿದ್ದರು.
ಕಳೆದ ವರ್ಷ ಮುಂಬೈನಲ್ಲಿ ನಡೆದ ಜಾಯ್ ಟೈಮ್ಸ್ ಫ್ರೆಶ್ ಫೇಸ್ ಸೀಸನ್ 14 ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿ ರಿಯಾ ರನ್ನರ್ ಅಪ್ ಆಗಿದ್ದರು. ಸದ್ಯ ಗುಜರಾತಿನ ಜಿಎಲ್‌ಎಸ್ ವಿಶ್ವವಿದ್ಯಾಲಯಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಚೆಲುವೆ ಈ ಬಾರಿ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡವರು ಚಿತ್ರರಂಗಕ್ಕೆ ಬರುವುದು ಹೊಸತೇನು ಅಲ್ಲ. ಐಶ್ವರ್ಯ ರೈ, ಸುಶ್ಮಿತಾ ಸೇನ್ ಸೇರಿದಂತೆ ಹಲವು ಹೀಗೆ ಬಣ್ಣದ ಲೋಕಕ್ಕೆ ಬಂದು ಕಮಾಲ್ ಮಾಡಿದ್ದಾರೆ. ರಿಯಾ ಕೂಡ ಮುಂದಿನ ದಿನಗಳಲ್ಲಿ ಬಾಲಿವುಡ್ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಸ್ಟಾರ್ ನಟರ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ.


Click it and Unblock the Notifications











