'ಟಾಕ್ಸಿಕ್' ಅಲ್ಲ, ಈ ಕನ್ನಡ ಸಿನಿಮಾ 'ಪುಷ್ಪ'-2 ಹಿಂದಿ ದಾಖಲೆ ಮುರಿಯಲಿದೆ!
ಬಾಕ್ಸಾಫೀಸ್‌ನಲ್ಲಿ 'ಪುಷ್ಪ'-2 ದರ್ಬಾರ್ ಜೋರಾಗಿದೆ. ಮುಖ್ಯವಾಗಿ ಹಿಂದಿ ವರ್ಷನ್ ಕಲೆಕ್ಷನ್ ಹುಬ್ಬೇರಿಸುವಂತಿದೆ. ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಸಿನಿಮಾ ಮುನ್ನುಗ್ಗುತ್ತಿದೆ. ಸೌತ್ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಇತ್ತೀಚೆಗೆ ಸದ್ದು ಮಾಡ್ತಿವೆ. 'ಪುಷ್ಪ'-2 ದಾಖಲೆ ಕೂಡ ಬಹಳ ದಿನ ಉಳಿಯಲ್ಲ ಎನ್ನುವ ಚರ್ಚೆ ನಡೀತಿದೆ.
ಮಿಶ್ರ ಪ್ರತಿಕ್ರಿಯೆ ನಡುವೆಯೂ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. 3 ವರ್ಷಗಳ ಹಿಂದೆ ಬಂದಿದ್ದ ' ಪುಷ್ಪ' ಸಿನಿಮಾ ಹಿಟ್ ಆಗಿತ್ತು. ಹಾಗಾಗಿ ಸಹಜವಾಗಿಯೇ ಸೀಕ್ವೆಲ್ ಬಗ್ಗೆ ನಿರೀಕ್ಷೆ ಇತ್ತು. ಅದಕ್ಕೆ ತಕ್ಕಂತೆ ಮೂಡಿ ಬಂದಿರುವ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಸಿನಿಮಾ ಗಳಿಕೆ ಕಮ್ಮಿ ಆಗಿದೆ.

ಮೊದಲ 5 ದಿನಕ್ಕೆ 'ಪುಷ್ಪ'-2 ಸಿನಿಮಾ 922 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಅದರಲ್ಲಿ ಬರೀ ಹಿಂದಿ ವರ್ಷನ್ 339 ಕೋಟಿ ರೂ. ಕಲೆಕ್ಷನ್ ಆಗಿದೆ. ಗುರುವಾರ 72 ಕೋಟಿ ರೂ., ಶುಕ್ರವಾರ 59 ಕೋಟಿ ರೂ, ಶನಿವಾರ 74 ಕೋಟಿ ರೂ. ಹಾಗೂ ಭಾನುವಾರ ಮತ್ತು ಸೋಮವಾರ ಕ್ರಮವಾಗಿ 86 ಕೋಟಿ ರೂ, 48 ಕೋಟಿ ರೂ. ಗಳಿಕೆ ಕಂಡಿದೆ.
'ಪುಷ್ಪ'-2 ಆರ್ಭಟ ಬಾಲಿವುಡ್ ಬಡಾ ಸ್ಟಾರ್‌ಗಳಿಗೂ ಶಾಕ್ ತಂದಿರುವುದು ಸುಳ್ಳಲ್ಲ. 'ಬಾಹುಬಲಿ-2' ಹಾಗೂ 'ಕೆಜಿಎಫ್-2' ಚಿತ್ರದ ಕೆಲ ದಾಖಲೆಗಳನ್ನು 'ಪುಷ್ಪ'-2 ಹಿಂದಿಕ್ಕಿದೆ. ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಿರುವುದೇ ಇದಕ್ಕೆ ಕಾರಣ ಎನ್ನುವ ವಾದವೂ ಇದೆ.

'ಬಾಹುಬಲಿ-2' ಮತ್ತು 'ಕೆಜಿಎಫ್-2' ಚಿತ್ರಗಳಿಗೆ ಹೋಲಿಸಿದರೆ 'ಪುಷ್ಪ'-2 ಸಪ್ಪದೆ ಎನಿಸುತ್ತದೆ. ಅಲ್ಲು ಅರ್ಜುನ್ ನಟನೆ ಮಾತ್ರ ಮೋಡಿ ಮಾಡುವಂತಿದೆ. ಒಳ್ಳೆ ಕಥೆ ಇಲ್ಲದೇ ಬರೀ ಎಲಿವೇಷನ್ ಸೀನ್‌ಗಳನ್ನು ಸೇರಿಸಿ ಸುಕುಮಾರ್ ಸಿನಿಮಾ ಮಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. 'ಪುಷ್ಪ' ಸೀಕ್ವೆಲ್ ಆಗಿರುವುದರಿಂದ ಜನ ಚಿತ್ರಮಂದಿರದಲ್ಲಿ ನೋಡಲು ಉತ್ಸಾಹ ತೋರಿಸುತ್ತಿದ್ದಾರೆ.
ಒಂದಕ್ಕಿಂತ ಒಂದು ದೊಡ್ಡ ಸಿನಿಮಾ ಬಂದೇ ಬರುತ್ತದೆ. 'ಬಾಹುಬಲಿ'-2 ದಾಖಲೆ ಮುರಿಯುವುದು ಕಷ್ಟ ಎನ್ನುವ ಮಾತಿತ್ತು. ಆದರೆ 'ಪುಷ್ಪ'-2 ಅದನ್ನು ಸುಳ್ಳಾಗಿಸಿದೆ. ಇದೀಗ ಅಲ್ಲು ಅರ್ಜುನ್ ಸಿನಿಮಾ ದಾಖಲೆಯನ್ನು ಮುರಿಯುವ ಸಿನಿಮಾ ಬರಲಿದೆ. ಕನ್ನಡದ 'ಕಾಂತಾರ'-1 ಚಿತ್ರವೇ ಆ ಸಾಧನೆ ಮಾಡುತ್ತದೆ ಎಂದು ಹಿಂದಿ ಸಿನಿರಸಿಕರು ಹೇಳುತ್ತಿದ್ದಾರೆ.
ಎರಡು ವರ್ಷಗಳ ಹಿಂದೆ ಬಂದಿದ್ದ 'ಕಾಂತಾರ' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ರಿಷಬ್ ಶೆಟ್ಟಿ ನಟನೆ, ನಿರ್ದೇಶನಕ್ಕೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದರು. 'ಪುಷ್ಪ'-1ಗಿಂತ 'ಕಾಂತಾರ' ಸಿನಿಮಾ ಕ್ರೇಜ್ ಜೋರಾಗಿತ್ತು. ಅದೇ ಕಾರಣಕ್ಕೆ ಪ್ರೀಕ್ವೆಲ್ ಬಗ್ಗೆ ಅಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಅದನ್ನು ಎನ್‌ಕ್ಯಾಶ್ ಮಾಡಿಕೊಂಡರೆ 'ಪುಷ್ಪ'-2 ದಾಖಲೆ ಮುರಿಯವುದು ಸುಲಭ.
ಮುಂದಿನ ವರ್ಷ ಅಕ್ಟೋಬರ್ 2ಕ್ಕೆ 'ಕಾಂತಾರ ಚಾಪ್ಟರ್-1' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಆಗಿದೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸಿನಿಮಾ ನಿರ್ಮಾಣ ಆಗುತ್ತಿದೆ. ಮುಖ್ಯವಾಗಿ ಕರಾವಳಿಯ ಆಚರಣೆಗಳು ಪಂಜುರ್ಲಿ ದೈವ ಹಾಗೂ ಗುಳಿಗ ಸನ್ನಿವೇಶಗಳು 'ಕಾಂತಾರ' ಚಿತ್ರದಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಹಿಂದಿ ಪ್ರೇಕ್ಷಕರು ಅದನ್ನು ನೋಡಿ ಭಾವಪರವಶರಾಗಿದ್ದರು. ಹಾಗಾಗಿ ಪ್ರೀಕ್ವೆಲ್ ಬಾಲಿವುಡ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವುದು ಖಚಿತ.
ತಮ್ಮ ಹುಟ್ಟೂರಲ್ಲಿ ಭಾರೀ ಸೆಟ್ ಹಾಕಿ ರಿಷಬ್ ಶೆಟ್ಟಿ 'ಕಾಂತಾರ-1' ಚಿತ್ರೀಕರಣ ನಡೆಸುತ್ತಿದ್ದಾರೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಕೂಡ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಮೈನವಿರೇಳಿಸುವ ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿ ಇರಲಿದೆ. ಇನ್ನು ಪಾತ್ರಕ್ಕಾಗಿ ರಿಷಬ್ ಶೆಟ್ಟಿ ಬಹಳ ಹೋಮ್ ವರ್ಕ್ ಮಾಡಿದ್ದಾರೆ. ಕುದುರೆ ಸವಾರಿ, ಕಳರಿಪಯಟ್ಟು ಕಲಿತು ನಟಿಸುತ್ತಿದ್ದಾರೆ. ಹಾಗಾಗಿ 'ಕಾಂತಾರ-1' ಸಿನಿಮಾ 'ಪುಷ್ಪ'-2 ಹಿಂದಿ ದಾಖಲೆ ಮುರಿಯುವುದು ಗ್ಯಾರೆಂಟಿ ಎಂದು ಚರ್ಚೆ ನಡೀತಿದೆ.


Click it and Unblock the Notifications











