ನ್ಯಾಷನಲ್ ಕ್ರಶ್ Vs ನ್ಯಾಷನಲ್ ಸ್ಟಾರ್ ; ರಿಷಬ್‌ಗೆ ರಶ್ಮಿಕಾ ಸವಾಲು - ಕಾಂತಾರ 1 ಅಬ್ಬರಕ್ಕೆ ಬ್ರೇಕ್ ಹಾಕುತ್ತಾ ಥಾಮ?
08 ವರ್ಷದ ಹಿಂದೆ ತೆರೆಗೆ ಬಂದ ''ಕಿರಿಕ್ ಪಾರ್ಟಿ'' ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಬರೆದಿತ್ತು. ರಿಷಬ್, ಸಂಯುಕ್ತಾ ಹೆಗ್ಡೆ, ಚಂದನ್ ಆಚಾರ್, ಪ್ರಮೋದ್ ಶೆಟ್ಟಿ, ಸೇರಿ ಅನೇಕರ ಬದುಕಿಗೆ ಭದ್ರ ಬುನಾದಿಯನ್ನು ಹಾಕಿತ್ತು. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ನ್ಯಾಷನಲ್ ಕ್ರಶ್ ಎಂಬ ಬಿರುದನ್ನು ನೀಡಿದ್ದು ಇದೇ ಚಿತ್ರ.
ಆದರೆ, ದುರ್ದೈವ. ಮೊದಲ ಚಿತ್ರದಲ್ಲಿಯೇ ಸಿಕ್ಕ ಅಪಾರವಾದ ಜನಪ್ರಿಯತೆಯಿಂದ ರಶ್ಮಿಕಾ ಮಂದಣ್ಣ ಕನ್ನಡವನ್ನು ಮರೆತರು. ಹತ್ತಿದ ಏಣಿಯನ್ನು ಮತ್ತು ನಂಬಿದವರನ್ನು ಎಡಗಾಲಿನಿಂದ ಒದ್ದು ಪರಭಾಷೆಯ ಪಾಲಾದರು. ಆ ನಂತರ ಬಹುಬೇಡಿಕೆಯ ನಾಯಕಿಯಾಗಿ ಕೂಡ ಬೆಳೆದರು.

ಹೀಗೆ ರಶ್ಮಿಕಾ ಮಂದಣ್ಣ ಬದುಕಿಗೆ ತಿರುವನ್ನು ನೀಡಿದ ''ಕಿರಿಕ್ ಪಾರ್ಟಿ'' ಚಿತ್ರ ರಿಷಬ್ ಶೆಟ್ಟಿ ಅವರಲ್ಲೊಬ್ಬ ಅತ್ಯುತ್ತಮ ನಿರ್ದೇಶಕ ಮತ್ತು ಕಥೆಗಾರನಿದ್ದಾನೆ ಎನ್ನುವುದನ್ನು ಕೂಡ ನಿರೂಪಿಸಿತ್ತು. ನಿರ್ದೇಶಕನಾಗಿ ರಿಷಬ್ ಮೊದಲ ಬಾರಿ ಗೆದ್ದಿದ್ದು ಇದೇ ಚಿತ್ರದಿಂದ.
ಇಂಥಾ ರಿಷಬ್ ಶೆಟ್ಟಿಗೆ ಸದ್ಯ ರಶ್ಮಿಕಾ ಮಂದಣ್ಣ ಬಾಕ್ಸಾಫೀಸ್‌ನಲ್ಲಿ ಸವಾಲು ಹಾಕಲಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ಭಾರತದಲ್ಲಿ ''ಕಾಂತಾರ''ದ ಅಲೆ ಎದ್ದಿದೆ. ಎರಡು ವಾರ ಆದರೂ ಕೂಡ ''ಕಾಂತಾರ-1'' ಕ್ರೇಜ್ ಕಡಿಮೆಯಾಗಿಲ್ಲ. ಬದಲಿಗೆ ಇನ್ನೂ ಹೆಚ್ಚಾಗುತ್ತಿದೆ. ಕೇವಲ ಹಿಂದಿಯಲ್ಲಿಯೇ ₹ 161.17 ಕೋಟಿಯನ್ನು ಚಿತ್ರ ಕೊಳ್ಳೆ ಹೊಡೆದಿದೆ.
ಇನ್ನು ಬಾಕ್ಸಾಫೀಸ್‌ನಲ್ಲಿ ಮೈದಾನ ಕೂಡ ಖಾಲಿ ಇದೆ. ''ಕಾಂತಾರ''.. ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ''.. ಮತ್ತು ''ಇಡ್ಲಿ ಕಡೇ'' ಚಿತ್ರಗಳನ್ನು ಹೊರತು ಪಡಿಸಿದರೆ ಬೇರೆ ಯಾವ ದೊಡ್ಡ ಚಿತ್ರ ಬಿಡುಗಡೆಯಾಗಿಲ್ಲ. ''ಕಾಂತಾರ''ದ ಗಳಿಕೆ ಹೆಚ್ಚಾಗಲು ಇದು ಕೂಡ ಪ್ರಮುಖವಾದ ಕಾರಣ.
ಆದರೆ ಈಗ ''ಕಾಂತಾರ-1'' ಚಿತ್ರದ ಈ ನಾಗಾಲೋಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಯಾಕೆಂದರೆ ದೀಪಾವಳಿ ಹಬ್ಬದ ಪ್ರಯುಕ್ತ ಬೇರೆ ಬೇರೆ ಭಾಷೆಗಳಲ್ಲಿ ಚಿತ್ರಗಳು ಬಿಡುಗಡೆಯಾಗುತ್ತಿವೆ. ಆ ಪೈಕಿ ರಶ್ಮಿಕಾ ಮಂದಣ್ಣ ಅಭಿನಯದ ''ಥಾಮ'' ಚಿತ್ರ ಕೂಡ ಒಂದು. ಆಯುಷ್ಮಾನ್ ಖುರಾನ ಈ ಚಿತ್ರದ ನಾಯಕ.

ಇನ್ನು ಈ ಚಿತ್ರವನ್ನು ನಿರ್ಮಾಣ ಮಾಡಿರುವುದು ದಿನೇಶ್ ವಿಜ್ಜನ್. ''ಥಾಮ'' ಇವರದ್ದೇ ಆದ ಹಾರರ್ ಯುನಿವರ್ಸ್ (''ಸ್ತ್ರೀ'' .. ''ಸ್ತ್ರೀ 2''.. ''ಮುಂಜ್ಯಾ''.. ''ಭೇಡಿಯಾ'' )ನ ಭಾಗ. ಈ ಹಿನ್ನೆಲೆ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಗಳಿವೆ. ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಹಿಂದೆಂದಿಗಿಂತಲೂ ತುಸು ಹೆಚ್ಚೇ ಮಾದಕವಾಗಿ ಕಾಣಿಸಿಕೊಂಡಿದ್ದಾರೆ.
ನಿಜಾ.. ಚಿತ್ರದ ಟ್ರೇಲರ್ ನಿರೀಕ್ಷೆಯ ಪರೀಕ್ಷೆಯಲ್ಲಿ ಪಾಸಾಗದಿದ್ದರೂ ಕೂಡ ಚಿತ್ರ ಗೆಲ್ಲುತ್ತೆ ಎನ್ನುವ ವಿಶ್ವಾಸ ಬಾಲಿವುಡ್ ಪಂಡಿತರಿಗಿದೆ. ಈ ವಿಶ್ವಾಸದಲ್ಲಿಯೇ ''ಕಾಂತಾರ-ಚಾಪ್ಟರ್ 1'' ಎದುರು ''ಥಾಮ'' ಚಿತ್ರವನ್ನು ಹಿಂದಿ ಉದ್ಯಮ ಕಣಕ್ಕಿಳಿಸುತ್ತಿದೆ. ಹೀಗಾಗಿ ಇದೀಗ ''ಕಾಂತಾರ'' ಚಿತ್ರದ ವೇಗಕ್ಕೆ ''ಥಾಮ'' ಕಡಿವಾಣ ಹಾಕುತ್ತಾ ಎನ್ನುವ ಕುತೂಹಲ ಚಿತ್ರ ಪಂಡಿತರನ್ನು ಕಾಡುತ್ತಿದೆ.
ಇನ್ನು ರಶ್ಮಿಕಾ ಮಂದಣ್ಣ ಮತ್ತು ರಿಷಬ್ ಶೆಟ್ಟಿ ಇರುವ ವೈಮನಸ್ಸು..ಮನಸ್ತಾಪದ ಕಥೆ ಎಲ್ಲರಿಗೆ ಗೊತ್ತಿರುವಂತಹದ್ದೇ. ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಬಗ್ಗೆ ಸಂದರ್ಶನವೊಂದರಲ್ಲಿ ಲಘುವಾಗಿ ಮಾತನಾಡಿದ್ದರು ರಶ್ಮಿಕಾ. ಈ ಕಾರಣಕ್ಕೆ ''ಕಾಂತಾರ 1'' ಮತ್ತು ''ಥಾಮಾ'' ಮುಖಾಮುಖಿಯ ಫಲಿತಾಂಶದ ಮೇಲಿಗ ಅನೇಕರ ಕಣ್ಣಿದೆ. ''ಕಾಂತಾರ''ದ ಅಬ್ಬರದ ಎದುರು ಹೇಳ ಹೆಸರಿಲ್ಲದಂತೆ ಕರಣ್ ಜೋಹರ್ ನಿರ್ಮಾಣದ ''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಕಾಣೆಯಾದಂತೆ ''ಥಾಮ'' ಕೂಡ ಕಣ್ಮರೆಯಾಗುತ್ತಾ ಎನ್ನುವ ಪ್ರಶ್ನೆ ಕೂಡ ಬಣ್ಣದ ಲೋಕದಲ್ಲಿ ಹಲವರಲ್ಲಿದೆ. ಸ್ಪಷ್ಟವಾದ ಉತ್ತರ ಈ ದೀಪಾವಳಿ ಹಬ್ಬದಂದು (ಅಕ್ಟೋಬರ್ 21) ಸಿಗಲಿದೆ.


Click it and Unblock the Notifications











