ಗೆದ್ದ ಮೇಲೆ ಎಣ್ಣೆ ಹೊಡೆದು ಶಿವಾಜಿಗೆ ಅವಮಾನ ಮಾಡಿದ್ರಾ ರಿತೇಶ್ ದೇಶಮುಖ್ ? ಕ್ಷಮೆ ಕೇಳಿದ್ದೇಕೆ..?
ಸಂಭ್ರಮ ಮತ್ತು ವಿವಾದ ಚಿತ್ರರಂಗದ ತಾರೆಯರ ಬದುಕಿನಲ್ಲಿರುವ ಒಂದೇ ನಾಣ್ಯದ ಎರಡು ಮುಖಗಳು. ಜನಪ್ರಿಯತೆಯ ಹಿಂದೆಯೇ ಇಲ್ಲಿ ವಿವಾದ ಬೆನ್ನು ಹತ್ತುತ್ತೆ. ಗೆಲುವು ಜವಾಬ್ಧಾರಿಯನ್ನು ಹೆಚ್ಚಿಸುತ್ತೆ. ಇನ್ನು ಹೇಳಿ ಕೇಳಿ ಇದು 5G ಯುಗ.ಈ ಯುಗದಲ್ಲಿ ಇಂಟರ್ ನೆಟ್ ಮೂಲಕ ಹಲವರ ಕಣ್ಣು ಚಿತ್ರರಂಗದವರ ಮೇಲಿರುತ್ತೆ.
ಒಂದು ನಡೆ.. ಒಂದು ನುಡಿ.. ಫಿಲ್ಟರ್ ಇಲ್ಲದ ಒಂದು ವಿಡಿಯೋ.. ಯೋಚನೆ ಮಾಡಲಾರದೆ ಹಂಚಿಕೊಂಡ ಒಂದು ಫೋಟೊ.. ಜನಾಕ್ರೋಶದ ಯಾತ್ರೆ ಶುರುವಾಗಲು ಇಷ್ಟೇ ಸಾಕು. ಉದಾಹರಣೆಗೆ ರಿತೇಶ್ ದೇಶಮುಖ್ ಅವರ ವಿಚಾರ ಮತ್ತು ವಿವಾದವನ್ನೇ ತೆಗೆದುಕೊಳ್ಳಿ.

ಹೌದು, ಪ್ರತಿಭೆಯ ಕಣಜವಾಗಿದ್ದರು ಕೂಡ ಆರಕ್ಕೇರದ ಮೂರಕ್ಕಿಳಿಯದ ಬಾಲಿವುಡ್ ಸ್ಟಾರ್ ಗಳಲ್ಲಿ ರಿತೇಶ್ ದೇಶಮುಖ್ ಕೂಡ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ತನ್ನ ಸ್ವಂತ ಬಲದಿಂದ ಇಲ್ಲಿಯವರೆಗೆ ಒಂದೇ ಒಂದು ಬ್ಲಾಕ್ ಬಸ್ಟರ್ ಚಿತ್ರವನ್ನು ರಿತೇಶ್ ನೀಡಿಲ್ಲ. ಹಾಗಂಥ ರಿತೇಶ್ ಸೋಲನ್ನು ಒಪ್ಪಿಕೊಂಡಿಲ್ಲ. ಬದಲಿಗೆ ಪ್ರಯತ್ನ ಮಾಡುತ್ತಿದ್ದಾರೆ. ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಗೆಲ್ಲುತ್ತಿದ್ದಾರೆ.
ಇನ್ನು ರಿತೇಶ್ ದೇಶಮುಖ್ ಕೇವಲ ಅತ್ಯುತ್ತಮ ನಾಯಕ ಮಾತ್ರ ಅಲ್ಲ. ನಿರ್ದೇಶಕ ಕೂಡ ಹೌದು.ನಿರ್ಮಾಪಕ ಕೂಡ ಹೌದು. ಈಗಾಗಲೇ "ವೇಡ್" ಎಂಬ ಬ್ಲಾಕ್ ಬಸ್ಟರ್ ಚಿತ್ರವನ್ನು ತಮ್ಮ ಪತ್ನಿ ಜೊತೆಗೂಡಿ ರಿತೇಶ್ ದೇಶಮುಖ್ ಮರಾಠಿ ಚಿತ್ರರಂಗಕ್ಕೆ ನೀಡಿದ್ದಾರೆ.
ಇಂಥಾ ರಿತೇಶ್ ದೇಶಮುಖ್ ಸದ್ಯ ಮತ್ತೊಮ್ಮೆ ''ರಾಜಾ ಶಿವಾಜಿ'' ಚಿತ್ರದ ಮೂಲಕ ಗೆದ್ದು ಬೀಗಿದ್ದಾರೆ. ಮರಾಠಿ ಚಿತ್ರರಂಗದ ಇತಿಹಾಸದಲ್ಲೇ ಹೊಸ ಚರಿತ್ರೆ ಬರೆದಿದ್ಧಾರೆ. ಅತ್ಯಧಿಕ ಹಣ ದೋಚಿದ ಮರಾಠಿ ಚಿತ್ರ ಎನ್ನುವ ಹೆಗ್ಗಳಿಕೆಗೆ ''ರಾಜಾ ಶಿವಾಜಿ'' ಪಾತ್ರವಾಗಿದೆ. ನಿರ್ಮಾಪಕನಾಗಿ ನಿರ್ದೇಶಕನಾಗಿ ಸಂಭ್ರಮ ಪಡಲು ರಿತೇಶ್‌ಗೆ ಇದಕ್ಕಿಂತ ಮತ್ತೊಂದು ಕಾರಣ ಬೇಕಿಲ್ಲ.
ಹೀಗಾಗಿಯೇ ಮೊನ್ನೆ ರಿತೇಶ್ ತಮ್ಮ ತಂಡದ ಜೊತೆ ಪಾರ್ಟಿ ಮಾಡಿದ್ದರು. ಕುಣಿದು ಕುಪ್ಪಳಿಸಿದ್ದರು. ಆದರೆ, ಆಗಲೇ ಹೇಳಿದಂತೆ ಇದು 5 G ಯುಗ. ಇಂಟರ್ ನೆಟ್ ಮೂಲಕ ಹಲವರ ಕಣ್ಣು ಇವರ ಮೇಲಿರುತ್ತೆ.

ಇದಕ್ಕೆ ಕೈಗನ್ನಡಿ ಎಂಬಂತೆ ಪಾರ್ಟಿಯಲ್ಲಿ ರಿತೇಶ್ ಹಾಕಿಕೊಂಡು ಬಂದಿದ್ದ ಟಿ ಶರ್ಟ್ ಮೇಲೆ ಹಲವರ ಕಣ್ಣು ಬಿದ್ದಿತ್ತು. ಮಹಾರಾಷ್ಟ್ರದಲ್ಲಿ ದೈವದ ಸ್ಥಾನದಲ್ಲಿರುವ ಶಿವಾಜಿ ಮಹಾರಾಜರ ಚಿತ್ರವಿರುವ ಟಿ-ಶರ್ಟ್ ಧರಿಸಿ, ರಿತೇಶ್ ದೇಶಮುಖ್ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂದು ಪುಕಾರು ಹಬ್ಬಿತು. ನಮ್ಮ ಭಾವನೆಗಳಿಗೆ ರಿತೇಶ್ ದೇಶಮುಖ್ ಧಕ್ಕೆ ತಂದಿದ್ಧಾರೆ ಎಂದು ಒಂದು ವರ್ಗ ಆಕ್ರೋಶವನ್ನು ವ್ಯಕ್ತಪಡಿಸಿತ್ತು.
ಸದ್ಯ ಇದೇ ವಿಚಾರಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ. ಕ್ಷಮೆ ಕೇಳಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಿತೇಶ್ ದೇಶಮುಖ್ ಯಾರ ಭಾವನೆಗೆ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ ಎಂದಿದ್ದಾರೆ. ನಾನು ಶಿವಾಜಿ ಮಹಾರಾಜರ ಚಿತ್ರವಿರುವ ಟೀ-ಶರ್ಟ್ ಧರಿಸಿದ್ದು ಅವರ ಘನತೆಗೆ ಧಕ್ಕೆ ತರುವ ಉದ್ದೇಶದಿಂದಲ್ಲ ಎಂದು ಹೇಳಿದ್ಧಾರೆ.
ಶಿವಾಜಿ ಮಹಾರಾಜರು ನಮ್ಮೆಲ್ಲರ ಶ್ರದ್ಧೆ, ಪ್ರೇರಣೆ ಮತ್ತು ಸ್ವಾಭಿಮಾನದ ಪ್ರತೀಕ. ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ಅತ್ಯಂತ ಗೌರವ, ಪ್ರೀತಿ ಮತ್ತು ನಿಷ್ಠೆ ಇದೆ. ಈ ಭಾವನೆ ಇಂದಿಗೂ ಅಷ್ಟೇ ಗಟ್ಟಿಯಾಗಿದೆ ಮತ್ತು ಮುಂದೆಯೂ ಎಂದೆಂದಿಗೂ ಹೀಗೆಯೇ ಇರುತ್ತೆ ಎಂದು ಹೇಳಿರುವ ರಿತೇಶ್ ದೇಶಮುಖ್, ತೆರೆಯ ಹಿಂದೆ ಮತ್ತು ಮುಂದೆ ಬೆವರು ಸುರಿಸಿದ ಪ್ರತಿಯೊಬ್ಬರನ್ನು ಒಂದೇ ಸೂರಿನಡಿ ಸೇರಿಸಿ ಸಂಭ್ರಮಾಚರಣೆ ಮಾಡುವುದು ಮಾತ್ರ ನನ್ನ ಉದ್ದೇಶವಾಗಿತ್ತು ಎಂದಿದ್ಧಾರೆ.
ನಿಮ್ಮ ಕೋಪಕ್ಕೆ ಕಾರಣವಾದ ಟಿ ಶರ್ಟ್‌ನ್ನ ನಾನು ಅವತ್ತು ಬೇಕಂತ ಹಾಕಿದ್ದಲ್ಲ ಎಂದು ಹೇಳಿರುವ ರಿತೇಶ್ ದೇಶಮುಖ್, ಪ್ರಚಾರದ ನಿಮಿತ್ತ ನಾನು ಆ ಟಿ ಶರ್ಟ್ ಹಾಕಿದ್ದೇ, ಅವತ್ತು ಕೂಡ ಪ್ರಚಾರದ ಕೆಲಸ ಮುಗಿಸಿ ನೇರವಾಗಿ ನಾನು ಆ ಕಾರ್ಯಕ್ರಮಕ್ಕೆ ಬಂದೆ, ಟಿ ಶರ್ಟ್ ಬದಲಿಸಬೇಕೆನ್ನುವುದು ನನಗೆ ಮರೆತು ಹೋಗಿತ್ತು ಎಂದು ಹೇಳಿದ್ಧಾರೆ.
ಇನ್ನು ಶಿವಾಜಿ ಮಹಾರಾಜ್ ಅವರ ಟಿ ಶರ್ಟ್ ಹಾಕಿಕೊಂಡು ರಿತೇಶ್ ದೇಶಮುಖ್ ಎಣ್ಣೆ ಕುಡಿದಿದ್ದಾರೆ ಎನ್ನುವ ಆರೋಪಕ್ಕೂ ಉತ್ತರ ನೀಡಿರುವ ರಿತೇಶ್, ನಾನು ನನ್ನ ಜೀವನದಲ್ಲೇ ಇಲ್ಲಿಯವರೆಗೆ ಮದ್ಯಪಾನ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದಿದ್ಧಾರೆ. ಆದಾಗ್ಯೂ, ನನ್ನ ಆ ಒಂದು ನಡೆಯಿಂದ ಯಾರ ಭಾವನೆಗಳಿಗಾದರೂ ಧಕ್ಕೆಯಾಗಿದ್ದರೆ, ಒಬ್ಬ ಶಿವಾಜಿ ಪ್ರೇಮಿಯಾಗಿ ನಾನು ಮನಃಪೂರ್ವಕವಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.



Click it and Unblock the Notifications