ಶಾರುಖ್ ಖಾನ್ ಮನೆಯ ಬಗ್ಗೆ ಅಪರೂಪದ ಎರಡು ವಿಷಯ ಹೇಳಿದ ನಟ ರಿತೇಶ್
ಶಾರುಖ್ ಖಾನ್ ಅದೆಷ್ಟು ಜನಪ್ರಿಯರೊ ಅವರ ಮನೆಯೂ ಅಷ್ಟೆ ಜನಪ್ರಿಯ. ಮುಂಬೈನಲ್ಲಿ ಶಾರುಖ್ ಖಾನ್‌ರ 'ಮನ್ನತ್'ಗಿಂತಲೂ ದುಬಾರಿಯಾದ ಮನೆಗಳಿವೆ, ಆದರೆ 'ಮನ್ನತ್'ನಷ್ಟು ಜನಪ್ರಿಯ ಮನೆ ಇಲ್ಲ.
ಹೌದು, ಅಂಬಾನಿಯ ವಿಶ್ವದ ಅತ್ಯಂತ ದುಬಾರಿ ಮನೆ ಅಂಟಿಲಾಗಿಂತಲೂ ಶಾರುಖ್ ಖಾನ್‌ರ 'ಮನ್ನತ್' ಹೆಚ್ಚು ಜನಪ್ರಿಯ. ಅವರ ಮನೆ ಮುಂಬೈನ ಟೂರಿಸ್ಟ್ ಸ್ಪಾಟ್‌ಗಳಲ್ಲಿ ಒಂದು ಅವರ ಮನೆಯ ಮುಂದೆ ಸದಾ ಜನಜಂಗುಳಿ, ಜನ ಜಾತ್ರೆ ಇದ್ದೇ ಇರುತ್ತದೆ.
ಶಾರುಖ್ ಖಾನ್ ಮನೆಯ ಒಳಗೆ ಹೋಗುವ ಅವಕಾಶ ಸಿಕ್ಕರೆ ಸಾಕೆಂದು ಬಾಲಿವುಡ್‌ನ ಹಲವು ನಟ-ನಟಿಯರೇ ಕಾಯುತ್ತಿರುತ್ತಾರೆ. ಶಾರುಖ್ ಖಾನ್ ಮನೆಯ ಒಳಗೆ ಏನೇನಿದೆ, ಒಳಗೆ ಹೇಗಿದೆ ಎಂಬ ಬಗ್ಗೆ ಅಭಿಮಾನಿಗಳಿಗೆ ಸದಾ ಕುತೂಹಲ. ಆದರೆ ಆ ಮನೆಯವರ ಎರಡು ಅಭ್ಯಾಸದ ಬಗ್ಗೆ ಬಾಲಿವುಡ್‌ನ ಸ್ಟಾರ್ ನಟರಲ್ಲಿ ಒಬ್ಬರಾದ ರಿತೇಶ್ ದೇಶ್‌ಮುಖ್ ಮಾತನಾಡಿದ್ದಾರೆ.

ಮನ್ನತ್ ಬಗ್ಗೆ ಹೆಚ್ಚು ಜನರಿಗೆ ತಿಳಿಯದ ವಿಷಯ!
ಸಂದರ್ಶನವೊಂದರಲ್ಲಿ ರಿತೇಶ್ ಬಳಿ, ಮನ್ನತ್ ಬಗ್ಗೆ ಹೆಚ್ಚು ಜನರಿಗೆ ತಿಳಿಯದ ಸಂಗತಿ ಹಂಚಿಕೊಳ್ಳಿ ಎಂದು ಸಂದರ್ಶಕ ಕೇಳಿದ್ದಾರೆ. ಆಗ ರಿತೇಶ್, ಶಾರುಖ್ ಖಾನ್-ಗೌರಿ ಖಾನ್ ಆಗಾಗ್ಗೆ ತಮ್ಮ ಮನೆ ಮನ್ನತ್ ನಲ್ಲಿ ಗೆಟ್ ಟು ಗೆದರ್ ಪಾರ್ಟಿಗಳನ್ನು ಮಾಡುತ್ತಿರುತ್ತಾರೆ. ಗೆಳೆಯರನ್ನು ಕರೆಯುತ್ತಿರುತ್ತಾರೆ. ಅಲ್ಲಿ ಒಳ್ಳೆಯ ಪಾರ್ಟಿ ನಡೆಯುತ್ತದೆ. ಆದರೆ ಪಾರ್ಟಿ ಮುಗಿದು ಊಟ ಮಾಡುವುದು ಬೆಳಗ್ಗಿನ ಜಾವ 3 ಗಂಟೆಗೆ'' ಎಂದಿದ್ದಾರೆ.

ಶಾರುಖ್ ಖಾನ್ ಮನೆಯವರ ಆತಿಥ್ಯ
ಒಂದೊಮ್ಮೆ ನೀವು ಯಾವುದೇ ಸಮಯದಲ್ಲಿ ಪಾರ್ಟಿಯಿಂದ ಮನೆಗೆ ಹೋಗಲು ಇಚ್ಛಿಸಿದರೆ ನಿಮ್ಮನ್ನು ಕಾರಿನ ವರೆಗೆ ಕರೆತಂದು ಕಾರಿನ ಡೋರ್ ತೆಗೆದು ಕಳಿಸುತ್ತಾರೆ. ಶಾರುಖ್ ಖಾನ್ ಹಾಗೂ ಗೌರಿ ಖಾನ್ ಇಬ್ಬರೂ ಅತಿಥಿಗಳನ್ನು ಬಹಳ ಗೌರವದಿಂದ ಕಾಣುತ್ತಾರೆ ಎಂದು ರಿತೇಶ್ ದೇಶ್‌ಮುಖ್ ತಾವು ಮನ್ನತ್‌ನಲ್ಲಿ ಪಡೆದ ಆತಿಥ್ಯದ ಬಗ್ಗೆ ಮಾತನಾಡಿದ್ದಾರೆ.

ಕಪಿಲ್ ಶರ್ಮಾ ಸಹ ಹೀಗೆಯೇ ಹೇಳಿದ್ದರು
ಈ ಬಗ್ಗೆ ಟಿವಿ ನಿರೂಪಕ ಕಪಿಲ್ ಶರ್ಮಾ ಸಹ ಒಮ್ಮೆ ಹೇಳಿದ್ದರು. ಒಮ್ಮೆ ಶಾರುಖ್ ಖಾನ್ ಮನೆ ತೋರಿಸಲೆಂದು ಅವರ ಸಂಬಂಧಿಯೊಬ್ಬರನ್ನು ಕಾರಿನಲ್ಲಿ ಕರೆದೊಯ್ದರಂತೆ. ಗೇಟ್ ತೆಗೆದಿತ್ತಾದ್ದರಿಂದ ಮನೆ ಒಳಗೆ ಹೋಗಿಬಿಟ್ಟಿದ್ದಾರೆ. ಅಲ್ಲಿ ನೋಡಿದರೆ ಪಾರ್ಟಿ ನಡೆಯುತ್ತಿತ್ತಂತೆ, ದೊಡ್ಡ ದೊಡ್ಡ ನಟರು ಅಲ್ಲಿದ್ದರಂತೆ. ಓಹ್ ಇದೊಳ್ಳೆ ಕತೆಯಾಯ್ತಲ್ಲ ಎಂದುಕೊಂಡು ಇನ್ನೇನು ಅಲ್ಲಿಂದ ಹೊರಡಬೇಕು ಎಂದುಕೊಳ್ಳುವಷ್ಟರಲ್ಲಿ ಗೌರಿ ಖಾನ್, ಕಪಿಲ್ ಶರ್ಮಾ ಅನ್ನು ನೋಡಿ ಒಳಗೆ ಕರೆದರಂತೆ. ನನಗೆ ಆಹ್ವಾನ ಇರಲಿಲ್ಲ ಎಂದರೂ ಬಿಡದೆ ಶಾರುಖ್-ಗೌರಿ ಇಬ್ಬರೂ ಅವರನ್ನು ಕರೆದು ಪಾರ್ಟಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರಂತೆ. ಬೆಳಿಗಿನ ಜಾವದ ವರೆಗೆ ಪಾರ್ಟಿ ಮಾಡಿದ ಕಪಿಲ್ ಅನ್ನು ಬೆಳಗಿನ ಜಾವ ಶಾರುಖ್ ಅವರೇ ಕಳಿಸಿಕೊಟ್ಟರಂತೆ.

ಮನ್ನತ್‌ನ ಈಗಿನ ಮೌಲ್ಯ 400 ಕೋಟಿ!
ಶಾರುಖ್ ಖಾನ್‌ರ 'ಮನ್ನತ್' ಮನೆ ಮುಂಬೈನ ಐಶಾರಾಮಿ ಹಾಗೂ ದುಬಾರಿ ಮನೆಗಳಲ್ಲಿ ಒಂದು. ಮನ್ನತ್ ಅನ್ನು ಒಟ್ಟು 27,000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಏಳು ಅಂತಸ್ಥಿನ ಹಲವು ಕೋಣೆಗಳುಳ್ಳ ಮನೆ 'ಮನ್ನತ್'. ಈ ಮನೆಯ ಈಗಿನ ಮೌಲ್ಯ ಸುಮಾರು 400 ಕೋಟಿ ರುಪಾಯಿ. ಮನೆಯ ಮುಂದೆ ಹಾಕಲಾಗಿರುವ ನೇಮ್ ಬೋರ್ಡ್‌ನ ಬೆಲೆಯೇ 25 ಲಕ್ಷ ರುಪಾಯಿ! ಸ್ವತಃ ಒಳಾಂಗಣ ವಿನ್ಯಾಸಕಿ ಆಗಿರುವ ಶಾರುಖ್ ಖಾನ್‌ರ ಪತ್ನಿ ಗೌರಿ ಖಾನ್ ಆಗಾಗ್ಗೆ ತಮ್ಮ ಮನೆಯ ವಿನ್ಯಾಸವನ್ನು ಬದಲಾಯಿಸುತ್ತಿರುತ್ತಾರೆ.


Click it and Unblock the Notifications










