ಇಂದಿನ ಸಂಗೀತ ನಿರ್ದೇಶಕರಿಗೆ ಕ್ಲಾಸಿಕ್ ಹಾಡುಗಳನ್ನು ರಚಿಸುವ ಸಾಮರ್ಥ್ಯವಿಲ್ಲ: ಆಶಾ ಭೋಂಸ್ಲೆ
ಬಾಲಿವುಡ್‌ನಲ್ಲಿ ಹಳೆಯ ಕ್ಲಾಸಿಕ್ ಹಾಡುಗಳನ್ನು ರೀಮಿಕ್ಸ್ ಮಾಡಿ ಸಿನಿಮಾಗಳಲ್ಲಿ, ಆಲ್ಬಂಗಳಲ್ಲಿ ಬಳಸುವುದು ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಇದು ಕೇಳುಗರಿಗೆ ಹಿತವೆನಿಸಬಹುದು. ಕೆಲವೊಮ್ಮೆ ಹಿರಿಯ ಗಾಯಕರಿಗೂ, ಸಂಗೀತ ಸಂಯೋಜಕರಿಗೂ ಕಿರಿಕಿರಿ ಉಂಟು ಮಾಡಬಹುದು. ಸದ್ಯಕ್ಕೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ 'ವಾಟ್ ಜುಮ್ಕಾ' ಹಾಡಿಗೆ ಹಿರಿಯ ಗಾಯಕಿಯೊಬ್ಬರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಹಿರಿಯ ಗಾಯಕಿ ಆಶಾ ಭೋಂಸ್ಲೆ ಅವರು ಕ್ಲಾಸಿಕ್ 'ಜುಮ್ಕಾ ಗಿರಾ ರೇ' ಹಾಡನ್ನು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ 'ವಾಟ್ ಜುಮ್ಕಾ' ಎಂದು ರೀಮಿಕ್ಸ್ ಮಾಡಿರುವುದರ ಕುರಿತು ಮಾತನಾಡಿದ್ದಾರೆ. ಕರಣ್ ಜೋಹರ್ ನಿರ್ದೇಶನದ ಸಿನಿಮಾದ ಈ ಹಾಡಿನಲ್ಲಿ ಆಲಿಯಾ ಭಟ್ ಮತ್ತು ರಣ್‌ವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.

ಇಂದಿನವರಿಗೆ ಕ್ಲಾಸಿಕ್‌ಗಳನ್ನು ರಚಿಸುವ ಸಾಮರ್ಥ್ಯವಿಲ್ಲ!
ಸುಮಾರು ಹನ್ನೆರಡು ಸಾವಿರ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿರುವ ಹಿರಿಯ ಗಾಯಕಿ ಆಶಾ ಭೋಂಸ್ಲೆ, ಇತ್ತೀಚಿನ ದಿನಗಳಲ್ಲಿ ಹಳೆಯ ಕ್ಲಾಸಿಕ್ ಹಿಂದಿ ಹಾಡುಗಳನ್ನು ಹೇಗೆ ರೀಮಿಕ್ಸ್ ಮಾಡಲಾಗುತ್ತಿದೆ ಎಂಬುದರ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಇಂದಿನ ಸಂಗೀತ ನಿರ್ದೇಶಕರಿಗೆ ಹೊಸ ಹಾಡುಗಳನ್ನು ರಚಿಸುವ ಸಾಮರ್ಥ್ಯ ಇದ್ದಿದ್ದರೇ ಹಳೆಯ ಕ್ಲಾಸಿಕ್ ಹಾಡುಗಳಿಗೆ ರೀಮಿಕ್ಸ್ ಮಾಡುತ್ತಿರಲಿಲ್ಲ ಎಂದಿದ್ದಾರೆ.
ಇಂಡಿಯಾ ಟುಡೇ ನಡೆಸಿದ ಸಂವಾದದಲ್ಲಿ ಮಾತನಾಡಿರುವ ಖ್ಯಾತ ಗಾಯಕಿ ಆಶಾ ಭೋಂಸ್ಲೆ, "ಸಂಗೀತ ನಿರ್ದೇಶಕರು ಅಥವಾ ಗಾಯಕರು ಹೊಸದನ್ನು ತರುವ ಸಾಮರ್ಥ್ಯ ಹೊಂದಿದ್ದರೆ...ಇಲ್ಲ ಅವರಿಗೆ ಸಾಮರ್ಥ್ಯವಿಲ್ಲ, ಅದಕ್ಕಾಗಿಯೇ ಅವರು ಹಳೆಯ ಹಾಡುಗಳನ್ನು ಮರುಸೃಷ್ಟಿಸುತ್ತಿದ್ದಾರೆ. ಉದಾಹರಣೆಗೆ, ಇಂದು ಹೊಸ ಚಿತ್ರದಲ್ಲಿ 'ಜುಮ್ಕಾ ಗಿರಾ ರೇ' ತುಂಬಾ ಚೆನ್ನಾಗಿ ಓಡುತ್ತಿದೆ. ಆದರೆ ಇದು ಹಳೆಯ ಹಾಡು" ಎಂದಿದ್ದಾರೆ.

'ಜುಮ್ಕಾ ಗಿರಾ ರೇ' ಹಾಡು 1966 ರ ಮೇರಾ ಸಾಯಾ ಚಲನಚಿತ್ರದ್ದು. ಹಾಡಿಗೆ ಮೂಲ ಸಂಯೋಜನೆಯನ್ನು ಸಂಗೀತ ನಿರ್ದೇಶಕ ಮದನ್ ಮೋಹನ್ ಮತ್ತು ಸಾಹಿತ್ಯವನ್ನು ರಾಜಾ ಮೆಹದಿ ಅಲಿ ಖಾನ್ ಬರೆದಿದ್ದಾರೆ. ಹಾಡಿಗೆ ದನಿಯಾಗಿದ್ದು ಖ್ಯಾತ ಗಾಯಕಿ ಆಶಾ ಭೋಂಸ್ಲೆ.
ಹಳೆಯ ಕ್ಲಾಸಿಕ್ ಹಾಡುಗಳ ಬಗ್ಗೆ ಮಾತನಾಡುತ್ತಾ, "ಈ ಹಾಡುಗಳಲ್ಲಿ ಸಾಹಿತ್ಯ, ಗಾಯಕರು ಮತ್ತು ಸಂಗೀತವಿದೆ. ಇದು ಎಲ್ಲದರ ಮಿಶ್ರಣ. ಅಷ್ಟೇ ಅಲ್ಲ, ನಟರು ಕೂಡ ಇದರ ಭಾಗ. ಛಾಯಾಗ್ರಾಹಕರು ಹಾಡುಗಳನ್ನು ಚೆನ್ನಾಗಿ ಚಿತ್ರೀಕರಿಸದಿದ್ದರೆ, ಹಾಡು ಪ್ರಭಾವ ಬೀರುತ್ತಿರಲಿಲ್ಲ. ಇದು ತಂಡದ ಪ್ರಯತ್ನ. ಹೀಗೆ ಒಳ್ಳೆಯ ಹಾಡನ್ನು ರಚಿಸಬೇಕಾಗುತ್ತದೆ" ಎಂದಿದ್ದಾರೆ.
ಹಳೆಯ ಕ್ಲಾಸಿಕ್‌ಗಳನ್ನು ರಚಿಸುವಾಗ ಪ್ರತಿಯೊಬ್ಬ ಕಲಾವಿದರು ಹಾಡನ್ನು ರಚಿಸುವಾಗ ತುಂಬಾ ಶ್ರಮಿಸಿದ್ದಾರೆ ಎಂದು ಹೇಳಿದ ಆಶಾ ಭೋಂಸ್ಲೆ, "ಆ ಹಾಡುಗಳಿಗೆ ಸಾಕಷ್ಟು ಶ್ರಮ ಪಡಲಾಗಿದೆ. ಗೀತರಚನೆಕಾರ ಸಂಗೀತ ನಿರ್ದೇಶಕರೊಂದಿಗೆ ಕುಳಿತುಕೊಂಡೊರುತ್ತಾರೆ. ಪ್ರತಿ ಮಾತನ್ನೂ ಚರ್ಚಿಸುತ್ತಿದ್ದರು. ದೊಡ್ಡ ದೊಡ್ಡ ಸಾಹಿತಿಗಳೂ ಪ್ರತಿ ಮಾತಿಗೂ ಜಗಳವಾಡುತ್ತಿದ್ದರು" ಎಂದು ಅಂದಿನ ಕ್ಲಾಸಿಕ್ ಹಾಡುಗಳ ಸಂಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.
90 ನೇ ಹುಟ್ಟುಹಬ್ಬಕ್ಕೆ ಸಜ್ಜಾದ ಆಶಾ ಭೋಂಸ್ಲೆ
ಹಿರಿಯ ಗಾಯಕಿ ಆಶಾ ಭೋಂಸ್ಲೆ ಸೆಪ್ಟೆಂಬರ್ 8 ರಂದು 90 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅವರು ತಮ್ಮ 90 ನೇ ಹುಟ್ಟುಹಬ್ಬದಂದು ಸೆಪ್ಟೆಂಬರ್ 8 ರಂದು ದುಬೈನಲ್ಲಿ ಸಂಗೀತ ಕಾರ್ಯಕ್ರಮವನ್ನು ನಡೆಸಲು ಸಜ್ಜಾಗಿದ್ದಾರೆ. ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ಹೊಂದಿರುವ ಅವರು, ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











