RRR Hindi Box Office collection : ಹಿಂದಿ ಪ್ರದೇಶದಲ್ಲಿ ಹಿಂದಿ ಸಿನಿಮಾಗಳನ್ನೇ ಹಿಂದಿಕ್ಕಿದ RRR
ದಕ್ಷಿಣ ಭಾರತದ ಸಿನಿಮಾಗಳು ಮಾಡುತ್ತಿರುವ ಕಮಾಲ್‌ಗೆ ವಿಶ್ವವೇ ಬೆರಗಾಗಿದೆ. ನಮ್ಮನ್ನು ಬಿಟ್ಟರಿಲ್ಲ ಎಂದು ಮೆರೆಯುತ್ತಿದ್ದ ಬಾಲಿವುಡ್ ಅಂತೂ ಬಾಲ ಮುದುರಿಕೊಂಡು ಕೂತಿದೆ.
'ಮದ್ರಾಸಿ ಮಸಾಲಾ ಸಿನಿಮಾ' ಎಂದು ವ್ಯಂಗ್ಯಕ್ಕೆ ಒಳಗಾಗುತ್ತಿದ್ದ ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ಡಿಗರು ಮುಖ ಮುಚ್ಚಿಕೊಳ್ಳುವಂತೆ ಸಿನಿಮಾಗಳನ್ನು ಮಾಡಿ, ಹಿಂದಿ ಸಿನಿಮಾ ವೀಕ್ಷಕರನ್ನು ತಮ್ಮತ್ತ ಸೆಳೆದುಕೊಂಡು ಬಿಟ್ಟಿದ್ದಾರೆ.
'ಬಾಹುಬಲಿ' 'ಕೆಜಿಎಫ್' ಮೂಲಕ ಹಿಂದಿ ಪ್ರದೇಶಗಳ ಮೇಲೆ ಆರಂಭವಾದ ದಕ್ಷಿಣ ಭಾರತ ಸಿನಿಮಾಗಳ ದಂಡಯಾತ್ರೆಯನ್ನು 'ಪುಷ್ಪ' ಹಾಗೂ ಈಗ 'RRR' ಸಿನಿಮಾ ಪರಿಣಾಮಕಾರಿಯಾಗಿ ಮುಂದುವರೆಸಿದೆ. ಪರಿಸ್ಥಿತಿ ಅದೆಷ್ಟು ಬದಲಾಗಿ ಹೋಗಿದೆಯೆಂದರೆ ಹಿಂದಿ ಭಾಷಿಕ ಪ್ರದೇಶಗಳಲ್ಲಿಯೇ ದಕ್ಷಿಣದ ಸಿನಿಮಾಗಳು ಹಿಂದಿಯ ಸ್ಟಾರ್ ನಟರ ಸಿನಿಮಾಗಳಿಗಿಂತಲೂ ಹೆಚ್ಚು ಗಳಿಕೆ ಮಾಡುತ್ತಿವೆ.

ಹಿಂದಿ ಸಿನಿಮಾಗಳನ್ನೇ ಹಿಂದಿಕ್ಕಿದ 'RRR'
'ದಿ ಕಾಶ್ಮೀರ್ ಫೈಲ್ಸ್' ಹಾಗೂ ಆಲಿಯಾ ಭಟ್-ಸಂಜಯ್ ಲೀಲಾ ಬನ್ಸಾಲಿಯ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾವನ್ನು ಅನಾಯಾಸವಾಗಿ ಹಿಂದಿಕ್ಕಿರುವ 'RRR' ಅತ್ಯಂತ ಕಡಿಮೆ ಅವಧಿಯಲ್ಲಿ ನೂರು ಕೋಟಿ ಕ್ಲಬ್ ಸೇರಿಕೊಂಡಿದೆ. ಆ ಮೂಲಕ 2022 ರಲ್ಲಿ ಬಿಡುಗಡೆ ಆಗಿ ಅತ್ಯಂತ ಕಡಿಮೆ ಅವಧಿಯಲ್ಲಿ 100 ಕೋಟಿ ಸೇರಿದ ಸಿನಿಮಾ ಎನಿಸಿಕೊಂಡಿದೆ 'RRR'.

100 ಕೋಟಿ ಗಳಿಸಲು ತೆಗೆದುಕೊಂಡ ದಿನಗಳೆಷ್ಟು?
100 ಕೋಟಿ ರುಪಾಯಿಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಗಳಿಸಲು ಹಿಂದಿ ಸಿನಿಮಾ 'ದಿ ಕಾಶ್ಮೀರ್ ಫೈಲ್ಸ್' ಬರೋಬ್ಬರಿ 8 ದಿನ ತೆಗೆದುಕೊಂಡಿತ್ತು. ಅದೇ ಆಲಿಯಾ ಭಟ್‌ರ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ 100 ಕೋಟಿ ಗಳಿಸಲು ತೆಗೆದುಕೊಂಡಿದ್ದು 13 ದಿನ ಆದರೆ 'RRR' ಸಿನಿಮಾದ ಹಿಂದಿ ಅವತರಣಿಕೆ ಈ ಸಾಧನೆಯನ್ನು ಕೇವಲ ಐದೇ ದಿನದಲ್ಲಿ ಮಾಡಿದೆ. 'RRR' ಸಿನಿಮಾದ ಬಾಕ್ಸ್ ಆಫೀಸ್ ದಿಗ್ಗಜರೇ ಹೌಹಾರಿ ಹೋಗಿದ್ದಾರೆ. 'RRR' ಕಲೆಕ್ಷನ್ ನೋಡಿ ಗಾಬರಿಯಾಗಿರುವ ಸಲ್ಮಾನ್ ಖಾನ್, 'ನಮ್ಮ ಕೈಲೇಕೆ ಅಂಥಹಾ ಸಿನಿಮಾಗಳನ್ನು ಮಾಡಲಾಗುತ್ತಿಲ್ಲ?'' ಎಂದು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ.

ಯಾವ ದಿನ ಎಷ್ಟು ಗಳಿಸಿತು 'RRR' ಹಿಂದಿ ಆವೃತಿ
ಸಿನಿಮಾ ವ್ಯವಹಾರ ತಜ್ಞ ರಮೇಶ್ ಬಾಲಾ ಮಾಡಿರುವ ಟ್ವೀಟ್ ಪ್ರಕಾರ, 'RRR' ಸಿನಿಮಾವು ಬಿಡುಗಡೆ ಆದ ದಿನ ಹಿಂದಿ ಬೆಲ್ಟ್‌ನಲ್ಲಿ 19 ಕೋಟಿ ರುಪಾಯಿ ಕಲೆಕ್ಷನ್ ಮಾಡಿತ್ತು, ಎರಡನೇ ದಿನ 24 ಕೋಟಿ ಗಳಿಸಿತು. ಮೂರನೇ ದಿನ 31.50 ಕೋಟಿ ಗಳಿಸಿತು. ನಾಲ್ಕನೇ ದಿನ ಮತ್ತೆ 17 ಕೋಟಿ ಗಳಿಸಿತು. ಐದನೇ ದಿನ 16 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾವು ಎಲ್ಲ ವಿಧವಾದ ಪ್ರೇಕ್ಷಕರನ್ನೂ ಸೆಳೆದಿದ್ದು, ಮಾಸ್ ಪ್ರೇಕ್ಷಕರನ್ನು ಬಹುವಾಗಿ ಚಿತ್ರಮಂದಿರಕ್ಕೆ ಸೆಳೆದಿದೆ ಎಂದಿದ್ದಾರೆ ರಮೇಶ್ ಬಾಲಾ. ಮುಂಬೈ ಮಾತ್ರವೇ ಅಲ್ಲದೆ, ಪಂಜಾಬ್, ಉತ್ತರ ಪ್ರದೇಶ, ಬಿಹಾರ, ಗುಜರಾತ್‌ಗಳಲ್ಲಿಯೂ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.
Recommended Video


ಕಮಾಲ್ ಮಾಡಿದ 'RRR' ಸಿನಿಮಾ
'RRR' ಸಿನಿಮಾವು ಬಿಡುಗಡೆ ಆದ ಐದು ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು 600 ಕೋಟಿ ಹಣ ಗಳಿಸಿದ್ದು, ಕೆಲವೇ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ 1000 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷ ಬಿಡುಗಡೆ ಆಗಿ ಅತಿ ಹೆಚ್ಚು ಕೆಲಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಪ್ರಸ್ತುತ 'RRR' ಬಳಿಯೇ ಇದೆ. ಕಂಟೆಂಟ್ ಚೆನ್ನಾಗಿದ್ದರೆ ಸಾಕು ಯಾವ ಸಿನಿಮಾ ಎಲ್ಲಿ ಬೇಕಾದರೂ ಹಿಟ್ ಆಗುತ್ತದೆ ಎಂಬುದನ್ನು ರಾಜಮೌಳಿ ನಿರ್ದೇಶಿಸಿರುವ ಈ ಸಿನಿಮಾ ಮತ್ತೊಮ್ಮೆ ಸಾಬೀತು ಪಡಿಸಿದೆ. ಖಾನ್‌ಗಳು, ಅಕ್ಷಯ್ ಕುಮಾರ್ ಸಿನಿಮಾ ಬಿಟ್ಟು ಇನ್ನಾರ ಸಿನಿಮಾಗಳು ಓಡುವುದಿಲ್ಲ ಎನ್ನುತ್ತಿದ್ದ ಜಾಗಗಳಲ್ಲಿಯೇ 'RRR' ಸಿನಿಮಾ ಕಮಾಲ್ ಮಾಡಿದೆ.


Click it and Unblock the Notifications











