ಸರಳ ಸುಂದರಿಯ ಮೇಲೆ 'ಹಿಂದಿ ಅಸ್ತ್ರ' : ಸೀತೆ ಪಾತ್ರಕ್ಕೆ ಭಾಷೆ ಅಡ್ಡಿಯೇ? ಸಾಯಿ ಪಲ್ಲವಿ ಮೇಲೆ ಮುಗಿಬಿದ್ದ ಟ್ರೋಲಿಗರು
ಹಿಂದಿ ಹೇರಿಕೆ ಇಂದು ನಿನ್ನೆಯದ್ದಲ್ಲ. ಅನಾದಿ ಕಾಲದಿಂದಲೂ ಹಿಂದಿ ರಾಷ್ಟ್ರ ಭಾಷೆ ಎಂಬ ಹಸಿ ಸುಳ್ಳು ಹೇಳಿ ದಕ್ಷಿಣದವರ ಮೇಲೆ ಹಿಂದಿಯನ್ನು ನಮ್ಮ ವ್ಯವಸ್ಥೆ ವ್ಯವಸ್ಥಿತವಾಗಿ ಹೇರುತ್ತಾನೇ ಬಂದಿದೆ. ಸಭೆ-ಸಮಾರಂಭದಲ್ಲಿ ಹಿಂದಿಯ ಕುರಿತು ಪ್ರಶ್ನೆಗಳನ್ನು ಕೇಳಿ ದಕ್ಷಿಣದವರನ್ನು ಮುಜುಗರಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಲೇ ಇದೆ.
ಇನ್ನೂ ಹಿಂದಿ ಹೇರಿಕೆ ನಮ್ಮಲ್ಲಿ ಎಷ್ಟಿದೆ ಅಂದರೆ ರೇಲ್ವೆ.. ಬ್ಯಾಂಕ್.. ಮುಂತಾದ ಕಚೇರಿಗಳಲ್ಲೆಲ್ಲಾ ಉದ್ದೇಶಪೂರ್ವಕವಾಗಿ ಉತ್ತರ ಭಾರತದವರನ್ನು ತಂದು ತುರುಕಲಾಗಿದೆ. ಅಲ್ಲಿ ದಕ್ಷಿಣ ಭಾರತದ ಗ್ರಾಹಕರಿಗೆ ಹಿಂದಿ ಕಲಿಸುವ ಪ್ರಯತ್ನ ನಡೆಯುತ್ತಿದೆಯೇ ಹೊರತು, ಸಿಬ್ಬಂದಿಗೆ ಆಯಾ ಪ್ರಾದೇಶಿಕ ಭಾಷೆಗಳನ್ನು ಕಲಿಸುವ ಪ್ರಯತ್ನ ನಡೆಯುತ್ತಿಲ್ಲ.

ಈ ಹಿಂದಿ ಹಿಂಸೆಯಿಂದ ಕೇವಲ ಜನಸಾಮಾನ್ಯರು ಮಾತ್ರ ನರಳಿಲ್ಲ. ನರಳುತ್ತಿಲ್ಲ. ಬದಲಿಗೆ ಚಿತ್ರರಂಗದ ತಾರೆಯರು ಕೂಡ ಈ ಹಿಂದಿ ವಿಚಾರದಲ್ಲಿ ಅವಮಾನಕ್ಕೀಡಾಗಿದ್ದಾರೆ. ಅಪಹಾಸ್ಯಕ್ಕೀಡಾಗಿದ್ದಾರೆ. ಪ್ರತಿಭೆಗಿಂತ ಅವರ ಹಿಂದಿ ಭಾಷಾ ಪ್ರೌಢಿಮೆಯನ್ನು ಅಳೆಯುವ ಒಂದು ಅಲಿಖಿತ ನಿಯಮ ನಮ್ಮ ದೇಶದಲ್ಲಿ ಜಾರಿಯಲ್ಲಿದೆ. ಸಿನಿಮಾ ಒಂದು ಕಲೆ, ಭಾಷೆ ಮುಖ್ಯ ಅಲ್ಲವೇ ಅಲ್ಲ ಎಂದು ಎಷ್ಟೇ ಬಾಯಿ ಬಡಿದುಕೊಂಡರು ಕೂಡ ವಾಸ್ತವ ಸೋಶಿಯಲ್ ಮೀಡಿಯಾದಲ್ಲಿ ಬೇರೆಯೇ ಇದೆ. ಇದಕ್ಕೆ ಸಾಯಿ ಪಲ್ಲವಿ ಅವರ ವಿಚಾರ ಸದ್ಯದ ಉದಾಹರಣೆ.
ಹೌದು, ತಮ್ಮ ಸಹಜ ಅಭಿನಯ ಮತ್ತು ಸಹಜ ಸೌಂದರ್ಯದಿಂದ ಕೇವಲ ದಕ್ಷಿಣದಲ್ಲಿ ಅಷ್ಟೇ ಅಲ್ಲ, ಉತ್ತರದಲ್ಲಿ ಕೂಡ ಅನೇಕರ ಹೃದಯಕ್ಕೆ ಕನ್ನ ಹಾಕಿರುವವರು ಸಾಯಿ ಪಲ್ಲವಿ. ಹಿಂದೊಮ್ಮೆ ಎರಡು ಕೋಟಿ ರೂಪಾಯಿ ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ಸಾರಸಗಟಾಗಿ ತಿರಸ್ಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಸಾಯಿ ಪಲ್ಲವಿ ಕೂಡ ರಶ್ಮಿಕಾ ಮಂದಣ್ಣ.. ಪ್ರಿಯಾಮಣಿ.. ಸೇರಿ ಬಾಲಿವುಡ್‌ನಲ್ಲಿ ಸದ್ಯ ಹೆಸರು ಮಾಡಿರುವ, ನೆಲೆಯೂರಿರುವವರ ಹೆಜ್ಜೆ ಜಾಡನ್ನು ಹಿಡಿದು ಬಾಲಿವುಡ್‌ನತ್ತ ಮುಖ ಮಾಡಿದ್ಧಾರೆ. ಹಿಂದಿ ಚಿತ್ರವನ್ನು ಕೂಡ ಒಪ್ಪಿಕೊಂಡಿದ್ದಾರೆ.
ಹಾಗಂಥ ಆ ಚಿತ್ರ ''ರಾಮಾಯಣ'' ಅಲ್ಲ. ''ರಾಮಾಯಣ'' ಚಿತ್ರಕ್ಕೂ ಮುನ್ನ ಒಪ್ಪಿಕೊಂಡಿದ್ದ ಚಿತ್ರ ಅದು. ಸಾಯಿ ಪಲ್ಲವಿ ಅಭಿನಯದ ಮೊದಲ ಹಿಂದಿ ಚಿತ್ರ. ಆ ಚಿತ್ರದ ಹೆಸರು ''ಏಕ್ ದಿನ್''. ಆಮಿರ್ ಖಾನ್ ಮಗ ಜುನೈದ್ ಖಾನ್ ಈ ಚಿತ್ರದ ನಾಯಕ. ಮೇ 1 ರಂದು ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಚಿತ್ರತಂಡ ಮಾಡುತ್ತಿದೆ. ಇನ್ನು ಆಗಲೇ ಹೇಳಿದಂತೆ ''ಏಕ್ ದಿನ್'' ಸಾಯಿ ಪಲ್ಲವಿಯ ಮೊದಲ ಹಿಂದಿ ಸಿನಿಮಾ. ಹೀಗಾಗಿ ತಮ್ಮ ಮೊದಲ ಹಿಂದಿ ಚಿತ್ರ ಬಿಡುಗಡೆಯಾಗುತ್ತಿರುವ ಖುಷಿಯಲ್ಲಿ ಸಾಯಿ ಪಲ್ಲವಿ ಕೂಡ ಚಿತ್ರದ ಪ್ರಚಾರದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
ಆ ಪೈಕಿ ಮೊನ್ನೆ..ಮೊನ್ನೆ.. ಮುಂಬೈನಲ್ಲಿ ಚಿತ್ರದ ಪ್ರಚಾರಾರ್ಥ ಹಮ್ಮಿಕೊಳ್ಳಲಾಗಿದ್ದ
''ಏಕ್ ದಿನ್ ಕಿ ಮೆಹಫಿಲ್'' ಎಂಬ ಸಂಗೀತ ಕಾರ್ಯಕ್ರಮ ಕೂಡ ಒಂದು.
ಆಮಿರ್ ಖಾನ್ ಅವರನ್ನೊಳಗೊಂಡು ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಇದೇ ಸಮಯದಲ್ಲಿ ಆಮಿರ್ ಖಾನ್, ಸಾಯಿ ಪಲ್ಲವಿ ಅವರನ್ನು ಬಾಯ್ತುಂಬ ಹೊಗಳಿದ್ದರು. ಭಾರತದ ಸದ್ಯದ ಅತ್ಯುತ್ತಮ ನಟಿ ಇವರು ಎಂದು ಹೇಳಿದ್ದರು. ಆ ನಂತರ ಮಾತನಾಡುವ ಸರದಿ ಸಾಯಿ ಪಲ್ಲವಿ ಅವರದ್ದಾಗಿತ್ತು. ಆಗ ಹಿಂದಿಯಲ್ಲಿ ಮಾತನಾಡಲು ಸಾಯಿ ಪಲ್ಲವಿ ಹಿಂಜರಿದರು. ಹಿಂದಿ ಭಾಷಾ ಜ್ಞಾನ ನನಗೆ ಅಷ್ಟೊಂದು ಇಲ್ಲ ಎಂದು ಹೇಳಿದರು. ಚಾಹತಾ ಮತ್ತು ಚಾಹತಿ ಪದಗಳ ನಡುವೆ ಇರುವ ವ್ಯತ್ಯಾಸ ಕೂಡ ನನಗೆ ಗೊತ್ತಾಗುವುದಿಲ್ಲ ಎಂದು ಹೇಳಿದರು.
ಸಾಯಿ ಪಲ್ಲವಿ ಅವರ ಈ ಪ್ರಾಮಾಣಿಕ ಉತ್ತರ ಈಗ ಟ್ರೋಲಿಗರಿಗೆ ಆಹಾರವಾಗಿದೆ. ಉತ್ತರ ಭಾರತದವರ ಕೈಗೆ ದಕ್ಷಿಣದವರ ವಿರುದ್ಧ ಮತ್ತೊಮ್ಮೆ ಹಿಂದಿ ಅಸ್ತ್ರ ಸಿಕ್ಕಂತಾಗಿದೆ. ಇದಕ್ಕೆ ಪುರಾವೆ ಎನ್ನುವಂತೆ ಸಾಯಿ ಪಲ್ಲವಿ ಮೇಲೆ ಸದ್ಯ ಹಲವರು ಸೋಶಿಯಲ್ ಮೀಡಿಯಾ ಮೂಲಕ ಮುಗಿ ಬಿದ್ದಿದ್ಧಾರೆ. ಸಾಯಿ ಪಲ್ಲವಿ ಹಿಂದಿ ಉಚ್ಚಾರಣೆಯನ್ನು ಅಣಕಿಸುತ್ತಿರುವ ಹಲವರು 4,000 ಕೋಟಿ ಬಜೆಟ್‌ನ ''ರಾಮಾಯಣ''ದಲ್ಲಿ ಸೀತೆ ಪಾತ್ರ ನಿರ್ವಹಿಸಿರುವ ನಾಯಕಿಗೆ ಹಿಂದಿ ಬರಲ್ಲ, ಇದಕ್ಕಿಂತ ದೊಡ್ಡ ದುರಂತ ಇನ್ನೊಂದೇನಿದೆ ಎಂದು ಸಾಯಿ ಪಲ್ಲವಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಸೀತೆಯ ಪಾತ್ರವು ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಅತ್ಯಂತ ಪವಿತ್ರವಾದುದು, ಹಾಗಾಗಿ ಆ ಪಾತ್ರದ ಸಂಭಾಷಣೆಗಳು ಸ್ಪಷ್ಟವಾಗಿರಬೇಕು ಎಂಬ ವಾದ ಮಾಡುತ್ತಿರುವ ಉತ್ತರ ಭಾರತದ ಚಿತ್ರ ಪ್ರೇಮಿಗಳು, ಹಿಂದಿ ಭಾಷೆಯ ಭಾವನೆ ಅರ್ಥವಾಗದಿದ್ದರೆ ಪಾತ್ರಕ್ಕೆ ಇವರಿಂದ ಜೀವ ತುಂಬಲು ಹೇಗೆ ಸಾಧ್ಯ ..? ಎಂಬ ಪ್ರಶ್ನೆ ಮಾಡುತ್ತಿದ್ಧಾರೆ. ಸಾಯಿ ಪಲ್ಲವಿ ಅವರನ್ನು ಸೀತೆಯ ಪಾತ್ರಕ್ಕೆ ಆಯ್ಕೆ ಮಾಡಿದ ನಿರ್ದೇಶಕ ನಿತೇಶ್ ತಿವಾರಿ ವಿರುದ್ದ ಕೂಡ ಕೆಂಡ ಕಾರುತ್ತಿದ್ದಾರೆ. 4000 ಕೋಟಿ ನೀರಿನಲ್ಲಿ ಹೋಮ ಮಾಡಿದಂತೆ ಆಯ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ. ಇದರ ನಡುವೆ ಸಾಯಿ ಪಲ್ಲವಿ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ಧಾರೆ.


Click it and Unblock the Notifications