7 ತಿಂಗಳ ಬಳಿಕ 'ಆದಿಪುರುಷ್' ಸೋಲಿನ ಬಗ್ಗೆ ಸೈಫ್ ಅಲಿಖಾನ್ ಪ್ರತಿಕ್ರಿಯೆ
ಪ್ರಭಾಸ್ ಹಾಗೂ ಸೈಫ್ ಅಲಿಖಾನ್ ನಟನೆಯ 'ಆದಿಪುರುಷ್' ಸಿನಿಮಾ ಕಳೆದ ವರ್ಷ ಸೋಲುಂಡಿತ್ತು. ರಾಮಾಯಣ ಕಾವ್ಯ ಆಧರಿಸಿ ಓಂ ರಾವುತ್ ನಿರ್ದೇಶನದ ಈ ಸಿನಿಮಾ ಭಾರೀ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಚರ್ಚೆ, ಆಕ್ರೋಶ ವ್ಯಕ್ತವಾಗಿತ್ತು. ಕೆಲವರು ಸಿನಿಮಾ ಬಿಡುಗಡೆ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ್ದರು.
ರಾಮಾಯಣ ಕಾವ್ಯವನ್ನು ಇವತ್ತಿನ ತಂತ್ರಜ್ಞಾನ ಬಳಸಿ ಹೊಸ ರೂಪದಲ್ಲಿ ಕಟ್ಟಿಕೊಡಲು ಚಿತ್ರತಂಡ ಪ್ರಯತ್ನಿಸಿತ್ತು. ಸೃಜನಶೀಲ ಸ್ವಾತಂತ್ರ್ಯ ಹೆಸರಿನಲ್ಲಿ ರಾಮಾಯಣದ ಕಾವ್ಯವನ್ನು, ಪಾತ್ರಗಳನ್ನು ತಪ್ಪಾಗಿ ತೋರಿಸಿಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಮುಖ್ಯವಾಗಿ ರಾವಣನ ಪಾತ್ರದಲ್ಲಿ ಸೈಫ್ ಅಲಿಖಾನ್ ಲುಕ್, ಕಾಸ್ಟ್ಯೂಮ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ರಾವಣವನ್ನು ತೋರಿಸಿರುವ ರೀತಿ ಸರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಪುಷ್ಪಕ ವಿಮಾನದ ಬದಲು ಬಾವಲಿಯಂತಹ ಜೀವಿಯನ್ನು ತೋರಿಸಿದ್ದು ಕೂಡ ಕೆಲವರು ಕೆಂಗಣ್ಣಿಗೆ ಗುರಿಯಾಗಿತ್ತು.

'ಆದಿಪುರುಷ್' ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್, ರಾವಣನಾಗಿ ಸೈಫ್ ಅಲಿಖಾನ್, ಸೀತೆಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಟಿಸಿದ್ದರು. ಪಾತ್ರಧಾರಿಗಳ ವೇಷಭೂಷಣದ ಬಗ್ಗೆ ಹೆಚ್ಚು ಅಸಮಾಧಾನ ವ್ಯಕ್ತವಾಗಿದ್ದು ಸುಳ್ಳಲ್ಲ. ಟೀಸರ್ ಬಿಡುಗಡೆ ದಿನದಿಂದಲೂ ಸಿನಿಮಾ ವಿವಾದಕ್ಕೆ ಸಿಲುಕಿತು. ಬಳಿಕ ಒಂದೆರಡು ಬಾರಿ ಚಿತ್ರತಂಡ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿತ್ತು. ಬಳಿಕ ಸುಮ್ಮನಾಗಿದ್ದರು. ಸಿನಿಮಾ ರಿಲೀಸ್ ನಂತರ ಚಿತ್ರತಂಡ ಮಾಡನಾಡುವ ಗೋಜಿಗೆ ಹೋಗಿರಲಿಲ್ಲ.
ಭಾರೀ ಟೀಕೆಗೆ ಗುರಿಯಾಗಿದ್ದ 'ಆದಿಪುರುಷ್' ಸಿನಿಮಾ ತಕ್ಕಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತ್ತು. ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಮುಗಿಬಿದ್ದಿದ್ದರು. ದೊಡ್ಡಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿತ್ತು. ಬಳಿಕ ಸಿನಿಮಾ ಸೋಲಿನ ಹಾದಿ ಹಿಡಿಯಿತು. ನಿರ್ಮಾಪಕರಿಗೆ ನಷ್ಟ ತಂದೊಡ್ಡಿತ್ತು.
ಪ್ರಭಾಸ್, ಓಂ ರಾವುತ್ ಎಲ್ಲರೂ ಈ ವಿಚಾರವಾಗಿ ಸೈಲೆಂಟ್ ಆಗಿಬಿಟ್ಟರು. 'ಸಲಾರ್' ಚಿತ್ರದ ಪ್ರಚಾರಕ್ಕೂ ಪ್ರಭಾಸ್ ಮಾಧ್ಯಮಗಳ ಮುಂದೆ ಬರಲಿಲ್ಲ. ಇದೇ ಮೊದಲ ಬಾರಿಗೆ ಸೈಫ್ ಅಲಿಖಾನ್ 'ಆದಿಪುರುಷ್' ಸಿನಿಮಾ ಸೋಲಿನ ಬಗ್ಗೆ ಮಾತನಾಡಿದ್ದಾರೆ. ರಿಸ್ಕ್ ತೆಗೆದುಕೊಳ್ಳಬೇಕು, ಸೋತಾದ ಕುಗ್ಗದೇ ಮುಂದೆ ಸರಿಯಾಗಿ ಮುನ್ನಡೆಯಬೇಕು" ಎಂದಿದ್ದಾರೆ.

ಸೈಫ್ ಅಲಿಖಾನ್ ಫಿಲ್ಮ್ ಕಂಪಾನಿಯನ್ ಸಂದರ್ಶನದಲ್ಲಿ ಮಾತನಾಡಿದ್ದು "ಎಷ್ಟೇ ಬೆಳೆದರು ತಗ್ಗಿಬಗ್ಗಿ ನಡೆಯಬೇಕು ಎನ್ನುವುದನ್ನು ನಾನು ನಂಬುತ್ತೀನಿ. ನನ್ನನ್ನು ನಾನು ಸ್ಟಾರ್ ಎಂದು ಯಾವತ್ತೂ ಅಂದುಕೊಳ್ಳಲಿಲ್ಲ. ನನನ ಪೋಷಕರು ದೊಡ್ಡ ಸ್ಟಾರ್‌ಗಳು. ಆದರೆ ಬಹಳ ಸಿಂಪಲ್ ಆಗಿ ಇರುತ್ತಾರೆ. ನಾನು ವಾಸ್ತವದಲ್ಲಿ ಬದುಕಬೇಕು ಎಂದುಕೊಂಡೆ"
"ನಾನು ಸೋಲಿನ ಬಗ್ಗೆ ಎಂದು ಭಯಪಡುವುದಿಲ್ಲ. 'ಆದಿಪುರುಷ್' ಚಿತ್ರವನ್ನೇ ಉದಾಹರಣೆಯಾಗಿ ತಗೊಂಡ್ರೆ ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳಬೇಕು. ಸೋಲನ್ನು ಒಪ್ಪಿಕೊಳ್ಳಬೇಕು. ಜೀವನ ಎಂದ ಮೇಲೆ ಎಲ್ಲವೂ ಇರಬೇಕು. ಸೋಲಿಗೆ ಹೆದರಿ ಓಡಿಹೋಗಬಾರದು. ನಾವು ನಮ್ಮ ಪ್ರಯತ್ನ ಮಾಡಿದ್ವಿ, ದುರಾದೃಷ್ಟಕ್ಕೆ ವರ್ಕೌಟ್ ಆಗಲಿಲ್ಲ. ಮುಂದಿನ ಸಿನಿಮಾದಲ್ಲಿ ನೋಡಿಕೊಳ್ಳೋಣ, ಸರಿಮಾಡಿಕೊಳ್ಳೋಣ ಎಂದು ಧೈರ್ಯವಾಗಿ ಮುಂದೆ ಸಾಗಬೇಕು. ನಾನು ಮಾಡಿದ್ದು ಅದೇ" ಎಂದು ಸೈಫ್ ಅಲಿಖಾನ್ ವಿವರಿಸಿದ್ದಾರೆ.
ಸದ್ಯ ಸೈಫ್ ಅಲಿಖಾನ್ ತೆಲುಗಿನ 'ದೇವರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೂ. ಎನ್‌ಟಿಆರ್ ಹೀರೊ ಆಗಿ ನಟಿಸುತ್ತಿರುವ ಈ ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಸೈಫ್ ಅಲಿಖಾನ್ ನೆಗೆಟಿವ್ ರೋಲ್ ಮಾಡುತ್ತಿದ್ದಾರೆ. ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಎರಡು ಭಾಗಗಳಾಗಿ 'ದೇವರ' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











