ನಟ ಸೈಫ್ ಅಲಿಖಾನ್ ಮೇಲೆ ಹಲ್ಲೆ ನಡೆಸಿದ ಬಾಂಗ್ಲಾದೇಶಿ ಪ್ರಜೆ ಬಂಧನ
ಬುಧವಾರ ತಡರಾತ್ರಿ ಬಾಲಿವುಡ್ ನಟ ಸೈಲ್ ಅಲಿಖಾನ್ ಮನೆಗೆ ದುಷ್ಕರ್ಮಿಯೊಬ್ಬ ನುಗ್ಗಿದ್ದ. ನಟ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಓಡಿ ಹೋಗಿದ್ದ. ಈ ಘಟನೆ ಭಾರೀ ಚರ್ಚೆ ಹುಟ್ಟುಹಾಕಿತ್ತು. ಬಳಿಕ ಪೊಲೀಸರು ದುಷ್ಕರ್ಮಿಯ ಹುಡುಕಾಟ ನಡೆಸಿ ಒಬ್ಬನನ್ನು ವಶಕ್ಕೆ ಪಡೆದಿದ್ದರು. ಇದೀಗ ದಾಳಿಕೋರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ನಡೆದ 30 ಗಂಟೆಗಳಲ್ಲಿ ಶಂಕಿತ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಇದೀಗ ಭಾನುವಾರ(ಜನವರಿ 19) ಬೆಳ್ಳಂ ಬೆಳಗ್ಗೆ ಮತ್ತೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಆತನ ಹೆಸರು ವಿಜಯ್ ದಾಸ್ ಎಂದು ವರದಿಯಾಗಿದೆ. ಮುಂಬೈನ ಹೋಟೆಲ್‌ವೊಂದರಲ್ಲಿ ಈಗ ವೇಯಿಟರ್ ಆಗಿ ಕೆಲಸ ಮಾಡುತ್ತಿದ್ದಾನೆ.

ಸದ್ಯ ಬಂಧನವಾಗಿರುವ ವಿಜಯ್ ದಾಸ್ ಮುಖ್ಯ ಆರೋಪಿ ಎನ್ನಲಾಗುತ್ತಿದೆ. ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದ ವಿಜಯ್ ದಾಸ್ ಮುಂಬೈನಿಂದ ತಪ್ಪಿಸಿಕೊಂಡು ಹೋಗಲು ಮುಂದಾಗಿದ್ದ ಎಂದು ವರದಿಯಾಗಿದೆ. ಇನ್ನು ಪ್ರಕರಣದ ಸಂಬಂಧ ಆಕಾಶ್ ಕೈಲಾಶ್ ಕನ್ನೋಜಿಯಾ ಎಂಬ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿತ್ತು. ಬಳಿಕ ಆತ ಈ ಪ್ರಕರಣದಲ್ಲಿ ಭಾಗಿ ಆಗಿಲ್ಲ ಎಂದು ಹೇಳಲಾಗಿತ್ತು.
ಇತ್ತೀಚೆಗೆ ಪ್ರಕರಣ ಸಂಬಂಧ ಮಧ್ಯಪ್ರದೇಶದಲ್ಲಿ ಮತ್ತೊಬ್ಬನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಆತನನ್ನು ಬಂಧಿಸಿಲ್ಲ. ಸದ್ಯ ಬಂಧನವಾಗಿರುವ ವಿಜಯ್ ದಾಸ್ ನಿಜವಾದ ಹೆಸರು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಮೊಹಮ್ಮದ್ ಹೆಸರು ಬದಲಿಸಿಕೊಂಡು 6 ತಿಂಗಳ ಹಿಂದೆ ಮುಂಬೈಗೆ ಬಂದಿದ್ದ ಎಂದು ಡಿಸಿಪಿ ದೀಕ್ಷಿತ್ ಗೆಡಮ್ ಮಾಹಿತಿ ನೀಡಿದ್ದಾರೆ.
ಬಂಧಿತ ವ್ಯಕ್ತಿಯ ಬಳಿ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳು ಇಲ್ಲ. ಹಾಗಾಗಿ ಬಂಧಿತ ಆರೋಪಿ ಭಾರತೀಯನಲ್ಲ ಬಾಂಗ್ಲಾದೇಶದವನಾಗಿರಬಹುದು ಎಂಬ ಅನುಮಾನ ಇದೆ ಎಂದಿದ್ದಾರೆ. ಸದ್ಯ ಪೊಲೀಸರು ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿ ಬಳಿಕ ವಶಕ್ಕೆ ಪಡೆಯಲು ತೀರ್ಮಾನಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಬಂಧಿತ ಸೈಫ್ ಅಲಿಖಾನ್ ಮೇಲೆ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗ್ತಿದೆ.
ಸದ್ಯ ನಟ ಸೈಫ್ ಅಲಿಖಾನ್ ಮುಂಬೈ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ತಡರಾತ್ರಿ ನಟನ ಮನೆಗೆ ದುಷ್ಕರ್ಮಿ ನುಗ್ಗಿದ್ದ. ಮೊದಲಿಗೆ ಹಣ ಕೊಡುವಂತೆ ಕೇಳಿದ್ದ ಎಂದು ಮನೆಯ ಸಿಬ್ಬಂದಿ ತಿಳಿಸಿದ್ದಾರೆ. ಮೊದಲಿಗೆ ದುಷ್ಕರ್ಮಿಯನ್ನು ಸೈಫ್ ಅಲಿಖಾನ್ ಪುತ್ರನ ದಾದಿ ನೋಡಿದ್ದರು. ಮೊದಲು ಆಕೆಯ ಬಳಿ ಆಗಂತುಕ ಒಂದು ಕೋಟಿ ರೂ. ಹಣ ಕೇಳಿದ್ದನಂತೆ. ಆಕೆಯ ಮೇಲೆ ಸಹ ಹಲ್ಲೆ ಮಾಡಿದ್ದಾನೆ.
ಗಲಾಟೆ ಸದ್ದಿಗೆ ರೂಮ್‌ನಲ್ಲಿ ಮಲಗಿದ್ದ ಸೈಫ್ ಅಲಿಖಾನ್ ಎದ್ದು ಹೊರ ಬಂದಿದ್ದಾರೆ. ಈ ವೇಳೆ ದುಷ್ಕರ್ಮಿ ಜೊತೆ ತಳ್ಳಾಟ ನೂಕಾಟ ನಡೆದಿದೆ. ಆಗ ಆತ ಚಾಕುವಿನಿಂದ ಸೈಫ್ ಅಲಿಖಾನ್ ಹೊಟ್ಟೆ, ಬೆನ್ನು, ಕುತ್ತಿಗೆ ಭಾಗದಲ್ಲಿ ಚುಚ್ಚಿದ್ದಾನೆ. ಇನ್ನುಳಿದ ಸಿಬ್ಬಂದಿ ಎದ್ದು ಬರುವ ವೇಳೆಗೆ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಗಂಭೀರವಾಗಿ ಗಾಯಗೊಂಡ ನಟನನ್ನು ಸಿಬ್ಬಂದಿ, ಪುತ್ರ ಆಸ್ಪತ್ರೆಗೆ ಸೇರಿಸಿದ್ದಾರೆ. ಅಪಾರ್ಟ್‌ಮೆಂಟ್ ಇಂದ ಕೆಳಗೆ ಇಳಿದು ಆಟೋದಲ್ಲಿ ನಟನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅಲಿಖಾನ್‌ಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚಾಕು ತುಂಡು ಮುರಿದು ನಟನ ಬೆನ್ನಿನ ಒಳಗೆ ಹೋಗಿತ್ತು. ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರ ತೆರೆಯಲಾಗಿದೆ. ಸದ್ಯ ಸೈಫ್ ಅಲಿಖಾನ್ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ಬಗ್ಗೆ ಕರೀನಾ ಕಪೂರ್ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದರು.


Click it and Unblock the Notifications











