ಪರೋಟ ತಿಂದು ಸಿಕ್ಕಿಬಿದ್ದ; ಸೈಫ್ ಮೇಲೆ ಹಲ್ಲೆ ಮಾಡಿದ ದಾಳಿಕೋರನನ್ನು ಪೊಲೀಸರು ಬಂಧಿಸಿದ್ದೇಗೆ?
ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ನಡೆದ ನಿಗೂಢ ದಾಳಿ ಭಾರೀ ಸದ್ದು ಮಾಡಿತ್ತು. ಕಳೆದ ಬುಧವಾರ ತಡರಾತ್ರಿ ಮನೆಗೆ ನುಗ್ಗಿದ್ದ ದುಷ್ಕರ್ಮಿ ಸೈಫ್ ಅಲಿಖಾನ್ ಮೇಲೆ ಮಾರಣಾಂತಕ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನಟನನ್ನು ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಯಿತು. ನಟನ ಕುತ್ತಿಗೆ, ಹೊಟ್ಟೆ, ಬೆನ್ನಿನ ಭಾಗಕ್ಕೆ ದಾಳಿಕೋರ ಚಾಕುವಿನಿಂದ ಇರಿದಿದ್ದ.
ಮನೆಯಿಂದ ಆಟೋದಲ್ಲಿ ಸೈಫ್ ಅಲಿಖಾನ್ ಹತ್ತಿರದ ಲೀಲಾವತಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಶಸ್ತ್ರಚಿಕಿತ್ಸೆ ನಡೆಸಿ ಸೈಫ್ ಅಲಿಖಾನ್ ಬೆನ್ನಿನ ಭಾಗದಲ್ಲಿ ಸಿಕ್ಕಿಕೊಂಡಿದ್ದ ಚೂರಿ ತುಂಡನ್ನು ವೈದ್ಯರು ಹೊರಗೆ ತೆಗೆದಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ವಿವಿಧ ತಂಡಗಳಾಗಿ ದಾಳಿಕೋರನ ಬಂಧನಕ್ಕೆ ಬಲೆ ಬೀಸಿದ್ದರು.

ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ ಆರೋಪಿಯನ್ನು ಭಾನುವಾರ ಮುಂಬೈ ಪೊಲೀಸರು ಥಾಣೆ ಬಳಿ ಬಂಧಿಸಿದ್ದರು. ಬಾಂಗ್ಲಾ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಬಂಧಿತ ಆರೋಪಿ. ಅಷ್ಟಕ್ಕೂ ಆತ ಯಾಕೆ ಸೈಫ್ ಅಲಿಖಾನ್ ವಾಸವಿದ್ದ ಅಪಾರ್ಟ್‌ಮೆಂಟ್ ಒಳಗೆ ಪ್ರವೇಶಿಸಿದ್ದ. ಅಷ್ಟ ಭದ್ರತೆ ಮೀರಿ ಮನೆಯೊಳಗೆ ಪ್ರವೇಶಿಸಿದ್ದು ಹೇಗೆ? ನಟನ ಮೇಲೆ ಹಲ್ಲೆ ಮಾಡಿದ್ದು ಯಾಕೆ? ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಇಡೀ ಘಟನೆಯನ್ನು ಮರುಸೃಷ್ಟಿಸಲು ಮುಂದಾಗಿದ್ದಾರೆ.
ಅಂದು ಮೊಹಮ್ಮದ್ ಹೇಗೆ ಅಪಾರ್ಟ್‌ಮೆಂಟ್ ಒಳ ಪ್ರವೇಶಿಸಿದ. ಬಳಿಕ ಏನೆಲ್ಲಾ ಆಯಿತು. ಪೊಲೀಸರು ಆತನನ್ನು ಬಂಧಿಸಿದ್ದು ಹೇಗೆ? ಎನ್ನುವ ಬಗ್ಗೆ ಭಾರೀ ಚರ್ಚೆ ನಡೀತಿದೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಕಟವಾಗುತ್ತಿದೆ. ಅಂದಹಾಗೆ ಅಂದು ತಾನು ಖ್ಯಾತ ಬಾಲಿವುಡ್ ನಟನ ಮನಗೆ ಒಳಗೆ ನುಗ್ಗಿದ್ದೇನೆ ಎನ್ನುವುದು ಮೊಹಮ್ಮದ್‌ಗೂ ಗೊತ್ತಿರಲಿಲ್ಲ.
ಎಮರ್ಜೆನ್ಸಿ ಎಕ್ಸಿಟ್ ಮೆಟ್ಟಿಲು ಏರಿ ಬಳಿಕ ಎಸಿ ಡಕ್ ಮೂಲಕ ದುಷ್ಕರ್ಮಿ ಅಪಾರ್ಟ್‌ಮೆಂಟ್‌ನ 12ನೇ ಮಹಡಿಗೆ ಏರಿದ್ದ. ಬಳಿಕ ಬಾತ್‌ರೂಮ್ ಕಿಟಕಿ ಮೂಲಕ ಸೈಫ್ ಅಲಿಖಾನ್ ಮನೆ ಪ್ರವೇಶಿಸಿದ್ದಾನೆ. ಮೊದಲಿಗೆ ಮನೆಯ ಸಿಬ್ಬಂದಿ ದಾಳಿಕೋರನನ್ನು ನೋಡಿದ್ದರು. ಅಲ್ಲಿಂದ ಸೈಫ್ ಪುತ್ರ ಜೇಹ್ ರೂಮ್ ಪ್ರವೇಶಿಸಿದ್ದ. ಗಲಾಟೆ ಸದ್ದು ಕೇಳಿ ಎದ್ದು ಬಂದ ಸೈಫ್ ಆತನನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ.
ತಪ್ಪಿಸಿಕೊಳ್ಳುವ ಭರದಲ್ಲಿ ಸೈಫ್ ಅಲಿಖಾನ್‌ಗೆ ಕೈಯಲ್ಲಿದ್ದ ಚಾಕುವಿನಿಂದ ದಾಳಿಕೋರ ಚುಚ್ಚಿದ್ದಾನೆ. ಬಳಿಕೆ ಮನೆಯ ಸಿಬ್ಬಂದಿ ಎಲ್ಲರೂ ಬರುತ್ತಿದ್ದಂತೆ 13ನೇ ಮಹಡಿ ಏರಿದ್ದಾನೆ. ಸಿಬ್ಬಂದಿ ಎಲ್ಲರೂ ಗಾಯಗೊಂಡಿದ್ದ ಸೈಫ್ ಅಲಿಖಾನ್ ಕಡೆ ಧಾವಿಸುತ್ತಿದ್ದಂತೆ ದಾಳಿಕೋರ ಪಾರಾರಿ ಆಗಿದ್ದಾನೆ. ಈ ಸನ್ನಿವೇಶವನ್ನು ಜೇಹ್ ದಾದಿ ಎಲಿಯಾಮ ಫಿಲಿಪ್ ವಿವರಿಸಿದ್ದರು.
ಇನ್ನು ಸೈಫ್ ಅಲಿಖಾನ್ ಮನೆಯಿಂದ ಹೊರ ಬಿದ್ದ ದಾಳಿಕೋರ ಬಟ್ಟೆ ಬದಲಿಸಿ ಬಾಂದ್ರಾದ ಬಸ್ ನಿಲ್ದಾಣದಲ್ಲಿ ಬೆಳಗಿನ ಜಾನ 7 ಗಂಟೆವರೆಗೂ ಉಳಿದುಕೊಂಡಿದ್ದ. ನಂತರ ಬಾಂದ್ರಾ ರೈಲ್ವೆಸ್ಟೇಷನ್‌ನಿಂದ ಅಂಧೇರಿ ತಲುಪಿದ್ದ. ಅಲ್ಲಿಂದ ವರ್ಲಿ ಕೋಳಿವಾಡದ ತನ್ನ ರೂಮ್‌ಗೆ ಹೋಗಿದ್ದಾನೆ. ಅಷ್ಟರಲ್ಲಾಗಲೇ ಪ್ರಕರಣದ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಆತನ ದಾಳಿಕೋರನ ಫೋಟೊ ಟಿವಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಪೊಲೀಸರು ತನಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ತಾನು ಕೆಲಸ ಮಾಡುತ್ತಿದ್ದ ಥಾಣೆಯ ಬಾರ್‌ಗೆ ಹೋಗಿದ್ದಾನೆ.
ದಾಳಿಕೋರ ಹೋದಕಡೆಯೆಲ್ಲಾ ಪೊಲೀಸರು ಬಂದಿರುವುದು ನೋಡಿದ್ದಾನೆ. ಹಾಗಾಗಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಅಷ್ಟರಲ್ಲಾಗಲೇ ಪೊಲೀಸರಿಗೆ ದಾಳಿಕೋರನ ಬಗ್ಗೆ ಮಾಹಿತಿ ಸಿಗಲು ಆರಂಭವಾಗಿತ್ತು. ಆತನ ರೂಮ್, ಕೆಲಸ ಮಾಡುತ್ತಿದ್ದ ಬಾರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೊಹಮ್ಮದ್‌ನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಪಾಂಡೆಯ ವಿಚಾರಣೆ ನಡೆಸಿದ್ದರು. ಫೋನ್ ಸ್ವಿಚ್ ಆಫ್ ಆಗಿದ್ದರಿಂದ ತಕ್ಷಣಕ್ಕೆ ದಾಳಿಕೋರ ಇದ್ದ ಜಾಗದ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಥಾಣೆಯ ನಿರ್ಜನ ಪ್ರದೇಶದಲ್ಲಿ ದಾಳಿಕೋರ ಎರಡು ದಿನ ಕಳೆದಿದ್ದ.
ಮಾಂಗ್ರೋವ್ ಮರಗಳೇ ಹೆಚ್ಚಾಗಿದ್ದ ಕಾಡಿನಂತಹ ಸ್ಥಳದಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಮೊಹಮ್ಮದ್ ತಲೆಮರೆಸಿಕೊಂಡಿದ್ದ. ಅಷ್ಟರಲ್ಲಾಗಲೇ ಪೊಲೀಸರು ಆತನ ಮೊಬೈಲ್ ನಂಬರ್ ಟ್ರ್ಯಾಕ್ ಮಾಡುತ್ತಿದ್ದರು. ಶನಿವಾರ ರಾತ್ರಿ ಅಲ್ಲೇ ಕಳೆದಿದ್ದ ಆರೋಪಿ ಬೆಳಗ್ಗೆ ಹೊಟ್ಟೆ ಹಸಿವಾಗಿ ತಿಂಡಿ ತಿನ್ನಲು ಹೋಗಿದ್ದಾನೆ. ಸಣ್ಣ ಹೋಟೆಲ್‌ನಲ್ಲಿ ಪರೋಟ ತಿಂದು ನೀರಿನ ಬಾಟಲ್ ತೆಗೆದುಕೊಂಡಿದ್ದಾನೆ. ಫೋನ್ ಸ್ವಿಚ್ ಆನ್ ಮಾಡಿ ಗೂಗಲ್ ಪೇ ಮೂಲಕ ಹಣ ಪಾವತಿಸಿದ್ದಾನೆ. ಕೂಡಲೇ ಪೊಲೀಸರಿಗೆ ಆರೋಪಿ ಇರುವ ಜಾಗದ ಮಾಹಿತಿ ಸಿಕ್ಕಿದೆ.
20 ತಂಡಗಳಾಗಿ ಪೊಲೀಸರು ಮ್ಯಾಂಗ್ರೋವ್ ಮರಗಳಿದ್ದ ಆ ಜಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಮೂಲೆಯಲ್ಲಿ ಮಲಗಿದ್ದ ದಾಳಿಕೋರ ಪೊಲೀಸರು ಹತ್ತರ ಹೋಗುತ್ತಿದ್ದಂತೆ ಎದ್ದು ಓಡಲು ಆರಂಭಿಸಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಹಿಡಿದುಕೊಂಡಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ಹಾಜರು ಪಡಿಸಿ 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


Click it and Unblock the Notifications











