ಹುಬ್ಬಳ್ಳಿಯ ಶಿವನ ದೇವಸ್ಥಾನಕ್ಕೆ ಸೈಫ್ ಅಲಿಖಾನ್ ಪುತ್ರಿ ಭೇಟಿ; ಶಿವಲಿಂಗದ ಮುಂದೆ ಧ್ಯಾನ
ಪರಭಾಷಾ ಸಿನಿಮಾ ತಾರೆಯರು ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇದೀಗ ಬಾಲಿವುಡ್ ನಟಿ ಸಾರಾ ಅಲಿಖಾನ್ ಹುಬ್ಬಳ್ಳಿಯ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನಕ್ಕ ಭೇಟಿ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶಾಸಕ ಮಹೇಶ್ ಟೆಂಗಿನಕಾಯಿ ಸಹ ಫೇಸ್ ಬುಕ್ ಪೋಸ್ಟ್ ಮಾಡಿದ್ದು ಸಾರಾ ಅಲಿಖಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಬಾಲಿವುಡ್ ನಟ-ನಟಿಯರು ಹಾಗೂ ನಿರ್ಮಾಪಕರು ಕರ್ನಾಟಕದ ಐತಿಹಾಸಿಕ ಹಾಗೂ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಬಹುತೇಕರು ಕರ್ನಾಟಕದ ಕರಾವಳಿ ಭಾಗದ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಇತ್ತೀಚೆಗೆ ನಟಿ ಕಂಗನಾ ರಣಾವತ್ ಕೂಡ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆದರೆ ಸಾರಾ ಅಲಿಖಾನ್ ಹುಬ್ಬಳ್ಳಿಯ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿರುವುದು ವಿಶೇಷ.

ಕೆಲವೇ ದಿನಗಳ ಹಿಂದೆ ಬಾಲಿವುಡ್ ನಟರಾದ
ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ನಟಿ ಕತ್ರಿನಾ ಕೈಫ್, ತೆಲುಗು ನಟ ಜೂ. ಎನ್ಟಿಆರ್ ಕರ್ನಾಟಕದ ಕರಾವಳಿ ಭಾಗದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದರು.
ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿ ಖಾನ್ ಹುಬ್ಬಳ್ಳಿಯ ಉಣಕಲ್‌ನ ಚಂದ್ರಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸೆಲ್ವಾರ್ ಕಮೀಜ್ ತೊಟ್ಟು ದೇವಾಲಯಕ್ಕೆ ಬಂದಿದ್ದ ಸಾರಾ ಅಲಿ ಖಾನ್, ದೇವಾಲಯದ ಆವರಣದಲ್ಲಿ ಕೆಲ ಚಿತ್ರಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಉಣಕಲ್ ಚಂದ್ರಮೌಳೇಶ್ವರ ದೇವಾಲಯ ಎಂದು ನಟಿ ಸಾರಾ ಅಲಿಖಾನ್ ಮಾಹಿತಿ ನೀಡಿದ್ದಾರೆ. ಎಂದು ಲೊಕೇಶನ್ ಅನ್ನು ಪಿನ್ ಸಹ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಸೈಫ್ ಅಲಿಖಾನ್ ಮನೆಗೆ ದುಷ್ಕರ್ಮಿಯೊಬ್ಬ ನುಗ್ಗಿದ್ದ. ಆತನನ್ನು ತಡೆಯಲು ಹೋದ ಸೈಫ್ ಅಲಿಖಾನ್‌ಗೆ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಮಧ್ಯರಾತ್ರಿ ಆಟೋದಲ್ಲಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಶಸ್ತ್ರ ಚಿಕಿತ್ಸೆ ನಡೆಸಿ ನಟನ ಬೆನ್ನಿಗೆ ಹೊಕ್ಕಿದ್ದ ಚೂರಿ ತುಂಡನ್ನು ವೈದರು ತೆಗೆದಿದ್ದರು.
ನುರಿತ ವೈದ್ಯರ ಚಿಕಿತ್ಸೆ ಬಳಿಕ ಸೈಫ್ ಅಲಿಖಾನ್ ಚೇತರಿಸಿಕೊಂಡಿದ್ದರು. ತಂದೆ ಶೀಘ್ರ ಚೇತರಿಸಿಕೊಳ್ಳಲಿ ಎಂದು ಸಾರಾ ಪ್ರಾರ್ಥಿಸಿದ್ದರು. ಆ ಸಮಯದಲ್ಲಿ ಹೊತ್ತಿದ್ದ ಹರಕೆ ತೀರಿಸಲು ಚಂದ್ರಮೌಳೇಶ್ವರ ದೇವಾಲಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಶಾಸಕ ಮಹೇಶ್ ತೆಂಗಿನಕಾಯಿ ಪೋಸ್ಟ್ ಮಾಡಿ "ಕಲ್ಯಾಣ ಚಾಲುಕ್ಯರಿಂದ ನಿರ್ಮಾಣವಾದ ಹಾಗೂ ಅಮರ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಶಿವ ಭಕ್ತೆಯಾದ ಬಾಲಿವುಡ್ ನಟಿ ಸಾರಾ ಅಲಿಖಾನ್ ಅವರು ಭೇಟಿ ನೀಡಿದ ವಿಷಯ ತಿಳಿದು ಸಂತೋಷವಾಗಿದೆ" ಎಂದು ಬರೆದುಕೊಂಡಿದ್ದಾರೆ.
"ಇಂತಹ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಿಗೆ ಸೆಲೆಬ್ರಿಟಿಗಳು ಭೇಟಿ ನೀಡಿದಾಗ ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆ ಎಲ್ಲೆಡೆ ಪಸರಿಸುವುದಲ್ಲದೇ,ನಮ್ಮ ನಗರವು ಪ್ರವಾಸಿ ತಾಣವಾಗಿ ಬಿಂಬಿತಗೊಳ್ಳುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ" ಎಂದು ಪೋಸ್ಟ್ ಮಾಡಿದ್ದಾರೆ.
7 ವರ್ಷದ ಹಿಂದೆ ಸಾರಾ ಬಾಲಿವುಡ್ ಪ್ರವೇಶಿಸಿದರು. ಆದರೆ ಈವರೆಗೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. 'ಕೇದರನಾಥ್' ಆಕೆ ನಟಿಸಿದ ಚೊಚ್ಚಲ ಸಿನಿಮಾ. ಬಳಿಕ 'ಸಿಂಬಾ', 'ಲವ್ ಆಜ್‌ಕಲ್', 'ಅಂತರಂಗಿ ರೇ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ 'ಮೆಟ್ರೋ.. ಇನ್ ದಿನೊ'ಎಬ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಹೆಸರಿಡದ ಮತ್ತೊಂದು ಸಿನಿಮಾ ಕೂಡ ಸೈಫ್ ಅಲಿಖಾನ್ ಪುತ್ರಿಯ ಕೈಯಲ್ಲಿದೆ.


Click it and Unblock the Notifications











