ನೈತಿಕ ಹೊಣೆ ಹೊತ್ತು ಡೈರೆಕ್ಟರ್ ಕ್ಯಾಪ್ ಕಳಚಿದ ನಿರ್ದೇಶಕ ಸಾಜಿದ್ ಖಾನ್.!
ಬಾಲಿವುಡ್ ನ ಪ್ರಖ್ಯಾತ ನೃತ್ಯ ಸಂಯೋಜಕಿ, ನಿರ್ದೇಶಕಿ, ನಿರ್ಮಾಪಕಿ ಫರಾ ಖಾನ್ ಸಹೋದರ ಸಾಜಿದ್ ಖಾನ್ ವಿರುದ್ಧ ಮೂವರು ಮಹಿಳೆಯರು ಸಿಡಿದೆದ್ದಿದ್ದಾರೆ.
ಬಾಲಿವುಡ್ ನಲ್ಲಿ ನಟನಾಗಿ, ನಿರೂಪಕನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಸಾಜಿದ್ ಖಾನ್ ಕಾಮ ಪುರಾಣವನ್ನ ನಟಿ ರೇಚಲ್ ವೈಟ್, ಸಹಾಯಕ ನಿರ್ದೇಶಕಿ ಸಲೋನಿ ಛೋಪ್ರಾ ಮತ್ತು ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮಹಿಳೆಯರನ್ನ ಕಾಮದ ದೃಷ್ಟಿಯಿಂದಲೇ ನೋಡುವ ಸಾಜಿದ್ ಖಾನ್ ಗೆ ಟ್ವಿಟ್ಟರ್ ನಲ್ಲಿ ಮಹಾ ಮಂಗಳಾರತಿ ನಡೆಯುತ್ತಿದೆ. ಆತನ ಕೆಟ್ಟ ಕೊಳಕ ಮನಃಸ್ಥಿತಿ ಜಗಜ್ಜಾಹೀರು ಆದ್ಮೇಲೆ ನಟ ಅಕ್ಷಯ್ ಕುಮಾರ್ 'ಹೌಸ್ ಫುಲ್-4' ಚಿತ್ರದ ಶೂಟಿಂಗ್ ಕ್ಯಾನ್ಸಲ್ ಮಾಡಿದರು. ಅಂದ್ಹಾಗೆ, 'ಹೌಸ್ ಫುಲ್-4' ಚಿತ್ರಕ್ಕೆ ಇದೇ ಸಾಜಿದ್ ಖಾನ್ ನಿರ್ದೇಶಕ ಅನ್ನೋದು ನಿಮಗೆ ನೆನಪಿರಲಿ.
ನಟ ಅಕ್ಷಯ್ ಕುಮಾರ್ ಕಠಿಣ ಕ್ರಮ ಕೈಗೊಂಡ ಮೇಲೆ ಬೇರೆ ದಾರಿ ಇಲ್ಲದೆ ನೈತಿಕ ಹೊಣೆ ಹೊತ್ತು 'ಹೌಸ್ ಫುಲ್-4' ನಿರ್ದೇಶಕನ ಸ್ಥಾನದಿಂದ ಸಾಜಿದ್ ಖಾನ್ ಕೆಳಕ್ಕೆ ಇಳಿದಿದ್ದಾರೆ. ಮುಂದೆ ಓದಿರಿ...
ಸಾಜಿದ್ ಖಾನ್ ಮಾಡಿರುವ ಟ್ವೀಟ್ ಏನು.?
''ನನ್ನ ವಿರುದ್ಧ ಆರೋಪಗಳು ಕೇಳಿಬಂದಿರುವ ಕಾರಣ ನನ್ನ ಕುಟುಂಬ, ನಿರ್ಮಾಪಕರು ಹಾಗೂ ಹೌಸ್ ಫುಲ್-4 ಚಿತ್ರದ ನಟರ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಸತ್ಯ ಹೊರಗೆ ಬರುವವರೆಗೂ ನೈತಿಕ ಹೊಣೆ ಹೊತ್ತು ಚಿತ್ರದ ನಿರ್ದೇಶಕನ ಸ್ಥಾನದಿಂದ ನಾನು ಕೆಳಕ್ಕೆ ಇಳಿಯುತ್ತಿದ್ದೇನೆ. ಅಲ್ಲಿಯವರೆಗೂ ಯಾವುದೇ ತೀರ್ಮಾನಕ್ಕೆ ಬರಬೇಡಿ ಎಂದು ಮೀಡಿಯಾದಲ್ಲಿ ಇರುವ ಮಿತ್ರರಲ್ಲಿ ಮನವಿ ಮಾಡುತ್ತೇನೆ'' ಎಂದು ನಿರ್ದೇಶಕ ಸಾಜಿದ್ ಖಾನ್ ಟ್ವೀಟ್ ಮಾಡಿದ್ದಾರೆ.
ಬಿಸಿ ಮುಟ್ಟಿಸಿದ ಅಕ್ಷಯ್ ಕುಮಾರ್
''ನಿನ್ನೆ ರಾತ್ರಿಯಷ್ಟೇ ನಾನು ಭಾರತಕ್ಕೆ ವಾಪಸ್ ಮರಳಿದೆ. ಎಲ್ಲ ಸುದ್ದಿಗಳನ್ನು ಓದಿ ಮನಸ್ಸಿಗೆ ತುಂಬಾ ಬೇಸರ ಆಗಿದೆ. ತನಿಖೆ ಆಗುವವರೆಗೂ 'ಹೌಸ್ ಫುಲ್-4' ಶೂಟಿಂಗ್ ಕ್ಯಾನ್ಸಲ್ ಮಾಡುವಂತೆ ನಾನು ನಿರ್ಮಾಪಕರ ಬಳಿ ಮನವಿ ಮಾಡಿದ್ದೇನೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲೇಬೇಕಿದೆ. ತಪ್ಪಿತಸ್ಥರ ಜೊತೆಗೆ ನಾನು ಕೆಲಸ ಮಾಡುವುದಿಲ್ಲ. ನೊಂದವರಿಗೆ ನ್ಯಾಯ ಸಿಗಲೇಬೇಕು'' ಎಂದು ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ ಬಿಸಿ ಮುಟ್ಟಿಸಿದ್ದರು. ಅಕ್ಷಯ್ ತೆಗೆದುಕೊಂಡ ನಿರ್ಧಾರದ ಬಳಿಕ ನಿರ್ದೇಶನದಿಂದ ಹಿಂದೆ ಸರಿಯಲು ಸಾಜಿದ್ ಮನಸ್ಸು ಮಾಡಿದರು.

ನಾನಾ ಪಾಟೇಕರ್ ಏನ್ ಮಾಡ್ತಾರೆ.?
ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, 'ಹೌಸ್ ಫುಲ್-4' ಚಿತ್ರ ಮುಂದಿನ ವರ್ಷದ ದೀಪಾವಳಿ ಹೊತ್ತಿಗೆ ತೆರೆಗೆ ಬರುತ್ತಿತ್ತು. 'ಹೌಸ್ ಫುಲ್-4' ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿ ಇರುವಾಗಲೇ ವಿವಾದದ ಸುಳಿಯಲ್ಲಿ ಸಿಲುಕಿದೆ. ಸದ್ಯ ನಿರ್ದೇಶನದಿಂದ ಸಾಜಿದ್ ಖಾನ್ ಹಿಂದಕ್ಕೆ ಸರಿದಿದ್ದಾರೆ. ಇನ್ನೂ ನಾನಾ ಪಾಟೇಕರ್ ಏನು ಮಾಡ್ತಾರೋ, ಗೊತ್ತಿಲ್ಲ. ನಾನಾ ಪಾಟೇಕರ್ ಹೊರಗೆ ಹೋಗುವವರೆಗೂ ಅಕ್ಷಯ್ ಕುಮಾರ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುವುದು ಡೌಟೇ.!

ಉತ್ತಮ ಬೆಳವಣಿಗೆ
ಇಲ್ಲಿಯವರೆಗೂ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಬಾಲಿವುಡ್ ನ ಎ-ಲಿಸ್ಟ್ ತಾರೆಯರು ಪ್ರತಿಕ್ರಿಯೆ ಕೊಡಲು ಹಿಂದೇಟು ಹಾಕುತ್ತಿದ್ದರು. ಆದ್ರೀಗ, ಹೃತಿಕ್ ರೋಷನ್, ಅಕ್ಷಯ್ ಕುಮಾರ್, ಆಮೀರ್ ಖಾನ್ ಅಂತಹ ನಟರು ಕಠಿಣ ನಿರ್ಣಯ ಕೈಗೊಂಡಿರುವ ಕಾರಣ #ಮೀಟೂ ಅಭಿಯಾನಕ್ಕೆ ಜಯ ಲಭಿಸಿದಂತಾಗಿದೆ.


Click it and Unblock the Notifications











