ಪ್ರಭಾಸ್ ಅಭಿಮಾನಿಗಳಿಂದ ನಿಂದನೆ, ಟ್ರೋಲ್‌ಗೆ ಒಳಗಾಗಿದ್ದೇನೆ: ವಿವೇಕ್ ಅಗ್ನಿಹೋತ್ರಿ ಆರೋಪ
'ದಿ ಕಾಶ್ಮೀರಿ ಫೈಲ್ಸ್' ಚಲನಚಿತ್ರದ ಮೂಲಕ ಖ್ಯಾತಿ ಗಳಿಸಿದ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಮುಂದಿನ ಸಿನಿಮಾ 'ದಿ ವ್ಯಾಕ್ಸಿನ್ ವಾರ್' ಬಿಡುಗಡೆಗೆ ಸಿದ್ಧರಾಗಿದ್ದಾರೆ. ದಿ ವ್ಯಾಕ್ಸಿನ್ ವಾರ್ ಸೆಪ್ಟೆಂಬರ್ 28 ರಂದು ಥಿಯೇಟರ್‌ಗಳಲ್ಲಿ ಬರಲಿದೆ. ಈಗಾಗಲೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದೆ.
ಇನ್ನು, ತಮ್ಮ ಅಭಿಪ್ರಾಯಗಳ ಕಾರಣದಿಂದಾಗಿ ತಮ್ಮ ಚಲನಚಿತ್ರಗಳು ಮತ್ತು ರಾಜಕೀಯ ಪ್ರೇರಿತ ಅಭಿಪ್ರಾಯಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಟೀಕೆ ಮತ್ತು ಟ್ರೋಲ್‌ಗೆ ಒಳಗಾಗುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮಗೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಅಭಿಮಾನಿಗಳು ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಭಾಸ್ ಅಭಿಮಾನಿಗಳಿಂದ ನಿಂದನೆ, ಟ್ರೋಲ್!
ಸೆಪ್ಟೆಂಬರ್ 28 ರಂದು 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಹೀಗಾಗಿ ಸಲಾರ್ ಜೊತೆಗಿನ ಬಾಕ್ಸ್ ಆಫೀಸ್ ಘರ್ಷಣೆಯ ಬಗ್ಗೆ ಪ್ರಭಾಸ್ ಅಭಿಮಾನಿಗಳಿಂದ ಟ್ರೋಲ್ ಮತ್ತು ನಿಂದನೆಗೆ ಒಳಗಾಗಿದ್ದಾಗಿ ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿರುವ ವಿವೇಕ್ ಅಗ್ನಿಹೋತ್ರಿ, ಪ್ರತಿ ಚಿತ್ರಕ್ಕೂ ಪ್ರೇಕ್ಷಕರಿಂದ ಅವಕಾಶ ಸಿಗಬೇಕು ಮತ್ತು ಬಿಡುಗಡೆಯ ಮೊದಲು ಸಿನಿಮಾವನ್ನು ಗುರಿಯಾಗಿಸಿ ಟೀಕೆ ಮಾಡಬಾರದು ಎಂದು ಹೇಳಿದ್ದಾರೆ. ಅವರ ಸಿನಿಮಾಗಳು ಈ ಹಿಂದೆಯೂ ಸಾಕಷ್ಟು ಟೀಕೆಗೆ ಗುರಿಯಾಗಿದ್ದವು.
ನೂರಾರು ಕೋಟಿಯ ಚಿತ್ರದೊಂದಿಗೆ ನಮ್ಮ ಸಣ್ಣ ಚಿತ್ರದ ಯುದ್ಧ!
ಟಾಲಿವುಡ್ ಸೂಪರ್‌ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಲಾರ್ ಸಿನಿಮಾ ಜೊತೆಗೆ ತಮ್ಮ 'ದಿ ವ್ಯಾಕ್ಸಿನ್ ವಾರ್' ಚಲನಚಿತ್ರ ಬಿಡುಗಡೆಯಾಗುತ್ತದೆ ಎಂಬ ಬಗ್ಗೆ ನಡೆದ ಗದ್ದಲದ ಬಗ್ಗೆ ಮಾತನಾಡಿದ್ದಾರೆ. "ವ್ಯಾಕ್ಸಿನ್ ವಾರ್ ಯಾವುದೇ ಸ್ಟಾರ್‌ಗಳಿಲ್ಲದ ಸಣ್ಣ ಚಿತ್ರ. ಕೇವಲ 12.5 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದರ ಜೊತೆಗೆ ಮತ್ತೊಂದು ಚಿತ್ರ ಸಲಾರ್ ಬರುತ್ತಿದೆ. ಅದು 300 ಕೋಟಿಯ ಬೃಹತ್ ಚಿತ್ರ. ಆದರೆ, ಸಿನಿಮಾ ಬಿಡುಗಡೆಗೂ ಮುನ್ನ ಅವರ ಅಭಿಮಾನಿಗಳು ನನ್ನನ್ನು ನಿಂದಿಸುತ್ತಿದ್ದರು, ಟ್ರೋಲ್ ಮಾಡುತ್ತಿದ್ದರು" ಎಂದು ಆರೋಪಿಸಿದ್ದಾರೆ. ಜೊತೆಗೆ ಜವಾನ್ ಯಶಸ್ಸಿನ ನಂತರ ಶಾರುಖ್ ಖಾನ್ ಅವರ ಅಭಿಮಾನಿಗಳಿಂದ ನಿಂದನೆ ಅನುಭವಿಸಿದ ಬಗ್ಗೆಯೂ ಅಗ್ನಿಹೋತ್ರಿ ಮಾತನಾಡಿದ್ದಾರೆ.
ಈ ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪರೋಕ್ಷವಾಗಿ ಸಲಾರ್ ಬಿಡುಗಡೆ ಮುಂದೂಡಿರುವ ಬಗ್ಗೆ ಸುಳಿವು ನೀಡಿದ್ದಾರೆ. ಈ ಹಿಂದೆ, ಪ್ರಭಾಸ್ ಅವರ ಬಹುನಿರೀಕ್ಷಿತ ಸಲಾರ್‌ನೊಂದಿಗೆ ದಿ ವ್ಯಾಕ್ಸಿನ್ ವಾರ್ ಬಾಕ್ಸ್ ಆಫೀಸ್‌ನಲ್ಲಿ ಘರ್ಷಣೆಯನ್ನು ಎದುರಿಸಬೇಕಿತ್ತು. ಆದರೆ, ಸಲಾರ್ ಯಾವಾಗ ಬಿಡುಗಡೆ ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ.
ದಿ ವ್ಯಾಕ್ಸಿನ್ ವಾರ್
ದಿ ವ್ಯಾಕ್ಸಿನ್ ವಾರ್ ಭಾರತದ ಮೊಟ್ಟಮೊದಲ ಜೈವಿಕ ವಿಜ್ಞಾನದ ಕುರಿತ ಚಲನಚಿತ್ರವಾಗಿದೆ. ಅಪಾಯಕಾರಿ ಕೊರೊನಾವೈರಸ್ ವಿರುದ್ಧ ಭಾರತದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸುವಾಗ ಭಾರತೀಯ ವಿಜ್ಞಾನಿಗಳು ಎದುರಿಸಿದ ಹೋರಾಟವನ್ನು ವಿವರಿಸುತ್ತದೆ. ಚಿತ್ರದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ರೈಮಾ ಸೇನ್, ಸಪ್ತಮಿ ಗೌಡ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ದಿ ವ್ಯಾಕ್ಸಿನ್ ವಾರ್ ಗುರುವಾರ (ಸೆಪ್ಟೆಂಬರ್ 28 ) ಫುಕ್ರೆ 3 ರೊಂದಿಗೆ ಬಿಡುಗಡೆಯಾಗಲಿದೆ. ಫುಕ್ರೆ ಮತ್ತು ದಿ ವ್ಯಾಕ್ಸಿನ್ ವಾರ್ ಎರಡೂ ವಿಭಿನ್ನ ಚಿತ್ರಗಳು. ಎರಡೂ ಸಿನಿಮಾಗಳನ್ನು ಜನ ನೋಡಬೇಕು. ಫುಕ್ರೆ ಕೂಡ ಸೂಪರ್‌ಹಿಟ್ ಆಗಬೇಕು ಎಂದು ಹೇಳಿದ್ದಾರೆ.
ಸಲಾರ್ ಮತ್ತು ಡುಂಕಿ
ಸಲಾರ್ ಸಿನಿಮಾ ಬಿಡುಗಡೆ ದಿನವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ, ದಿ ವ್ಯಾಕ್ಸಿನ್ ವಾರ್ ಜೊತೆಗಂತು ಬಿಡುಗಡೆಯಾಗುವುದಿಲ್ಲ. ಈ ಸಿನಿಮಾ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಶಾರುಖ್ ಖಾನ್ ಅವರ 'ಡುಂಕಿ' ಜೊತೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications











