Tiger-3 Trailer: ಕುಟುಂಬನಾ? ದೇಶನಾ?: ಸಲ್ಲು- ಇಮ್ರಾನ್ ಹಶ್ಮಿ ಜಿದ್ದಾಜಿದ್ದಿ ದಂಗಲ್
ಸಲ್ಮಾನ್ ಖಾನ್ ನಟನೆಯ ವರ್ಷದ ಬಹುನಿರೀಕ್ಷಿತ ಸಿನಿಮಾ ಟೈಗರ್-3. ಮನೀಶ್ ಶರ್ಮಾ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ದೀಪಾವಳಿ ಸಂಭ್ರಮದಲ್ಲಿ ತೆರೆಗಪ್ಪಳಿಸೋಕೆ ಸಿದ್ಧವಾಗಿದೆ. ತಿಂಗಳಿಗೂ ಮುನ್ನ ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿದೆ ಚಿತ್ರತಂಡ.
ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನ ಮತ್ತೊಂದು ಸಿನಿಮಾ ಇದು. ಈಗಾಗಲೇ ಟೈಗರ್ ಸರಣಿಯ 2 ಸಿನಿಮಾಗಳು ಬಂದು ಸೂಪರ್ ಹಿಟ್ ಆಗಿದೆ. ಇದೀಗ 3ನೇ ಸಿನಿಮಾ ಪ್ರೇಕ್ಷಕರ ಮುಂದೆ ಬರೋಕೆ ಸಿದ್ಧವಾಗ್ತಿದೆ. ಎಕ್ಸ್ ರಾ ಏಜೆಂಟ್ ಟೈಗರ್ ಅವಿನಾಶ್ ಸಿಂಗ್ ರಾಥೋರ್ ಆಗಿ ಸಲ್ಲು ಅಬ್ಬರಿಸಿದ್ದು, ಆತನ ಮಡದಿ ಎಕ್ಸ್ ಐಎಸ್‌ಐ ಏಜೆಂಟ್ ಜೋಯಾ ಆಗಿ ಕತ್ರೀನಾ ಕೈಫ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡಲಾಗಿದೆ. ಇಮ್ರಾನ್ ಹಶ್ಮಿ ವಿಲನ್ ಆಗಿ ಸಲ್ಲು ಎದುರು ಕಾದಾಟಕ್ಕೆ ಇಳಿದಿದ್ದಾರೆ.

ಅವಿನಾಶ್ ಸಿಂಗ್ ರಾಥೋರ್(ಸಲ್ಮಾನ್ ಖಾನ್) ತನ್ನ ಹೆಸರು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾನೆ. ಮತ್ತೊಂದು ಕಡೆ ವಿಲನ್ ಆಗಿರುವ ಇಮ್ರಾನ್ ಹಶ್ಮಿ ತನಗಾದ ಅನ್ಯಾಯಕ್ಕೆ ಟೈಗರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಪಣ ತೊಟ್ಟಿದ್ದಾನೆ. ಮತ್ತೊಂದು ಕಡೆ ಜೋಯಾ ಕೂಡ ಗಂಡನ ಪರ ಹೋರಾಟಕ್ಕೆ ಇಳಿದಿದ್ದಾಳೆ.
ಈ ಬಾರಿ ರಾ ಚೀಫ್ ಆಗಿ ಗಿರೀಶ್ ಕಾರ್ನಾಡ್ ಬದಲು ಮಲಯಾಳಂ ನಟಿ ರೇವತಿ ನಟಿಸಿರುವಂತೆ ಕಾಣುತ್ತಿದೆ. "ದೇಶದಲ್ಲಿ ಶಾಂತಿಗೂ ದೇಶದಲ್ಲಿರುವ ಶತ್ರುಗಳಿಗೂ ಎಷ್ಟು ದೂರ ಇರುತ್ತದೆ? ಕೇವಲ ಒಬ್ಬ ಮನುಷ್ಯನಷ್ಟು" ಎನ್ನುವ ರೇವತಿ ಖಡಕ್ ಡೈಲಾಗ್ ಜೊತೆಗೆ 'ಟೈಗರ್-3' ಟ್ರೈಲರ್ ಶುರುವಾಗುತ್ತದೆ. ಬಳಿಕ "ಪ್ರತಿಯೊಬ್ಬನಿಗೂ ಜೀವನದಲ್ಲಿ ಅತ್ಯಮೂಲ್ಯವಾದ ಉಡುಗೊರೆ ಆತನ ಫ್ಯಾಮಿಲಿ ಆಗಿರುತ್ತದೆ. ಪತ್ನಿ ಪ್ರೀತಿ, ಮಕ್ಕಳ ಸಂತೋಷ. ನನ್ನಿಂದ ಇದನ್ನೆಲ್ಲಾ ನೀವು ಕಿತ್ತುಕೊಂಡೆ ಟೈಗರ್, ಈಗ ನನ್ನ ಸರದಿ" ಎನ್ನುವ ಇಮ್ರಾನ್ ಹಶ್ಮಿ ಡೈಲಾಗ್ ಕುತೂಹಲ ಮೂಡಿಸುತ್ತದೆ.
ಟೈಗರ್ ರಾಥೋರ್ ತನಗೆ ಗೊತ್ತಿಲ್ಲದೇ ಯಾರಿಗೋ ತೊಂದರೆ ಮಾಡಿರುತ್ತಾನೆ. ಆತನ ಈಗ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಅದಕ್ಕಾಗಿ ಎಲ್ಲದಕ್ಕೂ ಸಿದ್ಧ ಎಂದು ಸವಾಲು ಹಾಕಿದ್ದಾನೆ. ದೇಶನ ದೃಷ್ಟಿಯಲ್ಲಿ ಟೈಗರ್‌ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾನೆ. ತನ್ನ ಕುಟುಂಬವನ್ನು ತನ್ನಿಂದ ದೂರ ಮಾಡಿದಂತ ಟೈಗರ್ ಮಗನನ್ನು ಮುಂದಿಟ್ಟುಕೊಂಡು ಯುದ್ಧಕ್ಕೆ ಇಳಿದಿದ್ದಾರೆ. ಮೈಂಡ್ ಗೇಮ್ ಮೂಲಕ ಟೈಗರ್‌ಗೆ ಸವಾಲು ಹಾಕಿದ್ದಾನೆ. ಈ ಸವಾಲಿನಲ್ಲಿ ಟೈಗರ್ ಗೆಲ್ಲೋದು ಹೇಗೆ? ಅನ್ನೋದನ್ನು ತೆರೆಮೇಲೆ ನೋಡಬೇಕು.
ಬಾಲಿವುಡ್ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಹೀರೊ ಆಗಿಯೇ ಹೆಚ್ಚು ಗುರ್ತಿಸಿಕೊಂಡಿದ್ದ ಇಮ್ರಾನ್ ಹಶ್ಮಿ ಈ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಇನ್ನು ಸಲ್ಮಾನ್ ಖಾನ್ ಎಂದಿನಂತೆ ತಮ್ಮ ಆಕ್ಷನ್ ಧಮಾಕ ಮೂಲಕ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ. ಕತ್ರೀನಾ ಕೈಫ್ ಕೂಡ ಭರ್ಜರಿ ಸ್ಟಂಟ್ಸ್ ಮಾಡಿ ಗಮನ ಸೆಳೆದಿದ್ದಾರೆ. ಟ್ರೈಲರ್ ಅಭಿಮಾನಿಗಳ ಮನಗೆದ್ದಿದೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ನೋಡೊಕೆ ಕಾಯುವಂತಾಗಿದೆ.
ರಿಡ್ಡಿ ದೊಗ್ರಾ, ವಿಶಾಲ್ ಜೆತ್ವಾ, ಕುಮುದ್ ಮಿಶ್ರಾ, ರಣ್‌ವೀರ್ ಶೋರಿ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ 'ಟೈಗರ್'-3 ಸಿನಿಮಾ ನಿರ್ಮಾಣವಾಗಿದೆ. ಪ್ರೀತಂ ಸಂಗೀತ, ಅನಯ್ ಗೋಸ್ವಾಮಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಹಿಂದೆ 'ಪಠಾಣ್' ಸಿನಿಮಾದಲ್ಲಿ ಟೈಗರ್ ಅವಿನಾಶ್ ಸಿಂಗ್ ರಾಥೋರ್ ಆಗಿ ಸಲ್ಲು ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಇದೀಗ 'ಟೈಗರ್-3' ಚಿತ್ರದಲ್ಲಿ 'ಪಠಾಣ್' ಅವತಾರದಲ್ಲಿ ಶಾರುಖ್ ದರ್ಶನ ಕೊಡಲಿದ್ದಾರೆ. ನವೆಂಬರ್ 12ಕ್ಕೆ ಸಿನಿಮಾ ರಿಲೀಸ್ ತಯಾರಿ ನಡೀತಿದೆ.


Click it and Unblock the Notifications











