RRR ಕಾರ್ಯಕ್ರಮದಲ್ಲಿ ಹೊಸ ಸಿನಿಮಾ ಘೋಷಿಸಿದ ಸಲ್ಮಾನ್!
ಭಾರತ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ಆರ್ಆರ್ಆರ್' ಕೆಲವೇ ದಿನಗಳಲ್ಲಿ ತೆರೆ ಕಾಣಲಿದ್ದು, ಚಿತ್ರತಂಡವೂ ಅದ್ಧೂರಿಯಾಗಿ ಸಿನಿಮಾದ ಪ್ರಚಾರ ಕಾರ್ಯಕ್ರಮಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಆಯೋಜಿಸುತ್ತಾ ಬರುತ್ತಿದೆ.
ನಿನ್ನೆ ಮುಂಬೈ ನಗರದಲ್ಲಿ ಅದ್ಧೂರಿಯಾಗಿ 'ಆರ್ಆರ್ಆರ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ನಟ ಸಲ್ಮಾನ್ ಖಾನ್ ಆಗಮಿಸಿದ್ದರು. ಶೋ ಯಶಸ್ವಿಯಾಗಿದ್ದು, ವೇದಿಕೆ ಮೇಲೆ ಮಾತನಾಡಿದ ಸಲ್ಮಾನ್ ಖಾನ್ ತಮ್ಮ ಮುಂದಿನ ಸಿನಿಮಾದ ಘೋಷಣೆಯನ್ನು ಮಾಡಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮದ ಲೈ ಟೆಲಿಕಾಸ್ಟ್ ಅನ್ನು 'ಆರ್ಆರ್ಆರ್' ತಂಡ ಮಾಡಿರಲಿಲ್ಲ. ಆದರೆ ಕಾರ್ಯಕ್ರಮದಲ್ಲಿ ಹಾಜರಿದ್ದ ಹಲವು ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದ ವರದಿ ಮಾಡಿದ್ದು, ಸಲ್ಮಾನ್ ಖಾನ್, ತಮ್ಮ ಈ ಹಿಂದಿನ ಸೂಪರ್-ಡೂಪರ್ ಹಿಟ್ ಸಿನಿಮಾದ ಮುಂದುವರೆದ ಭಾಗದ ಬಗ್ಗೆ ಘೋಷಣೆ ಮಾಡಿದ್ದು ವರದಿ ಮಾಡಿದ್ದಾರೆ.
ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯಿಜಾನ್' ಸಿನಿಮಾ 2015 ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಸಿನಿಮಾಕ್ಕೆ ಕತೆಯನ್ನು 'ಆರ್ಆರ್ಆರ್' ನಿರ್ದೇಶಕ ಎಸ್‌ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದಿದ್ದು, ಸಿನಿಮಾಕ್ಕೆ ಬಂಡವಾಳ ಹಾಕಿದವರಲ್ಲಿ ಕನ್ನಡದ ರಾಕ್‌ಲೈನ್ ವೆಂಕಟೇಶ್ ಸಹ ಒಬ್ಬರು.
ಇದೀಗ ನಿನ್ನೆ 'ಆರ್ಆರ್ಆರ್' ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಲ್ಮಾನ್ ಖಾನ್, ವೇದಿಕೆ ಮೇಲೆ ಮಾತನಾಡುತ್ತಾ, 'ಭಜರಂಗಿ ಭಾಯಿಜಾನ್ 2' ಸಿನಿಮಾ ಖಂಡಿತ ನಿರ್ಮಾಣವಾಗುತ್ತದೆ. ಅದಕ್ಕೆ ಕತೆಯನ್ನು ಎಸ್‌ಎಸ್ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರೇ ಬರೆಯಲಿದ್ದಾರೆ ಎಂದರು. ಆ ಮೂಲಕ ಸೂಪರ್ ಹಿಟ್ ಸಿನಿಮಾದ ಮತ್ತೊಂದು ಸೀಕ್ವೆಲ್‌ಗೆ ಸಲ್ಮಾನ್ ಖಾನ್ ರೆಡಿಯಾಗಿದ್ದಾರೆ ಎಂಬುದು ಅಭಿಮಾನಿಗಳಿಗೆ ಖಾತ್ರಿಯಾಯಿತು.
ವಿಜಯೇಂದ್ರ ಪ್ರಸಾದ್ ಸಹ ಈ ಬಗ್ಗೆ ತೆಲುಗಿನ 'ಆಲಿ ತೊ ಸರದಾಗ' ಕಾರ್ಯಕ್ರಮದಲ್ಲಿ ಮಾತನಾಡಿ, 'ಭಜರಂಗಿ ಭಾಯಿಜಾನ್ 2' ಸಿನಿಮಾ ಆಗಬೇಕು, ಅದಕ್ಕೆ ನಾನೇ ಕತೆ ಬರೆಯಬೇಕು ಎಂದಿದ್ದರು. ಮಾತುಕತೆಗಳು ಜಾರಿಯಲ್ಲಿವೆ ಎಂದೂ ಸಹ ಹೇಳಿದ್ದರು. ಅದೇ ವಿಷಯವನ್ನು ಸಲ್ಮಾನ್ ಖಾನ್ ಇದೀಗ ಸ್ಪಷ್ಟಪಡಿಸಿದ್ದಾರೆ.

ರಾಮ್ ಚರಣ್-ಜೂ ಎನ್‌ಟಿಆರ್ ಬಗ್ಗೆ ಸಲ್ಮಾನ್ ಮಾತು
ಕಾರ್ಯಕ್ರಮದಲ್ಲಿ ನಟ ರಾಮ್ ಚರಣ್ ಹಾಗೂ ಜೂ ಎನ್‌ಟಿಆರ್ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, 'ರಾಮ್ ಚರಣ್ ನಾನು ಕಂಡ ಅತ್ಯಂತ ಶಿಸ್ತಿನ ಹಾಗೂ ಶ್ರಮಹಾಕಿ ಕೆಲಸ ಮಾಡುವ ನಟ'' ಎಂದರು. 'ಜೂ ಎನ್‌ಟಿಆರ್ ನಟನೆ ನನಗೆ ಬಹಳ ಇಷ್ಟ' ಎಂದು ಸಲ್ಮಾನ್ ಖಾನ್ ಹೇಳಿದರು. ಜೂ ಎನ್‌ಟಿಆರ್ ಸಹ ಸಲ್ಮಾನ್ ಖಾನ್ ಬಗ್ಗೆ ಮಾತನಾಡಿ, ''ನಾನು ಚಿಕ್ಕವಯಸ್ಸಿನಿಂದಲೂ ಸಲ್ಮಾನ್ ಖಾನ್ ಅಭಿಮಾನಿ. ಅವರೊಟ್ಟಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ಬಹಳ ಖುಷಿ ತಂದಿದೆ'' ಎಂದರು.

''ಸಿನಿಮಾದಲ್ಲಿ ಮಾತ್ರವಲ್ಲ, ನನ್ನ ಕುಟುಂಬದ ಭಾಗ ಅವರು''
ನಿರ್ದೇಶಕ ರಾಜಮೌಳಿ ಮಾತನಾಡಿ, ತಮ್ಮ ಸಿನಿಮಾದ ಇಬ್ಬರು ನಾಯಕ ನಟರನ್ನು ಬಹುವಾಗಿ ಹೊಗಳಿದರು. ''ಈ ಇಬ್ಬರು ನಟರು ನನ್ನ ಸಿನಿಮಾದ ಭಾಗ ಮಾತ್ರವಲ್ಲ, ನನ್ನ ಜೀವನದ ಹಾಗೂ ಕುಟುಂಬದ ಪ್ರಮುಖ ಭಾಗ ಎಂದರು. ರಾಮ್ ಚರಣ್ ತೇಜ ಸಮುದ್ರವಿದ್ದಂತೆ, ಒಳಗೆ ಸಾಕಷ್ಟು ವಿಷಯ, ಸಂಪನ್ಮೂಲ ಇದೆ ಆದರೆ ಮೇಲೆ ಶಾಂತವಾಗಿ ಇರುತ್ತಾರೆ'' ಎಂದರು.

ರಾಮ್ ಚರಣ್-ಜೂ ಎನ್‌ಟಿಆರ್‌ಗೆ ಇರುವ ವ್ಯತ್ಯಾಸವೇನು?
''ಜೂ ಎನ್‌ಟಿಆರ್ ಸಿಡಿಲು ತುಂಬಿದ ಭೋರ್ಗರೆವ ಮಳೆಯಿದ್ದಂತೆ. ಅಬ್ಬರಿಸುತ್ತಾರೆ. ರಾಮ್ ಚರಣ್ ಒಬ್ಬ ಅದ್ಭುತ ನಟ ಆದರೆ ಆ ವಿಷಯ ಅವರಿಗೆ ಗೊತ್ತಿಲ್ಲ. ಜೂ ಎನ್‌ಟಿಆರ್ ಸಹ ಅದ್ಭುತವಾದ ನಟ ಆ ವಿಷಯ ಅವರಿಗೆ ಗೊತ್ತಿದೆ. ಇಂಥಹಾ ನಟರಿಂದಲೇ ನನ್ನನ್ನು 'ಸ್ಟಾರ್ ನಿರ್ದೇಶಕ' ಎನ್ನುತ್ತಾರೆ'' ಎಂದು ತಮ್ಮ ನಟರ ಬಗ್ಗೆ ಸೂಕ್ಷ್ಮ ವಿಷಯಗಳನ್ನು ರಾಜಮೌಳಿ ಮಾತನಾಡಿದರು. ವೇದಿಕೆ ಮೇಲೆ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್, ನಟಿ ಆಲಿಯಾ ಭಟ್, ಶ್ರೆಯಾ ಶಿರಿನ್ ಸಹ ಹಾಜರಿದ್ದರು. 'ಆರ್ಆರ್ಆರ್' ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕನ್ನು ಕರಣ್ ಜೋಹರ್ ಪಡೆದಿದ್ದಾರೆ. ಈ ಹಿಂದೆ 'ಬಾಹುಬಲಿ' ಸಿನಿಮಾದ ಹಕ್ಕನ್ನು ಅವರೇ ಪಡೆದಿದ್ದರು. ಅದು ದೊಡ್ಡ ಲಾಭವನ್ನು ಅವರಿಗೆ ತಂದುಕೊಟ್ಟಿತ್ತು. ಹಾಗಾಗಿ ಈಗ 'ಆರ್ಆರ್ಆರ್' ಸಿನಿಮಾದ ಹಕ್ಕು ಸಹ ಪಡೆದುಕೊಂಡಿದ್ದಾರೆ.

'ಆರ್ಆರ್ಆರ್' ಸಿನಿಮಾ ಬಿಡುಗಡೆ ದಿನಾಂಕ
'ಆರ್ಆರ್ಆರ್' ಸಿನಿಮಾವು ಜನವರಿ 07 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಕುರಿತಾದ ಕತೆಯಾಗಿದೆ. ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮ ರಾಜು ಆಗಿ ರಾಮ್ ಚರಣ್ ತೇಜ, ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್‌ಟಿಆರ್ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಸೀತಾ ಪಾತ್ರದಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್, ಶ್ರೆಯಾ ಶಿರಿನ್ ಸಹ ಸಿನಿಮಾದ ಪ್ರಮುಖ ಪಾತ್ರದಲ್ಲಿದ್ದಾರೆ. ಕನ್ನಡಿಗ ಅರುಣ್ ಸಾಗರ್ ಸಹ ಸಿನಿಮಾದಲ್ಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಡಿವಿವಿ ದಯಾನಂದ್. ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಬಹಳ ವೈರಲ್ ಆಗಿದೆ.


Click it and Unblock the Notifications











