ಮತ್ತೆ 'ಬಾಡಿಗಾರ್ಡ್'ಗೆ ಜೋತುಬಿದ್ದ ಸಲ್ಮಾನ್ ಖಾನ್
ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕ ಸಿದ್ಧಿಕ್ ನಿರ್ದೇಶನದ ಬಾಡಿಗಾರ್ಡ್, ಹಿಂದಿ ಭಾಷೆಯಲ್ಲಿ ಮಾತ್ರವಲ್ಲದೇ ಇತರ ಮೂರು ಭಾಷೆಗಳಲ್ಲಿ ರೀಮೇಕ್ ಆಗಿದೆ. ಬಾಲಿವುಡ್ ಬಿಟ್ಟು ಉಳಿದ ಭಾಷೆಗಳಲ್ಲಿ ಈ ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ. ಈ ಚಿತ್ರವನ್ನು ಅತುಲ್ ಅಗ್ನಿಹೋತ್ರಿ ಸಲ್ಮಾನ್ ಖಾನ್ ಹಾಗೂ ಕರೀನಾ ಕಪೂರ್ ತಾರಾಜೋಡಿಯನ್ನು ಹಾಕಿಕೊಂಡು ನಿರ್ಮಿಸಿದ್ದರು.
ಬಾಕ್ಸ್ ಆಫಿಸ್ ಗಳಿಕೆಯಲ್ಲಿ ಈ ಚಿತ್ರ ಇತಿಹಾಸ ನಿರ್ಮಿಸಿತು. ಬರೋಬ್ಬರಿ 230 ಕೋಟಿ ರು. ಗಳಿಸಿದ ಈ ಚಿತ್ರ 2011ರ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ಈ ಎಲ್ಲಾ ಕಾರಣಗಳಿಂದ ಈ ಚಿತ್ರ ಮತ್ತೆ ಭಾಗ-2 ರ ಮೂಲಕ ತೆರೆಗೆ ಬರಲು ಸಿದ್ಧವಾಗುತ್ತಿದೆ.
ಬಾಡಿಗಾರ್ಡ್ ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಪಕ ಅತುಲ್ ಅಗ್ನಿಹೋತ್ರಿಯವರೇ ಈಗ ಬಾಡಿಗಾರ್ಡ್-2 ಚಿತ್ರವನ್ನೂ ನಿರ್ಮಿಸಲಿದ್ದಾರೆ. ಆದರೆ, ಸದ್ಯದ ಸಮಾಚಾರದ ಪ್ರಕಾರ ನಿರ್ದೇಶಕರು ಸಿದ್ಧಿಕ್ ಅಲ್ಲ. ಈಗಷ್ಟೇ ಕಥೆ, ಚಿತ್ರಕಥೆ ಹಂತದಲ್ಲಿರುವ ಈ ಪ್ರಾಜೆಕ್ಟ್ ಸಿದ್ಧವಾದ ತಕ್ಷಣ ಉಳಿದ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಸ್ವತಃ ಅತುಲ್ ಹೇಳಿದ್ದಾರೆ.
ಹೀಗಾಗಿ ಸಲ್ಮಾನ್ ಖಾನ್ ಮತ್ತೊಮ್ಮೆ ಬಾಡಿಗಾರ್ಡ್ ಆಗಿ ಬರಲಿದ್ದಾರೆ. ಸಲ್ಮಾನ್ ಖಾನ್ ಅಭಿಮಾನಿಗಳು ಈ ಸುದ್ದಿ ಕೇಳಿ ಸಖತ್ ಖುಷಿಯಾಗಿದ್ದಾರೆ. ಮತ್ತೆ ಸಲ್ಮಾನ್ 'ಬಾಡಿ'ಗಾರ್ಡ್ ನೋಡಲು ಅವರ ಮಹಿಳಾ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದಷ್ಟು ಬೇಗ ಬಾಡಿಗಾರ್ಡ್ 2 ಬರಲಿ ಎಂಬ ಸಂದೇಶ ಬಾಲಿವುಡ್ ಅಂಗಳದಿಂದ ರವಾನೆಯಾಗಿದೆ. (ಏಜೆನ್ಸೀಸ್)


Click it and Unblock the Notifications












