9 ಕೋಟಿ ಸಾಲ ; ಅವಾರ್ಡ್ ಫಂಕ್ಷನ್‌ನಲ್ಲಿ ರಾಜ್‌ಪಾಲ್ ಯಾದವ್‌ಗೆ ಅವಮಾನ - ಪತ್ರಕರ್ತನ ವಿರುದ್ಧ ಸಿಡಿದೆದ್ದ ಸಲ್ಮಾನ್ ಖಾನ್
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಹಾಸ್ಯ- ಅಪಹಾಸ್ಯದ ನಡುವೆ ಒಂದು ಸ್ಪಷ್ಟವಾದ ಗೆರೆ ಇತ್ತು. ಆದರೆ, ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಾಸ್ಯ ಅಂದರೆ ದ್ವಂದಾರ್ಥದ ಸಂಭಾಷಣೆ ಎನ್ನುವಂತೆ ಆಗಿದೆ. ಹಾಸ್ಯಾಧಾರಿತ ಟೀಕೆ ಈ ಹಿಂದೆ ಜನರ ಮನಸನ್ನು ಹಗುರವಾಗಿಸುತ್ತಿತ್ತು.
ಆದರೆ ಈಗ ಸ್ಟ್ಯಾಂಡಪ್ ಕಾಮಿಡಿ ಮತ್ತು ರಿಯಾಲಿಟಿ ಶೋಗಳ ಭರಾಟೆಯ ನಡುವೆ ಹಾಸ್ಯ ಹಲವರ ಮನಸನ್ನು ಭಾರವಾಗಿಸುತ್ತಿದೆ. ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಆದರೆ ಇದನ್ನರಿಯದೇ ಕೆಲವರು ಹಾಸ್ಯದ ಹೆಸರಿನಲ್ಲಿ ವ್ಯಕ್ತಿಯ ತೇಜೋವಧೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವಮಾನ ಮಾಡುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್‌ಪಾಲ್ ಯಾದವ್ ಅವರಿಗಾದ ಅನುಭವ ಅತ್ಯುತ್ತಮ ಉದಾಹರಣೆ.

ಹೌದು, ರಾಜ್‌ಪಾಲ್ ಯಾದವ್.. ಬಾಲಿವುಡ್‌ನ ಒನ್ ಆಫ್ ದಿ ಬೆಸ್ಟ್ ಕಾಮೆಡಿಯನ್. '' ಜಂಗಲ್''.. ''ಹಂಗಾಮಾ''.. ''ಫಿರ್ ಹೇರಾ ಪೇರಿ''.. ''ಚುಪ್ ಚುಪ್ ಕೇ''.. ''ಭೂಲ್ ಭೂಲಯ್ಯ''..
ಹೀಗೆ ಒಂದಾ.. ಎರಡಾ.. ಹಲವಾರು ಚಿತ್ರ.. ತರಹೇವಾರಿ ಪಾತ್ರಗಳ ಮೂಲಕ ಹತ್ ಹತ್ರ 30 ವರ್ಷಗಳಿಂದ ಮನೆ ಮಾತಾದವರು ರಾಜ್‌ಪಾಲ್ ಯಾದವ್. ಆದರೆ ಸಿನಿಮಾ ಹುಚ್ಚು. ಈ ವರ್ಷದ ಆರಂಭದಲ್ಲಿ ಇವರನ್ನು ಜೈಲು ಪಾಲಾಗುವಂತೆ ಮಾಡಿತ್ತು. ''ಅತಾ ಪತಾ ಲಾಪತಾ'' ಎಂಬ ಚಿತ್ರ ನಿರ್ಮಾಣ ಮಾಡಿದ ತಪ್ಪಿಗೆ 9 ಕೋಟಿ ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್ ಕಂಬಿ ಎಣಿಸಬೇಕಾಯ್ತು.
ಸದ್ಯ ರಾಜ್ ಪಾಲ್ ಯಾದವ್ ಜಾಮೀನು ಪಡೆದು ಹೊರ ಬಂದಿದ್ದಾರೆ. ಮತ್ತೆ ತಮ್ಮನ್ನು ತಾವು ಚಿತ್ರರಂಗದಲ್ಲಿ ತೋಡಗಿಸಿಕೊಂಡಿದ್ಧಾರೆ. ಆದರೆ ಇವರ ಈ ಅಸಹಾಯಕತೆ ಹಲವರ ಪಾಲಿಗೆ ಮನರಂಜನೆಯ ಸರಕಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊನ್ನೆ (ಏಪ್ರಿಲ್ 5) ನಡೆದ ''ಸ್ಕ್ರೀನ್ ಅವಾರ್ಡ್ಸ್ 2026''ರಲ್ಲಿ ರಾಜ್‌ಪಾಲ್ ಯಾದವ್ ಅವರನ್ನು ಎಲ್ಲರೆದುರು ಅವಮಾನಿಸಲಾಗಿದೆ.
ಹೌದು, ಕಾರ್ಯಕ್ರಮದ ನಡುವೆ ಡಾಲರ್ ಮತ್ತು ಆರ್ಥಿಕತೆಯ ಕುರಿತು ಚರ್ಚೆ ನಡೆಯುತ್ತಿತ್ತು. ಈ ಸಮಯದಲ್ಲಿ ನಿರೂಪಣೆ ಮಾಡುತ್ತಿದ್ದ ಪತ್ರಕರ್ತ ಸೌರಭ್ ದ್ವಿವೇದಿ, ರಾಜ್‌ಪಾಲ್ ಯಾದವ್ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ರಾಜ್‌ಪಾಲ್ ಯಾದವ್ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಡಾಲರ್ ಎದುರು ನಮ್ಮ ರೂಪಾಯಿಯ ಮೌಲ್ಯ ನಿರಂತರವಾಗಿ ಕುಸಿಯತ್ತಲೇ ಇದೆ ಎಂದಿದ್ದಾರೆ.
ಈ ಸಮಯದಲ್ಲಿ ನಿರೂಪಕ ಸೌರಭ್ ದ್ವಿವೇದಿ ಡಾಲರ್ ಮತ್ತು ರೂಪಾಯಿ ಎಷ್ಟೇ ಏರಿಳಿತ ಕಂಡರೂ, ನೀವು ಸಾಲ ಪಡೆದ ಹಣವನ್ನು ಮರಳಿ ಕೊಡಲೇಬೇಕಾಗುತ್ತೆ ಎಂದು ಹೇಳಿದ್ದಾರೆ. ಆರ್ಥಿಕತೆ ಮತ್ತು ಡಾಲರ್ ಬೆಲೆಯ ಏರಿಳಿತದ ಚರ್ಚೆಯ ನಡುವೆ ತಮ್ಮ ಹೆಸರು ಮತ್ತು ತಮ್ಮ ವಿವಾದದ ವಿಷಯ ಪ್ರಸ್ತಾಪವಾಗಿದ್ದನ್ನು ಕಂಡು ರಾಜ್ ಪಾಲ್ ಯಾದವ್ ಅರೆಕ್ಷಣ ಅವಕ್ಕಾಗಿದ್ದಾರೆ. ಮುಜುಗರದಿಂದ ತಲೆ ತಗ್ಗಿಸಿದ್ದಾರೆ.
ಆಗ ಮತ್ತೊಬ್ಬ ನಿರೂಪಕ ಜಾಕಿರ್ ಖಾನ್ ಮಧ್ಯಪ್ರವೇಶಿಸಿ, ಈ ವಿಷಯ ನ್ಯಾಯಾಲಯದಲ್ಲಿದೆ, ಹಾಗಾಗಿ ಅದನ್ನು ಅಲ್ಲೇ ಬಿಡುವುದು ಒಳ್ಳೆಯದು ಎಂದು ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನ ಮಾಡಿದ್ಧಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ಸೌರಭ್ ದ್ವಿವೇದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ. ವೈಯಕ್ತಿಕ ವಿಚಾರ ಹಾಸ್ಯದ ವಸ್ತುವಾಗಬಾರದೆಂದು ಕಿಡಿ ಕಾರುತ್ತಿದ್ದಾರೆ. ಸೌರಭ್ ದ್ವೀವೇದಿ ಅವರ ವಿರುದ್ಧ ವ್ಯಕ್ತವಾಗುತ್ತಿರುವ ಈ ಆಕ್ರೋಶವನ್ನು ಕಂಡು ಖುದ್ದು ರಾಜ್‌ಪಾಲ್ ಯಾದವ್ ಜನರಲ್ಲಿ ವಿಡಿಯೋ ಮೂಲಕ ಸೌರಭ್ ದ್ವಿವೇದಿ ಅವರನ್ನು ದ್ವೇಷಿಸದಂತೆ ಮನವಿ ಮಾಡಿಕೊಂಡಿದ್ಧಾರೆ. ವಿಷಯವನ್ನು ಇಲ್ಲಿಯೇ ಕೈ ಬಿಡುವಂತೆ ಕೇಳಿಕೊಂಡಿದ್ದಾರೆ. ಅವರು ನನ್ನ ಸಹೋದರನಿದ್ದಂತೆ ಎಂದು ಹೇಳಿದ್ಧಾರೆ.
ಸದ್ಯ ರಾಜ್‌ಪಾಲ್ ಯಾದವ್ ಅವರಿಗಾದ ಅವಮಾನದ ವಿಡಿಯೋ ಸಲ್ಮಾನ್ ಖಾನ್ ಅವರ ಕಣ್ಣಿಗೂ ಬಿದ್ದಿದ್ದು ಸಲ್ಮಾನ್ ಖಾನ್ ನಿಗಿನಿಗಿ ಕೆಂಡವಾಗಿದ್ಧಾರೆ. ಸೌರಭ್ ದ್ವಿವೇದಿ ಹೆಸರನ್ನು ಉಲ್ಲೇಖ ಮಾಡದೇ ಕಿಡಿ ಕಾರಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಲ್ಮಾನ್ ಖಾನ್, ರಾಜ್‌ಪಾಲ್ ಭಾಯ್, ನೀವು ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದೀರಿ. ನಿಮ್ಮ ಕೆಲಸದ ಮೇಲೆ ನಮಗೆ ನಂಬಿಕೆ ಇದೆ, ಅದಕ್ಕಾಗಿಯೇ ನಾವೆಲ್ಲರೂ ನಿಮ್ಮನ್ನು ಮತ್ತೆ ಮತ್ತೆ ನಮ್ಮ ಸಿನಿಮಾಗಳಿಗೆ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ನಿಮ್ಮಲ್ಲಿ ಆ ಪ್ರತಿಭೆ ಇದೆ, ಅದರಿಂದ ಮೆರಗು ತರ್ತಿರಾ. ನಿಮಗೆ ಮುಂದೆ ಬಹಳಷ್ಟು ಕೆಲಸ ಸಿಗಲಿದೆ, ಅಷ್ಟೇ ಅಲ್ಲ, ಇದೇ 'ಡಾಲರ್ ರೇಟ್' ನಲ್ಲೇ ಗೌರವದಿಂದ ಕೆಲಸ ಸಿಗುತ್ತಲೇ ಇರುತ್ತದೆ, ಇದೇ ಸತ್ಯ ಎಂದು ಹೇಳಿರುವ ಸಲ್ಮಾನ್ ಖಾನ್ ಒಮ್ಮೊಮ್ಮೆ ಮಾತಿನ ಭರದಲ್ಲಿ ಏನೋ ಅಚಾತುರ್ಯ ನಡೆದುಹೋಗುತ್ತದೆ, ಕೊಡಲೇ ಬೇಕು ಅಂದರೆ ಅದನ್ನು ತಲೆಯಲ್ಲಿ ಇಟ್ಕೊಳ್ಳಿ, ಹೃದಯದಿಂದ ಕೆಲಸ ಮಾಡಿ, ಡಾಲರ್ ಬೆಲೆ ಏರಲಿ ಅಥವಾ ಇಳಿಯಲಿ, ಅದರಿಂದ ನಮಗೇನು ವ್ಯತ್ಯಾಸವಾಗಲ್ಲ. ಕೊನೆಯಲ್ಲಿ ನೀವು ಕೊಡಬೇಕಿರುವುದು ಭಾರತದಲ್ಲಿಯೇ ತಾನೇ ಎಂದು ಹೇಳಿದ್ಧಾರೆ. ಈ ಮೂಲಕ ರಾಜ್‌ಪಾಲ್ ಯಾದವ್ ಅವರಿಗೆ ಮಾಡಲಾದ ಅವಮಾನಕ್ಕೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಹೆಸರೇಳದೇ ಸೌರಭ್ ದ್ವಿವೇದಿಗೆ ತಿರುಗೇಟು ಕೊಟ್ಟಿದ್ಧಾರೆ.
ಸದ್ಯ ಸಲ್ಮಾನ್ ಖಾನ್ ಅವರ ಈ ಟ್ವಿಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ರಾಜ್‌ಪಾಲ್ ಯಾದವ್ ಅವರಿಗೆ ಬೆಂಬಲ ಸೂಚಿಸಿದ್ದಕ್ಕೆ ಸಲ್ಮಾನ್ ಖಾನ್ ಅವರನ್ನು ಹೊಗಳುತ್ತಿದ್ಧಾರೆ. ಮಿಕ್ಕಂತೆ ಸೌರಭ್ ದ್ವಿವೇದಿ ವಿರುದ್ಧ ಆಕ್ರೋಶದ ಅಲೆ ಇನ್ನೂ ಹಾಗೇ ಇದೆ.


Click it and Unblock the Notifications











