"ಮನೆಗೆ ನುಗ್ಗಿ ಹೊಡಿತ್ತೀವಿ"; ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ
ಬಾಲಿವುಡ್ ನಟ ಸಲ್ಮಾನ್ ಖಾನ್ ಜೀವ ಭಯದಲ್ಲೇ ದಿನದೂಡುವಂತಾಗಿದೆ. ಈಗಾಗಲೇ ಎರಡ್ಮೂರು ಬಾರಿ ಸಲ್ಲುಗೆ ಜೀವ ಬೆದರಿಕೆ ಬಂದಿದೆ. ಇದೀಗ ಸಲ್ಮಾನ್ ಖಾನ್‌ಗೆ ಮತ್ತೆ ಬೆದರಿಕೆ ಹಾಕಿ ಸಂದೇಶವೊಂದು ಮುಂಬೈ ಸಂಚಾರ ಪೊಲೀಸರಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಚಾರ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಭಾನುವಾರ(ಏಪ್ರಿಲ್ 13) ಸಂದೇಶವೊಂದು ಬಂದಿದೆ. ಅದನ್ನು ಕಳುಹಿಸುವವರು ನಟ ಸಲ್ಮಾನ್ ಖಾನ್ ಕಾರನ್ನು ಸ್ಫೋಟಿಸುವುದಾಗಿ ಹಾಗೂ ಆತನ ನಿವಾಸಕ್ಕೆ ನುಗ್ಗಿಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೊಯ್ ಪದೇ ಸಲ್ಮಾನ್ ಖಾನ್‌ಗೆ ಬೆದರಿಕೆ ಒಡ್ಡುತ್ತಿರುವುದು ಗೊತ್ತೇಯಿದೆ.

ಈ ಹಿಂದೆ ಸಲ್ಮಾನ್ ಖಾನ್ ವಾಸಿಸುವ ಅಪಾರ್ಟ್‌ಮೆಂಟ್ ಬಳಿಕ ದುಷ್ಕರ್ಮಿಗಳು ಗುಂಡಿನ ಹಾರಿಸಿ ಪರಾರಿ ಆಗಿದ್ದರು. ಅಂದಿನಿಂದ ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಿಸಲಾಗಿದೆ. ಸಿನಿಮಾ ಚಿತ್ರೀಕರಣ, ಪ್ರಚಾರ ಹೀಗೆ ಎಲ್ಲಾ ಸಲ್ಲು ಹೋದರೂ ಬಂದರೂ ಭಾರೀ ಭದ್ರತೆ ನೀಡಲಾಗುತ್ತಿದೆ. ಬುಲೆಟ್ ಫ್ರೂಪ್ ಕಾರಿನಲ್ಲಿ ಬಾಲಿವುಡ್ ಭಾಯಿಜಾನ್ ಓಡಾಡುವಂತಾಗಿದೆ.
ಸದ್ಯ ಬಂದಿರುವ ವಾಟ್ಸಪ್ ಬೆದರಿಕೆ ಸಂದೇಶ ಕಳುಹಿಸಿದ್ದು ಯಾರು? ಯಾಕೆ? ಅದರ ಸತ್ಯಾಸತ್ಯತೆ ಏನು? ಎಂದು ಸೈಬರ್ ಪೊಲೀಸ್ ತನಿಖೆ ನಡೆಸುತ್ತಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಸಂದೇಶ ಬರುತ್ತಿದ್ದಂತೆ ಮೊದಲು ಸಲ್ಮಾನ್ ಖಾನ್ ಅವರಿಗೆ ಕರೆ ಮಾಡಿ ಜಾಗ್ರತೆಯಿಂದ ಇರುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಈಗಾಗಲೇ ಸರ್ಕಾರ ವೈ ಪ್ಲಸ್ ಭದ್ರತೆಯನ್ನು ಸಲ್ಮಾನ್ ಖಾನ್ ಅವರಿಗೆ ಒದಗಿಸಿದೆ.
'ಸಿಕಂದರ್' ಸಿನಿಮಾ ಚಿತ್ರೀಕರಣ, ಪ್ರಚಾರದ ವೇಳೆಯೂ ಭಾರೀ ಭದ್ರತೆ ಏಪರ್ಡಿಸಲಾಗಿತ್ತು. ಸುದ್ದಿಗೋಷ್ಠಿ ನಡೆಸಲು ಕೂಡ ಸಲ್ಲು ಹೆದರುವಂತಾಯಿತು. ಕೊನೆಗೆ ತಮಗಿರುವ ಜೀವ ಬೆದರಿಕೆ ಬಗ್ಗೆ ಅವರು ಮಾತನಾಡಿದ್ದರು. "ಎಲ್ಲಾ ಆ ದೇವರು, ಅಲ್ಲಾ ಕೈಯಲ್ಲಿದೆ. ಆತ ಏನು ಬರೆದಿದ್ದಾನೋ ಅದು ನಡೆಯುತ್ತದೆ. ದೇವರು ಎಷ್ಟು ಆಯಸ್ಸು ಕೊಟ್ಟಿದ್ದಾನೋ ಅಷ್ಟೇ ಜೀವಿಸುತ್ತೇನೆ. ಇದೆಲ್ಲಾ ದೇವರ ಇಚ್ಛೆ. ಕೆಲವೊಮ್ಮೆ, ಇಷ್ಟೊಂದು ಭದ್ರತಾ ಸಿಬ್ಬಂದಿ ಜೊತೆ ಓಡಾಡುವುದು ಸಮಸ್ಯೆಯಾಗುತ್ತದೆ" ಎಂದು ಹೇಳಿದ್ದರು.
ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಆರೋಪಿ ಆಗಿದ್ದರು. ಇದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಕೆರಳಿಸಿತ್ತು. ಕಾರಣ ಕೃಷ್ಣಮೃಗವನ್ನು ಅವರ ಸಮುದಾಯ ಪವಿತ್ರವೆಂದು ಭಾವಿಸುತ್ತದೆ. ಪ್ರಕರಣದಲ್ಲಿ ಸಲ್ಮಾನ್ ಖಾನ್‌ಗೆ ಶಿಕ್ಷೆ ಆಗದಿದ್ದರೂ ನಾವು ಶಿಕ್ಷೆ ಕೊಡುತ್ತೇವೆ ಎನ್ನುವ ಅರ್ಥದಲ್ಲಿ ಹಿಂದೆ ಬೆದರಿಕೆ ಸಂದೇಶ ಬಂದಿತ್ತು. ಜೀವಬೆದರಿಕೆ ಹಿನ್ನೆಲೆ ನಿವಾಸಕ್ಕೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಆತ್ಮರಕ್ಷಣೆಗಾಗಿ ಸಲ್ಲು ಗನ್ ಇರಿಸಿಕೊಳ್ಳಲು ಲೈಸೆನ್ಸ್ ಸಹ ಪಡೆದಿದ್ದಾರೆ.
2018ರಲ್ಲಿ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯ್ ನ್ಯಾಯಾಲಯದ ಮುಂದೆ ಹೇಳಿದ್ದ. ಆದರೆ ಆಗ ಯಾರೂ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಲಾರೆನ್ಸ್ ಬಿಷ್ಣೋಯ್ ಸದ್ಯ ಜೈಲಿನಲ್ಲದ್ದಾನೆ. ಆದರೂ ಆತನ ಸಹಚರರು ಬಹಳ ಆಕ್ಟೀವ್ ಆಗಿದ್ದಾರೆ. ಜೈಲಿನಿಂದಲೇ ತನ್ನ ನೆಟ್‌ವರ್ಕ್ ಅನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾನೆ ಎನ್ನಲಾಗ್ತಿದೆ. ಎರಡು ವರ್ಷಗಳ ಹಿಂದೆ ಸಲ್ಲು ಮನೆಗೆ ರೋಹಿತ್ ಗಾರ್ಗ್ ಎಂಬ ವ್ಯಕ್ತಿಯಿಂದ ಬೆದರಿಕೆ ಸಂದೇಶದ ಇಮೇಲ್ ಬಂದಿತ್ತು.
ಈದ್ ಸಂಭ್ರಮದಲ್ಲಿ ಬಂದಿದ್ದ 'ಸಿಕಂದರ್' ಸಿನಿಮಾ ಗೆಲ್ಲಲಿಲ್ಲ. ಸದ್ಯ ಹೊಸದಾಗಿ ಸಲ್ಲು ಯಾವುದೇ ಸಿನಿಮಾ ಘೋಷಿಸಲಿಲ್ಲ. ತಮ್ಮ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯತ್ತಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಮರ ಏರಿ ಹಣ್ಣು ಕಿತ್ತಿರುವ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.


Click it and Unblock the Notifications











