ಕುಂಟು ನೆಪ?: ತಮ್ಮ ಸಿನಿಮಾಗಳ ಸೋಲಿಗೆ ವಿಚಿತ್ರ ಕಾರಣ ಕೊಟ್ಟು ಸಲ್ಲು ಟ್ರೋಲ್
ಸಲ್ಮಾನ್ ಖಾನ್ ನಟನೆಯ 'ಟೈಗರ್-3' ಸಿನಿಮಾ ದೀಪಾವಳಿ ಸಂಭ್ರಮದಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ 1000 ಕೋಟಿ ರೂ. ಕ್ಲಬ್ ಲೆಕ್ಕಾಚಾರ ನಡೀತಿದೆ. ಆದರೆ ಸಲ್ಲು ಸಿನಿಮಾ 500 ಕೋಟಿ ರೂ. ಕೂಡ ದಾಟಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.
YRF ಸ್ಪೈ ಯೂನಿವರ್ಸ್ ಭಾಗವಾದ ಟೈಗರ್ ಸರಣಿ 3ನೇ ಸಿನಿಮಾ ಇದು. ಚಿತ್ರದಲ್ಲಿ ಸಲ್ಲು ಜೋಡಿಯಾಗಿ ಮತ್ತೊಮ್ಮೆ ಕತ್ರೀನಾ ಕೈಫ್ ಮಿಂಚಿದ್ದಾರೆ. ಮನೀಶ್ ಶರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಹಾಗೂ ಹೃತಿಕ್ ರೋಷನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸುತ್ತಿಲ್ಲ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.

ಸಲ್ಮಾನ್ ಖಾನ್ ನಟನೆಯ ಇತ್ತೀಚಿನ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿಲ್ಲ. 'ಅಂತಿಮ್' ಹಾಗು 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದವು. ಆದರೆ ಸಲ್ಲು ಈ ಎರಡೂ ಸಿನಿಮಾ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಈ ಸಿನಿಮಾಗಳ ಕಲೆಕ್ಷನ್ ಬಗ್ಗೆ ತಮ್ಮದೇ ವಾದವನ್ನು ಮುಂದಿಟ್ಟಿದ್ದಾರೆ. ಆ ಸೋಲನ್ನು ಸಮರ್ಥಿಸಿಕೊಂಡಿದ್ದಾರೆ.
"ಈ ಚಿತ್ರಗಳು ಬಿಡುಗಡೆಯಾದಾಗ ಜನರು ಥಿಯೇಟರ್‌ಗಳಿಗೆ ಹೋಗುತ್ತಿರಲಿಲ್ಲ. ಸಾಲದ್ದಕ್ಕೆ ನಾವು ಬ್ಲಾಕ್‌ಬಸ್ಟರ್ ಟಿಕೆಟ್ ಬೆಲೆ ಫಿಕ್ಸ್ ಮಾಡಿರಲಿಲ್ಲ. ಬದಲಿಗೆ ನಾವು ಜನಪ್ರಿಯ ದರ ನಿಗದಿಪಡಿಸಿದ್ದೆವು. ಬಾಕ್ಸಾಫೀಸ್‌ನಲ್ಲಿ ಆ ಚಿತ್ರಗಳ ಕಲೆಕ್ಷನ್ ನಂಬರ್ ಕಡಿಮೆಯಾಗಿದ್ದರೂ ನಾವು ಪ್ರೇಕ್ಷಕರ ಹಣವನ್ನು ಉಳಿಸುವತ್ತ ಗಮನ ಹರಿಸಿದ್ದೇವೆ. ನೀವು ಟೈಗರ್- 3 ಚಿತ್ರವನ್ನು ಎಷ್ಟು ರೂ. ಕೊಟ್ಟು ನೋಡಿದ್ದೀರಿ? ರೂ 600, 1000?" ಎಂದು ಕೇಳಿದ್ದಾರೆ.
"ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಮತ್ತು ಅಂತಿಮ್ ಚಿತ್ರಗಳಿಗೆ ನಮ್ಮ ಟಿಕೆಟ್ ದರ 250 ರೂ.ಗಿಂತ ಹೆಚ್ಚಿರಲಿಲ್ಲ. ನಾವು ಕಡಿಮೆ ಗಳಿಸಿದ್ದೇವೆ, ಆದರೆ ಆ ಪ್ರಕ್ರಿಯೆಯಲ್ಲಿ ನಾವು ಪ್ರೇಕ್ಷಕರ ಹಣವನ್ನು ಉಳಿಸಿದ್ದೇವೆ. ನಾವು ಒಳ್ಳೆಯ ಕಾರ್ಯವನ್ನು ಮಾಡಿದ್ದೇವೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಇಂದು ಬಿಡುಗಡೆಯಾಗಿದ್ದರೆ, ಬಾಕ್ಸಾಫೀಸ್ ಸಂಖ್ಯೆ ಇದ್ದಕ್ಕಿಂತ ಹೆಚ್ಚು ಇರುತ್ತಿದ್ದವು" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಇನ್ನು ಸಂದರ್ಶನದ ವೇಳೆ ನಾನು ಬರೀ ಯಶಸ್ಸನ್ನು ಮಾತ್ರ ಅನುಭವಿಸುವುದಿಲ್ಲ. ನಿಜವಾದ ವಿಜೇತನಾಗಲು ಸೋಲಿನ ಕಹಿಯನ್ನು ಪಡೆಯುವುದು ಮುಖ್ಯ ಎಂದಿದ್ದಾರೆ. ಇನ್ನು ಈ ಹಿಂದೆ ಟೈಗರ್ -2 ಸಕ್ಸಸ್ ಬಗ್ಗೆ ಮಾತನಾಡಿದ್ದ ಸಲ್ಲು "ದೀಪಾವಳಿ ಹಾಗೂ ವಿಶ್ವಕಪ್ ಕ್ರಿಕೆಟ್ ಟೂರ್ನಿ ಇದ್ದಿದ್ದರಿಂದ ಪ್ರತಿಯೊಬ್ಬರ ಆಸಕ್ತಿಯು ಅದರಲ್ಲಿತ್ತು. ಆದರೂ ಸಿನಿಮಾ ಬಾಕ್ಸಾಫೀಸ್ ಗಳಿಕೆ ಅದ್ಭುತವಾಗಿದೆ. ನಮಗೆ ಆ ಬಗ್ಗೆ ಸಂತೋಷವಿದೆ" ಎಂದಿದ್ದರು.
ಸಲ್ಮಾನ್ ಖಾನ್ ಬಾಕ್ಸಾಫೀಸ್ ಕಲೆಕ್ಷನ್ ವಾದವನ್ನು ಕೆಲವರು ಒಪ್ಪಲು ಸಿದ್ಧರಿಲ್ಲ. ಸಿನಿಮಾ ಚೆನ್ನಾಗಿದ್ದರೆ ಕಲೆಕ್ಷನ್ ಚೆನ್ನಾಗಿ ಇರುತ್ತಿತ್ತು. KGF, ಕಾಂತಾರ ಸಿನಿಮಾಗಳ ಟಿಕೆಟ್ ದರ ಏನು ಹೆಚ್ಚಾಗಿರಲಿಲ್ಲ. ಎಲ್ಲಾ ಭಾಷೆಯ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸಿದರು. ಹಾಗಾಗಿ ಕಲೆಕ್ಷನ್ ಚೆನ್ನಾಗಿಯೇ ಆಯಿತು. ಸುಮ್ಮನೆ ಕುಂಟು ನೆಪ ಹೇಳಬಾರದು ಎಂದು ಟ್ರೋಲ್ ಮಾಡುತ್ತಿದ್ದಾರೆ.
ಸದ್ಯ ಸಲ್ಮಾನ್ ಖಾನ್ 'ಬಿಗ್‌ಬಾಸ್' ಶೋ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. 'ಟೈಗರ್' Vs 'ಪಠಾಣ್' ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಚಿತ್ರದಲ್ಲಿ ಶಾರುಖ್ ಜೊತೆ ಸಲ್ಲು ತೆರೆ ಹಂಚಿಕೊಳ್ಳಲಿದ್ದಾರೆ. ಸಿದ್ದಾರ್ಥ್ ಆನಂದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಯಶ್‌ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲೇ ಸಿನಿಮಾ ನಿರ್ಮಾಣವಾಗಲಿದೆ.


Click it and Unblock the Notifications











