Salman Khan: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಿದ ಸಲ್ಮಾನ್ ಪ್ರತಿಕ್ರಿಯೆ ಹೀಗಿತ್ತು
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಈ ವರ್ಷದ ಈ ವರೆಗಿನ ಬ್ಲಾಕ್ ಬಸ್ಟರ್ ಹಿಂದಿ ಸಿನಿಮಾ ಎನಿಸಿಕೊಂಡಿದೆ. 11 ಮಾರ್ಚ್‌ನಂದು ಬಿಡುಗಡೆ ಆದ ಈ ಸಿನಿಮಾ ಈವರೆಗೆ ಸುಮಾರು 250 ಕೋಟಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ.
ಸಿನಿಮಾದ ಬಗ್ಗೆ ಪರ-ವಿರೋಧ ಚರ್ಚೆಗಳು ಈಗಲೂ ನಡೆಯುತ್ತಲೇ ಇವೆ. ಸಿನಿಮಾವು ಮುಸ್ಲಿಂ ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳು 1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆಸಿದ ದೌರ್ಜನ್ಯದ ಕತೆಯನ್ನು ಹೊಂದಿದೆ.
ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡೆ ಈ ಸಿನಿಮಾ ಮಾಡಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ಸಿನಿಮಾವನ್ನು ಇಟ್ಟುಕೊಂಡು ಬಾಲಿವುಡ್‌ನ ಖಾನ್‌ಗಳನ್ನು ಅವರ ಧರ್ಮದ ಕಾರಣಕ್ಕೆ ತೆಗಳುವ ಕಾರ್ಯವೂ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.

ಆದರೆ ಖಾನ್‌ಗಳು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಮುಸ್ಲಿಂ ವಿರೋಧಿ ಅಥವಾ ಪ್ರೊಪಾಗಾಂಡ ಸಿನಿಮಾ ಎಂದೇನೂ ನೋಡದೆ ಕೇವಲ ಸಿನಿಮಾ ಆಗಿ ನೋಡಿದ್ದಾರೆ. ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಮೊದಲು ನಟ ಆಮಿರ್ ಖಾನ್ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ನಟ ಸಲ್ಮಾನ್ ಖಾನ್ 'ದಿ ಕಾಶ್ಮೀರ್ ಫೈಲ್ಸ್' ಅನ್ನು ಹೊಗಳಿದ್ದಾರೆ.
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದಲ್ಲಿ ನಟಿಸಿರುವ ಅನುಪಮ್ ಖೇರ್, ಸಲ್ಮಾನ್ ಖಾನ್ ಸಿನಿಮಾವನ್ನು ವೀಕ್ಷಿಸಿ ತಮಗೆ ಕರೆ ಮಾಡಿದ್ದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಅನುಪಮ್ ಖೇರ್, ''ಇರುವುದನ್ನು ಇದ್ದಹಾಗೆಯೇ ಹೇಳಬೇಕಾಗುತ್ತದೆ. ನಟ ಸಲ್ಮಾನ್ ಖಾನ್ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಬಳಿಕ ನನಗೆ ಕರೆ ಮಾಡಿದ್ದರು. ಸಿನಿಮಾವನ್ನು ಅವರು ಬಹುವಾಗಿ ಹೊಗಳಿದರು. ಅವರಿಗೆ ಸಿನಿಮಾ ಬಹಳ ಇಷ್ಟವಾಗಿದೆ'' ಎಂದಿದ್ದಾರೆ.
ಸಲ್ಮಾನ್ ಖಾನ್ ಮಾತ್ರವಲ್ಲ ನಟ ಆಮಿರ್ ಖಾನ್ ಸಹ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನಾಡಿದ್ದಾರೆ. ''ಆ ಸಿನಿಮಾ ಚೆನ್ನಾಗಿದೆ. ಅದರ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆಗಳು'' ಎಂದಿದ್ದಾರೆ.
ಅಕ್ಷಯ್ ಕುಮಾರ್, ಯಾಮಿ ಗುಪ್ತ, ಕಂಗನಾ ರಣೌತ್ ಸೇರಿದಂತೆ ಹಲವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಹೊಗಳಿದ್ದಾರೆ. ಇದರ ಜೊತೆಗೆ ಎಡಪಂಥೀಯ ಯೋಚನೆಗಳಿಂದ ಜನಪ್ರಿಯರಾಗಿರುವ ನಟಿ ತಾಪ್ಸಿ ಪನ್ನು ಸಹ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಹೊಗಳಿದ್ದಾರೆ.
ನಟಿ ಯಾಮಿ ಗುಪ್ತಾ ಪತಿ ಕಾಶ್ಮೀರಿ ಪಂಡಿತ್ ಆಗಿದ್ದು, ''ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನೋಡಿದ ಬಳಿಕ ಚಿತ್ರಮಂದಿರದಲ್ಲಿ ಕಣ್ಣೀರು ಹಾಕುತ್ತಿರುವ ಹಲವು ಕಾಶ್ಮೀರಿ ಪಂಡಿತರ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ನಮ್ಮ ನೋವು ನಿಜವಾದುದು. ನಾವು ಎಷ್ಟು ಕಾಲದಿಂದ ನಮ್ಮ ದುಃಖವನ್ನು, ನೋವನ್ನು ಅದುಮಿಟ್ಟುಕೊಂಡಿದ್ದೇವೆ ಎಂಬುದನ್ನು ತೋರಿಸುತ್ತದೆ. ಅತ್ತು ಹಗುರಾಗಲು ನಮಗೆ ಯಾವ ಭುಜವೂ ಇರಲಿಲ್ಲ, ನಮ್ಮ ಕಷ್ಟಗಳನ್ನು ಕೇಳಿಸಿಕೊಳ್ಳಲು ಯಾವ ಕಿವಿಯೂ ಇರಲಿಲ್ಲ'' ಎಂದು ಯಾಮಿ ಗೌತಮ್‌ರ ಪತಿ ಟ್ವೀಟ್ ಮಾಡಿದ್ದಾರೆ. ಪತಿಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನಟಿ ಯಾಮಿ ಗುಪ್ತಾ, ''ಕಾಶ್ಮೀರಿ ಪಂಡಿತ್ ಅನ್ನು ವಿವಾಹವಾಗಿರುವ ನನಗೆ ಜಮ್ಮು ಕಾಶ್ಮೀರದಲ್ಲಿ ಈ ಶಾಂತಿಪ್ರಿಯ ಸಮುದಾಯದ ಮೇಲೆ ನಡೆದ ದೌರ್ಜನ್ಯದ ಮಾಹಿತಿ ಇದೆ. ಆದರೆ ದೇಶದ ಬಹುತೇಕರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. 32 ವರ್ಷಗಳ ನಂತರ ಈ ಸಿನಿಮಾ ಬಂದು ಜನರಿಗೆ ಈಗ ಸತ್ಯದ ಅರಿವಾಗುತ್ತಿದೆ'' ಎಂದಿದ್ದಾರೆ.


Click it and Unblock the Notifications











