ಸಲ್ಮಾನ್ ಖಾನ್‌ಗೆ 'ರಾಕಿ ಭಾಯ್' ಹೆಸರಿನಲ್ಲಿ ಜೀವ ಬೆದರಿಕೆ; ಕೊಲೆ ಮಾಡುವ ದಿನಾಂಕ ಸಹ ಪ್ರಕಟಿಸಿದ ಕಿಡಿಗೇಡಿ!
ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಕರೆಗಳು ಆಗಾಗ ಬರುತ್ತಲೇ ಇರುತ್ತವೆ. ಈ ಹಿಂದೆಯೂ ಅನೇಕ ಬಾರಿ ಕೊಲೆ ಬೆದರಿಕೆ ಹಾಗೂ ಬಾಂಬ್ ಬೆದರಿಕೆ ಕರೆಗಳು ಹಾಗೂ ಇಮೇಲ್‌ಗಳು ಬಂದಿವೆ. ಈ ಪೈಕಿ ಅನೇಕ ಕರೆಗಳು ಹುಸಿ ಕರೆಗಳಾಗಿವೆ ಹಾಗೂ ಬಹುತೇಕ ಕರೆಗಳು ವಿದೇಶದ ಲೊಕೇಶನ್‌ಗಳಿಂದ ಬಂದಿದ್ದ ಕರೆಗಳಾಗಿವೆ.
ಇದೀಗ ಮತ್ತೊಂದು ಕೊಲೆ ಬೆದರಿಕೆ ಕರೆ ಸಲ್ಮಾನ್ ಖಾನ್‌ಗೆ ಬಂದಿದ್ದು, ಈ ಬಾರಿ ಭಾರತದ ಲೊಕೇಶನ್‌ನಿಂದ ಕೊಲೆ ಬೆದರಿಕೆ ಕರೆ ಬಂದಿರುವುದು ಆತಂಕವನ್ನು ಮೂಡಿಸಿದೆ. ಹೌದು, ಮುಂಬೈ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ರಾಜಸ್ಥಾನದ ಜೋಧ್‌ಪುರ್ ನಗರದಿಂದ ಸಲ್ಮಾನ್ ಖಾನ್‌ಗೆ ಬೆದರಿಕೆ ಕರೆ ಬಂದಿದೆ. ಕಾಲರ್ ಐಡಿಯಲ್ಲಿ ಈತನ ಹೆಸರು ರಾಕಿ ಭಾಯ್ ಎಂದು ಕಂಡುಬಂದಿದ್ದು, ಈತ ಗೋರಕ್ಷಕ ಎಂಬ ಮಾಹಿತಿ ಸಹ ಲಭ್ಯವಾಗಿದೆ.

ಅಲ್ಲದೇ ಈತ ಸಲ್ಮಾನ್ ಖಾನ್ ಅವರನ್ನು ಏಪ್ರಿಲ್ 30ರಂದೇ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಎಎನ್‌ಐ "ನಿನ್ನೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಬಂದ ಕರೆಯಲ್ಲಿ ರಾಜಸ್ಥಾನದ ಜೋಧ್‌ಪುರದ ರಾಕಿ ಭಾಯ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಏಪ್ರಿಲ್ 30 ರಂದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ" ಎಂದು ಬರೆದುಕೊಂಡು ಟ್ವೀಟ್ ಮಾಡಿದೆ.
ಇದಕ್ಕೂ ಮುನ್ನ ಭಾರತದ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಸಹ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ. ಈತ ಗಾಯಕ ಸಿಧು ಮೂಸೆವಾಲ ಹತ್ಯೆಗೂ ಸಹ ಯೋಜನೆ ಹಾಕಿಕೊಟ್ಟಿದ್ದ. ಹೀಗಾಗಿ ಎಚ್ಚೆತ್ತುಕೊಂಡಿದ್ದ ಸಲ್ಮಾನ್ ಖಾನ್ ಬುಲೆಟ್ ಪ್ರೂಫ್, ಬಿಳಿ ಬಣ್ಣದ ನಿಸ್ಸಾನ್ ಎಸ್‌ಯುವಿ ಕಾರನ್ನೂ ಸಹ ಖರೀದಿಸಿದ್ದರು. ಅಲ್ಲದೇ ತನ್ನ ಸೆಕ್ಯೂರಿಟಿ ಮಟ್ಟವನ್ನೂ ಸಹ ಹೆಚ್ಚಿಸಿಕೊಂಡಿದ್ದ ಸಲ್ಮಾನ್ ಖಾನ್ ವೆಪನ್ಸ್ ಲೈಸೆನ್ಸ್ ಅನ್ನೂ ಸಹ ಪಡೆದುಕೊಂಡಿದ್ದರು.

ಇನ್ನು ಕಳೆದ ಕೆಲ ತಿಂಗಳುಗಳಿಂದ ನಟ ಸಲ್ಮಾನ್ ಖಾನ್‌ಗೆ ಬರುತ್ತಿರುವ ಕೊಲೆ ಬೆದರಿಕೆ ಬಗ್ಗೆ ಅವರ ಕುಟುಂಬ ವರ್ಗ ಹಾಗೂ ಆಪ್ತ ವಲಯ ತುಂಬಾ ಜಾಗರೂಕತೆಯಿಂದ ಹಾಗೂ ಗಂಭೀರತೆಯಿಂದ ಚಿಂತಿಸಿದೆ. ಎಕಾನಾಮಿಕ್ ಟೈಮ್ಸ್‌ಗೆ ಸಲ್ಮಾನ್ ಖಾನ್ ಆಪ್ತರೊಬ್ಬರು ಈ ರೀತಿಯ ಹೇಳಿಕೆಯನ್ನು ನೀಡಿದ್ದರಂತೆ: "ಸಲ್ಮಾನ್ ಖಾನ್ ಅವರ ಕುಟುಂಬ ಮತ್ತು ಅವರ ತಂಡದ ಪ್ರತಿಯೊಬ್ಬರೂ ಗಂಭೀರವಾಗಿ ಅವರ ಸುರಕ್ಷತೆಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದಾರೆ. ಈ ಹೊಸ ಬೆದರಿಕೆಗಳು ವಿಷಯಗಳನ್ನು ಧೃತಿಗೆಸಿವೆ, ಆದರೆ ಪೊಲೀಸರು ಚೆನ್ನಾಗಿ ಇದರ ಕುರಿತು ಪ್ರತಿಕ್ರಿಯಿಸಿದ್ದು ಭದ್ರತಾ ವ್ಯವಸ್ಥೆಗಳು ಸೂಕ್ತವೆಂದು ಆಗಾಗ ಖಚಿತಪಡಿಸಿಕೊಳ್ಳುತ್ತಿದ್ದಾರೆ"
ಇನ್ನು 2021ರಲ್ಲಿ ರಾಧೆ ಹಾಗೂ ಅಂತಿಮ್ ಎಂಬ ಚಿತ್ರಗಳಲ್ಲಿ ನಟಿಸಿ ಸೋತಿದ್ದ ಸಲ್ಮಾನ್ ಖಾನ್ ಕಳೆದ ವರ್ಷ ಎರಡು ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ನಾಯಕನಾಗಿ ಯಾವ ಚಿತ್ರದಲ್ಲೂ ಸಹ ಅಭಿನಯಿಸಿರಲಿಲ್ಲ. ಈ ವರ್ಷವೂ ಸಹ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದ ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಾ ಜಾನ್' ಎಂಬ ಚಿತ್ರ ಇದೇ ಏಪ್ರಿಲ್ 21ರಂದು ಬಿಡುಗಡೆಯಾಗಲು ತಯಾರಾಗಿದೆ.
ಈ ಚಿತ್ರದಲ್ಲಿ ಸಲ್ಮಾನ್ ಖಾನ್ ನಾಯಕನಾಗಿದ್ದರೆ, ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಜತೆಗೆ ತೆಲುಗು ಸ್ಟಾರ್ ವಿಕ್ಟರಿ ವೆಂಕಟೇಶ್ ಸಹ ಚಿತ್ರದಲ್ಲಿ ನಟಿಸಿದ್ದು, ರಾಮ್ ಚರಣ್ ಸಹ ಹಾಡೊಂದಕ್ಕೆ ಸಲ್ಲು ಹಾಗೂ ವೆಂಕಿ ಮಾಮ ಜತೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರ 2014ರಲ್ಲಿ ತೆರೆಗೆ ಬಂದಿದ್ದ ತಮಿಳಿನ ಅಜಿತ್ ನಟನೆಯ ವೀರಂ ಚಿತ್ರದ ರಿಮೇಕ್ ಆಗಿದ್ದು, ಸಾಲು ಸಾಲು ಸೋಲು ಕಂಡಿರುವ ಸಲ್ಮಾನ್ ಖಾನ್‌ಗೆ ಒಂಬತ್ತು ವರ್ಷಗಳ ಹಳೆಯ ಈ ಕಥೆ ಗೆಲುವು ತಂದುಕೊಡಲಿದೆಯಾ ಕಾದು ನೋಡಬೇಕಿದೆ.


Click it and Unblock the Notifications











