ಸಲ್ಮಾನ್ ಖಾನ್ ಧರಿಸಿರುವ 714 ವಜ್ರಗಳಿರುವ ಈ ವಾಚ್‌ನ ಬೆಲೆ ಎಷ್ಟು, ವಿಶೇಷತೆಗಳೇನು..?
ಚಿತ್ರರಂಗದಲ್ಲಿ ಇರುವವರಿಗೆ ಸಾಮಾನ್ಯವಾಗಿ ಮೂರು ಮತ್ತೊಂದು ಶೋಕಿಗಳಿರುತ್ತವೆ. ಕೆಲವರಿಗೆ ಡ್ರೈವಿಂಗ್ ಹುಚ್ಚು ತಲೆಗೇರಿದರೆ, ಇನ್ನೂ ಕೆಲವರಿಗೆ ದುಬಾರಿ ಬಟ್ಟೆಗಳನ್ನು ಹಾಕಿಕೊಂಡು ಓಡಾಡುವ ಹುಚ್ಚಿರುತ್ತೆ. ಮತ್ತೂ ಕೆಲವರಿಗೆ ದುಬಾರಿ ಬೆಲೆಯ ಪರಿಕರಗಳನ್ನು ಉಪಯೋಗಿಸಿ ಆ ನಂತರ ಎಸೆಯುವ ಹುಚ್ಚಿರುತ್ತದೆ. ಹೀಗೆ ನಾನಾ ಬಗೆಯ ಹುಚ್ಚು ಉರುಫ್ ಶೋಕಿಗೆ ಒಳಗಾಗಿರುವ ಸಿನಿಮಾ ತಾರೆಯರು ದಾರಿಗೊಬ್ಬರಾದರೂ ಸಿಗುತ್ತಲೇ ಇರುತ್ತಾರೆ. ಇದಕ್ಕೆ ಸಲ್ಮಾನ್ ಖಾನ್ ಸದ್ಯದ ಉದಾಹರಣೆ.
ಹೌದು, ನಿರ್ಮಾಪಕರ ಪಾಲಿನ ಚಿನ್ನದ ಗಣಿಯೆಂದೇ ಕರೆಯಲ್ಪಡುವ ಸಲ್ಮಾನ್ ಖಾನ್, ಇತ್ತೀಚೆಗೆ ವಾಚ್‌ವೊಂದನ್ನು ಧರಿಸಿ ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಹಾಗಂಥ, ಅರೇ ಅದ್ರಲ್ಲೇನು ಮಹಾ ಎಂದು ಮೂಗು ಮುರಿಯುವಂತೆ ಇಲ್ಲ. ಯಾಕೆಂದರೆ ಸಲ್ಮಾನ್ ಖಾನ್ ಧರಿಸಿರುವ ವಾಚ್ ಸಾಮಾನ್ಯವಾದದ್ದಲ್ಲ. ಕಡಿಮೆ ಬೆಲೆ ಬಾಳುವಂತಹದ್ದು ಅಲ್ಲ. ಸದ್ಯದ ಮಾಹಿತಿಯ ಪ್ರಕಾರ ವಜ್ರಗಳಿಂದ ಅಲಂಕಾರಗೊಂಡಿರುವ ಈ ವಾಚ್‌ನ ಬೆಲೆ 41.5 ಕೋಟಿ. ಇನ್ನೂ ಕೆಲವರ ಪ್ರಕಾರ ಈ ವಾಚ್‌ನ ಬೆಲೆ 48 ಕೋಟಿ. ಇಂತಹ ದುಬಾರಿ ವಾಚ್ ಧರಿಸಿ, ಸಲ್ಮಾನ್ ಖಾನ್ ಸದ್ಯಕ್ಕೆ ಎಲ್ಲರ ಹುಬ್ಬೇರಿಸಿದ್ದಾರೆ.

ಸಲ್ಮಾನ್ ಖಾನ್ ಹಾಕಿಕೊಂಡಿರುವ ಈ ವಾಚ್‌ನಲ್ಲಿ 152 ಬಿಳೆ ಪಚ್ಚೆ-ಕಟ್ ವಜ್ರಗಳಿಂದ ಅಲಕೃಂತಗೊಂಡಿದೆ. ಪ್ರತಿ ವಿಭಾಗದಲ್ಲಿ 76 ವಜ್ರಗಳೊಂದಿಗೆ ಜೋಡಿಸಲಾಗಿದೆ. ಆಕರ್ಷಣೆಯನ್ನು ಹೆಚ್ಚಿಸಲು 57 ಬ್ಯಾಗೆಟ್ ಕಟ್ ವಜ್ರಗಳಿಂದ ಈ ವಾಚ್‌ನ ಅಲಂಕರಿಸಲಾಗಿದೆ. 504 ಎಮರಾಲ್ಡ್ ಕಟ್ ಡೈಮಂಡ್ ಕೂಡ ಈ ವಾಚ್‌ನಲ್ಲಿವೆ. ಇವೆಲ್ಲವನ್ನೂ ಲೆಕ್ಕ ಹಾಕಿದರೆ 714 ಡೈಮಂಡ್‌ಗಳು ಈ ವಾಚ್‌ನಲ್ಲಿವೆ ಎಂದು ವರದಿಯಾಗಿದೆ.
ಇನ್ನೂ ಶ್ರೀಮಂತಿಕೆಯ ಸಂಕೇತವಾದ ಈ ಬಿಲಿಯನೇರ್ III ಗಡಿಯಾರದ ಹಿಂದೆ ಜಾಕೋಬ್ ಅರಾಬೊ ಅವರ ಕೈ ಚಳಕ ಇದೆ. ಸೆಲೆಬ್ರಿಟಿಗಳಿಗಾಗಿ ಪರ್ಸನಲೈಸ್ಡ್ ವಾಚ್ ವಿನ್ಯಾಸ ಮಾಡುವಲ್ಲಿ ನಿಪುಣರಾಗಿರುವ ಕಂಪನಿಯ ಮಾಲೀಕರು ಆಗಿರುವ ಜಾಕೋಬ್ ತಮ್ಮ ಕೈಯಾರೆ ಸಲ್ಮಾನ್ ಖಾನ್‌ಗೆ ವಾಚ್ ಕಟ್ಟಿ ಸಂಭ್ರಮಿಸಿದ್ದಾರೆ.

ಉಳಿದಂತೆ ಸಲ್ಮಾನ್ ಖಾನ್ ಸಿಕಂದರ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ದಕ್ಷಿಣದ ಪ್ರಸಿದ್ಧ ನಿರ್ದೇಶಕ ಎ ಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ಧಾರೆ. ಇನ್ನೂ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ ಮತ್ತು ರಶ್ಮಿಕಾ ಪಾಲಿಗೆ ಮರೆಯಲಾಗದ ಘಳಿಗೆ. ಕಾಜಲ್ ಅಗರ್ ವಾಲ್ ಈ ಚಿತ್ರದ ಮತ್ತೊಬ್ಬ ನಾಯಕಿ.
ಅಂದ್ಹಾಗೇ ಬಾಲಿವುಡ್ ನಲ್ಲಿ ಸಾರ್ವಕಾಲಿಕ ಚರ್ಚೆ ಎನ್ನುವುದೊಂದಿದ್ದರೆ ಅದು ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಅವರ ಮದ್ವೆಯ ಕುರಿತು. ವಯಸ್ಸು 58 ಆಗಿದ್ರೂ ಮದುವೆ ಬಗ್ಗೆ ಯೋಚನೆಯೇ ಮಾಡದೇ ಇನ್ನೂ ಹಾಗೆಯೇ ಸಲ್ಲು ಉಳಿದಿರುವುದರಿಂದ ಅವರ ಅನೇಕ ಅಭಿಮಾನಿಗಳು ಸಂಕಟವನ್ನೂ ಪಡುತ್ತಾರೆ.ಯಾಕೆಂದರೆ ಒಂದ್ಕಾಲದಲ್ಲಿ ಸಲ್ಲು.. ಸಲ್ಲು.. ಎಂದು ಕನವರಿಸುತ್ತಿದ್ದ ಅನೇಕ ನಾಯಕಿಯರು ಈಗ ಮದುವೆಯಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಕೆಲವರು ತಮ್ಮ ಮಕ್ಕಳನ್ನು ಕೂಡ ಚಿತ್ರರಂಗಕ್ಕೆ ಕರೆತರವ ಧಾವಂತದಲ್ಲಿದ್ದಾರೆ. ಆದರೂ ಅದ್ಯಾಕೋ ಸಲ್ಮಾನ್ ಖಾನ್ ಮಾತ್ರ ಮದುವೆ ಆಗುವ ಮನಸು ಮಾಡಿಲ್ಲ.
ಸದ್ಯಕ್ಕೆ ಸಲ್ಮಾನ್ ಖಾನ್ ಅವರ ಈ ದುಬಾರಿ ವಾಚ್ ಅನೇಕರ ಚಿತ್ತ ಕದ್ದಿದೆ. ಹುಬ್ಬೇರಿಸಿದೆ. ಇನ್ನೂ ಒಂದು ವರ್ಗ ಸೆಲೆಬ್ರೆಟಿಗಳ ಈ ಐಶಾರಾಮಿ ಜೀವನವನ್ನೂ ಕಂಡು ಕಣ್ಣು ಕೆಂಪು ಮಾಡಿಕೊಳ್ಳುತ್ತಿದೆ. ಕೆಂಡ ಕಾರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ಅವರ ಈ ವಾಚ್ ಕುರಿತು ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ.


Click it and Unblock the Notifications











