ಸಲ್ಮಾನ್ ಖಾನ್ ಟವೆಲ್‌ಗಿಂತಲೂ ಮಾಧುರಿ ದೀಕ್ಷಿತ್ ಲಂಗಕ್ಕೆ ಹೆಚ್ಚು ಬೇಡಿಕೆ: ಕೋಟಿಗಳಿಗೆ ಹರಾಜು
ಸ್ಟಾರ್ ನಟ ನಟಿಯರಿಗೆ ಮಾತ್ರವಲ್ಲ ಅವರ ಉಡುಪು, ಬಳಸಿದ ವಸ್ತುಗಳಿಗೂ ಕೋಟ್ಯಂತರ ಮೊತ್ತದ ಬೇಡಿಕೆ ಇದೆ. ನಟ ಸಲ್ಮಾನ್ ಹಾಡೊಂದರಲ್ಲಿ ಬಳಸಿದ ಟವೆಲ್ ಲಕ್ಷಾಂತರ ಮೊತ್ತಕ್ಕೆ ಮಾರಾಟವಾಗಿದೆ. ಮಾಧುರಿ ದೀಕ್ಷಿತ್ ಉಟ್ಟಿದ್ದ ಲೆಹಂಗಾ ಕೋಟಿಗಳಿಗೆ ಹರಾಜಾಗಿದೆ.
ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಪ್ರಿಯಾಂಕಾ ಚೋಪ್ರಾ ನಟಿಸಿದ್ದ 'ಮುಝಸೆ ಶಾದಿ ಕರೋಗಿ' ಸಿನಿಮಾದಲ್ಲಿ 'ಜೀನೆ ಕೆ ಹೇ ಚಾರ್ ದಿನ್' ಹಾಡು ಬಹಳ ಫೇಮಸ್ ಆಗಿತ್ತು. ಆ ಹಾಡಿನಲ್ಲಿ ಟವೆಲ್ ಅನ್ನು ಬಳಸಿ ಸಲ್ಮಾನ್ ಖಾನ್ ಮಾಡಿದ್ದ ನೃತ್ಯವಂತೂ ಬಹಳ ಫೇಮಸ್ ಆಗಿತ್ತು. ಈಗಲೂ ಆ ಸ್ಟೆಪ್ ನೃತ್ಯ ವೇದಿಕೆಗಳಲ್ಲಿ ನೋಡಲು ಸಿಗುತ್ತದೆ.
ಆ ಹಾಡಿನಲ್ಲಿ ಸಲ್ಮಾನ್ ಖಾನ್ ಬಳಸಿದ್ದ ಟವೆಲ್ ಅನ್ನು ಇತ್ತೀಚೆಗೆ ಹರಾಜು ಹಾಕಲಾಗಿದ್ದು, ಟವೆಲ್ ಅನ್ನು ಬರೋಬ್ಬರಿ 1.42 ಲಕ್ಷ ಹಣ ನೀಡಿ ವ್ಯಕ್ತಿಯೊಬ್ಬ ಕೊಂಡುಕೊಂಡಿದ್ದಾನೆ.

ಇನ್ನು ನಟ ಅಮೀರ್ ಖಾನ್ ನಟಿಸಿರುವ 'ಲಗಾನ್' ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಈ ಸಿನಿಮಾದಲ್ಲಿ ಅಮೀರ್ ಖಾನ್ ಬಳಸಿರುವ ಕ್ರಿಕೆಟ್ ಬ್ಯಾಟನ್ನು ಬರೋಬ್ಬರಿ 1.56 ಲಕ್ಷ ಹಣ ಕೊಟ್ಟು ವ್ಯಕ್ತಿಯೊಬ್ಬ ಕೊಂಡು ಕೊಂಡಿದ್ದಾನೆ.
ಸಂಜಯ್ ಲೀಲಾ ಬನ್ಸಾಲಿಯ ಸೂಪರ್ ಹಿಟ್ ಸಿನಿಮಾ 'ದೇವದಾಸ್'ನಲ್ಲಿ ಮಾಧುರಿ ದೀಕ್ಷಿತ್ ಧರಿಸಿದ್ದ ಎಂಬ್ರಾಯ್ಡರಿ ಲೆಹಂಗಾ ಅನ್ನು ಹರಾಜು ಹಾಕಿದಾಗ ಸಿಕ್ಕಿದ್ದು ಬರೋಬ್ಬರಿ 3 ಕೋಟಿ. ಮಾಧುರಿಯ ಆ ಬಟ್ಟೆಗೆ 3 ಕೋಟಿ ಹಣವನ್ನು ಅಭಿಮಾನಿಯೊಬ್ಬ ನೀಡಿ ಖರೀದಿ ಮಾಡಿದ್ದಾನೆ. 'ದೇವದಾಸ್' ಸಿನಿಮಾ ಬಿಡುಗಡೆ ಆದ ಕೆಲವೇ ತಿಂಗಳಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿತ್ತು.
ನಟ-ನಟಿಯರು ಬಳಸಿದ ಉಡುಗೆ, ವಸ್ತುಗಳನ್ನು ಹರಾಜು ಹಾಕಿ ಬಂದ ಹಣವನ್ನು ಸಮಾಜ ಮುಖಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ನಟ-ನಟಿಯರ ಖಾಸಗಿ ವಸ್ತುಗಳನ್ನು ಸಹ ಹರಾಜು ಹಾಕುವ ಎನ್‌ಜಿಒ ಒಂದು ಸಕ್ರಿಯವಾಗಿದ್ದು, ಅನುಷ್ಕಾ ಶರ್ಮಾ ತಾವು ಗರ್ಭಿಣಿ ಆಗಿದ್ದಾಗ ಖರೀದಿಸಿದ ಬಟ್ಟೆಗಳನ್ನು ಹರಾಜು ಹಾಕಿದ್ದರು.
ಬಾಲಿವುಡ್‌ಗೆ ಸಂಬಂಧಿಸಿದ ವ್ಯಕ್ತಿಗಳು ನಿಧನರಾದಾಗ ಅಂತಿಮ ದರ್ಶನಕ್ಕೆ ಹೋದಾಗ ತೊಟ್ಟಿದ್ದ ಬಿಳಿ ಬಣ್ಣದ ಬಟ್ಟೆಗಳನ್ನು ದೀಪಿಕಾ ಪಡುಕೋಣೆ ಇತ್ತೀಚೆಗೆ ಹರಾಜು ಹಾಕಿಸಿದ್ದರು. ಆದರೆ ದೀಪಿಕಾರ ಈ ನಡೆಯ ಬಗ್ಗೆ ತೀವ್ರ ಟೀಕೆಯೂ ಎದುರಾಯಿತು.
ಖ್ಯಾತ ಫುಟ್‌ಬಾಲ್ ತಾರೆ ಮೆಸ್ಸಿ ಒಮ್ಮೆ ಸಂದರ್ಶನವೊಂದರಲ್ಲಿ ಕಣ್ಣೀರು ಹಾಕಿ ಕಣ್ಣೀರನ್ನು ಒರೆಸಿಕೊಳ್ಳಲು ಬಳಸಿದ ಟಿಶ್ಯು ಪೇಪರ್ 7.30 ಕೋಟಿಗೆ ಹರಾಜಾಗಿತ್ತು.


Click it and Unblock the Notifications











