ಸಲ್ಮಾನ್, ಸೋನಾಕ್ಷಿ ಮದುವೆ: ತಮಿಳು ತಾರ ಜೋಡಿಯ ಮದುವೆ ಫೋಟೊ ಅದು!
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಾಕಿಂಗ್ ಸುದ್ದಿ ಒಂದು ಹರಿದಾಡಿತ್ತು. ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಅಂತಲೇ ಕರೆಸಿಕೊಳ್ಳುವ ನಟ ಸಲ್ಮಾನ್ ಖಾನ್ ರಹಸ್ಯವಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ. ಕೇವಲ ಸುದ್ದಿ ಮಾತ್ರವೇ ಅಲ್ಲಾ ಸಲ್ಮಾನ್ ಖಾನ್ ಮದುವೆ ಫೋಟೊ ಕೂಡ ವೈರಲ್ ಆಗಿ ಬಿಟ್ಟಿತು.
ಸಲ್ಮಾನ್ ಖಾನ್ ಮತ್ತು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ಇಬ್ಬರೂ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯ ಜೊತೆಗೆ ಫೋಟೊ ಕೂಡ ಹರಿದಾಡಿತ್ತು. ಈ ಮದುವೆ ಫೋಟೋ ನೋಡಿದವರು ಒಂದು ಕ್ಷಣ ಸಲ್ಮಾನ್ ಖಾನ್ ಮದುವೆ ಆಗಿದೆ ಎಂದು ನಂಬಿ ಬಿಟ್ಟಿದ್ದರು. ಸೋನಾಕ್ಷಿ, ಸಲ್ಮಾನ್ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ಸ್ನೇಹಿತರು ಕೂಡ ಹೌದು, ಹಾಗಾಗಿ ಮದುವೆ ಆಗಿದ್ದರು ಆಗಿರಬಹುದು ಎನ್ನುವ ಚರ್ಚೆ ಹುಟ್ಟಿಕೊಂಡಿತು.
ಆದರೆ ಬಳಿಕ ಇದು ಎಡಿಟ್ ಮಾಡಿರುವ ಫೋಟೊ ಎನ್ನುವುದು ಬೆಳಕಿಗೆ ಬಂತು. ಬೇರೆ ಯಾರದ್ದೋ ಮದುವೆ ಫೋಟೊವನ್ನು ಎಡಿಟ್ ಮಾಡಿ ಸಲ್ಮಾನ್, ಸೋನಾಕ್ಷಿ ಫೋಟೋ ಹಾಕಲಾಗಿದೆ ಎನ್ನುವುದು ರಿವೀಲ್ ಆಯ್ತು. ಆದರೆ ನಿಜವಾದ ಮದುವೆ ಫೋಟೊ ಯಾರದ್ದು ಎನ್ನುವುದು ಈಗ ಗೊತ್ತಾಗಿದೆ. ತಮಿಳಿನ ಸ್ಟಾರ್ ಜೋಡಿಯ ಮದುವೆ ಫೋಟೋ.

ಆರ್ಯ, ಸಾಯೆಶಾ ಮದುವೆ ನೆನಪಿದೆಯಾ?
ತಮಿಳಿನ ಸ್ಟಾರ್ ಜೋಡಿ ನಟ ಆರ್ಯ ಮತ್ತು ನಟಿ ಸಾಯೆಶಾ ಇಬ್ಬರೂ 2019ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿ ಮದುವೆ ಫೋಟೊಗಳನ್ನು ನೀವು ನೋಡಿದ್ದರೆ, ನಿಮಗೆ ನೆನಪಿದ್ದರೆ ಸಲ್ಮಾನ್, ಸೋನಾಕ್ಷಿ ಮದುವೆ ಸುದ್ದಿಗೆ ಕಾರಣ ಆಗಿದ್ದು ಏನು ಎನ್ನುವುದು ಸುಲಭವಾಗಿ ಗೊತ್ತಾಗುತ್ತದೆ. ಹೌದು ಆರ್ಯ, ಸಾಯೆಶಾ ಮದುವೆ ಫೊಟೋವನ್ನು ಎಡಿಟ್ ಮಾಡಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಮುಖವನ್ನು ಅಳವಡಿಸಲಾಗಿದೆ.

ಆರ್ಯ, ಸಾಯೆಶಾ ಜಾಗದಲ್ಲಿ ಸಲ್ಲು, ಸೋನಾಕ್ಷಿ!
ಸಲ್ಮಾನ್ ಕಾನ್ ಸೋನಾಕ್ಷಿ ಮದುವೆ ಫೋಟೋ ವೈರಲ್ ಆಗತ್ತಲೇ ಎಲ್ಲರೂ, ಅಚ್ಚರಿಯಿಂದ ಬಾಯಿ ಮೇಲೆ ಬೆರಳಿಟ್ಟುಕೊಂಡರು. ಕಾರಣ ನಕಲಿ ಫೋಟೋ ಎನ್ನುವ ಅನುಮಾನ ಮೂಡದ ಹಾಗೆ ಆ ಫೋಟೊವನ್ನು ಎಡಿಟ್ ಮಾಡಲಾಗಿದೆ. ಈಗ ನಿಜವಾದ ಫೋಟೋ ಯಾವುದು ಎನ್ನುವ ಸತ್ಯ ಗೊತ್ತಾಗಿದೆ. ಆರ್ಯ- ಸಾಯೆಶಾ ಜಾಗದಲ್ಲಿ, ಸೋನಾಕ್ಷಿ ಸಿನ್ಹ- ಸಲ್ಮಾನ್ ಖಾನ್ ಮುಖ ಜೋಡಿಸಲಾಗಿತ್ತು. ಖಾತರಿಗಾಗಿ ನೀವೂ ಒಮ್ಮೆ ಅವರ ಮದುವೆ ಫೋಟೊಗಳನ್ನು ನೋಡಿ ಬಿಡಿ.

ರೀಲ್ ಮದುಗೆ ಫೋಟೊಗೆ ಸಿಕ್ತು ರಿಯಲ್ ಸಾಕ್ಷಿ!
ನಟ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹ ಮದುಗೆ ಫೋಟೋ ಎಲ್ಲಿಂದ ಬಂತು ಎನ್ನುವ ನಿಜವಾದ ಕಾರಣ ಬಯಲಾಗಿದೆ. ಇದನ್ನು ಬಿಟ್ಟರೆ, ಸಲ್ಮಾನ್ ಮತ್ತು ಸೋನಾಕ್ಷಿ ಇಬ್ಬರು ಕೂಡ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಬ್ಬರು ಕೂಡ ಸ್ನೇಹಿತರು. ಸೋನಾಕ್ಷಿ ಸಲ್ಮಾನ್ ಖಾನ್ ಚಿತ್ರದ ಮೂಲಕವೇ ಲಾಂಚ್ ಆಗಿದ್ದಾರೆ. ದಬಾಂಗ್ ಸಿನಿಮಾದ ಮೂಲಕ ಸೋನಾಕ್ಷಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ದಬಾಂಗ್ ಸರಣಿ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಜೋಡಿ ಸೂಪರ್ ಹಿಟ್ ಆಗಿ ಹೊರಹೊಮ್ಮಿದೆ.

56 ವರ್ಷದ ಸಲ್ಮಾನ್ ಖಾನ್ ಮದುವೆ ಯಾವಾಗ?
ಇನ್ನು ಸಲ್ಮಾನ್ ಖಾನ್ ಅವರ ಮದುವೆ ಯಾವಾಗ ಎನ್ನುವುದು ಅವರಿಗೇ ಗೊತ್ತಿಲ್ಲ. 'ಸಲ್ಮಾನ್ ಖಾನ್ ಮದುವೆ ಯಾವಾಗ?' ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆ ಎಂದೇ ಹೆಸರುವಾಸಿ. ಸದ್ಯ ಸಲ್ಮಾನ್ ಖಾನ್ 56 ವರ್ಷ. ಹಾಗಾಗಿ ಇನ್ನೂ ಯಾವಾಗ ಸಲ್ಮಾನ್ ಖಾನ್ ಮದುವೆ ಆಗುತ್ತಾರೆ ಎನ್ನುವ ಕುತೂಹಲ ಸದಾ ಇದ್ದೇ ಇದೆ. ಅದರಲ್ಲೂ ಸಲ್ಮಾನ್ ಖಾನ್ ಜೊತೆಗೆ ಸಾಕಷ್ಟು ನಟಿಯರ ಹೆಸರುಗಳು ಕೇಳಿ ಬಂದಿವೆ. ಸಂಗೀತ ಬಿಜ್ಲಾನಿ, ಐಶ್ವರ್ಯ ರೈ, ಕತ್ರೀನಾ, ಲೂಲಿಯಾ ವೆಂಚರ್ ಸೇರಿದಂತೆ ಹಲವು ನಟಿಯರು ಸಲ್ಮಾನ್ ಖಾನ್‌ರನ್ನು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಆದರೆ ಅದೆಲ್ಲವೂ ಸುಳ್ಳಾಗಿದೆ. ಹಾಗಾಗಿ ಸಲ್ಮಾನ್ ಖಾನ್ ಕೈ ಹಿಡಿಯುವ ಹುಡುಗಿ ಯಾರೆನ್ನುವ ಪ್ರಶ್ನೆ ಕೂಡ ಹಾಗೆ ಉಳಿದಿದೆ.


Click it and Unblock the Notifications











