ಖಡಕ್ ಆಕ್ಷನ್, ಜಬರ್ದಸ್ತ್ ಡೈಲಾಗ್ಸ್: 'ಒಡೆಯ' ಹಿಂದಿ ವರ್ಷನ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟ್ರೈಲರ್ ಹೇಗಿದೆ?
ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಫರ್ಹಾದ್ ಸಮ್ಜಿ ನಿರ್ದೇಶನದ ಈ ಫ್ಯಾಮಿಲಿ ಡ್ರಾಮಾ ಚಿತ್ರದಲ್ಲಿ ಘಟನುಘಟಿ ಕಲಾವಿದರು ನಟಿಸಿದ್ದಾರೆ. ಸಲ್ಮಾನ್ ಖಾನ್ ಉದ್ದನೆಯ ಕೂದಲು ಬಿಟ್ಟು 4 ಜನ ಸಹೋದರರ ಅಣ್ಣನಾಗಿ ಕಾಣಿಸಿಕೊಂಡಿದ್ದಾರೆ. ಈದ್ ಸ್ಪೆಷಲ್ ಆಗಿ ಸಿನಿಮಾ ತೆರೆಗಪ್ಪಳಿಸಲಿದೆ.
ತಮಿಳಿನ ಸೂಪರ್ ಹಿಟ್ 'ವೀರಂ' ಸಿನಿಮಾ ರೀಮೆಕ್ ಇದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರವನ್ನು 'ಒಡೆಯ' ಹಸರಿನಲ್ಲಿ ಕನ್ನಡಕ್ಕೆ ರೀಮೆಕ್ ಮಾಡಿದ್ದರು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಅದೇ ಕಥೆಯನ್ನು ಬಾಲಿವುಡ್ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಿಸಿಕೊಂಡು ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ಸಲ್ಲು ಜೋಡಿಯಾಗಿ ಪೂಜಾ ಹೆಗ್ಡೆ ಬಣ್ಣ ಹಚ್ಚಿದ್ದಾರೆ. ತೆಲುಗು ನಟರಾದ ವಿಕ್ಟರಿ ವೆಂಕಟೇಶ್, ಜಗಪತಿ ಬಾಬು ತಾರಾಗಣದಲ್ಲಿದ್ದಾರೆ.

ಭಾಯ್ಜಾನ್ ಸಲ್ಮಾನ್ ಖಾನ್ ಮಹಾಭಾರತದ ಶ್ಲೋಕ ಹೇಳುವುದರೊಂದಿಗೆ ಟ್ರೈಲರ್ ಶುರುವಾಗುತ್ತದೆ. ನಿಧಾನವಾಗಿ ತೆಲುಗು ಹುಡುಗಿ ಭಾಗ್ಯ ಗುಂಡಮನೇನಿ(ಪೂಜಾ ಹೆಗ್ಡೆ) ಜೊತೆಗಿನ ಪರಿಚಯ, ಪ್ರೀತಿ, ರೊಮ್ಯಾನ್ಸ್ ತೋರಿಸಿದ್ದಾರೆ. ಚಿತ್ರದಲ್ಲಿ ಸಲ್ಲು ಪಾತ್ರಕ್ಕೆ ಹೆಸರಿಲ್ಲ, ಎಲ್ಲರೂ ನನ್ನನ್ನು ಭಾಯ್ಜಾನ್ ಎಂದೇ ಕರೆಯುತ್ತಾರೆ. ಇನ್ನು ಚಿತ್ರದಲ್ಲಿ ನಾಲ್ಕು ಜನ ಸಹೋದರರ ಅಣ್ಣನಾಗಿ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ನಟಿಸಿದ್ದಾರೆ.
ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗಾಗಿ ಸದಾ ಹೊಡೆದಾಟ ಬಡಿದಾಟದಲ್ಲೇ ಕಾಲ ಕಳೆಯುವ ಭಾಯ್ಜಾನ್‌ಗೆ ಸಹೋದರರೇ ಹುಡುಗಿಯನ್ನು ಹುಡುಕಿ ಮದುವೆ ಮಾಡಲು ಮುಂದಾಗುತ್ತಾರೆ. ಶಾಂತಿ ಪ್ರಿಯಳಾದ ಭಾಗ್ಯಗಾಗಿ ಒಡೆದಾಟ ಬಿಡುವ ಭಾಯ್ಜಾನ್ ಆಕೆಯ ಕುಟುಂಬಕ್ಕಾಗಿ ರಕ್ತ ಹರಿಸುವ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಸಲ್ಲು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದರಲ್ಲಿ ಉದ್ದ ಕೂದಲು ಬಿಟ್ಟು ಅಬ್ಬರಿಸಿರೋ ಸಲ್ಲು ನಂತರ ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ದರ್ಶನ ಕೊಟ್ಟಿದ್ದಾರೆ.
ಕಲರ್‌ಫುಲ್ ಹಾಡುಗಳು, ಜಬರ್ದಸ್ತ್ ಆಕ್ಷನ್ ಸೀನ್‌ಗಳ ಮೂಲಕ ೀ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವನ್ನು ಕಟ್ಟಿಕೊಡಲಾಗಿದೆ. ನಾಯಕಿಯನ್ನು ತೆಲುಗು ಹುಡುಗಿಯಾಗಿ ತೋರಿಸಿದ್ದು ಅಲ್ಲಲ್ಲಿ ತೆಲುಗು ಸಂಭಾಷಣೆಗಳು ಇರುವುದನ್ನು ಕೂಡ ಟ್ರೈಲರ್‌ನಲ್ಲಿ ನೋಡಬಹುದು. ಬತುಕಮ್ಮ ಹಾಡನ್ನು ಕೂಡ ಬಳಸಿಕೊಳ್ಳಲಾಗಿದೆ. ಇನ್ನು ನಾಯಕಿಯ ಅಣ್ಣನ ಪಾತ್ರದಲ್ಲಿ ತೆಲುಗು ನಟ ವೆಂಕಟೇಶ್ ನಟಿಸಿದ್ದಾರೆ. ಕಾಮಿಡಿ, ಎಮೋಷನ್, ರೊಮ್ಯಾನ್ಸ್, ಆಕ್ಷನ್, ಡ್ರಾಮಾ ಎಲ್ಲವನ್ನು ಬೆರಸಿ ಚಿತ್ರವನ್ನು ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ.

ಖಡಕ್ ಆಕ್ಷನ್ ಸೀಕ್ವೆನ್ಸ್, ಜಬರ್ದಸ್ತ್ ಡೈಲಾಗ್ಸ್ ಹೈಲೆಟ್ ಮಾಡಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟ್ರೈಲರ್ ಕಟ್ ಮಾಡಿದ್ದಾರೆ. ಸಲ್ಲು ಸಹೋದರರ ಪಾತ್ರಗಳಲ್ಲಿ ಜೆಸ್ಸಿ ಗಿಲ್, ರಾಘವ್ ಜುಯೆಲ್, ಸಿದ್ದಾರ್ಥ್ ನಿಗಮ್ ಕಾಣಿಸಿಕೊಂಡಿದ್ದಾರೆ. 7 ಜನ ಸಂಗೀತ ನಿರ್ದೇಶಕರು ಚಿತ್ರದ ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ. ಇನ್ನು ಕನ್ನಡದ ಸಂಗೀತ ನಿರ್ದೇಶಕ ರವಿ ಬಸ್ರೂರು ಒಂದು ಸಾಂಗ್ ಜೊತೆಗೆ ಬಿಜಿಎಂ ನೀಡಿದ್ದಾರೆ. ಸ್ವತಃ ಸಲ್ಮಾನ್ ಖಾನ್ ಚಿತ್ರವನ್ನು ನಿರ್ಮಿಸಿದ್ದಾರೆ.
ವಿ. ಮಣಿಕಂಠನ್ ಛಾಯಾಗ್ರಹಣ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರಕ್ಕಿದೆ. ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ಸಲ್ಲು ಶರ್ಟ್‌ಲೆಸ್ ಆಗಿ ಸಿಕ್ಸ್‌ಪ್ಯಾಕ್ ಪ್ರದರ್ಶಿಸುತ್ತಾ ಅಭಿಮಾನಿಗಳಿಗೆ ಥ್ರಿಲ್ ಕೊಡೊಕೆ ಬರ್ತಿದ್ದಾರೆ. ಇನ್ನು ತೆಲುಗು ನಟ ರಾಮ್‌ಚರಣ್ ಚಿತ್ರದ ಹಾಡೊಂದರ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೀ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡುತ್ತಿದೆ. ಏಪ್ರಿಲ್ 21ಕ್ಕೆ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಸೋಲುಂಡ ಈ ಸಿನಿಮಾ ಬಾಲಿವುಡ್‌ನಲ್ಲಿ ಗೆಲ್ಲುತ್ತಾ ಕಾದು ನೋಡಬೇಕು.


Click it and Unblock the Notifications











