ಸಲ್ಮಾನ್ ಖಾನ್ ಬದುಕಿನಲ್ಲಿ ಬಂದ ಹುಡುಗಿಯರೆಷ್ಟು ? ಸಂಖ್ಯೆ ಹೇಳಿದ ಸಲ್ಲು..!
ಬಾಲಿವುಡ್ ನಲ್ಲಿ ಸಾರ್ವಕಾಲಿಕ ಚರ್ಚೆ ಎನ್ನುವುದೊಂದಿದ್ದರೆ ಅದು ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಅವರ ಮದ್ವೆಯ ಕುರಿತು. ವಯಸ್ಸು 59 ಆಗಿದ್ರೂ ಮದುವೆ ಬಗ್ಗೆ ಯೋಚನೆಯೇ ಮಾಡದೇ ಇನ್ನೂ ಹಾಗೆಯೇ ಸಲ್ಲು ಉಳಿದಿರುವುದರಿಂದ ಅವರ ಅನೇಕ ಅಭಿಮಾನಿಗಳು ಸಂಕಟವನ್ನೂ ಪಡುತ್ತಾರೆ. ಇನ್ನೂ.. ಒಂದ್ಕಾಲದಲ್ಲಿ ಸಲ್ಲು.. ಸಲ್ಲು.. ಎಂದು ಕನವರಿಸುತ್ತಿದ್ದ ಅನೇಕ ನಾಯಕಿಯರು ಈಗ ಮದುವೆಯಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಇನ್ನೂ ಕೆಲವರು ತಮ್ಮ ಮಕ್ಕಳನ್ನು ಕೂಡ ಚಿತ್ರರಂಗಕ್ಕೆ ಕರೆತರವ ಧಾವಂತದಲ್ಲಿದ್ದಾರೆ. ಆದರೂ ಅದ್ಯಾಕೋ ಸಲ್ಮಾನ್ ಖಾನ್ ಮಾತ್ರ ಮದುವೆ ಆಗುವ ಮನಸು ಮಾಡಿಲ್ಲ. ಇಂಥಾ ಸಲ್ಮಾನ್ ಖಾನ್ ಸದ್ಯ ತಮ್ಮ ಲವ್ ಲೈಫ್ ಬಗ್ಗೆ ಮಾತನಾಡಿದ್ಧಾರೆ. ತಮ್ಮ ಬದುಕಿನಲ್ಲಿ ಬಂದ ಹುಡುಗಿಯರೆಷ್ಟು ಎಂದು ಕೂಡ ಹೇಳಿದ್ದಾರೆ.

ಹೌದು, ದಿ ಕಪಿಲ್ ಶರ್ಮಾ ಶೋ ಸೀಸನ್ 3 ಶುರುವಾಗಿದೆ. ಈ ಕಾರ್ಯಕ್ರಮಕ್ಕೆ ಮೊದಲ ಗೆಸ್ಟ್ ಆಗಿ ಬಂದಿದ್ದ ಸಲ್ಮಾನ್ ಖಾನ್ ಹಲವಾರು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಆ ಪೈಕಿ ತಮ್ಮ ಬದುಕಿನಲ್ಲಿ ಬಂದ ಚೆಲುವೆಯ ಕುರಿತು ಕೂಡ ಮಾತನಾಡಿರುವ ಸಲ್ಮಾನ್ ಖಾನ್ ನೀವು ಅಂದುಕೊಂಡಂತೆ ಏನೂ ಇಲ್ಲ ನನಗೆ ಈಗ 59 ವರ್ಷ ಇಲ್ಲಿಯವರೆಗೆ ನನ್ನ ಜೀವನದಲ್ಲಿ ಕೇವಲ ಮೂರು-ನಾಲ್ಕು ಗೆಳತಿಯರು ಮಾತ್ರ ಇದ್ದರು ಎಂದು ಹೇಳಿದ್ದಾರೆ.
ಇದರಲ್ಲಿ ಕೆಲವು ಸಂಬಂಧ 07 ರಿಂದ 08 ವರ್ಷಗಳವರೆಗೆ ಮುಂದುವರೆದು ಆ ನಂತರ ಕೊನೆಗೊಂಡಿದ್ದು ಇದೆ, ಇನ್ನು ಕೆಲ ಸಂಬಂಧ ಹನ್ನೆರಡು ವರ್ಷಗಳವರೆಗೆ ಇದ್ದಿದ್ದು ಇದೆ ಎಂದು ಹೇಳಿರುವ ಸಲ್ಮಾನ್ ಖಾನ್ ಈ ಕಾಲದವರು ತುಂಬಾನೇ ಸ್ಪೀಡ್ . ಬ್ರೇಕಪ್ ಆದ ಬೆನ್ನಲ್ಲಿಯೇ ಮತ್ತೊಂದು ಸಂಬಂಧಕ್ಕೆ ಹಾತೊರೆಯುತ್ತಾರೆ, ಹೀಗಾಗಿ ಅವರನ್ನು ಹೋಲಿಸಿಕೊಂಡರೆ ನಾನು ಓಲ್ಡ್ ಸ್ಕೂಲ್ ವಿದ್ಯಾರ್ಥಿ ಎಂದು ಹೇಳಿದ್ದಾರೆ. ನಾನು ಹೀಗೆ ಒಬ್ಬರಾದ ನಂತರ ಮತ್ತೊಬ್ಬರ ಸಾಂಗತ್ಯವನ್ನು ಯಾವತ್ತು ಬಯಸಲಿಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಬದಲಾದ ಈ ಕಾಲದಲ್ಲಿ ಸಂಬಂಧಗಳೂ ಬಹುಕಾಳ ಉಳಿಯುತ್ತಿಲ್ಲ ಎಂದಿರುವ ಸಲ್ಮಾನ್ ಖಾನ್ ನನ್ನ ಟ್ರ್ಯಾಕ್ ರೆಕಾರ್ಡ್‌ನಲ್ಲಿ ಸಂಖ್ಯೆ ಕಡಿಮೆಯಾದರು ನಾನು ಆ ಸಂಬಂಧಗಳಿಗೆ ಬದ್ಧನಾಗಿದ್ದೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಈ ಹಿಂದೆ ಸಲ್ಮಾನ್ ಖಾನ್ ಅವರ ಹೆಸರು ಹಲವರ ಜೊತೆ ಕೇಳಿ ಬಂದಿತ್ತು. ಆ ಪೈಕಿ ಐಶ್ವರ್ಯ ರೈ ಅವರ ಜೊತೆ ಇವರ ಪ್ರೇಮ ಸಂಬಂಧ ವ್ಯಾಪಕ ಸದ್ದು ಮಾಡಿತ್ತು. ವಿವಾದಕ್ಕೆ ಕೂಡ ಕಾರಣವಾಗಿತ್ತು.
ಇನ್ನು ಸಂಗೀತಾ ಬಿಜಲಾನಿ ಅವರ ಜೊತೆ ಮದುವೆ ಹಂತದವರೆಗೆ ಸಂಬಂಧ ಮುಂದುವರೆದಿತ್ತು. ಆದರೆ ಇಬ್ಬರ ಮದುವೆಯ ಆಮಂತ್ರಣ ಪತ್ರಿಕೆ ಕೂಡ ಮುದ್ರಿಸಲಾಗಿತ್ತು. ಬಾಲಿವುಡ್‌ನ ಅನೇಕ ಸ್ಟಾರ್‌ಗಳನ್ನೊಳಗೊಂಡು ಬೇರೆ ಬೇರ ಕ್ಷೇತ್ರದ ಗಣ್ಯರಿಗೆ ಮದುವೆಯ ಮಮತೆಯ ಕರೆಯೋಲೆಯನ್ನು ಕೂಡ ನೀಡಲಾಗಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ ಮೇ 27-1994ರಲ್ಲಿ ಇಬ್ಬರ ಮದುವೆ ಕೂಡ ಆಗಬೇಕಿತ್ತು.
ಆದರೆ ಆ ನಂತರ ಅದೇನಾಯ್ತೋ. ಇದ್ದಕ್ಕಿದ್ದಂತೆ ಮದುವೆ ಮುರಿದು ಬಿತ್ತು. ಸೋಮಿ ಅಲಿ, ಕತ್ರಿನಾ ಕೈಫ್ ಮತ್ತು ಯೂಲಿಯಾ ವಂತೂರ್ ಅವರ ಜೊತೆ ಕೂಡ ಸಲ್ಮಾನ್ ಹೆಸರು ತಳುಕು ಹಾಕಿಕೊಂಡಿತ್ತು.
ಸಿಯಾಸತ್ ಡಾಟ್ ಕಾಮ್ ವರದಿಯ ಪ್ರಕಾರ ಮೆಹಲ್ ಚಹಾಲ್, ಕ್ಲೌಡಿಯಾ ಮತ್ತು ಸಮಂತಾ ಲಾಕ್‌ವುಡ್ ಅವರ ಮೇಲೆ ಕೂಡ ಸಲ್ಮಾನ್ ಗೆ ಪ್ರೇಮಾಂಕುರವಾಗಿತ್ತು.
ಆದರೆ ಈಗ ಸಲ್ಮಾನ್ ಅಷ್ಟೆಲ್ಲ ಇಲ್ಲ ಕೇವಲ ಮೂರು-ನಾಲ್ಕು ಜನ ಮಾತ್ರ ನನ್ನ ಬದುಕಿನಲ್ಲಿ ಬಂದು ಹೋಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಆ ನಾಲ್ಕು ಜನ ಯಾರು ಎಂದು ಸಲ್ಮಾನ್ ಹೇಳದ ಕಾರಣ ಅನೇಕರು ಆ ಮೂರು ನಾಲ್ಕು ಚೆಲುವೆಯರಲ್ಲಿ ಐಶ್ವರ್ಯ-ಸಂಗೀತಾ ಇದ್ದೇ ಇದ್ದಾರೆ. ಇವರ ಜೊತೆ ಇನ್ನಿಬ್ಬರ ಯಾರಿರಬಹುದು ಎಂದು ಚರ್ಚೆಯನ್ನು ಮಾಡುತ್ತಿದ್ದಾರೆ.


Click it and Unblock the Notifications











