ಮತ್ತೆ ಜೈಲಿಗೆ ಹೋಗ್ತಾರಾ ಸಲ್ಮಾನ್ ಖಾನ್ ? ಸೆಪ್ಟೆಂಬರ್ 22ರಂದು ಹೊರ ಬೀಳಲಿದೆ ಮಹತ್ವದ ತೀರ್ಪು !
ಸಾಮಾನ್ಯರು ಸೆಲೆಬ್ರೆಟಿಗಳೆಂದರೆ ರಾಯಲ್ ಲೈಫು .. ಕಾರು.. ಪಾರ್ಟಿ.. ಫೈವ್ ಸ್ಟಾರ್ ಹೋಟೆಲ್.. ಸೆಲ್ಫಿ ಇತ್ಯಾದಿಗಳೆಂದು ಬಿಂಬಿಸುತ್ತಾರೆ. ಆದರೆ ಇವೆಲ್ಲದರ ಮಧ್ಯೆ ಅವರು ಅನುಭವಿಸುವ ಯಮಯಾತನೆಯಂತೂ ಯಾವ ಶತ್ರುಗಳಿಗೂ ಬೇಡ. ಉದಾಹರಣೆಗೆ ಸಲ್ಮಾನ್ ಖಾನ್ ಅವರ ವ್ಯೆಯಕ್ತಿಕ ಬದುಕನ್ನೇ ತೆಗೆದುಕೊಳ್ಳಿ. ಹೌದು, ಹೇಳಿಕೊಳ್ಳುವುದಕ್ಕೆ ಸಲ್ಮಾನ್ ಖಾನ್ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರು. ನಿರ್ಮಾಪಕರ ಪಾಲಿಗೆ ಚಿನ್ನದ ಗಣಿ.
ಆದರೆ ನೆಮ್ಮದಿ ಎನ್ನುವುದು ಇವರಿಗೆ ಮರಿಚೀಕೆ. ಒಂದು ಕಡೆ ''ಬಿಷ್ಣೋಯ್'' ಸಮುದಾಯದ ಡಾನ್ ''ಲಾರೆನ್ಸ್ ಬಿಷ್ಣೋಯ್'' ಜೈಲಿನಲ್ಲಿ ಕುಂತುಕೊಂಡೆ ಸಲ್ಮಾನ್ ಖಾನ್ ವಿರುದ್ಧ ಕತ್ತಿ ಮಸೆಯುತ್ತಿದ್ದಾನೆ. ಹೀಗಾಗಿ ಯಾವ ಕ್ಷಣದಲ್ಲಿ ಎಲ್ಲಿಂದ ಯಾರು ಬಂದು ತನ್ನ ಮೇಲೆ ಹಲ್ಲೆ ಮಾಡುತ್ತಾರೆ ಎನ್ನುವ ಭಯದಲ್ಲಿಯೇ ಸಲ್ಮಾನ್ ಖಾನ್ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.

ಈ ಭಯದಲ್ಲಿಯೇ ಮಲಗುವ ಪ್ರಯತ್ನವನ್ನು ಮಾಡುವ ಸಲ್ಮಾನ್ ಖಾನ್‌ಗೆ ಆಗಾಗ ಕನಸಿನಲ್ಲಿ ''ಕೃಷ್ಣಮೃಗ'' ಬಂದು ಕಾಡಲು ಶುರುವಾಗುತ್ತೆ.ಯಾಕೆಂದರೆ.. ಕಳೆದ ''27 ವರ್ಷ''ಗಳಿಂದ ನಡೆಯುತ್ತಿರುವ ಪ್ರಕರಣ ಇದು. ಇವತ್ತು ಕೂಡ ಅಂತ್ಯವಾಗಿಲ್ಲ.
ಆದರೆ ಈಗ ಈ ಪ್ರಕರಣ ಅಂತ್ಯವಾಗುವ ಎಲ್ಲ ಲಕ್ಷಣ ಕಂಡು ಬರುತ್ತಿವೆ. ಇದಕ್ಕೆ ಪುರಾವೆ ಎನ್ನುವಂತೆ ನ್ಯಾಯಾಲಯ ಮತ್ತೆ ಕೃಷ್ಣಮೃಗದ ಕೇಸ್‌ನ ಓಪನ್ ಮಾಡಿದೆ. ಶೀಘ್ರದಲ್ಲಿಯೇ ಮತ್ತೆ ವಿಚಾರಣೆಯನ್ನು ಕೂಡ ನಡೆಸಲಿದೆ.
ಹೌದು, ಅಸಲಿಗೆ '' ಹಮ್ ಸಾಥ್ ಸಾಥ್ ಹೈ'' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ 2018ರ ಏಪ್ರಿಲ್‌ನಲ್ಲಿ ರಾಜಸ್ತಾನದ ಜೋಧ್‌ಪುರದ ಮುಖ್ಯ ಜ್ಯುಡಿಶಿಯಲ್ ಮ್ಯಾಜಿಸ್ಪ್ರೇಟ್ ಕೋರ್ಟ್ ಸಲ್ಮಾನ್ ಖಾನ್‌ಗೆ ''ಐದು ವರ್ಷ'' ಜೈಲು ಶಿಕ್ಷೆ ವಿಧಿಸಿತ್ತು.
ಇದೇ ಸಮಯದಲ್ಲಿ ಪ್ರಕರಣದ ಇನ್ನುಳಿದ ಆರೋಪಿಗಳಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು, ನೀಲಂ, ಮತ್ತು ಸ್ಥಳಿಯ ನಿವಾಸಿ ದುಷ್ಯಂತ ಸಿಂಗ್ ಅವರನ್ನು ''ಬೆನಿಫಿಟ್ ಆಫ್ ಡೌಟ್'' ಎಂದು ಪರಿಗಣಿಸಿ ಖುಲಾಸೆಗೊಳಿಸಿತ್ತು.

ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ''ದೇವ್ ಕುಮಾರ್'' ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ ಸಲ್ಮಾನ್ ಖಾನ್ ದೋಷಿ ಎಂದು ತೀರ್ಪು ನೀಡಿದ್ದರು. 1998ರ ಸೆಪ್ಟೆಂಬರ್ 26, 27ರಂದು ಭಾವಾಡದಲ್ಲಿ ಕೃಷ್ಣಮೃಗ ಕೊಂದಿದ್ದ ಪ್ರಕರಣ, ಹಾಗೂ 1998ರ ಸೆಪ್ಟೆಂಬರ್ 28, 29ರಂದು ಮಥಾನಿಯಾದಲ್ಲಿ ಚಿಂಕಾರ ಕೊಂದ ಹಿನ್ನೆಲೆ 5 ವರ್ಷ ಜೈಲು ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಿದ್ದರು.
ಆ ನಂತರ ಸಲ್ಮಾನ್ ಖಾನ್ ಅವರನ್ನು ಜೋಧ್‌ಪುರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಆದರೆ ''ಒಂದು ರಾತ್ರಿ'' ಜೈಲಿನಲ್ಲಿಯೇ ಕಳೆದ ಸಲ್ಮಾನ್ ಖಾನ್ ಆ ನಂತರ ಜಾಮೀನು ಪಡೆದು ಹೊರ ಬಂದರು. ಐದು ವರ್ಷಗಳ ಜೈಲು ಶಿಕ್ಷೆಯ ವಿರುದ್ಧ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ಮೇಲ್ಮನವಿಯನ್ನು ಕೂಡ ಸಲ್ಲಿಸಿದ್ದರು. ಮತ್ತೊಂದು ಕಡೆ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ ಮತ್ತು ನೀಲಂ ಅವರ ಖುಲಾಸೆಯನ್ನು ಪ್ರಶ್ನಿಸಲು ಅನುಮತಿ ಕೋರಿ ರಾಜಸ್ತಾನದ ಸರ್ಕಾರ ಕೂಡ ಅರ್ಜಿ ಸಲ್ಲಿಸಿತ್ತು.

ಈಗ ಈ ಎರಡು ಅರ್ಜಿಯ ವಿಚಾರಣೆಗೆ ಕಾಲ ಕೂಡಿ ಬಂದಿದೆ. ''ಜಸ್ಟಿಸ್ ಮನೋಜ್ ಕುಮಾರ್ ಗರ್ಗ್'' ಅವರ ಸಮ್ಮುಖದಲ್ಲಿ ಈ ಎರಡು ಅರ್ಜಿಗಳ ವಿಚಾರಣೆ ಇದೇ ಸೆಪ್ಟೆಂಬರ್ 22ರಂದು ನಡೆಯಲಿದೆ. ಅವತ್ತೇ ಮಹತ್ವದ ತೀರ್ಪು ಹೊರ ಬರಲಿದೆ.
ಈ ಹಿನ್ನೆಲೆ ಈಗ ಸಲ್ಮಾನ್ ಖಾನ್‌ಗೆ ಮತ್ತೆ ಢವಢವ ಶುರುವಾಗಿದೆ. ಸಲ್ಮಾನ್ ಖಾನ್ ಜೈಲು ಹೋಗುತ್ತಾರಾ ಎನ್ನುವ ಪ್ರಶ್ನೆ ಈಗ ಬಾಲಿವುಡ್ ಮತ್ತು ಇವರ ಅಭಿಮಾನಿಗಳನ್ನು ಕಾಡುತ್ತಿದೆ.
ಒಟ್ನಲ್ಲಿ ಸದ್ಯ ಸಲ್ಮಾನ್ ಖಾನ್ ಬದುಕಿನಲ್ಲಿ ಮತ್ತೆ ಕೃಷ್ಣಮೃಗದ ಪ್ರವೇಶವಾಗಿದೆ. ಸಲ್ಮಾನ್ ಖಾನ್ ಮುಂದಿನ ಭವಿಷ್ಯ ಸೆಪ್ಟೆಂಬರ್ 22ರಂದು ಗೊತ್ತಾಗಲಿದೆ. ಒಂದು ವೇಳೆ ಸಲ್ಮಾನ್ ಖಾನ್ ಜೈಲು ಪಾಲಾದರೆ, ಮುಂದೇನು ? ಎನ್ನುವ ಭಯ ಕೂಡ ಕೋಟ್ಯಂತರ ರೂಪಾಯಿ ಹಣ ಹೂಡಿರುವ ನಿರ್ಮಾಪಕರನ್ನು ಈಗ ಆವರಿಸಿಕೊಂಡಿದೆ.


Click it and Unblock the Notifications











